ಯುವ ಜಗತ್ತು ಹೊಸತನ್ನು ಬಯಸುತ್ತಿದೆ ಸಿದ್ಧಮಾದರಿಗಳನ್ನು ದಾಟಿ ನೋಡಬೇಕಿದೆ
(ಯುವ ಜನರ ಆಕ್ರೋಶ – ಉನ್ಮಾದ ಮತ್ತು ವಾಸ್ತವ – ಲೇಖನದ ಮುಂದುವರೆದ ಭಾಗ)
ಜೂನ್ 6ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಯುವ ಜನರ ಪ್ರತಿಭಟನೆ ದೇಶದ ರಾಜಕಾರಣದಲ್ಲಿ ಕಂಪನ ಮೂಡಿಸದಿದ್ದರೂ, ಸಾಮಾಜಿಕ ಚಳುವಳಿಗಳಲ್ಲಿ ಹೊಸ ರೀತಿಯ ಸಂಚಲನ ಮೂಡಿಸಿದೆ. ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಈ ಹೋರಾಟದ ಗುರಿ ಸೀಮಿತವಾದದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಮತ್ತು ಸರ್ಕಾರದ ಉತ್ತರದಾಯಿತ್ವ. ಈ ಪ್ರತಿಭಟನೆಯ ವ್ಯಾಪ್ತಿಯನ್ನು ಮುಂದಿನ ದಿನಗಳಲ್ಲಿ ಗಮನಿಸಬೇಕಿದೆ. ಸರ್ಕಾರದ ನೀತಿ ಮತ್ತು ಆಚಾರಗಳ ವಿರುದ್ಧ ಕೇಳಿಬರುವ ಪ್ರತಿರೋಧದ ದನಿಗಳೆಲ್ಲವೂ ‘ವಿದೇಶ’ ದಿಂದ ಆಮದು ಮಾಡಿಕೊಂಡ ಆಲೋಚನೆ ಎಂದೇ ಭಾವಿಸುವ ಬಿಜೆಪಿ ರಾಷ್ಟ್ರಾಧ್ಯಕ್ಷರಿಗೆ ಅಭಿಜೀತ್ ದೀಪ್ಕೆ ಅವರಲ್ಲೂ ‘ಹೊರದೇಶದಲ್ಲಿ ಕುಳಿತು ನಿರ್ದೇಶನ ನೀಡುವ ನಕಾರಾತ್ಮಕ ರಾಜಕೀಯದ ಪ್ರತಿನಿಧಿ’ ಕಂಡುಬಂದಿರುವುದು ಅಚ್ಚರಿಯೇನಲ್ಲ. ಯುಗ
– ನಾ ದಿವಾಕರ
ಈಗ ಭಾರತ ನಡೆಯುತ್ತಿರುವ ‘ಸಕಾರಾತ್ಮಕ’ ಹಾದಿಯಲ್ಲೇ ಪರೀಕ್ಷಾ ಹಗರಣಗಳ ಬ್ರಹ್ಮಾಂಡ ಭ್ರಷ್ಟಾಚಾರದ ಭದ್ರಕೋಟೆಗಳು ಢಾಳಾಗಿ ಕಾಣುತ್ತಿವೆ. ಈ ಕೋಟೆಯ ಅಡಿಪಾಯದ ಮೇಲೆ ನಿಂತು, ಉತ್ತರದಾಯಿತ್ವದ ಗೋಜಿಗೇ ಹೋಗದೆ, ಬಾಧಿತ ಯುವ ಜನರ ಒಕ್ಕೊರಲ ದನಿಯನ್ನು ಇಷ್ಟು ಸರಾಗವಾಗಿ ತಳ್ಳಿಹಾಕುವ ಮನೋವೃತ್ತಿಯೇ ಡಿಜಿಟಲ್ ಯುಗದ ಭಾರತಕ್ಕೆ ಅಪಾಯಕಾರಿಯಾಗಿ ಕಾಣುತ್ತದೆ. ರೈತ ಮುಷ್ಕರ, ಸಿಎಎ-ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳಲ್ಲಿ ದೇಶದ್ರೋಹಿಗಳನ್ನು ಗುರುತಿಸಿದ ವ್ಯವಸ್ಥೆಗೆ ಇಲ್ಲಿ ʼ ದೇಶದ್ರೋಹಿ ಜಿರಳೆಗಳು ʼ ಕಂಡುಬಂದಿಲ್ಲ. ಹಾಗಾಗಿ. ಈ ‘ನಕಾರಾತ್ಮಕ’ ದನಿಗಳಿಗೆ ಸದ್ದುಮಾಡಲು ದೆಹಲಿ ಪೊಲೀಸರು ಕ್ಷಣಮಾತ್ರದಲ್ಲಿ ಅನುಮತಿ ನೀಡಿರುವುದು ಅಚ್ಚರಿಯೇನಲ್ಲ. ಮೂಲತಃ ಸಿಜೆಪಿಯ ಆಂದೋಲನ ವ್ಯವಸ್ಥೆಯ ವಿರುದ್ಧ ಅಲ್ಲ, ವ್ಯವಸ್ಥೆಯೊಳಗಿನ ಒಂದು ಲೋಪದ ವಿರುದ್ಧ ಮಾತ್ರ. ಯುಗ
