12 TMC ಸಂಸದರು BJP ಸೇರ್ಪಡೆ!
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದೊಳಗಿನ ಭಿನ್ನಮತದ ಚರ್ಚೆಗಳ ನಡುವೆಯೇ ಪಕ್ಷದ ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರ ನೇತೃತ್ವದಲ್ಲಿ ನಡೆದ ಆಡಳಿತಾತ್ಮಕ ಸಭೆಯಲ್ಲಿ ಭಾಗವಹಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಟಿಎಂಸಿ
ನಾಡಿಯಾ ಜಿಲ್ಲೆಯ ಕಲ್ಯಾಣಿಯಲ್ಲಿ ನಡೆದ ಸಭೆಯಲ್ಲಿ ಟಿಎಂಸಿಯ ಇಬ್ಬರು ಶಾಸಕರೂ ಭಾಗವಹಿಸಿದ್ದರು. ಮುಖ್ಯಮಂತ್ರಿ ಆದ ಬಳಿಕ ಪ್ರತಿಪಕ್ಷದ ಜನಪ್ರತಿನಿಧಿಗಳನ್ನೂ ಆಡಳಿತಾತ್ಮಕ ಸಭೆಗಳಿಗೆ ಆಹ್ವಾನಿಸಲಾಗುವುದು ಎಂದು ಸುವೇಂದು ಅಧಿಕಾರಿ ಘೋಷಿಸಿದ್ದರು. ಅದರಂತೆ ಈ ಸಭೆ ನಡೆದಿದೆ ಎಂದು ವರದಿಗಳು ತಿಳಿಸಿವೆ.
ಇತ್ತೀಚೆಗೆ ಕಾಕೋಲಿ ಘೋಷ್ ದಸ್ತಿದಾರ್ ಟಿಎಂಸಿ ಸಂಘಟನಾ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಾರಾಸತ್ ಪ್ರದೇಶದಲ್ಲಿ ಪಕ್ಷದ ದುರ್ಬಲ ಪ್ರದರ್ಶನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದ ಅವರು, ಪಕ್ಷದಲ್ಲಿ ಐ-ಪ್ಯಾಕ್ (I-PAC) ಪ್ರಭಾವ ಹೆಚ್ಚುತ್ತಿರುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ.
ಪಕ್ಷದ ಹಿರಿಯ ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಟಿಎಂಸಿ ನಾಯಕತ್ವಕ್ಕೆ ಮನವಿ ಮಾಡಿದ್ದಲ್ಲದೆ, ಪಕ್ಷದಲ್ಲಿ “ಅಪರಾಧೀಕರಣ ಹೆಚ್ಚುತ್ತಿದೆ” ಎಂಬ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು ಎಂದು ವರದಿಗಳು ತಿಳಿಸಿವೆ.
ಈ ನಡುವೆ ಬಿಜೆಪಿ ಸರ್ಕಾರದ ಸಭೆಯಲ್ಲಿ ಅವರ ಹಾಜರಾತಿ ಟಿಎಂಸಿಯಲ್ಲಿ ಒಳಜಗಳ ಹೆಚ್ಚುತ್ತಿರುವ ಸೂಚನೆಯೇ ಎಂಬ ಚರ್ಚೆಗೆ ಕಾರಣವಾಗಿದೆ. ಆದರೆ ಈ ಕುರಿತು ಕಾಕೋಲಿ ಘೋಷ್ ದಸ್ತಿದಾರ್ ಅಥವಾ ಟಿಎಂಸಿ ನಾಯಕತ್ವದಿಂದ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ. ಟಿಎಂಸಿ
ಇದನ್ನೂ ಓದಿ : ಪಶ್ಚಿಮ ಬಂಗಾಳ | ಗೋ ರಕ್ಷಣೆ ಹೆಸರಿನಲ್ಲಿ ಜೀವನೋಪಾಯಕ್ಕೆ ಬೀಗ! ಹಾಲು, ಚರ್ಮೋದ್ಯಮಕ್ಕೂ ಸಂಕಷ್ಟ
12 ಸಂಸದರು ಬಿಜೆಪಿಗೆ!: ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಮಾಜಿ ಸಿಎಂ ಮಮತಾ ಬ್ಯಾನರ್ಜಿಗೆ ಮತ್ತೊಂದು ಭಾರಿ ಆಘಾತ ಎದುರಾಗಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷದ ಬರೊಬ್ಬರಿ 12 ಸಂಸದರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ಟಿಎಂಸಿಯ 29 ಲೋಕಸಭಾ ಸಂಸದರ ಪೈಕಿ ಸುಮಾರು 12 ಮಂದಿ ಈಗಾಗಲೇ ಬಿಜೆಪಿ ಸೇರುವ ಅಥವಾ ಬೆಂಬಲಿಸುವ ಯೋಜನೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ ಇನ್ನೂ ಐದು ಅಥವಾ ಆರು ಸಂಸದರೊಂದಿಗೆ ಕೂಡ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ.
ದೈನಿಕ್ ಜಾಗರಣ್ ವರದಿ ಪ್ರಕಾರ, ಪಕ್ಷತ್ಯಾಗ ವಿರೋಧಿ ಕಾನೂನನ್ನು ತಪ್ಪಿಸಿಕೊಳ್ಳಲು ಕನಿಷ್ಠ 19-20 ಸಂಸದರನ್ನು ಒಟ್ಟುಗೂಡಿಸುವ ತಂತ್ರ ರೂಪಿಸಲಾಗುತ್ತಿದೆ. ಇವರಲ್ಲಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಅಭಿಷೇಖ್ ಬ್ಯಾನರ್ಜಿ ಅವರಿಗೆ ಆಪ್ತರಾಗಿದ್ದಾರೆ ಎನ್ನಲಾಗುವ ಕೆಲ ಸಂಸದರೂ ಸೇರಿದ್ದಾರೆ ಎನ್ನುವುದು ವಿಶೇಷವಾಗಿದೆ. ಇದು ದೀದಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇದನ್ನೂ ನೋಡಿ : IPL 2026 | ಪ್ಲೇಆಫ್ ಪೈಪೋಟಿ: ನಾಲ್ಕು ತಂಡಗಳ ಪ್ಲಸ್, ಮೈನಸ್ ಮತ್ತು ಕಪ್ ಲೆಕ್ಕಾಚಾರ Janashakthi Media
