ನವದೆಹಲಿ: ಕರ್ನಾಟಕದ ನಗರ ಪ್ರದೇಶಗಳಲ್ಲಿ ಪ್ರತಿದಿನ 13,273 ಟನ್ ಕಸ ಸಂಗ್ರಹವಾಗುತ್ತಿದ್ದು, 10,826 ಟನ್ ಕಸ ಮಾತ್ರ ಸಂಸ್ಕರಣೆಯಾಗುತ್ತಿದೆ. 2,447 ಟನ್ ಕಸ ಸಂಸ್ಕರಣೆಯಾಗದೆ ಕೊಳೆಯುತ್ತಿದೆ ಎಂದು ತಿಳಿದುಬಂದಿದೆ. ಕರ್ನಾಟಕ
ಕಸ ವಿಲೇವಾರಿ ಸಮಸ್ಯೆ ಬಗ್ಗೆ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠಕ್ಕೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಇದೇ 15ರಂದು ಸಲ್ಲಿಸಿರುವ ವರದಿಯಲ್ಲಿ ಈ ಮಾಹಿತಿ ಇದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಒಂಬತ್ತು ಡಂಪಿಂಗ್ ಯಾರ್ಡ್‌ಗಳಲ್ಲಿ 97 ಲಕ್ಷ ಟನ್ ಹಳೆಯ ಕಸ ಇದೆ. ಈ ಪೈಕಿ, 14.84 ಲಕ್ಷ ಟನ್ ಹಳೆಯ ಕಸವನ್ನು ಜೈವಿಕ ಸಂಸ್ಕರಣೆ ವಿಧಾನದ ಮೂಲಕ ಸಂಸ್ಕರಿಸಲಾಗಿದೆ. 24.8 ಲಕ್ಷ ಟನ್ ಕಸ ವಿಲೇವಾರಿಗ ಟೆಂಡರ್ ಕರೆಯಲಾಗಿದೆ. ಈ ಎಲ್ಲ ಕಸಗಳನ್ನು 2027ರ ಆಗಸ್ಟ್ ಒಳಗೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ನವದೆಹಲಿ| ಸಿಎನ್‌ಜಿ ಬೆಲೆ ಮತ್ತೆ ಕೆಜಿಗೆ 1 ರೂ. ಏರಿಕೆ; 2 ದಿನಗಳಲ್ಲಿ ಎರಡನೇ ಏರಿಕೆ
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 222 ಡಂಪಿಂಗ್ ಯಾರ್ಡ್‌ಗಳಲ್ಲಿ 78.26 ಲಕ್ಷ ಟನ್ ಹಳೆಯ ಕಸವಿದೆ. ಈ ಪೈಕಿ, 11.34 ಲಕ್ಷ ಟನ್ ಹಳೆಯ ಕಸವನ್ನು ಜೈವಿಕ ಸಂಸ್ಕರಣೆ ವಿಧಾನದ ಮೂಲಕ ಸಂಸ್ಕರಿಸಲಾಗಿದೆ. ಎಲ್ಲ ಕಸಗಳನ್ನು 2027ರ ಡಿಸೆಂಬರ್ ಅಂತ್ಯದ ಒಳಗೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಪ್ರತಿದಿನ 4,146 ದಶಲಕ್ಷ ಲೀಟರ್ ಕೊಳಚೆ ನೀರು ಉತ್ಪತ್ತಿಯಾಗುತ್ತಿದೆ. ಈ ಪೈಕಿ, 2,065 ದಶಲಕ್ಷ ಲೀಟರ್ ಕೊಳಚೆ ನೀರು ಎಸ್‌ಟಿಪಿಗಳ ಮೂಲಕ ಸಂಸ್ಕರಣೆಯಾಗುತ್ತಿದೆ. ಉಳಿದ 2,056 ದಶಲಕ್ಷ ಲೀಟರ್ ಕೊಳಚೆ ನೀರು ಸಂಸ್ಕರಣೆಯಾಗದೆ ಜಲಮೂಲಗಳಿಗೆ ಸೇರುತ್ತಿದೆ. 401 ಹೊಸ ಎಸ್‌ಟಿಪಿಗಳನ್ನು ಸ್ಥಾಪಿಸಲಾಗುತ್ತಿದ್ದು, ಇವುಗಳ ಸಾಮರ್ಥ್ಯ 2,514 ದಶಲಕ್ಷ ಲೀಟರ್ ಎಂದು ಮಾಹಿತಿ ನೀಡಿದ್ದಾರೆ.
1. 5,880 ಟನ್: ಜಿಬಿಎ ವ್ಯಾಪ್ತಿಯಲ್ಲಿ ನಿತ್ಯ ಸಂಗ್ರಹವಾಗುವ ಕಸ
2. 7,393 ಟನ್: 326 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ
3. 4,522 ಟನ್: ಜಿಬಿಎ ವ್ಯಾಪ್ತಿಯಲ್ಲಿ ಸಂಸ್ಕರಣೆಯಾಗುವ ಕಸ
4. 6,304 ಟನ್: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಸ್ಕರಣೆಯಾಗುವ ಕಸ
ಇದನ್ನೂ ನೋಡಿ: ಎಲ್ಲವೂ ಸರಿಯಿದೆ ಎಂದು ಹೇಳುತ್ತಲೇ ಈಗ ಸಂಕಷ್ಟ ತಂದಿಟ್ಟರೇ ಮೋದಿಜೀ? ! ಬಿ.ಶ್ರೀಪಾದ ಭಟ್ Janashakthi Media
