ಧಾರವಾಡ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿರುವ ಬೆನ್ನಲ್ಲೇ, ಸಾರಿಗೆ ಸಂಸ್ಥೆಗಳ ಪಾಸ್ ವಿತರಣಾ ಕೇಂದ್ರಗಳು ದಿಢೀರ್ ಸ್ಥಗಿತಗೊಂಡಿವೆ. ಸರ್ಕಾರದ ಈ ನಿರ್ಧಾರದಿಂದಾಗಿ ಪ್ರಸ್ತುತ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಿತ್ಯ ಕೈಯಿಂದ ಹಣ ನೀಡಿ ಟಿಕೆಟ್ ಖರೀದಿಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ರಿಯಾಯಿತಿ ಪಾಸ್ ವಿತರಣೆಗೂ ಬ್ರೇಕ್
ಸಾಮಾನ್ಯವಾಗಿ ಸಾರಿಗೆ ಸಂಸ್ಥೆಗಳು ವಿದ್ಯಾರ್ಥಿಗಳಿಗೆ 10 ತಿಂಗಳ ವಾರ್ಷಿಕ ಬಸ್ ಪಾಸ್‌ಗಳನ್ನು ವಿತರಿಸುತ್ತವೆ. ನಿಯಮಗಳ ಪ್ರಕಾರ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ವಾರ್ಷಿಕ ₹150, ಹೈಸ್ಕೂಲ್ ಮಕ್ಕಳಿಗೆ ₹750 ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ₹1,050 ದರ ನಿಗದಿಯಾಗಿತ್ತು.
ಇದನ್ನೂ ಓದಿ: ಸಿಮ್ ಸ್ವಾಪ್ ವಂಚನೆಗೆ ಬಿಎಸ್‌ಎನ್‌ಎಲ್ ಹೊಣೆ; ₹50.50 ಲಕ್ಷ ಪರಿಹಾರ ನೀಡಲು ಹೈಕೋರ್ಟ್ ಆದೇಶ
ಅಲ್ಲದೆ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ವಾರ್ಷಿಕ ಕೇವಲ ₹150 ಶುಲ್ಕ ಮಾತ್ರ ಇತ್ತು. ಆದರೆ ಈಗ ಉಚಿತ ಪಾಸ್ ಯೋಜನೆ ಪ್ರಕಟವಾಗಿರುವುದರಿಂದ ಹಳೆಯ ರಿಯಾಯಿತಿ ದರದ ಪಾಸ್ ವಿತರಣೆಯನ್ನೂ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಪರಿಣಾಮವಾಗಿ, ಸದ್ಯಕ್ಕೆ ಪಾಸ್ ಇಲ್ಲದೆ ಪ್ರತಿ ವಿದ್ಯಾರ್ಥಿಯೂ ದಿನಕ್ಕೆ ₹25ರಿಂದ ₹70ರವರೆಗೆ ಪ್ರಯಾಣಕ್ಕಾಗಿ ಕಿಸೆಯಿಂದ ಹಣ ಖರ್ಚು ಮಾಡುತ್ತಿದ್ದಾರೆ.
ಜೂನ್ 3ರಂದು ನಡೆದ ಮೊದಲ ಸಂಪುಟ ಸಭೆಯಲ್ಲೇ ಉಚಿತ ವಿದ್ಯಾರ್ಥಿ ಬಸ್ ಪಾಸ್ ಯೋಜನೆಯನ್ನು ಘೋಷಿಸಲಾಗಿದ್ದರೂ, ಸಾರಿಗೆ ಇಲಾಖೆಯು ಈವರೆಗೂ ಇದಕ್ಕೆ ಸಂಬಂಧಿಸಿದ ಅಧಿಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿಲ್ಲ. ಮೇ 29ರಿಂದಲೇ ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ಆರಂಭವಾಗಿದ್ದು, ಈಗಾಗಲೇ ಒಂದು ವಾರ ಕಳೆದಿದೆ.