ಇಂತಹ ಹೋರಾಟಗಳನ್ನು ಪ್ರಭುತ್ವ ಸಹಿಸಿಕೊಳ್ಳುತ್ತದೆ. ಏಕೆಂದರೆ ಇದು ಭ್ರಷ್ಟ-ಫ್ಯಾಸಿಸ್ಟ್ ವ್ಯವಸ್ಥೆಯ ತಳಪಾಯವನ್ನು ಕದಲಿಸುವುದಿಲ್ಲ. ಮುಂದಿನ ದಿನಗಳಲ್ಲಿ ಈ ಹೋರಾಟದ ವ್ಯಾಪ್ತಿ ಹೆಚ್ಚಾಗಿ Gen Z ಕ್ರಾಂತಿಯಾಗುವ ಸೂಚನೆಗಳು ಕಂಡ ಕೂಡಲೇ ಸರ್ಕಾರಗಳು ಎಚ್ಚೆತ್ತುಕೊಳ್ಳಬಹುದು. ಈ ಸಾಧ್ಯತೆಗಳು ಸಹ ಕಾಣುತ್ತಿಲ್ಲ. ಜೂನ್ 6ರ ಹೋರಾಟದ ಸಕಾರಾತ್ಮಕ ಅಂಶಗಳನ್ನು ಮತ್ತು ಅದು ಯುವ ಜನಾಂಗದಲ್ಲಿ ಉಂಟುಮಾಡಿರುವ ಕಂಪನಗಳನ್ನು ಮನಗಾಣುತ್ತಲೇ, ನಿತ್ಯ ನಿರಂತರ ಹೋರಾಟ-ಪ್ರತಿಭಟನೆಗಳಲ್ಲಿ ನಿರತರಾಗಿರುವ ಭಾರತದ ಪುರೋಗಾಮಿ ಶಕ್ತಿಗಳು ಪಕ್ಷಾತೀತವಾಗಿ, ತತ್ವ ಸಿದ್ಧಾಂತಗಳ ಆಚೆಗೆ, ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಭಾರತದ ಮಿಲೆನಿಯಲ್ ಯುವ ಜನಾಂಗ ತನ್ನ ಮುಂದಿರುವ ಸವಾಲುಗಳನ್ನು ಎದುರಿಸಿ ಹೋರಾಡಲು ನಾಯತ್ವದ ಶೋಧದಲ್ಲಿದೆ. ಈ ಪ್ರವೃತ್ತಿಯನ್ನು (Trend) 2010ರಿಂದಲೇ ಗುರುತಿಸಬಹುದು. ಯುಗ
ಇದನ್ನೂ ಓದಿ: ಎಸ್.ಐ.ಆರ್ ಪ್ರಕ್ರಿಯೆಯಿಂದ ಅರ್ಹರು ಮತದಾನದ ಹಕ್ಕು ಕಳೆದುಕೊಳ್ಳದಂತೆ ಕ್ರಮಕ್ಕೆ ಒತ್ತಾಯ
ಹೋರಾಟದ ಹೊಸ ಹಾದಿಗಳು
2010-11ರ ಅಣ್ಣಾ ಹಜಾರೆ ಹೋರಾಟ, ತದನಂತರ ಯುವ ಸಮೂಹದಿಂದಲೇ ಉದಯಿಸಿದ ಕನ್ನಯ್ಯ ಕುಮಾರ್, ಜಿಗ್ನೇಶ್ ಮೆವಾನಿ ಮತ್ತು ಉತ್ತರ ಪ್ರದೇಶ ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್ ಇವೆಲ್ಲವನ್ನೂ ಈ ಹಿನ್ನೆಲೆಯಲ್ಲೇ ನೋಡಬೇಕು. ಅಣ್ಣಾ ಹಜಾರೆ ಅವರ ಭ್ರಷ್ಟಾಚಾರದ ವಿರುದ್ಧ ಭಾರತ (India Against Corruption – IAC) ಹೋರಾಟದ ಗುರಿ ಕಾಂಗ್ರೆಸ್ ನೇತೃತ್ವದ ಯುಪಿಎ ಆಗಿತ್ತೇ ಹೊರತು, ವ್ಯವಸ್ಥೆಯ ಆಳಕ್ಕಿಳಿದಿದ್ದ ಭ್ರಷ್ಟಾಚಾರದ ಪರಂಪರೆಯ ವಿರುದ್ಧ ಅಲ್ಲ. 2014ರ ನಂತರ ಅಣ್ಣಾ ಶಾಶ್ವತ ಮೌನಕ್ಕೆ ಜಾರಿರುವುದು ಇದನ್ನು ದೃಢೀಕರಿಸುತ್ತದೆ. ಈ ಹೋರಾಟದ ಒಂದು ಉತ್ಪನ್ನ ಕಾಕ್ರೋಚ್ ಪಕ್ಷದ ಅಭಿಜೀತ್ ದೀಪ್ಕೆ, ಆಮ್ ಆದ್ಮಿ ಪಕ್ಷದೊಳಗೆ ಪರ್ಯಟನ ಮುಗಿಸಿ ಈಗ ಹೊಸ ಚಿಂತನೆಗಳೊಂದಿಗೆ ಹೊರಬಂದಿದ್ದಾರೆ. ಆದರೆ ಈ ಗುರಿಯ ವ್ಯಾಪ್ತಿಯೂ ಹಜಾರೆ ಅವರಂತೆಯೇ ಸೀಮಿತವಾಗಿರುವುದು ಗಮನಿಸಬೇಕಾದ ಸಂಗತಿ. ಯುಗ
