ನವ – ಫ್ಯಾಸಿಸಂ, ರಾಷ್ಟ್ರದ ಪರಿಕಲ್ಪನೆ ಮತ್ತು ಎಸ್ಐಆರ್

ಜನರು ತಮ್ಮ ಹಿತಾಸಕ್ತಿಗಳನ್ನು ಕಾಪಾಡುವ “ನಾಯಕ”ನನ್ನು ಆಯ್ಕೆ ಮಾಡುವುದರ ಬದಲು, ಜನರು “ನಾಯಕ”ನಿಗೆ ಸೇವೆ ಸಲ್ಲಿಸಬೇಕೆಂದು ನಿರೀಕ್ಷಿಸಲಾಗುತ್ತಿರುವುದು ರಾಷ್ಟ್ರದ ಪರಿಕಲ್ಪನೆಯಲ್ಲಿ ಆಗಿರುವ ತಿರುಗುಮುರುಗನ್ನು ವ್ಯಕ್ತಪಡಿಸುತ್ತದೆ. ಅಂದರೆ, “ಜನರು” ಸರ್ಕಾರವನ್ನು ಆಯ್ಕೆ ಮಾಡುವುದರ ಬದಲು,”ಜನರನ್ನು” ಆಯ್ಕೆ ಮಾಡುವ ಸರ್ಕಾರವನ್ನು ನಾವು ಹೊಂದಿದ್ದೇವೆ. ಇದು ರಾಷ್ಟ್ರದ ಬಗ್ಗೆ ಭಾರತದಂತಹ ದೇಶಗಳು ಹೊಂದಿದ್ದ ಪರಿಕಲ್ಪನೆಯನ್ನು ಮೂಲಭೂತವಾಗಿ ತಲೆಕೆಳಗು ಮಾಡುತ್ತದೆ. ಇದು ನವ-ಫ್ಯಾಸಿಸಂ ನ ಸಾರವನ್ನು ಮತ್ತು ರಾಷ್ಟ್ರದ ಪರಿಕಲ್ಪನೆಯಲ್ಲಿ ಆಗಿರುವ ಈ ತಿರುಗುಮುರುಗಿಗೆ ಪೂರಕವಾಗಿ ಅದು ತಂದಿರುವ “ಜನರು-ನಾಯಕ”ಇವರ ತಲೆಕೆಳಗಾದ ಸಂಬಂಧವನ್ನು ಬಿಂಬಿಸುತ್ತದೆ. ಇದು ರಾಷ್ಟ್ರವನ್ನು ಕುರಿತಂತೆ ಯುರೋಪಿಯನ್‌ ಪರಿಕಲ್ಪನೆಯ ಅನುಕರಣೆ ಎಂಬುದನ್ನೂ ಗಮನಿಸಬಹುದು.

– ಪ್ರೊ. ಪ್ರಭಾತ್ಪಟ್ನಾಯಕ್

– ಅನು: ಕೆ.ಎಂ.ನಾಗರಾಜ್

ನವ-ಫ್ಯಾಸಿಸಂ ಜೊತೆಯಲ್ಲಿ ತಪ್ಪದೇ ಕಂಡುಬರುವ ಕೆಲವುಲಕ್ಷಣಗಳು ಭಾರತದಲ್ಲಿ ಅದು ಹೊರಹೊಮ್ಮುತ್ತಿದ್ದ ಸಮಯದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿವೆ. ಸುಲಭವಾಗಿ ಗಮನಿಸಬಹುದಾದ ಈ ಲಕ್ಷಣಗಳೆಂದರೆ: ಒಂದುದುರ್ದೈವಿಅಲ್ಪಸಂಖ್ಯಾತರನ್ನು “ಅನ್ಯ”ರನ್ನಾಗಿ ಮಾಡುವುದು ಮತ್ತು ಅವರ ವಿರುದ್ಧ ಬಹುಸಂಖ್ಯಾತರಲ್ಲಿ ದ್ವೇಷವನ್ನು ಹುಟ್ಟಿಹಾಕುವುದು; ಈ ಅಲ್ಪಸಂಖ್ಯಾತರು, ಟೀಕಾಕಾಕರು, ರಾಜಕೀಯ ವಿರೋಧಿಗಳು, ಬುದ್ಧಿಜೀವಿಗಳು, ಕಲಾವಿದರು ಮತ್ತು ಇತರರ ಮೇಲೆ ಪ್ರಭುತ್ವದ

ಏಜೆನ್ಸಿಗಳ ಮತ್ತು ನವ-ಫ್ಯಾಸಿಸ್ಟ್ ಗೂಂಡಾಗಳ ದಬ್ಬಾಳಿಕೆಯನ್ನು ಹರಿಯಬಿಡುವುದು; ಮತ್ತು ಏಕಸ್ವಾಮ್ಯ ಬಂಡವಾಳದ, ವಿಶೇಷವಾಗಿ ಅದರ ಹೊಸ ವಿಭಾಗದ ಮುಚ್ಚುಮರೆಯಿಲ್ಲದ ಒಂದು ಪಕ್ಕಾ ವರ್ಗ ಆಳ್ವಿಕೆಯನ್ನು ಹೇರುವುದು. ಭಾರತದಲ್ಲಿ ನವ-ಫ್ಯಾಸಿಸಂನ ಉದಯದೊಂದಿಗೆ ಈ ಎಲ್ಲ ವಿಶಿಷ್ಟ ಫ್ಯಾಸಿಸ್ಟ್ ಲಕ್ಷಣಗಳೂ ಪ್ರಸ್ತುತದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿವೆ. ಇದರ ಜೊತೆಗೆ, ಹೆಚ್ಚು ಪ್ರಕಟಗೊಂಡಿರದ ಮತ್ತು ಪಾಮುಖ್ಯತೆಯಲ್ಲಿ ಕಡಿಮೆಯೇನಲ್ಲದ ಒಂದು ವಿಶಿಷ್ಟ ಲಕ್ಷಣವನ್ನು ನವ-ಫ್ಯಾಸಿಸಂ ಹೊಂದಿದೆ. ಭಾರತದಲ್ಲಿ ಗೋಚರಗೊಂಡಿರುವ ಮತ್ತು ರಾಷ್ಟ್ರದ ಪರಿಕಲ್ಪನೆಯೊಂದಿಗೆ ಸಂಬಂಧ ಹೊಂದಿರುವ ಈ ವಿಶಿಷ್ಟ ಲಕ್ಷಣದ ಬಗ್ಗೆ ಹೆಚ್ಚು ಚರ್ಚೆಗಳು ಇನ್ನೂ ನಡೆದಿಲ್ಲ.

ಇದನ್ನೂ ಓದಿ: ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಜಾತ್ಯತೀತ, ಪ್ರಗತಿಪರ ಮತ್ತು ಪ್ರಜಾಪ್ರಭುತ್ವ ಶಕ್ತಿಗಳಿಗೆ ಕಳವಳಕಾರಿ: ಎಂ ಎ ಬೇಬಿ

ಭಾರತದಂತಹ ದೇಶಗಳಲ್ಲಿ ವಸಾಹತುಶಾಹಿ ವಿರೋಧಿ ಹೋರಾಟದ ಸಂದರ್ಭದಲ್ಲಿ ಹೊರಹೊಮ್ಮಿದ ರಾಷ್ಟ್ರೀಯತೆಯ ಪರಿಕಲ್ಪನೆಯು, ವೆಸ್ಟ್‌ಫ್ಯಾಲಿಯನ್ ಶಾಂತಿ ಒಪ್ಪಂದಗಳ ನಂತರ ಯುರೋಪಿನಲ್ಲಿ ಹೊರಹೊಮ್ಮಿದ ರಾಷ್ಟ್ರೀಯತೆಗಿಂತ ಮೂಲಭೂತವಾಗಿ ಭಿನ್ನವಾಗಿತ್ತು. ರಾಷ್ಟ್ರೀಯತೆಯ ಬಗ್ಗೆ ಭಾರತ ಹೊಂದಿದ ಪರಿಕಲ್ಪನೆಯು, ಯುರೋಪಿನ ಅದರ ಪ್ರತಿರೂಪಕ್ಕಿಂತ ಭಿನ್ನವಾಗಿ, ಎಲ್ಲರನ್ನೂ ಒಳಗೊಳ್ಳುವ ಒಂದು ಪರಿಕಲ್ಪನೆಯಾಗಿತ್ತು ಮತ್ತು ಯಾರನ್ನೂ ಅದು ದೇಶದ “ಒಳಗಿನ ಶತ್ರು” ಎಂದು ಗುರುತಿಸಲಿಲ್ಲ.