ಮಾರ್ಗಸೂಚಿ ವಿಳಂಬವಾಗುತ್ತಿರುವುದರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನೂರಾರು ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್ ಕೂಡ ಸಿಗುತ್ತಿಲ್ಲ. ಮೇ 4ರಿಂದಲೇ ಬಸ್ ಪಾಸ್ ಕೌಂಟರ್‌ಗಳನ್ನು ಮುಚ್ಚಲಾಗಿದ್ದು, ಗ್ರಾಮೀಣ ಭಾಗಗಳಿಂದ ನಗರ ಪ್ರದೇಶಗಳಿಗೆ ಬಂದು ವಿದ್ಯಾಭ್ಯಾಸ ಮಾಡುವ ಬಡ ವಿದ್ಯಾರ್ಥಿಗಳಿಗೆ ಇದು ಭಾರಿ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.
ಶುಲ್ಕ ರಶೀದಿ ಆಧಾರದ ಮೇಲೆ ಪ್ರಯಾಣಕ್ಕೆ ಅವಕಾಶ ನೀಡಿ
ಸಾರಿಗೆ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ರೂಪಿಸಲು ಇನ್ನು ಕೆಲವು ದಿನಗಳು ತಡವಾಗುವುದಾದರೆ, ಅಲ್ಲಿಯವರೆಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಶಿಕ್ಷಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ವಿದ್ಯಾರ್ಥಿಗಳ ಶಾಲಾ ಶುಲ್ಕದ ರಶೀದಿ ಅಥವಾ ಗುರುತಿನ ಚೀಟಿಯನ್ನು (ID Card) ಪರಿಶೀಲಿಸಿ ಉಚಿತವಾಗಿ ಪ್ರಯಾಣಿಸಲು ಸಾರಿಗೆ ಸಂಸ್ಥೆಯು ಕಂಡಕ್ಟರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು.
ಈ ಹಿಂದಿನ ತರಗತಿಯ ಬಸ್ ಪಾಸ್‌ಗಳನ್ನು ಪರಿಶೀಲಿಸಿದರೂ ಶೇ. 90ರಷ್ಟು ಮಕ್ಕಳಿಗೆ ಅನುಕೂಲವಾಗಲಿದ್ದು, ಸರ್ಕಾರ ತಕ್ಷಣವೇ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಮತ್ತು ಶಿಕ್ಷಕರು ಆಗ್ರಹಿಸಿದ್ದಾರೆ.
ಉಚಿತ ವಿದ್ಯಾರ್ಥಿ ಬಸ್ ಪಾಸ್ ವಿತರಣೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಇನ್ನೂ ಸ್ಪಷ್ಟ ಮಾರ್ಗಸೂಚಿಗಳು ನಮಗೆ ತಲುಪಿಲ್ಲ. ಹೀಗಾಗಿ ಸಣ್ಣ ಮಟ್ಟದ ಗೊಂದಲ ಉಂಟಾಗಿದ್ದು, ಇನ್ನು 2-3 ದಿನಗಳಲ್ಲಿ ಇದಕ್ಕೆ ಶಾಶ್ವತ ಪರಿಹಾರ ಸಿಗಲಿದೆ. ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಯಮದ ಪ್ರಕಾರ ಜೂನ್ 4ಕ್ಕೆ ಪಾಸ್ ಸಿಗಬೇಕಿತ್ತು. ಆದರೆ ಉಚಿತ ಘೋಷಣೆಯ ಬೆನ್ನಲ್ಲೇ ಕೌಂಟರ್‌ಗಳನ್ನು ಬಂದ್ ಮಾಡಲಾಗಿದೆ. ಈಗ ನಿತ್ಯ ₹50ರಿಂದ ₹100 ರವರೆಗೆ ಖರ್ಚಾಗುತ್ತಿದೆ. ಒಂದು ವಾರ ಹೀಗೆಯೇ ಮುಂದುವರಿದರೆ ಮುಂದೆ ಉಚಿತ ಪಾಸ್ ಸಿಕ್ಕರೂ ಪ್ರಯೋಜನವಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ನೋಡಿ: ಸರಕಾರಕ್ಕೆ ತೈಲದ ಆಟ, ಜನರಿಗೆ ಜೇಬಿನ ದರೋಡೆ! | ವಿಶ್ಲೇಷಣೆ – ಗುರುರಾಜ ದೇಸಾಯಿ Janashakthi Media