ಈ ನಡುವೆ ನಮ್ಮ ನಡುವೆ ಉದಯಿಸಿದ ಮೂವರು ನಾಯಕರ ಪೈಕಿ ಜಿಗ್ನೇಶ್ ಮೆವಾನಿ ಮತ್ತು ಕನ್ನಯ್ಯ ಕುಮಾರ್ ವ್ಯವಸ್ಥೆಯಲ್ಲಿ ಲೀನವಾಗಿ ಹೋಗಿದ್ದಾರೆ, ಮತ್ತೋರ್ವ ನಾಯಕ ಆಜಾದ್ ತಮ್ಮ ಸಂಕುಚಿತ ಸೈದ್ಧಾಂತಿಕ ಚೌಕಟ್ಟನ್ನು ಭೇದಿಸಿ ಹೊರಬರಲಾರದೆ ಒಂದು ವರ್ಗ/ಪ್ರದೇಶಕ್ಕೆ ಸೀಮಿತವಾಗಿ ಹೋರಾಟ ಮುಂದುವರೆಸಿದ್ದಾರೆ. ಈ ಮೂವರೂ ನಾಯಕರಲ್ಲಿ ರಾಜಕೀಯ ಆಕಾಂಕ್ಷೆ ಇರುವುದು ಸಹಜವಾದರೂ, ಇದು ತಳಮಟ್ಟದ ಜನಸಾಮಾನ್ಯರನ್ನು ಸ್ಪರ್ಶಿಸಲಾಗದೆ ಅಧಿಕಾರ ರಾಜಕಾರಣಕ್ಕೆ ಸ್ಪಂದಿಸುವಂತಾಗಿರುವುದು ವಿಪರ್ಯಾಸ. ಭಾರತೀಯ ರಾಜಕೀಯ ಪರಂಪರೆಯ ಮೂಲ ಲಕ್ಷಣವೇ ಇದು. ವ್ಯವಸ್ಥೆಯ ವಿರುದ್ಧ ದನಿಎತ್ತುವ ಯುವ ನಾಯಕರನ್ನು ಸುಲಭವಾಗಿ ತನ್ನೊಳಗೆ ಸೆಳೆದುಕೊಂಡುಬಿಡುತ್ತದೆ. ಮೊದಲು ಕಾಂಗ್ರೆಸ್ ಮಾಡುತ್ತಿದ್ದುದನ್ನೇ ಈಗ ಬಿಜೆಪಿ ಮಾಡುತ್ತಿದೆ.
ಯುವ ನಾಯಕತ್ವದ ಹುಡುಕಾಟ
ಈ ವೈಫಲ್ಯಗಳ ಹೊರತಾಗಿಯೂ ಭಾರತದ ಯುವ ಜನಾಂಗ, ವಿಶೇಷವಾಗಿ ಮಿಲೆನಿಯಲ್ ಸಮೂಹ ಹೊಸ ನಾಯಕತ್ವಕ್ಕಾಗಿ ಹುಡುಕಾಡುತ್ತಿದೆ. ಸಿದ್ಧಮಾದರಿ ಹೋರಾಟಗಳಿಗೆ ಅಂಟಿಕೊಂಡಿರುವ ಸ್ಥಾಪಿತ ಎಡಪಂಥೀಯ ಪಕ್ಷಗಳು, ದಲಿತ-ಹಿಂದುಳಿದ-ಅಲ್ಪಸಂಖ್ಯಾತ ಸಂಘಟನೆಗಳು ಈ ಯುವ ಮನಸ್ಸುಗಳಿಗೆ ಏಕೆ ಸ್ಪಂದಿಸಲಾಗಿಲ್ಲ ? ಆಧುನಿಕ ತಂತ್ರಜ್ಞಾನ, ಡಿಜಿಟಲ್ ಸಂವಹನ, ಸಾಮಾಜಿಕ ಮಾಧ್ಯಮ ವೇದಿಕೆಗಳು (Social Media platforms) ಇವೆಲ್ಲವೂ ಲಭ್ಯವಾಗಿದ್ದರೂ ಸಹ, ಸ್ಥಾಪಿತ ಹೋರಾಟಗಳು ಬಾಧಿತ ಯುವ ಸಮೂಹವನ್ನು ಸಮರ್ಪಕವಾಗಿ ಏಕೆ ತಲುಪಲಾಗಿಲ್ಲ ? ಹಾಗೊಮ್ಮೆ ತಲುಪಲು ಸಾಧ್ಯವಾಗಿದ್ದರೂ ಯುವ ಜನಾಂಗದ ದೃಷ್ಟಿ ಏಕೆ ನಿರ್ವಾತದ (Vacuum) ಕಡೆ ವಾಲುತ್ತಿದೆ ? ಈ ನಿರ್ವಾತದಿಂದಲೇ ಹೊಸ ನಾಯಕತ್ವ ಉದಿಸುತ್ತದೆ ಎಂಬ ಭರವಸೆಯಲ್ಲಿ ಭಾರತದ ಯುವ ಜನಾಂಗ ಏಕೆ ನಡೆಯುತ್ತಿದೆ ? ಯುಗ

ಸ್ಥಾಪಿತ ಪಕ್ಷ/ಸಂಘಟನೆಗಳನ್ನು ಕಾಡುತ್ತಿರುವ ಶಾಶ್ವತ ನಾಯಕತ್ವ (Permanent Leadership) ಈ ವೈಫಲ್ಯಕ್ಕೆ ಪ್ರಧಾನ ಕಾರಣವಾದರೆ, ಸಾಂಘಿಕ ಚಟುವಟಿಕೆಗಳಲ್ಲಿ ಮತ್ತು ನಿರ್ವಹಣೆಯಲ್ಲಿ ಒಳಗೊಳ್ಳುವಿಕೆ (Inclusiveness) ಇಲ್ಲದಿರುವುದು ಮತ್ತೊಂದು ಬಲವಾದ ಕಾರಣ. ಅಭಿಜೀತ್ ಫ್ರಂಟ್ ಲೈನ್‌ಗೆ ನೀಡಿದ ಸಂದರ್ಶನದಲ್ಲಿ ಇದನ್ನು ಸೂಕ್ಷ್ಮವಾಗಿ ಹೇಳುತ್ತಾರೆ. ಬೃಹತ್ ಸಮಾವೇಶಗಳು, ಸಾರ್ವಜನಿಕ ಸಭೆಗಳು, ವಿಚಾರ ಸಂಕಿರಣಗಳು ಮಿಲೆನಿಯಲ್ ಜನಾಂಗದ ನಾಡಿಮಿಡಿತವನ್ನು ಗ್ರಹಿಸಲು ನೆರವಾಗುತ್ತಿಲ್ಲ. ಏಕೆಂದರೆ ಡಿಜಿಟಲ್ ಯುಗದ ಯುವ ಮನಸ್ಸುಗಳು ತಕ್ಷಣದ ಫಲಿತಾಂಶ ಬಯಸುತ್ತವೆ. ಎದುರಿನ ನಿರ್ದಿಷ್ಟ ಸಮಸ್ಯೆಯನ್ನು ಮಾತ್ರ ದಿಟ್ಟಿಸುತ್ತವೆ. ಕಾರ್ಯ-ಕಾರಣ ಸಂಬಂಧಗಳ ಬಗ್ಗೆ ಹೆಚ್ಚಾಗಿ ಯೋಚಿಸುವುದಿಲ್ಲ. ಯುಗ
ಈ ರೀತಿಯ ಬೌದ್ಧಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಡಿಜಿಟಲ್ ಜನಾಂಗಕ್ಕೆ ಸ್ಪಂದಿಸಲು ಸ್ಥಾಪಿತ ಸಂಘಟನೆಗಳು ಹೊಸ ಮಾದರಿಗಳನ್ನು ಶೋಧಿಸಬೇಕಿದೆ. ಇದು ಸಾಧ್ಯವಾಗದಿದ್ದಾಗ, ಕನ್ನಯ್ಯ, ಮೆವಾನಿ, ಆಜಾದ್, ದೀಪ್ಕೆಯಂತಹ ಯುವ ದನಿಗಳು ಇಡೀ ಯುವ ಮನಸ್ಸುಗಳನ್ನು ಆಕರ್ಷಿಸುತ್ತವೆ. ರಾಜಕೀಯವಾಗಿ ಇದನ್ನು ತಮಿಳುನಾಡಿ ಟಿವಿಕೆ ಪಕ್ಷದ ವಿಜಯ್ ಅವರ ಗೆಲುವಿನಲ್ಲಿ ಗುರುತಿಸಬಹುದು. 75 ವರ್ಷಗಳ ಸೈದ್ಧಾಂತಿಕ ರಾಜಕಾರಣವನ್ನು ಪೋಷಿಸಿಕೊಂಡು ಬಂದಿರುವ ತಮಿಳುನಾಡು, ದ್ರಾವಿಡ ಪರಂಪರೆ, ಪೆರಿಯಾರ್ ಸಿದ್ಧಾಂತ ಮತ್ತು ಸಮ ಸಮಾಜದ ಕಲ್ಪನೆಗಳನ್ನೇ ರಾಜಕೀಯವಾಗಿಯೂ ಗುರುತಿಸುತ್ತಾ ಬಂದಿದೆ. ಆದರೆ ವಿಜಯ್ ಈ ಯಾವುದೇ ಪರಿಭಾಷೆಯನ್ನು (Jargon) ಬಳಸದೆ ತಮ್ಮ ಪ್ರಥಮ ಪ್ರಯತ್ನದಲ್ಲೇ ಮುಖ್ಯಮಂತ್ರಿಯಾಗಿದ್ದಾರೆ. ಇವರ ಹಿಂದಿರುವುದು ಯುವ ಶಕ್ತಿ ಎನ್ನುವುದನ್ನು ಗುರುತಿಸಬೇಕು. ಯುಗ
ಯುವ ಶಕ್ತಿಯ ಕವಲು ಹಾದಿಗಳು
ಈ ಶಕ್ತಿಯನ್ನು ಕುಂದಿಸುವ ಸಲುವಾಗಿಯೇ ತಮಿಳುನಾಡಿನಲ್ಲಿ ಮತ್ತೋರ್ವ ಸೆಲೆಬ್ರಿಟಿ ನಾಯಕ ಅಣ್ಣಾಮಲೈ ಬಿಜೆಪಿ ತೊರೆದು ಪ್ರತ್ಯೇಕ ಪಕ್ಷವೊಂದನ್ನು ಸ್ಥಾಪಿಸಿದ್ದಾರೆ. ಎರಡೇ ದಿನಗಳಲ್ಲಿ ಅಣ್ಣಾ ಮಲೈ ಅವರ ಡಿಜಿಟಲ್ ಬೆಂಬಲಿಗರ ಸಂಖ್ಯೆ ಎರಡು ಲಕ್ಷ ದಾಟಿದೆ. ಮುಂದಿನ ದಿನಗಳಲ್ಲಿ ಅಣ್ಣಾಮಲೈ ಅವರ ಬಲವರ್ಧನೆಯಿಂದ ಪೆಟ್ಟಾಗುವುದು ವಿಜಯ್ ಅವರ ಟಿವಿಕೆ ಪಕ್ಷಕ್ಕೇ ಹೆಚ್ಚು ಏಕೆಂದರೆ ಎರಡೂ ಬದಿಯಲ್ಲಿರುವುದು ಯುವ ಶಕ್ತಿ ಸಂಚಯದ ಪ್ರಭಾವ. ಬದಲಾವಣೆ ಬಯಸಿ ವಿಜಯ್ ಅವರನ್ನು ಬೆಂಬಲಿಸಿರುವ ಯುವ ಸಮೂಹಕ್ಕೆ ಕೊಂಚ ಭ್ರಮನಿರಸನವಾದರೂ ಅಣ್ಣಾಮಲೈ ಅಲ್ಲಿ ಕಾಣಿಸಿಕೊಳ್ಳುತ್ತಾರೆ. ಬಹುಶಃ ಮುಂದಿನ ದಿನಗಳಲ್ಲಿ ಇವರನ್ನು ಹಿಂಬಾಲಿಸುವ ಯುವ ಪಡೆಗಳು ತಮ್ಮ ನಾಯಕನ ಜೊತೆಗೇ ಬಿಜೆಪಿಯೊಳಗೆ ಲೀನವಾಗುತ್ತವೆ. ಯುಗ

ಆದರೆ ಅಭಿಜೀತ್ ಅವರ ಕಾಕ್ರೋಚ್ ಪಕ್ಷದಿಂದ ಇದನ್ನು ನಿರೀಕ್ಷಿಸಲಾಗುವುದಿಲ್ಲ. ಮಾಧ್ಯಮಗಳಲ್ಲಿ ವಿಶ್ಲೇಷಿಸಿರುವಂತೆ ಇದು Gen Z ಕ್ರಾಂತಿಯನ್ನು ಬಿಂಬಿಸುವುದಿಲ್ಲ. ಸಾಂಕೇತಿಕವಾಗಿಯೂ ಸಹ ಈ ಹೋರಾಟದಲ್ಲಿ ಸಮಾಜದ ಒಳಬೇಗುದಿಯನ್ನು ಪ್ರತಿನಿಧಿಸುವ ಧ್ವನಿ ಕಾಣುವುದಿಲ್ಲ. ಯುವ ಸಮಾಜದ ಒಂದು ವರ್ಗದ ನಿರ್ದಿಷ್ಟ ಸಮಸ್ಯೆಯನ್ನು ಕೇಂದ್ರೀಕರಿಸಿರುವ ಈ ಪ್ರತಿಭಟನೆ, ಒಂದು ಹಂತದಲ್ಲಿ ಇಡೀ ಭಾರತೀಯ ಯುವ ಸಮಾಜದ ಹತಾಶೆ ಮತ್ತು ಆಕ್ರೋಶವನ್ನು ಧ್ವನಿಸುತ್ತದೆಯಷ್ಟೆ. ಯುಗ
ಅದರಿಂದಾಚೆಗೆ ವ್ಯಾಖ್ಯಾನಿಸುವುದು ಬಹುಶಃ ಅವಸರದ ಪ್ರತಿಕ್ರಿಯೆ ಆಗಬಹುದು. ಏನೇ ಆದರೂ ಈ ಹೋರಾಟಕ್ಕೆ ತಾತ್ವಿಕ ಬೆಂಬಲ ಸೂಚಿಸಿ ಸಾಂಕೇತಿಕ ಪ್ರತಿಭಟನೆಗಳನ್ನು ನಡೆಸಿರುವ ಸ್ಥಾಪಿತ ಸಂಘಟನೆಗಳು ಅಭಿಜೀತ್ ಅವರು ಎತ್ತಿರುವ ಯುವ ಸ್ಪಂದನೆ ಮತ್ತು ಒಳಗೊಳ್ಳುವಿಕೆಯ ಪ್ರಶ್ನೆಗಳನ್ನು ಗಂಭೀರವಾಗಿ ಪರಿಶೀಲಿಸಬೇಕಿದೆ. ಭಾರತೀಯ ಸಂವಿಧಾನದ ಒಳಗೊಳ್ಳುವಿಕೆಯ (Inclusiveness) ಔದಾತ್ಯವನ್ನು ಮತ್ತೆಮತ್ತೆ ನೆನಪಿಸುವ ದಲಿತ-ಹಿಂದುಳಿದ-ಅಲ್ಪಸಂಖ್ಯಾತ ಸಂಘಟನೆಗಳೂ, ಸದಾ ಯುವ ಶಕ್ತಿಯನ್ನೇ ಪ್ರತಿನಿಧಿಸುವ ಎಡಪಕ್ಷ-ಸಂಘಟನೆ-ಕಾರ್ಮಿಕ ಸಂಘಗಳೂ ಈ ಸೂಕ್ಷ್ಮವನ್ನು ಈಗಲೂ ಏಕೆ ಗ್ರಹಿಸಲಾಗಿಲ್ಲ ? ಉತ್ತರ ಬೇಕಿದೆ. ಯುಗ
ಸಂಘಟನಾ ವೈಫಲ್ಯಗಳ ನಡುವೆ
ಯುವ ಜನಾಂಗವನ್ನು ಒಟ್ಟುಗೂಡಿಸುವುದಕ್ಕೂ, (Assembling) ಸಂಘಟಿಸುವುದಕ್ಕೂ (Organising ) ಅಪಾರ ಅಂತರವಿದೆ. ಎಡಪಂಥೀಯ, ದಲಿತ, ಮಹಿಳೆ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ಕಾರ್ಮಿಕರು ಹೀಗೆ ಎಲ್ಲ ವರ್ಗಗಳನ್ನೂ ಪ್ರತಿನಿಧಿಸುವ ʼಪ್ರಗತಿಪರʼ ಎಂದು ನಿರ್ವಚಿಸಲಾಗುವ ಸಂಘಟನೆಗಳು ಈ ಅಂತರವನ್ನು ಅರ್ಥಮಾಡಿಕೊಳ್ಳಬೇಕಿದೆ. ಸ್ಥಾಪಿತ ಸಂಘಟನೆಗಳು ತಮ್ಮ ತಾತ್ವಿಕ ಭೂಮಿಕೆಯಲ್ಲಿ ಅಳವಡಿಸಿಕೊಳ್ಳಲಾಗುವ ಸೈದ್ಧಾಂತಿಕ ಚೌಕಟ್ಟುಗಳಲ್ಲಿ ಯುವ ಜನಾಂಗವನ್ನು ಸಂಘಟಿಸುತ್ತವೆ. ವಿದ್ಯಾರ್ಥಿ, ಯುವಜನ, ಯುವ ರೈತ, ಯುವ ಮಹಿಳೆ ಇತ್ಯಾದಿ ಸಂಘಟನೆಗಳು ಹೇರಳವಾಗಿವೆ. ನಿರ್ದಿಷ್ಟ ಅಸ್ಮಿತೆಗಳಿಗೆ ಅಂಟಿಕೊಳ್ಳುವ ಈ ಸಂಘಟನೆಗಳ ಕಾರ್ಯವ್ಯಾಪ್ತಿಯೂ ಸೀಮಿತವಾಗಿರುತ್ತದೆ. ಇಲ್ಲಿ ಸಂಘಟಿತರಾಗುವ ಯುವ ಜನರು ಸಂಘಟನೆಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿರುವುದನ್ನು ಕಾಣುತ್ತಲೇ ಬಂದಿದ್ದೇವೆ. ಯುಗ

ಬಿಕ್ಕಟ್ಟುಗಳು ಎದುರಾದಾಗ, ಸವಾಲುಗಳು ಗಂಭೀರವಾದಾಗ ಇಂತಹ ಸಂಘಟನೆಗಳು ಐಕಮತ್ಯದೊಂದಿಗೆ ಹೋರಾಟಕ್ಕೆ ಮುಂದಾಗುತ್ತವೆ. ಈ ತಾತ್ಕಾಲಿಕ ಐಕ್ಯತೆ ಸಾಂಕೇತಿಕ ಪ್ರತಿಭಟನೆ ಅಥವಾ ಹೋರಾಟಗಳಲ್ಲಿ ಪರ್ಯವಸಾನ ಹೊಂದುತ್ತವೆ. ತಾವು ನಂಬಿ ಬಂದಿರುವ ಸಂಘಟನೆ ಮತ್ತು ಅನುಸರಿಸಲು ಬಯಸುವ ನಿರ್ದಿಷ್ಟ ಸಿದ್ಧಾಂತದಿಂದಾಚೆಗೆ ಯೋಚನೆ ಮಾಡುವ ಅವಕಾಶಗಳನ್ನು, ಸಂಘಟಿತ ಯುವ ಜನಾಂಗಕ್ಕೆ ಕಲ್ಪಿಸಲು ನಮಗೆ ಸಾಧ್ಯವಾಗಿದೆಯೇ ? ಇದು ಬಹಳ ಗಂಭೀರ ಪ್ರಶ್ನೆ. ಹೊರಗಿನ ವಿಶಾಲ ಸಮಾಜದ ನಡುವೆ ನಿಂತು ಉತ್ತರಿಸಬೇಕಾಗುತ್ತದೆ. ಕೆಲವೊಮ್ಮೆ ಸಿದ್ಧಾಂತಗಳು ಬೌದ್ಧಿಕ ಸಂಕೋಲೆಗಳಾದಾಗ, ಈ ಯುವ ಜನಾಂಗದ ಬೌದ್ಧಿಕ ವಿಕಾಸ ಸೀಮಿತವೂ, ಸಂಕುಚಿತವೂ ಆಗುತ್ತದೆ. ಅಂತಿಮವಾಗಿ ಕುಂಠಿತವಾಗಿ ಬೌದ್ಧಿಕ ಜಡತ್ವ ಆವರಿಸುತ್ತದೆ.
ಈ ಸಂಘಟಿತ ಹೋರಾಟಗಳಿಂದಾಚೆ ನೋಡಿದಾಗ, ನಮ್ಮ ಸಾಮಾಜಿಕ ಹೋರಾಟಗಳ ನಡುವೆ ಕಾಣುವುದು ಪಂಥೀಯವಾದದಿಂದ (Sectarianism) ಹೊರತಾದ ಹೋರಾಟದ ಗುಂಪುಗಳು. ಇವು ಸಾಮಾನ್ಯವಾಗಿ ಅಸಂಘಟಿತ (Amorphous) ಸ್ವರೂಪ ಹೊಂದಿರುತ್ತವೆ. ಸಿದ್ಧಾಂತಗಳನ್ನು ಬದಿಗಿಟ್ಟು ಸಾಮಾಜಿಕ ನ್ಯಾಯಕ್ಕಾಗಿ, ಅಸಮಾನತೆ, ದೌರ್ಜನ್ಯಗಳ ವಿರುದ್ಧ ನಿರಂತರ ಹೋರಾಟಗಳಲ್ಲಿ (ಸಾಂಕೇತಿಕ ಪ್ರತಿಭಟನೆಗಳಲ್ಲಿ ) ತೊಡಗುವ ಇಂತಹ ಗುಂಪುಗಳನ್ನು ʼಪ್ರಗತಿಪರ-ಪುರೋಗಾಮಿ ಸಂಘಟನೆಗಳು ʼ ಎಂಬ ಆವರಣದಲ್ಲಿಟ್ಟು ನೋಡುತ್ತೇವೆ. ಸಮಾಜದ ಎಲ್ಲ ರೀತಿಯ ಸಮಸ್ಯೆ, ಸವಾಲುಗಳನ್ನೂ ಎದುರಿಸಿ, ಅನ್ಯಾಯಗಳನ್ನು ಪ್ರತಿಭಟಿಸುವ ಒಂದು ಜನಸಮೂಹವಾಗಿ ಇಂತಹ ಸಂಘಟನೆಗಳು ಕಾರ್ಯನಿರ್ವಹಿಸುತ್ತವೆ. ನಿರ್ದಿಷ್ಟ ನಾಯಕತ್ವ ಇಲ್ಲದ ಈ ಸಂಘಟನೆಗಳು ಸಾಮೂಹಿಕ ಜವಾಬ್ದಾರಿಯ ಆಧಾರದಲ್ಲಿ ಕ್ರಿಯಾಶೀಲವಾಗಿರುತ್ತವೆ.
