ಮತಪತ್ರ ತಿದ್ದುಪಡಿ ಆರೋಪ: ಹೈಕೋರ್ಟ್‌ನ ತೀಕ್ಷ್ಣ ಪ್ರಶ್ನೆ

ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ತಿರುಚುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಮತಪತ್ರಗಳು ಚುನಾವಣಾ ಆಯೋಗದ ವಶದಲ್ಲಿದ್ದಾಗ ಅವುಗಳನ್ನು ಹೇಗೆ ತಿದ್ದುಪಡಿ ಮಾಡುವುದು ಸಾಧ್ಯ ಎಂದು ನ್ಯಾಯಪೀಠ ಪ್ರಶ್ನಿಸಿದೆ.

ಬಿಜೆಪಿಯ ಪರಾಜಿತ ಅಭ್ಯರ್ಥಿ ಡಿ.ಎನ್‌. ಜೀವರಾಜ್‌ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಸೋಮವಾರ ನಡೆಸಿತು.

ವಿಚಾರಣೆ ವೇಳೆ ದೂರುದಾರರ ಪರ ವಕೀಲರು ಮತಪತ್ರಗಳನ್ನು ತಿರುಚಲಾಗಿದೆ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, “ಮತದಾನದ ನಂತರ ಮತಪತ್ರಗಳು ಚುನಾವಣಾ ಆಯೋಗದ ವಶದಲ್ಲಿರುತ್ತವೆ. ಹಾಗಿದ್ದಾಗ ಅವುಗಳನ್ನು ಹೇಗೆ ತಿದ್ದುಪಡಿ ಮಾಡಬಹುದು? ಆಯೋಗದ ಭದ್ರತೆಯನ್ನು ಮೀರಿ ಬೀಗ ಒಡೆದು ಬದಲಾವಣೆ ಮಾಡಲಾಗಿದೆ ಎಂದು ಹೇಳುತ್ತೀರಾ?” ಎಂದು ಪ್ರಶ್ನಿಸಿತು.

ಇದನ್ನೂ ಓದಿ: ದೆಹಲಿ‌ನಲ್ಲಿ INDIA ಒಕ್ಕೂಟದ ಮಹತ್ವದ ಸಭೆ: ಟಿಎಂಸಿ ಸೇರಿದಂತೆ 23 ಪಕ್ಷಗಳ ಹಾಜರಿ ಖಚಿತ

ನಂತರ, ಅರ್ಜಿದಾರರ ವಿರುದ್ಧದ ಎಫ್‌ಐಆರ್‌ಗೆ ನೀಡಿದ್ದ ಮಧ್ಯಂತರ ತಡೆಯನ್ನು ಜುಲೈ 3ರವರೆಗೆ ವಿಸ್ತರಿಸಿ, ವಿಚಾರಣೆಯನ್ನು ಮುಂದೂಡಿತು.

ಹಿನ್ನೆಲೆ

2023ರ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ 1,811 ಅಂಚೆ ಮತಗಳು ಚಲಾವಣೆಯಾಗಿದ್ದು, ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರು 201 ಮತಗಳ ಅಂತರದಿಂದ ಜಯಗಳಿಸಿದ್ದರು.

ಈ ಫಲಿತಾಂಶವನ್ನು ಪ್ರಶ್ನಿಸಿ ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯವು ತಿರಸ್ಕೃತಗೊಂಡಿದ್ದ 279 ಅಂಚೆ ಮತಗಳನ್ನು ಮರುಪರಿಶೀಲಿಸಲು 2026ರ ಏಪ್ರಿಲ್ 6ರಂದು ಸೂಚನೆ ನೀಡಿತ್ತು.

ಈ ನಿರ್ದೇಶನದ ಮೇರೆಗೆ ಮೇ 3, 2026ರಂದು ಮರುಎಣಿಕೆ ನಡೆಸಲಾಗಿದ್ದು, ಅದರ ಫಲಿತಾಂಶದಲ್ಲಿ ಜೀವರಾಜ್ ಅವರನ್ನು ವಿಜೇತರಾಗಿ ಘೋಷಿಸಿ ಫಾರ್ಮ್ 21C ನೀಡಲಾಗಿತ್ತು.

ಆರೋಪ ಮತ್ತು ಪ್ರಕರಣ

ಮರುಎಣಿಕೆ ವೇಳೆ ಕಾಂಗ್ರೆಸ್ ಏಜೆಂಟ್ ಸುಧೀರ್ ಕುಮಾರ್ ಮುರೋಳ್ಳಿ ಅವರು ದೂರು ನೀಡಿದ್ದು, ಮತ ಎಣಿಕೆಯ ನಂತರ ಮತಪೆಟ್ಟಿಗೆಗಳ ಸೀಲು ತೆರೆದು ಮತಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಈ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಐಪಿಸಿ ಕಲಂಗಳು 143, 465, 468, 471, 120B, 149 ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 136 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ನೋಡಿ: ಸರಕಾರಕ್ಕೆ ತೈಲದ ಆಟ, ಜನರಿಗೆ ಜೇಬಿನ ದರೋಡೆ! | ವಿಶ್ಲೇಷಣೆ – ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *