ದೇಶದಲ್ಲಿ ಚಾರಿತ್ರಿಕವಾಗಿ ಶೂದ್ರ ವರ್ಗಕ್ಕೆ ಅನ್ಯಾಯವಾಗಿದೆ: ಪ್ರಾಧ್ಯಾಪಕ ಎ. ನಾರಾಯಣ

ಬೆಂಗಳೂರು: ಉತ್ಪಾದನಾ ವಲಯದಲ್ಲಿ ತೊಡಗಿರುವಂತಹ ಶೂದ್ರ ವರ್ಗಕ್ಕೆ ಈ ದೇಶದಲ್ಲಿ ಚಾರಿತ್ರಿಕವಾಗಿ ಹಾಗೂ ಚರಿತ್ರೆಯಲ್ಲಿ ಅನ್ಯಾಯವಾಗಿದೆ. ಇತಿಹಾಸ, ಪುರಾಣಗಳಲ್ಲಿ ಈ ವರ್ಗವನ್ನು ದಮನ ಮಾಡಲಾಗಿದೆ ಎಂದು ಮೇ 10ರಂದು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಲೇಖಕ ಕಂಚ ಐಲಯ್ಯ ಶೆಫರ್ಡ್ ಅವರ ‘ದಿ ಶೂದ್ರ ರೆಬಿಲಿಯನ್’ ಮೂಲ ಪುಸ್ತಕದ ಕನ್ನಡ ಅನುವಾದ ‘ಶೂದ್ರ ಬಂಡಾಯ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ರಾಜಕೀಯ ವಿಶ್ಲೇಷಕ, ಪ್ರಾಧ್ಯಾಪಕ ಎ. ನಾರಾಯಣ ತಿಳಿಸಿದ್ದಾರೆ.

ಚರಿತ್ರೆ ಬರೆಯುವವರು ಶೂದ್ರವರ್ಗವನ್ನು ಹೊರಗಿಟ್ಟು ಬರೆದಿದ್ದಾರೆ. ವ್ಯವಹಾರಿಕ ಮತ್ತು ಸಾಂಸ್ಕೃತಿಕ ಚರಿತ್ರೆಗಳಲ್ಲಿ ಈ ವರ್ಗವನ್ನು ಕಡೆಗಣಿಸಲಾಗಿದೆ. ಪುರಾಣಗಳಲ್ಲಿ ಶೂದ್ರ ವರ್ಗದ ಪ್ರಸ್ತಾಪವೇ ಇಲ್ಲ. ನಾವು ಮತ್ತೆ ಶೂದ್ರವರ್ಗವನ್ನು ಚರಿತ್ರೆಗೆ ಕರೆದುಕೊಂಡು ಬರುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಚಾರಿತ್ರಿಕವಾಗಿ ಆಗಿರುವ ಅಪಚಾರವನ್ನು ಸರಿಪಡಿಸುವ ಕೆಲಸವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ ಎಂದು ಎ. ನಾರಾಯಣ ಹೇಳಿದರು.

ಇದನ್ನೂ ಓದಿ: ಪ್ರವಾಹ ಸಂತ್ರಸ್ತರ ನೆರವು ದುರ್ಬಳಕೆ ಆರೋಪ: ಟಿಎಂಸಿ ಕಚೇರಿಯಲ್ಲಿ ಸಾಮಗ್ರಿ ಸಂಗ್ರಹ

ಶೂದ್ರವರ್ಗ ತುಳಿಯುವ ಕೆಲಸ 1925ರಿಂದಲೋ, 2014ರಿಂದಲೋ ಪ್ರಾರಂಭವಾಗಲಿಲ್ಲ, ನಾಗರಿಕತೆ ಯುಗದಿಂದಲೂ ಮತ್ತು ದೇವರು ಮತ್ತು ಮನುಷ್ಯನ ನಡುವಿನ ಸಂಬಂಧ ಸೃಷ್ಟಿಸಿದಾಗಿನಿಂದಲೂ ಶೂದ್ರವರ್ಗವನ್ನು ಕೆಳಗಿಟ್ಟು ನೋಡಲಾಗಿದೆ. ಈ ವರ್ಗಕ್ಕೆ ವ್ಯವಸ್ಥಿತವಾಗಿ ಅಕ್ಷರ ಜ್ಞಾನವನ್ನು ನಿರಾಕರಿಸಿ ಜ್ಞಾನಪರಂಪರೆಯನ್ನು ದಾಖಲಾಗದಂತೆ ನೋಡಿಕೊಳ್ಳಲಾಗಿದೆ. ಒಂದು ವೇಳೆ, ಈ ವರ್ಗಕ್ಕೆ ಅಕ್ಷರಾಭ್ಯಾಸ ಇದ್ದಿದ್ದರೆ ಇವತ್ತಿನ ಭಾರತದ ಜ್ಞಾನಪರಂಪರೆ ಭಿನ್ನವಾಗಿ, ವೈಜ್ಞಾನಿಕವಾಗಿ ಇರುತ್ತಿತ್ತು ಎಂದು ಎ.ನಾರಾಯಣ ವಿವರಿಸಿದರು.

ಇಡೀ ದೇಶದಲ್ಲಿ ಹಿಂದೂ ಸಮುದಾಯದೊಳಗೆ ಶೂದ್ರವರ್ಗವು ಬಹುಸಂಖ್ಯೆಯಲ್ಲಿದೆ. ಇಷ್ಟು ದೊಡ್ಡ ಜನಸಂಖ್ಯೆ ಇದ್ದಾಗ್ಯೂ, ಶೂದ್ರವರ್ಗವು ಇಡೀ ಸಮಾಜದ ಜನರ ಮೂಲಭೂತ ಅಗತ್ಯಗಳನ್ನು ಚಾರಿತ್ರಿಕವಾಗಿ ಪೂರೈಸಿದಂತಹ ಜನವರ್ಗವಾಗಿದೆ. ಮೂಲಭೂತ ಅಗತ್ಯತೆಗಳೆಂದರೆ ಆಹಾರ ಉತ್ಪಾದನೆ, ಬಟ್ಟೆ ನೇಯ್ಗೆ, ವಸತಿ ನಿರ್ಮಾಣ ಸೇರಿದಂತೆ ಸಮಾಜದಲ್ಲಿ ಉತ್ಪಾದನಾ ವಲಯದೊಳಗೆ ಶೂದ್ರವರ್ಗ ಕಾಣಿಸಿಕೊಳ್ಳುತ್ತದೆ. ಇದರ ಜೊತೆಗೆ, ಇಡೀ ಸಂಸ್ಕೃತಿಯನ್ನು ಕಟ್ಟಿದವರು ಶೂದ್ರ ಜನಾಂಗವಾಗಿದೆ. ಈ ದೇಶದ ಸಂಸ್ಕೃತಿ ಪ್ರಾರಂಭವಾಗುವುದು ವೇದಗಳ ಕಾಲದಿಂದ, ಪುರಾತನ ಗ್ರಂಥಗಳಿಂದ ಎಂದು ಹೇಳಲಾಗುತ್ತದೆ. ಆದರೆ, ಆ ಮಾತನ್ನು ಈ ಪುಸ್ತಕ ತಳ್ಳಿಹಾಕಿ, ದೇಶದ ಸಂಸ್ಕೃತಿಯನ್ನು ಕಟ್ಟಿದ್ದು ಶೂದ್ರವರ್ಗ ಎಂಬುದನ್ನು ವಿಸ್ಕೃತವಾಗಿ ವಿವರಿಸುತ್ತದೆ ಎಂದು ಎ.ನಾರಾಯಣ ವಿಶ್ಲೇಷಿಸಿದರು.

ಕಾರ್ಯಕ್ರಮದಲ್ಲಿ ಲೇಖಕ ಕಂಚ ಐಲಯ್ಯ ಶೆಫರ್ಡ್, ಅನುವಾದಕಿ ಜಯಲಕ್ಷ್ಮೀ ಬಿ., ಲೇಖಕಿ ಭಾರತಿದೇವಿ, ಜೀರುಂಡೆ ಪ್ರಕಾಶನದ ಧನಂಜಯ ಎನ್. ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ನೋಡಿ: ಪಿಚ್ಚರ್‌ ಪಯಣ – 172 | ‘ಪ್ಯಾಲೆಸ್ಟೀನ್ 36’ – ಮೊದಲ ರಾಷ್ಟ್ರೀಯ ದಂಗೆಯ ಚಾರಿತ್ರಿಕ ಫಿಲಂ | ಎನ್‌ ಕೆ. ವಸಂತರಾಜ್‌

Donate Janashakthi Media

Leave a Reply

Your email address will not be published. Required fields are marked *