– ವಸಂತರಾಜ ಎನ್.ಕೆ
ಈ ತಿಂಗಳಲ್ಲಿ (ಮೇ 2026) ಎರಡು ಪ್ರಮುಖ ಜಾಗತಿಕ ನಾಯಕರು ಯು.ಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಶ್ಯನ್ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಚೀನಾದ ರಾಜಧಾನಿ ಬೆಜಿಂಗ್ ಗೆ ಭೇಟಿ ನೀಡಿದರು. ಟ್ರಂಪ್ ಭೇಟಿ ಯು.ಎಸ್ ನ ಏಕಚಕ್ರಾಧಿಪತ್ಯ ಮುಗಿದಿದೆ. ಯು.ಎಸ್ ಮತ್ತು ಚೀನಾ ಸಮಾನ ಜಾಗತಿಕ ಶಕ್ತಿಗಳು ಎಂಬ ಸಂದೇಶ ನೀಡಿತು. ರಷ್ಯಾ-ಚೀನಾ ದೀರ್ಘಕಾಲದ ವ್ಯೂಹಾತ್ಮಕ ಪಾಲುದಾರರು ಎಂಬ ಸಂದೇಶವನ್ನು ಪುಟಿನ್ ಭೇಟಿ ಬಲವಾಗಿ ನೀಡಿತು. ಈ ಎರಡು ಭೇಟಿಗಳಿಂದ ಭಾರತ ಸೇರಿದಂತೆ ಜಾಗತಿಕ ದಕ್ಷಿಣದ ದೇಶಗಳಿಗೆ, ಯು.ಎಸ್ ನ ಏಕಚಕ್ರಾಧಿಪತ್ಯಕ್ಕೆ ಬಗ್ಗಬೇಕಾಗಿಲ್ಲ ಮತ್ತು ಬಹುಧ್ರುವೀಯ ಜಗತ್ತಿನ ಪರ್ಯಾಯ ವ್ಯವಸ್ಥಿತವಾಗಿ ಆರಂಭವಾಗಿದೆ ಎಂಬ ಸಂದೇಶ ಸಹ ಹೋಗಿದೆ.
ಈ ತಿಂಗಳಲ್ಲಿ (ಮೇ 2026) ಎರಡು ಪ್ರಮುಖ ಜಾಗತಿಕ ನಾಯಕರು – ಯು.ಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಶ್ಯನ್ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ – ಚೀನಾದ ರಾಜಧಾನಿ ಬೆಜಿಂಗ್ ಗೆ ಭೇಟಿ ನೀಡಿದರು. ಬಹುತೇಕ ಮಾಧ್ಯಮಗಳು ಈ ಭೇಟಿಗಳನ್ನು ಪ್ರತ್ಯೇಕ ಘಟನೆಗಳಾಗಿ ನೋಡಿದವು.
ಡೊನಾಲ್ಡ್ ಟ್ರಂಪ್ ಅವರ ಚೀನಾ ಭೇಟಿ, ಇರಾನ್ ಯುದ್ಧ, ತೈವಾನ್ ವಿವಾದ ಮತ್ತು ಚೀನಾದ ಜತೆ ವ್ಯಾಪಾರ ಮತ್ತು ಮಾರುಕಟ್ಟೆ ಪ್ರವೇಶದ ದೃಷ್ಟಿಯಿಂದ ವಿಶ್ಲೇಷಿಸಲಾಯಿತು. ವ್ಲಾಡಿಮಿರ್ ಪುಟಿನ್ ಅವರ ಭೇಟಿ ಇಂಧನ ಮತ್ತು ಭೌಗೋಳಿಕ -ರಾಜಕೀಯದ ಹಿನ್ನೆಲೆಯಲ್ಲೇ ಚರ್ಚಿಸಲಾಯಿತು. ಆದರೆ ಈ ಭೇಟಿಗಳನ್ನು ಪ್ರತ್ಯೇಕವಾಗಿ ನೋಡುವುದು ಈ ಭೇಟಿಗಳ ಒಟ್ಟು ಅರ್ಥೈಸುವಿಕೆ ಮತ್ತು ಮಹತ್ವವನ್ನು ನಿರ್ಲಕ್ಷಿಸುತ್ತದೆ.