ಹೋರಾಟದ ಕಣದಲ್ಲಿ ವೈರುಧ್ಯಗಳು
ಇಂತಹ ಸಂಘಟನೆಗಳು ಯಾವುದೇ ಪ್ರತಿಭಟನೆ ಅಥವಾ ಹೋರಾಟಗಳನ್ನು ರೂಪಿಸುವಾಗ, ಜನರನ್ನು ಸಂಘಟಿಸುವುದರ (Organise) ಬದಲು ಒಟ್ಟುಗೂಡಿಸುವ (Assemble) ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಈ ಒಟ್ಟುಗೂಡಿಸುವ ಕ್ರಿಯೆಯಲ್ಲೇ ನಮಗೆ ಅತಿ ಹೆಚ್ಚಿನ ಸಂಖ್ಯೆಯ ಯುವ ಜನರು ಕಂಡುಬರುತ್ತಾರೆ. ಸಂಘಟನೆಗಳಲ್ಲಿನ ಅಧಿಕಾರ ಶ್ರೇಣೀಕರಣ, ಶಾಶ್ವತ ನಾಯಕತ್ವ , ನಿರ್ಬಂಧ ಮತ್ತು ಕಟ್ಟಳೆಗಳಿಂದ ಬೇಸತ್ತ ಯುವ ಜನಾಂಗವೊಂದು ಸದಾ ಪರ್ಯಾಯದ ಶೋಧದಲ್ಲಿರುತ್ತದೆ. ಬಿಜೆಪಿ-ಆರೆಸ್ಸೆಸ್ ಈ ವರ್ಗದ ಯುವ ಜನರನ್ನು ಭಾವನಾತ್ಮಕ ನೆಲೆಯಲ್ಲಿ ಆಕರ್ಷಿಸುತ್ತದೆ. ಅಷ್ಟೇ ಅಲ್ಲದೆ ಅಲ್ಲಿ ಪ್ರಾತಿನಿಧ್ಯವನ್ನು ಕಲ್ಪಿಸಿ, ಒಳಗೊಳ್ಳುವಿಕೆಯ ವಾತಾವರಣವನ್ನೂ ಸೃಷ್ಟಿಸುತ್ತದೆ. ಬಿಜೆಪಿಯಲ್ಲಿ ಯುವ ನಾಯಕತ್ವ ಹೆಚ್ಚಿನ ಪ್ರಮಾಣದಲ್ಲಿ ಕಾಣುವುದು ಈ ಕಾರಣಕ್ಕಾಗಿ.
ಬಿಜೆಪಿ-ಆರೆಸ್ಸೆಸ್ ರೀತಿಯಲ್ಲಿ ನಿರ್ದಿಷ್ಟವಾಗಿ ತಲುಪಬೇಕಾದ ಗುರಿ ನಿಗದಿಪಡಿಸಲು ಸಾಧ್ಯವಾಗದಿರುವುದರಿಂದ, Amorphous ಗುಂಪುಗಳ ಸಾಮಾಜಿಕ ಚಳುವಳಿಗಳು ಪ್ರಜಾಪ್ರಭುತ್ವೀಯ ಮೌಲ್ಯಗಳನ್ನು ಕಟ್ಟುನಿಟ್ಟಾಗಿ ಅನುಕರಿಸಬೇಕಾಗುತ್ತದೆ. ಈ ವಿಶಾಲ ಹಂದರದ ಅಡಿಯಲ್ಲೇ ಹೋರಾಟಗಳನ್ನು ನಡೆಸುವ ಸ್ಥಾಪಿತ ಪಕ್ಷ/ಸಂಘಟನೆಗಳೂ ಸಹ ಎಲ್ಲರೊಡನೊಂದಾಗುವ ಮತ್ತು ಎಲ್ಲರನ್ನೊಳಗೊಳ್ಳುವ (All inclusive) ನೈತಿಕ ಮಾರ್ಗವನ್ನು ಅನುಸರಿಸಬೇಕಾಗುತ್ತದೆ. ತಮ್ಮ ನಿರ್ದಿಷ್ಟ ತಾತ್ವಿಕ ಅಸ್ಮಿತೆ ಮತ್ತು ಚಿಹ್ನೆಗಳನ್ನು (ಬ್ಯಾನರ್, ಬಾವುಟ, ಬ್ಯಾಡ್ಜ್, ಟೊಪ್ಪಿಗೆ ಇತ್ಯಾದಿ) ಬದಿಗಿಟ್ಟು ಹೋರಾಡುವ ಸಂದರ್ಭಗಳೂ ಎದುರಾಗುತ್ತವೆ. ಇಂತಹ ಸಮಯದಲ್ಲಿ ಎಲ್ಲ ಸಂಘಟನೆ/ಗುಂಪುಗಳೂ, ನಾಯಕರೂ ತಮ್ಮ ಸ್ವಾರ್ಥ ಹಿತಾಸಕ್ತಿಯನ್ನು ಬದಿಗಿಟ್ಟು ಸಮಷ್ಟಿ ಪ್ರಜ್ಞೆಯೊಂದಿಗೆ ಮುನ್ನಡೆಯಬೇಕಾಗುತ್ತದೆ.
