ನವದೆಹಲಿಃ ಅಕ್ಟೋಬರ್ 7ರಂದು ಇಸ್ರೇಲ್ನಲ್ಲಿ ನಡೆದ ದಾಳಿಗಳ ಪ್ರಮುಖ ಸಂಚಾಲಕರಲ್ಲಿ ಒಬ್ಬನನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಇಸ್ರೇಲ್ ಕಾಟ್ಸ್ ಮೇ 15ರಂದು ಬಿಡುಗಡೆ ಮಾಡಿದ ಸಂಯುಕ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯುದ್ಧ
ಗಾಜಾ ನಗರದಲ್ಲಿನ ವಸತಿ ಕಟ್ಟಡ ಮತ್ತು ನಾಗರಿಕ ವಾಹನದ ಮೇಲೆ ನಡೆದ ಎರಡು ವಾಯು ದಾಳಿಗಳಲ್ಲಿ ಕನಿಷ್ಠ ಏಳು ಪ್ಯಾಲೆಸ್ಟೇನಿಯರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಹಮಾಸ್ನ ಶಸ್ತ್ರಸಜ್ಜಿತ ವಿಭಾಗದ ಮುಖ್ಯಸ್ಥ ಇಝ್ ಅಲ್-ದಿನ್ ಅಲ್-ಹದ್ದಾದ್ ಅವರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಇದೇ ವೇಳೆ, 1948ರ ಯುದ್ಧದ ಸಂದರ್ಭದಲ್ಲಿ ಸುಮಾರು 7.5 ಲಕ್ಷ ಪ್ಯಾಲೆಸ್ಟೇನಿಯರನ್ನು ಬಲವಂತವಾಗಿ ಹೊರಹಾಕಿದ ಘಟನೆಗೆ ಸಂಬಂಧಿಸಿದ “ನಕ್ಬಾ” (ವಿಪತ್ತು) ದಿನದ 78ನೇ ವಾರ್ಷಿಕೋತ್ಸವದ ಹಿನ್ನೆಲೆ ಈ ದಾಳಿ ನಡೆದಿದೆ.
ಇದನ್ನೂ ಓದಿ: ಡೀಸೆಲ್ ಬೆಲೆ ಏರಿಕೆ: ತಮಿಳುನಾಡು ಸಾರಿಗೆ ಸಂಸ್ಥೆಗಳಿಗೆ ವರ್ಷಕ್ಕೆ 175 ಕೋಟಿ ರೂ. ನಷ್ಟ
ಇದರ ನಡುವೆ, ಅಮೆರಿಕದ ವಿದೇಶಾಂಗ ಇಲಾಖೆ ಇಸ್ರೇಲ್ ಮತ್ತು ಲೆಬನಾನ್ ನಡುವಿನ ಮಾತುಕತೆಗಳು ಮುಕ್ತಾಯಗೊಂಡಿದ್ದು, 45 ದಿನಗಳ ಕಾಲ ಯುದ್ಧ ವಿರಾಮವನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದೆ. ಈ ತಿಂಗಳ ಕೊನೆಯಲ್ಲಿ ಅಮೆರಿಕ ಮಧ್ಯಸ್ಥಿಕೆಯಲ್ಲಿ ಮುಂದಿನ ಮಾತುಕತೆಗಳು ನಡೆಯಲಿವೆ ಎಂದು ಹೇಳಲಾಗಿದೆ.
ಆದರೆ, “ಯುದ್ಧ ವಿರಾಮ” ಇದ್ದರೂ ಇಸ್ರೇಲ್ ಲೆಬನಾನ್ನ ಹಲವು ಪ್ರದೇಶಗಳಲ್ಲಿ ದಾಳಿಗಳನ್ನು ಮುಂದುವರಿಸಿದ್ದು, ಶುಕ್ರವಾರ (ಮೇ 15) ಒಂದೇ ದಿನದಲ್ಲಿ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ.
ಅಲ್ ಜಝೀರಾ ವರದಿ ಪ್ರಕಾರ, ಆಂಬುಲೆನ್ಸ್ ಕೇಂದ್ರದ ಮೇಲೆ ನಡೆದ ಇಸ್ರೇಲ್ ದಾಳಿಯಲ್ಲಿ ಆರು ಮಂದಿ ಸಾವನ್ನಪ್ಪಿ, 22 ಮಂದಿ ಗಾಯಗೊಂಡಿದ್ದು, ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದ್ದ ಕೇಂದ್ರ ಸಂಪೂರ್ಣ ನಾಶವಾಗಿದೆ.
ಇದಕ್ಕೆ ಪ್ರತಿಯಾಗಿ, ಹಿಜ್ಬುಲ್ಲಾ ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲ್ ಸೈನಿಕರ ವಿರುದ್ಧ ಸಂಯೋಜಿತ ದಾಳಿಗಳನ್ನು ನಡೆಸಿದ್ದೇವೆ ಎಂದು ಹೇಳಿದೆ.
ಇದನ್ನೂ ನೋಡಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ | ಚೀನಾ ಮಾದರಿ ಭಾರತದಲ್ಲಿ ಸಾಧ್ಯವೇ? Janashakthi Media
