“ಸರಕಾರಿ ಆಸ್ಪತ್ರೆಗಳ ಖಾಸಗೀಕರಣ: ಉಳ್ಳಾಲದಲ್ಲಿ ಆರೋಗ್ಯ ಸೇವೆ ಕುಸಿತ?”

ಸರಕಾರಿ ಆಸ್ಪತ್ರೆಗಳನ್ನು ಖಾಸಗೀ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವುದರ ವಿರುದ್ಧದ ಹೋರಾಟ ನೀತಿಗಳಿಗೆ ಸಂಬಂಧಿಸಿದ್ದು. ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ, ವೈದ್ಯರು, ಮೂಲಭೂತ ಸೌಲಭ್ಯಗಳನ್ನು ಒದಗಿಸಿರಿ ಎಂದು ನಾವು ಅಭಿಯಾನ ಶುರು ಮಾಡಿದರೆ, ಆರೋಗ್ಯ ಇಲಾಖೆಯು ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸಿ ಕೈ ತೊಳೆದುಕೊಳ್ಳಲು ನೋಡಿತು. ಸರಕಾರಿ ಆಸ್ಪತ್ರೆಗಳ ಖಾಸಗೀಕರಣದ ಈ ನೀತಿಯ ವಿರುದ್ಧ ನಾವು ಬೀದಿಗಿಳಿದು ಪ್ರತಿಭಟಿಸಿದೆವು.

– ಮುನೀರ್ ಕಾಟಿಪಳ್ಳ

ಆದರೆ ಆಗ ಸ್ಪೀಕರ್ ಆಗಿದ್ದ ಯು ಟಿ ಖಾದರ್ ಅವರು ನಮ್ಮ ಹೋರಾಟವನ್ನು ಹೀಗೆಳೆದು ಮಾತಾಡಿದರು. ಸರಕಾರಿ ಆಸ್ಪತ್ರೆಗಳ ಖಾಸಗೀಕರಣವನ್ನು ಸಮರ್ಥಿಸಿದರು, ಖಾಸಗಿ ವೈದ್ಯಕೀಯ ಕಾಲೇಜುಗಳ ಪರ ಬ್ಯಾಟ್ ಬೀಸಿದರು. ಮರು ವಾರದಲ್ಲಿಯೇ ಖಾದರ್ ಅವರು ಆರೋಗ್ಯ ಸಚಿವರಾದರು.

ಈಗ ನೇರವಾಗಿ ಖಾಸಗಿ ಮೆಡಿಕಲ್ ಕಾಲೇಜುಗಳ ಪರವಹಿಸಿದ ಖಾದರ್ ಅವರು, ತನ್ನ ಕ್ಷೇತ್ರದ ಉಳ್ಳಾಲ ಸಮುದಾಯ ಆಸ್ಪತ್ರೆಯನ್ನು ಯೆನಪೋಯ ಖಾಸಗಿ ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸಿದ ತರುವಾಯ ಅಲ್ಲಿ ಪ್ರತಿದಿನ 500 ರಿಂದ 600 ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ, ಇದು ಜನತೆಗೆ ಆದ ಲಾಭ ಅಲ್ಲವೆ ಎಂದು ಪ್ರಶ್ನಿಸಿದರು. ನಾವು ಅಲ್ಲ ಅಂದೆವು. ಅದನ್ನು ಪ್ರತ್ಯೇಕ ಚರ್ಚಿಸೋಣ.

ಇದನ್ನೂ ಓದಿ: ಭಾರತೀಯ ಸೇನೆಯ ಮುಂದಿನ ಮುಖ್ಯಸ್ಥರಾಗಿ ಲೆ. ಜನರಲ್ ಧೀರಜ್ ಸೇಠ್ ನೇಮಕ

ನಾವು ಅದೇ ಉಳ್ಳಾಲ ಸಮುದಾಯ ಆಸ್ಪತ್ರೆ ಮುಂಭಾಗ ಮೊನ್ನೆ “ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿರಿ” ಎಂದು ಮಾನವ ಸರಪಳಿ ಕಾರ್ಯಕ್ರಮ ನಡೆಸಿದೆವು. ಐದು ಗಂಟೆಗೆ ಈ ಕಾರ್ಯಕ್ರಮಕ್ಕಾಗಿ ಸಮುದಾಯ ಆಸ್ಪತ್ರೆ ಮುಂದೆ ಸೇರಿದರೆ, ಆಸ್ಪತ್ರೆ ಬಾಗಿಲು ಹಾಕಿತ್ತು, ಗೇಟ್ ಬಂದ್ ಆಗಿತ್ತು.

ಅಚ್ಚರಿಗೊಂಡ ನಾವು ಸ್ಥಳೀಯರಲ್ಲಿ ವಿಚಾರಿಸಿದರೆ, ಆಸ್ಪತ್ರೆ ಪ್ರತಿ ದಿನ 4.30 ಕ್ಕೆ ಬಂದ್ ಆಗುತ್ತದೆ ಎಂದು ಹೇಳಿದರು.

ಹಾಗಾದರೆ, ಯು ಟಿ ಖಾದರ್ ಹೇಳಿದ್ದು ತಪ್ಪು ಮಾಹಿತಿಯೆ ? ಖಾಸಗಿ ಮೆಡಿಕಲ್ ಕಾಲೇಜಿನಿಂದ ಬಂದ ರಾಶಿ ರಾಶಿ ವೈದ್ಯರು (ಯು ಟಿ ಖಾದರ್ ಹೇಳಿದಂತೆ) ಸಿಬ್ಬಂದಿಗಳು ನಾಲ್ಕು ಗಂಟೆಗೆ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಕ್ಲಿನಿಕಲ್ ತರಗತಿ ಮುಗಿಸಿ ಹೊರಡುವುದೆ !

ದಶಕದ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು 24 ತಾಸು ತೆರೆದಿರುತ್ತಿದ್ದವು. ಈಗ 40 ಹಾಸಿಗೆಯ ಆಸ್ಪತ್ರೆಗಳು ಬೆಳಿಗ್ಗೆ 10 ಗಂಟೆಗೆ ತೆರೆದು ಸಂಜೆ 4.30 ಕ್ಕೆ ಬಾಗಿಲು ಎಳೆಯುವುದು ಅಂದರೆ ಅರ್ಥ ಏನು ? ಆಸ್ಪತ್ರೆಯ 40 ಹಾಸಿಗೆಗಳು ಕೇವಲ ಪ್ರದರ್ಶನಕ್ಕೆ ಮಾತ್ರವೆ ಇರುವುದೆ ? ಸಂಜೆ ಮುಚ್ಚುವ ಆಸ್ಪತ್ರೆಯಲ್ಲಿ ಒಳರೋಗಿಗಳು ಇರಲು ಸಾದ್ಯ ಇಲ್ಲವಲ್ಲ. ಒಳರೋಗಿ ದಾಖಲಾತಿ ಇಲ್ಲದಿದ್ದಲ್ಲಿ ಅದನ್ನು‌ ಸಮುದಾಯ ಆಸ್ಪತ್ರೆ ಎಂದು ಕರೆಯುವುದು ಹೇಗೆ ? ತನ್ನದೆ ಕ್ಷೇತ್ರದ ಸಮುದಾಯ ಆಸ್ಪತ್ರೆಯ ಈ ಸ್ಥಿತಿಯ ಕುರಿತು ಆರೋಗ್ಯ ಸಚಿವ ಯು ಟಿ ಖಾದರ್ ಅವರು ಸರಿಯಾದ ವಿವರಗಳನ್ನು ಕೊಡಬೇಕು, ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.

ಇದನ್ನೂ ನೋಡಿ: ಕಡಬ ಸಮುದಾಯ ಆಸ್ಪತ್ರೆ ಅವ್ಯವಸ್ಥೆ | ವೈದ್ಯರ ಕೊರತೆ, ಔಷಧಿ ಅಭಾವ, ಲ್ಯಾಬ್ ಸಿಬ್ಬಂದಿ ಕೊರತೆಯಿಂದ ರೋಗಿಗಳ ಪರದಾಟ

Donate Janashakthi Media

Leave a Reply

Your email address will not be published. Required fields are marked *