ವ್ಯಷ್ಟಿಯಿಂದ ಸಮಷ್ಟಿಯೆಡೆಗೆ
ಭಾರತೀಯ ಸಮಾಜದಲ್ಲಿ ಈ ಸಮಷ್ಟಿ ಪ್ರಜ್ಞೆ ಇಲ್ಲದಿರುವುದರಿಂದಲೇ ಒಳಗೊಳ್ಳುವಿಕೆಯೂ ಸಹ ಸಾಧ್ಯವಾಗುತ್ತಿಲ್ಲ. ಕಮ್ಯುನಿಸ್ಟ್- ಪಕ್ಷ, ಸಂಘಟನೆಗಳು, ಕಾರ್ಮಿಕ ಸಂಘಗಳಲ್ಲಿ ದಲಿತರು-ಮಹಿಳೆಯರು, ದಲಿತ ಚಳುವಳಿಗಳಲ್ಲಿ ಯುವಜನರು-ಮಹಿಳೆಯರು, ಅಲ್ಪಸಂಖ್ಯಾತ ಸಂಘಟನೆಗಳಲ್ಲಿ ಮಹಿಳೆಯರು-ಕೆಳಸ್ತರದ ಯುವ ಜನರು, ಸಮಾನ ನೆಲೆಯಲ್ಲಿ ಪ್ರಾತಿನಿಧ್ಯದಿಂದ ವಂಚಿತರಾಗಿರುವುದು ಸ್ಪಷ್ಟವಾಗಿ ಕಾಣುವಂತಿದೆ. ಆಂತರಿಕ ಪ್ರಜಾಪ್ರಭುತ್ವ ಇಲ್ಲದಿರುವುದು ಈ ಅನಪೇಕ್ಷಿತ ಬೆಳವಣಿಗೆಗೆ ಮೂಲ ಕಾರಣವಾಗಿದೆ. ಹೀಗೆ ಸಂಘಟಿತ (Organised) ಮತ್ತು ಅಸಂಘಟಿತ (Amorphous) ಹೋರಾಟಗಳಲ್ಲಿ ಆಳವಾಗಿರುವ ಅನೈಕ್ಯತೆ ಸಮಾಜದಲ್ಲಿ ದೊಡ್ಡ ನಿರ್ವಾತವನ್ನು ಸೃಷ್ಟಿಸಿದೆ. ಈ ನಿರ್ವಾತವೇ ಹೊಸ ಪೀಳಿಗೆಯ ನಾಯಕರನ್ನು ಸೃಷ್ಟಿಸುತ್ತಿದೆ. ಸಹಜವಾಗಿ ಈ ನಾಯಕರು ಕ್ರಮೇಣ ವ್ಯವಸ್ಥೆಯ ಒಂದು ಭಾಗವಾಗಿ ಮರೆಯಾಗುತ್ತಾರೆ. ಕಾಕ್ರೋಚ್ ಪಕ್ಷ ಇಂತಹ ನಿರ್ವಾತದಿಂದ ಉದಯಿಸುತ್ತದೆ.
ಡಿಜಿಟಲ್ ಭಾರತ , ವಿಶೇಷವಾಗಿ ಮಿಲೆನಿಯಲ್ ಯುವ ಜನಾಂಗ, ಎದುರಿಸುತ್ತಿರುವ ಜಟಿಲ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಿ ಹೋರಾಡಲು ಈ ಇತಿಮಿತಿಗಳನ್ನು ಮೀರಿದ ನಾಯಕತ್ವ, ಸಂಘಟನೆ ಮತ್ತು ವೇದಿಕೆ ಅತ್ಯವಶ್ಯವಾಗಿ ಬೇಕಿದೆ. ಸ್ಥಾಪಿತ ಪಕ್ಷ/ಸಂಘಟನೆಗಳಿಗೆ ಯೋಚಿಸಲು ಇನ್ನೂ ಸಮಯ ಇದೆ. ಕಾರ್ಮಿಕ ಸಂಘಗಳು, ರೈತ ಸಂಘಗಳು, ವಿದ್ಯಾರ್ಥಿ ಯುವ ಸಂಘಗಳು ವಿಶಾಲ ಮನಸ್ಸಿನಿಂದ ಆಲೋಚನೆಗಳನ್ನು ಹಂಚಿಕೊಳ್ಳುವ ಮೂಲಕ ಇದನ್ನು ಸಾಧಿಸಬಹುದು. ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ಸಾಂಕೇತಿಕ ಹೋರಾಟಕ್ಕೆ ತಾತ್ವಿಕ ಬೆಂಬಲ ಸೂಚಿಸುತ್ತಲೇ, ಭವಿಷ್ಯದ ಕರಾಳ ಹಾದಿಯಲ್ಲಿ ನಮ್ಮ ಹೆಗಲೇರಬಹುದಾದ ಜವಾಬ್ದಾರಿಯ ಕಡೆಗೂ ಗಮನಹರಿಸುವುದು, ಹಿರಿಯ ತಲೆಮಾರಿನ ವರ್ತಮಾನದ ತುರ್ತು ಮತ್ತು ನೈತಿಕ ಕರ್ತವ್ಯ.
ಇದನ್ನೂ ನೋಡಿ: ಬೀದಿಬದಿ ವ್ಯಾಪಾರಿಗಳ ಮೇಲೆ GBA ದಾಳಿ – ಬೀದಿ ವ್ಯಾಪಾರಿಗಳ ಆಕ್ರೋಶ Janashakthi Media