ಮೊದಲು ಟ್ರಂಪ್ ಬಂದರು. ಅವರ ನಂತರ ಪುಟಿನ್ ಬಂದರು. ಇದೇ ಅವಧಿಯಲ್ಲಿ ಬ್ರೂನೈ, ಲೈಬೀರಿಯಾ, ಸೀಶೆಲ್ಸ್ ಮತ್ತು ಮೊಲ್ಡೋವಾ ದೇಶಗಳ ಪ್ರತಿನಿಧಿಗಳನ್ನೂ ಚೀನಾ ಆತಿಥ್ಯ ವಹಿಸಿತು. ಈ ಎಲ್ಲವನ್ನು ಒಟ್ಟಿಗೆ ನೋಡಿದಾಗ ಒಂದು ದೊಡ್ಡ ಹೊಸ ಅರ್ಥ ಕಾಣಿಸುತ್ತದೆ — ಚೀನಾ ಕೇವಲ ಜಾಗತಿಕ ರಾಜಕೀಯದ ಭಾಗಿಯಾಗಿಲ್ಲ; ಬದಲಾಗಿ ಜಗತ್ತಿನ ವಿವಿಧ ಶಕ್ತಿಗಳು, ಆರ್ಥಿಕ ಹಿತಾಸಕ್ತಿಗಳು ಮತ್ತು ದೇಶಗಳು ಸೇರುವ ಕೇಂದ್ರ ವೇದಿಕೆಯಾಗುತ್ತಿದೆ.
ಟ್ರಂಪ್ ಭೇಟಿ ರಾಜಕೀಯದ ಬಗ್ಗೆ ಮಾತ್ರವಲ್ಲ
ಟ್ರಂಪ್ ಅವರ ಭೇಟಿಯ ಪ್ರಮುಖ ಅಂಶ ಇರಾನ್-ಯುದ್ಧ ಮತ್ತು ತೈವಾನ್ ವಿವಾದಗಳ ಭೌಗೋಳಿಕ-ರಾಜಕೀಯ ಅಂಶಗಳು ಮಾತ್ರವಲ್ಲ. ಇರಾನ್ ಜತೆ ಒಪ್ಪಂದ ಕುದುರಿಸುವಂತೆ ಚೀನಾದ ಸಹಾಯ ಪಡೆಯುವ ಅವರ ಪ್ರಯತ್ನ ವಿಫಲವಾಯಿತು. ಹೊರ್ಮುಝ್ ಜಲಸಂಧಿ ಎಲ್ಲ ಸಾಗಾಣಿಕೆಗಳಿಗೆ ಮುಕ್ತವಾಗಿರಬೇಕು, ಇರಾನ್ ಅಣ್ವಸ್ತ್ರಗಳನ್ನು ಹೊಂದಬಾರದು ಎಂದು ಚೀನಾ ಒಪ್ಪಿಕೊಂಡಿದೆ ಎಂದು ಟ್ರಂಪ್ ಹೇಳಿಕೊಂಡರು. ಆದರೆ ಚೀನಾದ ಹೇಳಿಕೆಯಲ್ಲಿ ಈ ಬಗ್ಗೆ ಏನೂ ಇರಲಿಲ್ಲ. ಸಂಘರ್ಷವನ್ನು ಶಾಂತಿಯುತವಾಗಿ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಬೇಕು ಎಂದಷ್ಟೇ ಅದು ಹೇಳಿದೆ. “ಯು.ಎಸ್-ಇಸ್ರೇಲ್ ಇರಾನ್ ಯುದ್ಧ ಹೂಡುವ ಮೊದಲು ಹೊರ್ಮುಝ್ ಜಲಸಂಧಿ ಮುಕ್ತವಾಗಿಯೇ ಇತ್ತು” ಎಂಬ ಭೇಟಿಯ ಮೊದಲಿನ ಚೀನಾದ ಹೇಳಿಕೆ ನೋಡಿದರೆ ಬೇರೆನೇ ಅರ್ಥ ಬರುತ್ತದೆ. ಚೀನಾದ ಅಧ್ಯಕ್ಷ ಶಿ ಜಿನ್ ಪಿಂಗ್ ‘ತುಸಿಡೈಡಿಸ್ ಬೋನು” ಕುರಿತ ಹೇಳಿಕೆ ಯು.ಎಸ್ ಗೇ ಚೀನಾ ಸಮಾನ ಶಕ್ತಿ. ಚೀನಾವನ್ನು ಬೆದರಿಸುವುದು ಸಾಧ್ಯವಿಲ್ಲ. ಎರಡು ಪ್ರಮುಖ-ರಾಷ್ಟ್ರಗಳ ಸಹಕಾರದಿಂದ ಉತ್ತಮ ಜಗತ್ತು ನಿರ್ಮಾಣ ಸಾಧ್ಯ ಎಂಬ ಇಂಗಿತ ಕೊಡುತ್ತದೆ. ಇದು ಮನವಿಯೂ ಹೌದು. ಎಚ್ಚರಿಕೆಯೂ ಹೌದು. ತೈವಾನ್ ನಲ್ಲಿ ಚೀನಾದ ಸಾರ್ವಭೌಮತೆಗೆ ಭಂಗದ ಅಪಾಯದ ಬಗೆಗೂ ಶಿ ಜಿನ್ ಪಿಂಗ್ ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ. ಸಭೆಯ ನಂತರ ಟ್ರಂಪ್, ತೈವಾನ್ ಗೆ ಮುಂದಿನ ಭಾರೀ ಮಿಲಿಟರಿ ನೆರವಿನ ಪ್ಯಾಕೇಜ್ ಮಂಜೂರು ಮಾಡಬೇಕೋ ಎಂಬುದ ಕುರಿತು ಯೋಚಿಸಬೇಕು ಎಂದು ಹೇಳೀದ್ದು, ಶಿ ಎಚ್ಚರಿಕೆ ಪರಿಣಾಮ ಬೀರಿದೆ ಎಂದು ತೋರಿಸುತ್ತದೆ.
ಇದನ್ನೂ ಓದಿ : ವಿದ್ಯುತ್ ಬಿಕ್ಕಟ್ಟಿನಿಂದ ಉತ್ತರ ಪ್ರದೇಶ ಜನತೆ ಸಂಕಷ್ಟದಲ್ಲಿ | ಯೋಗಿ ಸರ್ಕಾರದ ವಿರುದ್ಧ ಎಸ್ಪಿ, ಬಿಎಸ್ಪಿ ವಾಗ್ದಾಳಿ
ಟ್ರಂಪ್ ಭೇಟಿ: ರಾಜಕೀಯಕ್ಕಿಂತ ಹೆಚ್ಚು ವ್ಯಾಪಾರದ ಬಗ್ಗೆ
ಟ್ರಂಪ್ ಬೇಟಿಯಲ್ಲಿ ರಾಜಕೀಯಕ್ಕಿಂತ ವ್ಯಾಪಾರದ ಬಗ್ಗೆ ಕಾಳಜಿಯೇ ಪ್ರಮುಖವಾಗಿತ್ತು. ಅವರ ಜೊತೆ ಬಂದ ಯು.ಎಸ್ ದೈತ್ಯ ಕಂಪನಿಗಳ ಮುಖ್ಯಸ್ಥರ ಬಳಗವೇ ಇದಕ್ಕೆ .ಪುರಾವೆ. ತಂತ್ರಜ್ಞಾನ, ಹಣಕಾಸು, ಉತ್ಪಾದನೆ ಮತ್ತು ವಿಮಾನೋದ್ಯಮ ಕ್ಷೇತ್ರಗಳ ಸುಮಾರು 18 ಪ್ರಮುಖ ಕಂಪನಿಗಳ ಮುಖ್ಯಸ್ಥರು ಈ ಭೇಟಿಯಲ್ಲಿ ಭಾಗವಹಿಸಿದ್ದರು. ಈ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ಚೀನಾದ ಜಿಡಿಪಿ ಗೆ ಹತ್ತಿರ ಬರುತ್ತದೆ. ಇವರು ಟ್ರಂಪ್ ಮತ್ತು ಶಿ ಜತೆ ಫೋಟೊ ತೆಗೆಸಿಕೊಳ್ಳಲು ಮಾತ್ರ ಬರಲಿಲ್ಲ. ಯಾಕೆಂದರೆ ಚೀನಾ ಇವರಿಗೆ ಮಹತ್ವದ್ದಾಗಿದೆ.
ವರ್ಷಗಳಿಂದ “ಡಿಕಪ್ಲಿಂಗ್” ಅಥವಾ ಉತ್ಪಾದನಾ ವೈವಿಧ್ಯೀಕರಣದ ಬಗ್ಗೆ ಮಾತಾಡುತ್ತಿದ್ದರೂ ಅನೇಕ ಯು.ಎಸ್ ಕಂಪನಿಗಳು ಇನ್ನೂ ಚೀನಾದ ಮಾರುಕಟ್ಟೆ, ಉತ್ಪಾದನೆ ಮತ್ತು ಸರಬರಾಜು ಸರಪಳಿಗಳ ಮೇಲೆ ಅವಲಂಬಿತವಾಗಿವೆ. ಉದಾಹರಣೆಗೆ:- ಟೆಸ್ಲಾ, ಐಫೋನ್ ನಂತಹ ತಂತ್ರಜ್ಞಾನ ಕಂಪನಿಗಳು ಇನ್ನೂ ಚೀನಾದ ಮಾರುಕಟ್ಟೆ, ಉತ್ಪಾದನೆ ಮತ್ತು ಸರಬರಾಜು ಸರಪಳಿಗಳನ್ನು ಅವಲಂಬಿಸಿವೆ. ಎನ್ವಿಡಿಯ, ಮೈಕ್ರೋನ್, ಕ್ವಲ್ ಕಾಮ್ ನಂತಹ ಸೆಮಿಕಂಡಕ್ಟರ್ ಚಿಪ್ ಕಂಪನಿಗಳಿಗೆ ಚೀನಾ ಮಾರುಕಟ್ಟೆ ಪ್ರವೇಶ ಅತ್ಯಗತ್ಯವಾಗಿದೆ. ಬೋಯಿಂಗ್ ಮುಂತಾದ ವಿಮಾನೋದ್ಯಮ ಕಂಪನಿಗಳು ಚೀನಾದ ಮಾರುಕಟ್ಟೆ ಪಡೆಯಲು ನಿರಂತರ ಮಾತುಕತೆ ನಡೆಸುತ್ತಿವೆ. ಗೋಲ್ಡ್ ಮನ್ ಸ್ಯಾಕ್ಸ್ ಸಿಟಿ ಗ್ರೂಪ್, ಬ್ಲಾಕ್ ರಾಕ್, ಬ್ಲಾಕ್ ಸ್ಟೋನ್ ನಂತಹ ಯು.ಎಸ್ ನ ದೈತ್ಯ ಹಣಕಾಸು ಸಂಸ್ಥೆಗಳು ಸಹ ಚೀನಾದಲ್ಲಿ ಬಂಡವಾಳ ಹೂಡಿಕೆಗೆ ಉತ್ಸುಕವಾಗಿವೆ.
ಇಲ್ಲಿ ಒಂದು ವಿರೋಧಾಭಾಸ ಸ್ಪಷ್ಟವಾಗುತ್ತದೆ: ಯು.ಎಸ್ ಸರಕಾರಿ ಸಂಸ್ಥೆಗಳ ರಾಜಕೀಯವಾಗಿ ದೂರವಾಗುವ (ಡಿ-ಕಪ್ಲಿಂಗ್) ಧೋರಣೆಯ ಮಾತುಗಳು ಒಂದು ಕಡೆ, ಆರ್ಥಿಕವಾಗಿ ಅವಲಂಬನೆಯನ್ನು ಮುಂದುವರಿಸಲು ಇನ್ನೊಂದು ಕಡೆ. ಪ್ರಯತ್ನ ನಡೆಯುತ್ತಿದೆ. ಚೀನಾ ಇದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಈ ಅವಲಂಬನೆಯ ಅರ್ಥ ತನಗೆ ಯು.ಎಸ್ ಮೇಲಿರುವ ರಾಜಕೀಯ-ಆರ್ಥಿಕ ಪ್ರಭಾವ ಎಂದು ಚೀನಾ ಅರ್ಥ ಮಾಡಿಕೊಂಡಿದೆ. ಮಾತ್ರವಲ್ಲ ಯು.ಎಸ್ ಗೂ ಜಗತ್ತಿಗೂ ತೋರಿಸಿದೆ.
