‘ಹೈಡ್ರಾ’ ಸಂಸ್ಥೆ ರಚನೆ ‘ಹಿಟ್ಲರ್‌ನಿಂದ ಸ್ಫೂರ್ತಿ’: ರೇವಂತ್ ರೆಡ್ಡಿ

ಹೈದರಾಬಾದ್:‌ ಹೈದರಾಬಾದ್‌ನಲ್ಲಿ ಕೆರೆಗಳ ಸಂರಕ್ಷಣೆ ಮತ್ತು ಅಕ್ರಮ ಒತ್ತುವರಿ ತೆರವುಗೊಳಿಸಲು ತಮ್ಮ ಸರ್ಕಾರ ರಚಿಸಿರುವ ‘ಹೈಡ್ರಾ’ (HYDRAA) ಕಾರ್ಯಪಡೆಗೆ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನೇ ಸ್ಫೂರ್ತಿ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೀಡಿರುವ ಈ ಹೊಸ ಹೇಳಿಕೆಯು ಇದೀಗ ದೇಶಾದ್ಯಂತ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಸಿಎಂ ಅವರ ಈ ವಿವಾದಾತ್ಮಕ ಹೇಳಿಕೆಗೆ ಭಾರತೀಯ ಜನತಾ ಪಾರ್ಟಿ (BJP) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅವರು ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು, ತಮ್ಮ ಸರ್ಕಾರದ ಆಡಳಿತ ವೈಖರಿ ಮತ್ತು ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ: ರಾಷ್ಟ್ರೀಯ ಪ್ರಶಸ್ತಿ ವಿಜೇತ ಮಲಯಾಳಂ ನಟ ಸಲೀಂ ಕುಮಾರ್ ನಿಧನ

ಈ ವೇಳೆ ‘ಹೈಡ್ರಾ’ ಎಂಬ ಹೆಸರಿನ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟ ಅವರು, ಈ ಹೆಸರನ್ನು ತಾವು ಹಿಟ್ಲರ್‌ನಿಂದ ಸ್ಫೂರ್ತಿ ಪಡೆದು ಇಟ್ಟಿರುವುದಾಗಿ ತಿಳಿಸಿದರು. ಹಿಟ್ಲರ್‌ನ ಅತ್ಯಂತ ಆಪ್ತ ಹಾಗೂ ಪ್ರಮುಖ ತಂಡಕ್ಕೆ ‘ಹೈಡ್ರಾ’ ಎಂದು ಹೆಸರಿಡಲಾಗಿತ್ತು, ಅದು ಅವನಿಗೆ ಬಹಳ ಪ್ರಿಯವಾದ ಪದವಾಗಿತ್ತು ಎಂದು ರೇವಂತ್ ರೆಡ್ಡಿ ವಿವರಣೆ ನೀಡಿದ್ದಾರೆ. ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈನಂತಹ ದೇಶದ ಪ್ರಮುಖ ನಗರಗಳಲ್ಲಿ ಪ್ರವಾಹ ಮತ್ತು ಅಕ್ರಮ ಒತ್ತುವರಿ ತಡೆಯಲು ಇಂತಹ ಕಠಿಣ ಕ್ರಮಗಳ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ರೇವಂತ್ ರೆಡ್ಡಿ ಅವರ ಈ ಹೇಳಿಕೆ ಹೊರಬರುತ್ತಿದ್ದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ. ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರು ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾಲದಿಂದ ಹಿಡಿದು ಇಂದಿನವರೆಗೂ ಕಾಂಗ್ರೆಸ್ ಪಕ್ಷವು ಜನರ ಧ್ವನಿಯನ್ನು ಅಡಗಿಸುವ ಹಿಟ್ಲರ್ ಮನಸ್ಥಿತಿಯನ್ನೇ ಹೊಂದಿದೆ ಎಂದು ಟೀಕಿಸಿದ್ದಾರೆ.

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಯುದ್ಧ ಪೀಡಿತ ದೇಶಗಳಾದ ಇರಾನ್ ಮತ್ತು ಇಸ್ರೇಲ್ ಪರಿಸ್ಥಿತಿಗೆ ಹೋಲಿಸುತ್ತಿರುವುದು ರೇವಂತ್ ರೆಡ್ಡಿ ಅವರ ಅಪಾಯಕಾರಿ ಆಲೋಚನೆಯನ್ನು ತೋರಿಸುತ್ತದೆ ಎಂದು ಕಿಶನ್ ರೆಡ್ಡಿ ಕಿಡಿಕಾರಿದ್ದಾರೆ. ಮುಖ್ಯಮಂತ್ರಿಗಳು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿರುವುದಕ್ಕೆ ತೆಲಂಗಾಣದ ಜನತೆಯ ಕ್ಷಮೆ ಕೇಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧವೂ ಹರಿಹಾಯ್ದಿರುವ ಮುಖ್ಯಮಂತ್ರಿ ರೇವಂತ್ ರೆಡ್ಡಿ, ದಕ್ಷಿಣ ಭಾರತದ ರಾಜ್ಯಗಳು ದೇಶದ ಆರ್ಥಿಕತೆಗೆ ಅತಿ ಹೆಚ್ಚು ಕೊಡುಗೆ ನೀಡುತ್ತಿದ್ದರೂ ಕೇಂದ್ರ ಸರ್ಕಾರವು ದಕ್ಷಿಣ ರಾಜ್ಯಗಳ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ತೆಲಂಗಾಣಕ್ಕೆ ಬರಬೇಕಾದ ಆರ್ಥಿಕ ನೆರವನ್ನು ತಡೆದು, ಬಂಡವಾಳ ಹೂಡಿಕೆಯನ್ನು ಗುಜರಾತ್‌ನತ್ತ ತಿರುಗಿಸಲಾಗುತ್ತಿದೆ ಎಂದು ಅವರು ದೂರಿದ್ದಾರೆ. ಒಟ್ಟಿನಲ್ಲಿ, ಒತ್ತುವರಿ ತೆರವು ಸಂಸ್ಥೆಗೆ ಹಿಟ್ಲರ್ ಹೆಸರಿನ ಸ್ಫೂರ್ತಿ ಇದೆ ಎಂದಿರುವ ರೇವಂತ್ ರೆಡ್ಡಿ ಅವರ ಮಾತುಗಳು ಈಗ ತೆಲಂಗಾಣ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿವೆ.

ಇದನ್ನೂ ನೋಡಿ: ಬೀದಿಬದಿ ವ್ಯಾಪಾರಿಗಳ ಮೇಲೆ GBA ದಾಳಿ – ಬೀದಿ ವ್ಯಾಪಾರಿಗಳ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *