ರಾಜೀನಾಮೆ ಹಿಂಪಡೆದ ರಾಮಲಿಂಗಾ ರೆಡ್ಡಿ: ಕಾಂಗ್ರೆಸ್ ಒಳಗಿದ್ದ ಭಿನ್ನಮತಕ್ಕೆ ತೆರೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಉಂಟಾಗಿದ್ದ ಆರಂಭಿಕ ಅಸಮಾಧಾನಕ್ಕೆ ಇದೀಗ ತೆರೆ ಬಿದ್ದಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದ ರಾಮಲಿಂಗಾ ರೆಡ್ಡಿ ಅವರನ್ನು ಕಾಂಗ್ರೆಸ್ ನಾಯಕತ್ವ ಮನವೊಲಿಸುವಲ್ಲಿ ಯಶಸ್ವಿಯಾಗಿದೆ.

ಡಿ.ಕೆ.ಶಿವಕುಮಾರ್‌ ಅವರೊಟ್ಟಿಗಿನ ದೀರ್ಘಕಾಲದ ಸ್ನೇಹ ಹಾಗೂ ಹೈಕಮಾಂಡ್‌ ನಾಯಕರ ಮನವೊಲಿಕೆಗೆ ಕರಗಿದ ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್‌ ಪಡೆದಿದ್ದು, ಸದ್ಯದ ಜಲಸಂಪನ್ಮೂಲ ಖಾತೆ ಜತೆಗೆ, ವಸತಿ, ಸಣ್ಣ ನೀರಾವರಿ, ಮುಜರಾಯಿ ಈ ಮೂರರಲ್ಲಿ ಬಯಸುವ ಒಂದು ಹೆಚ್ಚುವರಿ ಖಾತೆ ಸಿಗಲಿದೆ.

ಮುನಿಸಿಕೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಮಲಿಂಗಾ ರೆಡ್ಡಿ ಅವರನ್ನು ತಡರಾತ್ರಿ ಭೇಟಿಯಾಗಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ಮನವೊಲಿಸುವ ಪ್ರಯತ್ನ ನಡೆಸಿದ್ದರು. ಜಲ ಸಂಪನ್ಮೂಲ ಬೇಡ ಎನ್ನುವುದಾದರೆ ತಮ್ಮ ಬಳಿ ಉಳಿದಿರುವ ಹಾಗೂ ಹಂಚಿಕೆಯಾಗದ ಯಾವುದೇ ಖಾತೆ ನೀಡುವ ಆಫರ್‌ ಕೂಡ ನೀಡಿ, ತಮ್ಮ ಸಂಪುಟದಲ್ಲಿ ಮುಂದುವರಿಯಲು ಮನವಿ ಮಾಡಿದ್ದರು. ಆದರೂ, ರಾಮಲಿಂಗಾ ರೆಡ್ಡಿ ಅಸಮಾಧಾನ ಸಂಪೂರ್ಣ ಕರಗಿರಲಿಲ್ಲ. ಸುರ್ಜೇವಾಲಾ ಅವರು ರಾಮಲಿಂಗಾರೆಡ್ಡಿ ಅವರನ್ನು ಕರೆಸಿಕೊಂಡು ರಾಜೀನಾಮೆ ವಾಪಸ್‌ ಪಡೆಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: ‘ನಮ್ಮ ನೀರು, ನಮ್ಮ ಕಾಡು, ನಮ್ಮ ಭೂಮಿ’: ಪರಿಸರ ಸಂರಕ್ಷಣೆಗೆ ಜನತಾಂತ್ರಿಕ ಪಾಲ್ಗೊಳ್ಳುವಿಕೆ ಅಗತ್ಯ – ಧರ್ಮೇಶ್

ಖಾತೆ ಕ್ಯಾತೆ ಪರಿಹಾರ, ಹೆಚ್ಚುವರಿ ಖಾತೆಯ ಆಫರ್‌

ಖಾತೆ ವಿಚಾರದಲ್ಲಿ ಮುನಿಸಿಕೊಂಡು ರಾಜೀನಾಮೆ ನೀಡಿದ್ದ ರಾಮಲಿಂಗಾ ರೆಡ್ಡಿ ಅವರಿಗೆ ಜಲ ಸಂಪನ್ಮೂಲದ ಜತೆಗೆ ವಸತಿ, ಸಣ್ಣ ನೀರಾವರಿ, ಮುಜರಾಯಿ ಈ ಮೂರರಲ್ಲಿ ಬಯಸುವ ಒಂದು ಹೆಚ್ಚುವರಿ ಖಾತೆ ಸಿಗಲಿದೆ.

ಪಕ್ಷದ ಕೆಲಸಕ್ಕೆ ಸದಾ ಮುಂದಿರುವ ತಮ್ಮ ನಿಷ್ಠೆ ಹಾಗೂ ಅನುಭವವನ್ನು ಪರಿಗಣಿಸಲಿಲ್ಲ. ಈ ಮುನ್ನ ಕೊಟ್ಟ ಮಾತಿನಂತೆ ಬೆಂಗಳೂರು ನಗರಾಭಿವೃದ್ದಿ ಕೊಡಲಿಲ್ಲ ಎಂದು ಆಕ್ರೋಶಗೊಂಡು ರಾಮಲಿಂಗಾರೆಡ್ಡಿ ಅವರು ವಾಟ್ಸಪ್‌ನಲ್ಲೇ ಮುಖ್ಯಮಂತ್ರಿಗಳಿಗೆ ರಾಜೀನಾಮೆ ಸಂದೇಶ ರವಾನಿಸಿದ್ದು ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಶುಕ್ರವಾರ ತಡರಾತ್ರಿಯೇ ರಾಮಲಿಂಗಾರೆಡ್ಡಿ ಅವರು ವಾಸ್ತವ್ಯ ಹೂಡಿದ್ದ ಖಾಸಗಿ ಹೋಟೆಲ್‌ನಲ್ಲಿ ಭೇಟಿ ಮಾಡಿ ಡಿ.ಕೆ.ಶಿವಕುಮಾರ್‌ ಅವರು ಮನವೊಲಿಸಿದರು. ಬಳಿಕ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಶನಿವಾರ ಮಧ್ಯಾಹ್ನ ಹೋಟೆಲ್‌ವೊಂದಕ್ಕೆ ಕರೆಸಿಕೊಂಡು ಅವರ ‘ಸ್ವಾಭಿಮಾನ’ದ ಪ್ರಶ್ನೆಗೆ ಉತ್ತರ ಹುಡುಕಿದರು.

ಬೆಂಗಳೂರು ನಗರಾಭಿವೃದ್ದಿ ಖಾತೆ ವಿಚಾರದಲ್ಲಿ ಹೈಕಮಾಂಡ್‌ ನಿರ್ಧಾರದ ಸೂಕ್ಷ್ಮತೆಯನ್ನು ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಹಾಗೂ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರುಗಳು ರಾಮಲಿಂಗಾ ರೆಡ್ಡಿ ಅವರಿಗೆ ಮನವರಿಕೆ ಮಾಡಿಕೊಟ್ಟು, ಹೆಚ್ಚುವರಿ ಖಾತೆಯ ಆಫರ್‌ ನೀಡಿದರು. ಈ ಖಾತೆ ವಹಿಸಿಕೊಂಡಿರುವ ಕೃಷ್ಣ ಬೈರೇಗೌಡ ಅವರನ್ನೂ ತಾವು ತಂಗಿದ್ದ ಹೋಟೆಲ್‌ಗೆ ಕರೆಸಿಕೊಂಡ ಸುರ್ಜೇವಾಲಾ ಅವರು, ರಾಮಲಿಂಗಾ ರೆಡ್ಡಿ ಅವರ ಸಮ್ಮುಖದಲ್ಲಿಸುಮಾರು ಒಂದು ತಾಸು ಚರ್ಚೆ ನಡೆಸಿದರು. ರಾಮಲಿಂಗಾ ರೆಡ್ಡಿ ಅವರ ಆಕ್ಷೇಪ ಹಾಗೂ ಅಸಮಾಧಾನಗಳಿಗೆ ಪರಿಹಾರದ ಸೂತ್ರ ರೂಪಿಸಿದರು.

ಅದಾದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸುರ್ಜೇವಾಲಾ, ”ಸ್ವಲ್ಪ ತಪ್ಪು ತಿಳುವಳಿಕೆಯಿಂದ ವ್ಯತ್ಯಾಸವಾಗಿತ್ತು. ಮಾತುಕತೆ ಮೂಲಕ ಬಗೆಹರಿಸಲಾಗಿದೆ. ರಾಮಲಿಂಗಾ ರೆಡ್ಡಿ ತಮ್ಮ ರಾಜೀನಾಮೆ ವಾಪಸ್‌ ಪಡೆದುಕೊಂಡಿದ್ದು, ಸಚಿವ ಸಂಪುಟದಲ್ಲಿ ಮುಂದುವರಿಯಲಿದ್ದಾರೆ” ಎಂದು ಪ್ರಕಟಿಸಿದರು.

”ಕಾಂಗ್ರೆಸ್‌ ಪಕ್ಷದಲ್ಲಿ ಅಧಿಕಾರ ಹಸ್ತಾಂತರ ಸುಗಮವಾಗಿ ಸಾಗಿರುವುದರಿಂದ ಆಘಾತಕ್ಕೆ ಒಳಗಾಗಿರುವ ಬಿಜೆಪಿ ನಾಯಕರು, ಈ ಪ್ರಕರಣದಿಂದ ರಾಜಕೀಯ ಲಾಭ ಪಡೆಯುವ ಲೆಕ್ಕಾಚಾರದಲ್ಲಿದ್ದರು. ಬಿಜೆಪಿ ನಾಯಕರಿಗೆ ನಿರಾಶೆಯಾಗಿದೆ. ರಾಮಲಿಂಗಾ ರೆಡ್ಡಿ ಅವರ ಅನುಭವ, ಜಾಣ್ಮೆ ಕಾಂಗ್ರೆಸ್‌ ಪಕ್ಷಕ್ಕೆ ಅಮೂಲ್ಯವಾದುದು ಮತ್ತು ಅವರು ಪಕ್ಷದ ಪಾಲಿಗೆ ಪಕ್ಷದ ಆಸ್ತಿ. ರಾಜೀನಾಮೆ ವಾಪಸ್‌ ಪಡೆದು ಸಚಿವರಾಗಿ ಹಾಗೂ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿ ರಾಮಲಿಂಗಾ ರೆಡ್ಡಿ ಕಾರ್ಯನಿರ್ವಹಿಸಲಿದ್ದಾರೆ” ಎಂದು ಸುರ್ಜೇವಾಲಾ ಹೇಳಿದರು.

ರಾಮಲಿಂಗಾರೆಡ್ಡಿ ಅವರು ನನ್ನ ಆಪ್ತ ಸ್ನೇಹಿತರು, ನಮ್ಮ ಕುಟುಂಬದ ಸಮಸ್ಯೆಯನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ಅವರೊಂದಿಗೆ ಮಾತನಾಡಿದ್ದು, ಒಂದಷ್ಟು ತಪ್ಪು ಸಂವಹನದಿಂದ ಎದುರಾಗಿದ್ದ ಸಮಸ್ಯೆ ಬಗೆಹರಿದಿದೆ ಎಂದಿದ್ದಾರೆ ಡಿ.ಕೆ.ಶಿವಕುಮಾರ್‌.

ಮುಖ್ಯಮಂತ್ರಿ ರಾಮಲಿಂಗಾ ರೆಡ್ಡಿ ಅವರು ಬೆಂಗಳೂರು ನಗರದ ಪಿಲ್ಲರ್‌ ಅಗಿದ್ದು, ಅವರು ಒಬ್ಬ ಅಜಾತಶತ್ರು. ಸಂವಹನದ ಕೊರತೆಯಿಂದ ತೊಂದರೆಯಾಗಿತ್ತು. ನಾನು ಮತ್ತು ಮುಖ್ಯಮಂತ್ರಿ ಇಬ್ಬರೂ ಭೇಟಿ ಮಾಡಿ ಮಾತನಾಡಿದ್ದೇವೆ. ಇದೇನೂ ಗಂಭೀರ ಸಂಗತಿಯಲ್ಲ ಎಂದಿದ್ದಾರೆ ಬಿ.ಕೆ.ಹರಿಪ್ರಸಾದ್‌, ಕೆಪಿಸಿಸಿ ಅಧ್ಯಕ್ಷ.

ಇದನ್ನೂ ನೋಡಿ: ಇಬ್ಬರು ಬಾಲಕಿಯರ ಬದುಕು ಉಳಿಸಿದ ಹೋರಾಟ | ದೇವದಾಸಿ ಪದ್ಧತಿಗೆ ತಡೆ Janashakthi Media

Donate Janashakthi Media

Leave a Reply

Your email address will not be published. Required fields are marked *