ಭೇಟಿಯ ಕೊನೆಯಲ್ಲಿ 200 ಬೋಯಿಂಗ್ ವಿಮಾನ ಖರೀದಿಸಲು ಮತ್ತು ಸೋಯಾ ಬೀನ್ಸ್ ಖರೀದಿ ಮತ್ತೆ ಆರಂಭಿಸಲು ಚೀನಾ ಒಪ್ಪಿಕೊಂಡಿದೆ ಎಂದು ಟ್ರಂಪ್ ಪ್ರಕಟಿಸಿದರು. ಆದರೆ ಬೋಯಿಂಗ್ ಶೇರು ಮೌಲ್ಯ ಕಡಿಮೆಯಾಯಿತು! ಯಾಕೆಂದರೆ ‘ಮಾರುಕಟ್ಟೆ’ 500 ವಿಮಾನಗಳ ಖರೀದಿ ನಿರೀಕ್ಷಿಸಿತ್ತು. 200 ವಿಮಾನಗಳ ಖರೀದಿಯನ್ನೂ ಚೀನಾ ಹೇಳಿಕೆ ಖಚಿತಪಡಿಸಲಿಲ್ಲ. ಚೀನಾ ಈ ಕಂಪನಿಗಳ ಜತೆ ಮಾತುಕತೆಗೆ ಸಿದ್ಧ, ಆದರೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕಲಿಲ್ಲ ಅಥವಾ ಯಾವುದೇ ನಿರ್ಣಯವನ್ನು ಖಚಿತ ಪಡಿಸಲಿಲ್ಲ.
ಚೀನಾ ಸಹ ವ್ಯಾಪಾರದ ಕುರಿತು ಯು.ಎಸ್ ತಂಡ ಸಮಗ್ರ ಆಳವಾದ ಗಂಭೀರ ಚರ್ಚೆಗೆ ತೀವ್ರ ತಯಾರಿ ಮಾಡದೆ ಬಂದಿದ್ದರ ಬಗ್ಗೆ ಅಸಮಾಧಾನಗೊಂಡಿದೆ. ಹತಾಶೆ ವ್ಯಕ್ತಪಡಿಸಿದೆ ಎನ್ನಲಾಗಿದೆ. ಇನ್ನೂ ಚೀನಾದ ಬ್ಯಾಂಕುಗಳು ಸೇರಿದಂತೆ ಹಲವು ಕಂಪನಿಗಳ ಮೇಲೆ ಇರುವ ಆರ್ಥಿಕ ದಿಗ್ಬಂಧನ/ನಿರ್ಬಂಧಗಳು, ಯಾವ ಸರಕಿನ ಮೇಲೆ ಎಷ್ಟು ತೆರಿಗೆ ಎಂಬುದರ ಬಗ್ಗೆ ತೀವ್ರ ಅನಿಶ್ಚಿತತೆ, ಅಪರೂಪದ ಖನಿಜ ಪದಾರ್ಥಗಳ ರಫ್ತಿನ ಮೇಲೆ ಚೀನಾದ ನಿರ್ಬಂಧ – ಇವೆಲ್ಲ ವಿಷಯಗಳ ಬಗ್ಗೆ ಸಮಗ್ರ ಚರ್ಚೆ ಮಾಡಿ ಸ್ಥೂಲ ನಿರ್ಣಯಕ್ಕೆ ಬರಬಹುದು ಎಂದು ಚೀನಾ ನಿರೀಕ್ಷಿಸಿತ್ತು.
ರಷ್ಯಾ ಆರ್ಥಿಕ ಸ್ಥಿರತೆಗಾಗಿ ಬಂತು
ರಷ್ಯಾ ಅಧ್ಯಕ್ಷ ಪುಟಿನ್ ಜೊತೆಗೆ – ಇಂಧನ ಕಂಪನಿಗಳ (ಗಾಝ್ ಪ್ರೊಮ್, ರೊಸ್ ನೆಟ್, ರೊಸ್ ಅಟೊಮ್ ಇತ್ಯಾದಿ) ನಾಯಕರು, ಹಣಕಾಸು ಸಂಸ್ಥೆಗಳ ಮುಖ್ಯಸ್ಥರು, ಸರ್ಕಾರಿ ಬ್ಯಾಂಕ್ ಪ್ರತಿನಿಧಿಗಳು, ಉನ್ನತ ಆರ್ಥಿಕ ಯೋಜಕರು – ಇವರ ದೊಡ್ಡ ತಂಡವೇ ಬಂದಿತ್ತು. ಉದ್ದೇಶ ಸ್ಪಷ್ಟವಾಗಿತ್ತು. ರಶ್ಯದ ರಫ್ತು ಮಾರುಕಟ್ಟೆಯ ವಿಸ್ತರಣೆಕ್ಕಿಂತ ಹೆಚ್ಚಾಗಿ ಸ್ಥಿರತೆ ಪಡೆಯಲು ಈ ತಂಡ ಪ್ರಸ್ತಾವಗಳನ್ನು ತಯಾರಿಸಿ ತಂದಿತ್ತು. ರಷ್ಯಾಕ್ಕೆ ಇಂಧನ (ತೈಲ, ಗ್ಯಾಸ್ದ್)ಕ್ಕೆ ಯುರೋಪ್ ಮಾರುಕಟ್ಟೆಯ ನಷ್ಟ ತುಂಬಿಕೊಡಬಲ್ಲ ಗಾತ್ರದ ಪರ್ಯಾಯ ಮಾರುಕಟ್ಟೆಗಳು, ಹಣಕಾಸು ವ್ಯವಸ್ಥೆಗಳು ಬೇಕಾಗಿವೆ. ಚೀನಾ ಈ ಮೂರು ಕ್ಷೇತ್ರಗಳಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.’ಪವರ್ ಆಫ್ ಸೈಬೀರಿಯಾ-2’ ಗ್ಯಾಸ್ ಪೈಪ್ ಲೈನ್ ರಶ್ಯಕ್ಕೆ (ಚೀನಾಕ್ಕೂ) ನಿರ್ಣಾಯಕವಾದದ್ದು, ದೀರ್ಘಕಾಲೀನ ಗ್ಯಾಸ್ ರಫ್ತಿನ ಕುರಿತು ನೀತಿಶಃ ಒಪ್ಪಿತವಾಗಿದ್ದರೂ, ಬೆಲೆಯ ಕುರಿತು ಚರ್ಚೆ ಮುಂದುವರೆಯುತ್ತಿದ್ದು ಒಪ್ಪಂದಕ್ಕೆ ಸಹಿ ಇನ್ನೂ ಬಿದ್ದಿಲ್ಲ. ಚೀನಾ ತೀವ್ರ ಚೌಕಾಶಿ ನಡೆಸಿದೆ ಎನ್ನಲಾಗಿದೆ.

ರಶ್ಯಾ-ಚೀನಾ ವ್ಯಾಪಾರ 240 ಶತ ಕೋಟಿ ಡಾಲರ್ !
ಚೀನಾ-ರಶ್ಯಾ ವ್ಯಾಪಾರದ ಅತ್ಯಂತ ಮಹತ್ವದ ಬೆಳವಣಿಗೆಗಳಲ್ಲಿ ಒಂದು ಕಡಿಮೆ ಗಮನ ಸೆಳೆದಿದೆ. ರಷ್ಯಾ ಮತ್ತು ಚೀನಾ ನಡುವಿನ ವ್ಯಾಪಾರದಲ್ಲಿ ಡಾಲರ್ ಬದಲಿಗೆ ಸ್ಥಳೀಯ ಕರೆನ್ಸಿ (ಯೂವಾನ್, ರೂಬಲ್) ಗಳ ಬಳಕೆ ಹೆಚ್ಚುತ್ತಿದೆ. ಈಗ ಡಾಲರ್ ಇಲ್ಲದೆ ನಡೆಯುತ್ತಿರುವ ಚೀನಾ-ರಶ್ಯಾ ವ್ಯಾಪಾರದ ಮೊತ್ತ 240 ಶತ ಕೋಟಿ ಡಾಲರ್ ನಷ್ಟಾಗಿದೆ. ಇದರಿಂದ ಡಾಲರ್ ಕುಸಿಯುತ್ತದೆ ಎಂದಲ್ಲ. ಜಾಗತಿಕ ಹಣಕಾಸಿನಲ್ಲಿ ಅದರ ಪ್ರಾಬಲ್ಯ ಇನ್ನೂ ಇದೆ. ಆದರೆ ಇದು ಒಂದು ಹೊಸ ಪ್ರವೃತ್ತಿಯನ್ನು ಸೂಚಿಸುತ್ತದೆ: ಡಾಲರ್ ಅನಿವಾರ್ಯವಲ್ಲದ ಆರ್ಥಿಕ ವಲಯಗಳ ನಿರ್ಮಾಣ. ಈ ಬದಲಾವಣೆಗಳು ತಕ್ಷಣವಾಗುವುದಿಲ್ಲ. ಅವು ನಿಧಾನವಾಗಿ ನಡೆಯುತ್ತವೆ. ಇದಕ್ಕಾಗಿ – ಪರ್ಯಾಯ ಪಾವತಿ ವ್ಯವಸ್ಥೆಗಳು, ಹೊಸ ಬ್ಯಾಂಕಿಂಗ್ ವ್ಯವಸ್ಥೆಗಳು.ಮತ್ತು ಪ್ರಾದೇಶಿಕ ಹಣಕಾಸು ಮಾರ್ಗಗಳ ಬಗ್ಗೆ ಹಾಗೂ. ಯು.ಎಸ್ ಮತ್ತು ಯುರೋಪಿನ ದಿಗ್ಬಂಧನ ತಟ್ಟದಂತೆ ಈ ವ್ಯಾಪಾರವನ್ನು ಮುನ್ನಡೆಸುವುದು ಹೇಗೆ – ಎಂದು ವಿವರವಾದ ಚರ್ಚೆ ನಡೆಯಿತು
ಯು.ಎಸ್ ಮತ್ತು ಯುರೋಪಿನ ದಿಗ್ಬಂಧನಗಳು ಇನ್ನೂ ಕೆಲಸ ಮಾಡುತ್ತಿದ್ದರೂ — ಅವುಗಳ ಜಾರಿ ಎರಡೂ ಪಕ್ಷಗಳಿಗೆ ದುಬಾರಿಯಾಗುತ್ತಿವೆ. ಚೀನಾಕ್ಕೆ ರಶ್ಯಾದ LNG ಚೀನಾಕ್ಕೆ ಒಯ್ಯುವ ಹಡಗಿನ ಸಾಗಾಟದ ಒಂದು ಉದಾಹರಣೆ ಇದನ್ನು ಸ್ಪಷ್ಟಪಡಿಸುತ್ತದೆ. ಸಾಮಾನ್ಯವಾಗಿ ಕೆಲವು ವಾರಗಳಲ್ಲಿ ತಲುಪಬೇಕಿದ್ದ LNG, ನಿರ್ಬಂಧಗಳು ಮತ್ತು ಭೌಗೋಳಿಕ-ರಾಜಕೀಯ ಸಮಸ್ಯೆಗಳ ಕಾರಣ 6 ತಿಂಗಳುಗಳ ನಂತರ ತಲುಪಿತು. ವ್ಯಾಪಾರ ಮುಂದುವರಿಯಿತು. ವೆಚ್ಚ ಮಾತ್ರ ಹೆಚ್ಚಾಯಿತು. ಇದು ಯು.ಎಸ್ ನಿರ್ಬಂಧಗಳ ವಾಸ್ತವ. ಅವು ವ್ಯಾಪಾರವನ್ನು ಕಷ್ಟಕರ ಮಾಡುತ್ತವೆ. ಆದರೆ ಸಂಪೂರ್ಣವಾಗಿ ನಿಲ್ಲಿಸುವುದಿಲ್ಲ.ಬದಲಿಗೆ ’ಪವರ್ ಆಫ್ ಸೈಬೀರಿಯಾ-2’ ಮತ್ತು ರಶ್ಯಾ-ಚೀನಾ ಮಾತುಕತೆಗಳಲ್ಲಿ ಚರ್ಚಿಸಿದ ಹಲವು ಪರ್ಯಾಯ ವ್ಯವಸ್ಥೆಗಳನ್ನು ಹುಟ್ಟು ಹಾಕುತ್ತವೆ. ಪರ್ಯಾಯ ವ್ಯವಸ್ಥೆಗಳು ಬಲವಾಧಂತೆ ಒಂದು ಹಂತದಲ್ಲಿ ಯು.ಎಸ್ ಮತ್ತು ಯುರೋಪಿನ ದಿಗ್ಬಂಧನಗಳು ಅವುಗಳ ಶಕ್ತಿ ಕಳೆದುಕೊಳ್ಳುತ್ತವೆ.
ಚೀನಾ ಮತ್ತು ರಷ್ಯಾ ಚರ್ಚೆಗಳಲ್ಲಿ ಭಾರತವನ್ನು ಹಲವು ವೇಳೆ ಕಡೆಗಣಿಸಲಾಗುತ್ತದೆ. ಭಾರತ ಸಹ ರಷ್ಯಾದ ತೈಲವನ್ನು ಖರೀದಿಸುತ್ತಿದೆ. ಭಾರತದಂತಹ ದೊಡ್ಡ ಇಂಧನ ಖರೀದಿದಾರ ಸಹ ಇರುವುದರಿಂದ ಚೀನಾ ರಷ್ಯಾದ ಏಕೈಕ ಖರೀದಿದಾರನಾಗುವುದಿಲ್ಲ. ಇದರಿಂದ ರಶ್ಯಾ-ಚೀನಾದ ನಡುವೆ ಇಂಧನ ಬೆಲೆ ಚೌಕಾಶಿ ಹೆಚ್ಚು ಸಮಾನ ಮಟ್ಟದಲ್ಲಿ ನಡೆಯುತ್ತದೆ. ಇಂಧನ ವ್ಯಾಪಾರದಲ್ಲಿ ರಶ್ಯಾ-ಚೀನಾ-ಭಾರತ ತ್ರಿಕೋಣ ಹೀಗೆ ಬಹು-ಧ್ರುವೀಯ ವ್ಯವಸ್ಥೆಗೆ ಹೆಚ್ಚಿನ ಕಸುವು ಮತ್ತು ಸ್ಥಿರತೆ ಕೊಡಬಹುದು.
ಯು.ಎಸ್ ಏಕಚಕ್ರಾಧಿಪತ್ಯ ಮುಗಿದ, ಬಹುಧ್ರುವೀಯ ಜಗತ್ತಿನ ಪರ್ಯಾಯ ಆರಂಭದ ಸಂದೇಶ
ಚೀನಾ ಪ್ರತಿಯೊಂದು ಭೇಟಿಯನ್ನು ವಿಭಿನ್ನ ರೀತಿಯಲ್ಲಿ ನಿರ್ವಹಿಸಿತು. ಟ್ರಂಪ್ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಆದರೆ ಚರ್ಚೆಯಲ್ಲಿ ಹೆಚ್ಚು ಸತ್ವ, ಅರ್ಥ ಇರಲಿಲ್ಲ. ಯು.ಎಸ್ ನ ಏಕಚಕ್ರಾಧಿಪತ್ಯ ಮುಗಿದಿದೆ. ಯು.ಎಸ್ ಮತ್ತು ಚೀನಾ ಜಾಗತಿಕ ಸಮಾನ ಶಕ್ತಿಗಳು ಎಂಬ ಸಂದೇಶ ಗಟ್ಟಿಯಾಗಿ ಹೋಯಿತು. ಪುಟಿನ್ ಅವರ ಭೇಟಿಯಲ್ಲಿ ಸಂಭ್ರಮ, ಅಬ್ಬರ ಕಡಿಮೆಯಿತ್ತು. ಆದರೆ ಅದರಲ್ಲಿ ಹೆಚ್ಚಿನ ತಯಾರಿ, ಸತ್ವ ಮತ್ತು ಶಕ್ತಿಯಿತ್ತು. ಈ ಭೇಟಿಗೆ ಐತಿಹಾಸಿಕ ಮತ್ತು ವ್ಯೂಹಾತ್ಮಕ ಒತ್ತು ನೀಡಲಾಯಿತು. ರಷ್ಯಾ ದೀರ್ಘಕಾಲದ ವ್ಯೂಹಾತ್ಮಕ ಪಾಲುದಾರ ಎಂಬ ಸಂದೇಶವನ್ನು ಸಹ ಬಲವಾಗಿ ನೀಡಲಾಯಿತು. ಭಾರತ ಸೇರಿದಂತೆ ಜಾಗತಿಕ ದಕ್ಷಿಣದ ದೇಶಗಳಿಗೆ, ಯು.ಎಸ್ ನ ಏಕಚಕ್ರಾಧಿಪತ್ಯಕ್ಕೆ ಬಗ್ಗಬೇಕಾಗಿಲ್ಲ ಮತ್ತು ಬಹುಧ್ರುವೀಯ ಜಗತ್ತಿನ ಪರ್ಯಾಯ ವ್ಯವಸ್ಥಿತವಾಗಿ ಆರಂಭವಾಗಿದೆ ಎಂಬ ಸಂದೇಶ ಸಹ ಈ ಎರಡು ಭೇಟಿಗಳಿಂದ ಹೋಗಿದೆ.
ಇದನ್ನೂ ನೋಡಿ :ಯುದ್ಧದಲ್ಲಿ ಸೋತ ಯು.ಎಸ್ ನ್ನು ಮಾತುಕತೆಯಲ್ಲಿ ಗೆಲ್ಲಲು ಬಿಡದ ಇರಾನ್ Janashakthi Media
