ಅಯೋಧ್ಯೆ ದೇಣಿಗೆ ಹಗರಣ ಆರೋಪ: ಎಸ್‌ಐಟಿ ತನಿಖೆಗೆ ಯುಪಿ ಸರ್ಕಾರ ಆದೇಶ

ಲಖನೌ: ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭಕ್ತರು ನೀಡಿದ ದೇಣಿಗೆಯಲ್ಲಿ ಅಕ್ರಮ ಹಾಗೂ ದುರುಪಯೋಗ ನಡೆದಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿದೆ.

ಜೂನ್ 13ರಂದು ಘೋಷಿಸಲಾದ ಈ ತಂಡದಲ್ಲಿ ಮೂವರು ಹಿರಿಯ ಅಧಿಕಾರಿಗಳು ಸೇರಿದ್ದಾರೆ. ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ್ ರತನ್, ಲಖನೌ ಕಮಿಷನರ್ ವಿಜಯ್ ವಿಶ್ವಾಸ್ ಪಂತ್ ಹಾಗೂ ಲಖನೌ ವಲಯದ ಐಜಿ ಕಿರಣ್ ಎಸ್. ಅವರನ್ನು ತನಿಖೆಗೆ ನೇಮಿಸಲಾಗಿದೆ.

ಎಸ್‌ಐಟಿ ತಂಡವು ಒಂದು ವಾರದೊಳಗೆ ಮಧ್ಯಂತರ ವರದಿ ಸಲ್ಲಿಸಬೇಕಾಗಿದ್ದು, 15 ದಿನಗಳೊಳಗೆ ಅಂತಿಮ ವರದಿ ಸರ್ಕಾರಕ್ಕೆ ನೀಡಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಪೊಲೀಸ್ ವರ್ಗಾವಣೆಗೆ ಕೌನ್ಸೆಲಿಂಗ್? ಪ್ರಿಯಾಂಕ್ ಖರ್ಗೆ ಹೊಸ ಹೆಜ್ಜೆ

ತನಿಖೆಯ ಭಾಗವಾಗಿ ತಂಡವು ಭಾನುವಾರವೇ ಅಯೋಧ್ಯೆಗೆ ಭೇಟಿ ನೀಡುವ ಸಾಧ್ಯತೆ ಇದೆ. ಈಗಾಗಲೇ ವಶಕ್ಕೆ ಪಡೆದಿರುವ ಕೆಲ ಶಂಕಿತರು ಹಾಗೂ ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಲಾಗುತ್ತದೆ.

ಅಷ್ಟೇ ಅಲ್ಲದೆ, ಈವರೆಗೆ ಪೊಲೀಸರು ಸಂಗ್ರಹಿಸಿರುವ ಎಲ್ಲಾ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಎಸ್‌ಐಟಿ ತನ್ನ ವಶಕ್ಕೆ ಪಡೆಯಲಿದೆ.

ದೇಣಿಗೆ ಹಣದ ದುರುಪಯೋಗದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಸಲ್ಲಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ನೋಡಿ: ಸರ್ಕಾರಿ ಆಸ್ಪತ್ರೆ ಮಾರಾಟಕ್ಕೆ ಮುಂದಾದರೆ ಘೆರಾವ್: ಯು.ಟಿ. ಖಾದರ್‌ಗೆ ಮುನೀರ್ ಕಾಟಿಪಳ್ಳ ಎಚ್ಚರಿಕೆ

Donate Janashakthi Media

Leave a Reply

Your email address will not be published. Required fields are marked *