ಹೆಚ್ಚೆಂದರೆ, ಅದು ಭಾರತದ ಭೂಪ್ರದೇಶಕ್ಕೆ ಸೀಮಿತವಾಗಿತ್ತು ಎಂಬುದಕ್ಕಿಂತ ಭಿನ್ನವಾಗಿ ಯಾವ ಸಾಮ್ರಾಜ್ಯಶಾಹಿ ಆಕಾಂಕ್ಷೆಗಳನ್ನೂ ಹೊಂದಿರಲಿಲ್ಲ. ಮತ್ತು, ಜನರ ಹಿತಾಸಕ್ತಿಗಳನ್ನು ಕಾಪಾಡುವುದೇ ರಾಷ್ಟ್ರದ ಮೂಲಭೂತ ಉದ್ದೇಶ ಎಂದು ಅದು ನೋಡಿತೇ ವಿನಃ ತದ್ವಿರುದ್ಧವನ್ನಲ್ಲ. ಆದರೆ, ನವ-ಫ್ಯಾಸಿಸಂ ತಳವೂರಿದನಂತರ ನಾವು ಯುರೋಪಿಯನ್ ಶೈಲಿಯ ರಾಷ್ಟ್ರೀಯತೆಯತ್ತ (ಎಲ್ಲಕ್ಕಿಂತಲೂ ಹೆಚ್ಚು ಸ್ಪಷ್ಟವಾಗಿ “ಒಳಗಿನ ಶತ್ರು”ವನ್ನು ಗುರುತಿಸುವ ವಿಷಯದಲ್ಲಿ) ಬದಲಾಗಿದ್ದೇವೆ. ಈ ಪಲ್ಲಟನಾವುವಸಾಹತುಶಾಹಿ ವಿರೋಧಿ ಹೋರಾಟದ ಸಮಯದಲ್ಲಿ ಹೊರಹೊಮ್ಮಿದ ರಾಷ್ಟ್ರದ ಪರಿಕಲ್ಪನೆಯನ್ನುತಲೆಕೆಳಗಾಗಿಸಿಬಿಟ್ಟಿರುವಂತದ್ದುಎಂದೇಹೇಳಬಹುದು.

“ನಾಯಕ”ನ ದೈವೀಕರಣ

ತಲೆಕೆಳಗಾದ ಈ ಪರಿಕಲ್ಪನೆಯಲ್ಲಿ, ರಾಷ್ಟ್ರವನ್ನು ಜನರಿಗಿಂತ ಮೇಲೆ ಇಡಲಾಗಿದೆ. ರಾಷ್ಟ್ರವು ಜನರ ಹಿತಾಸಕ್ತಿಗಳನ್ನು ಕಾಪಾಡುವುದರ ಬದಲಿಗೆ, “ರಾಷ್ಟ್ರ”ದ ಹಿತಾಸಕ್ತಿಗಳನ್ನು ಜನರು ಕಾಪಾಡುತ್ತಾರೆ ಎಂದು ಕಾಣಲಾಗುತ್ತಿದೆ. ಜನರ ಹಕ್ಕುಗಳನ್ನು ಮೊಟುಕುಗೊಳಿಸಲಾಗುತ್ತಿದೆ ಮತ್ತು ಅವರ ಕರ್ತವ್ಯಗಳಿಗೆ ಒತ್ತು ನೀಡಲಾಗುತ್ತಿದೆ. ಮತ್ತು, ಇದೆಲ್ಲದಕ್ಕಿಂತಲೂ ಮಿಗಿಲಾಗಿ, “ನಾಯಕ”ನನ್ನು “ರಾಷ್ಟ್ರ”ದ ಸಾಕಾರರೂಪ ಎಂಬಂತೆ ನೋಡಲಾಗುತ್ತಿದೆ. ಹೀಗೆ ನಾವು ಎರಡು ಬಗೆಯ ದೈವೀಕರಣವನ್ನು ಕಾಣುತ್ತೇವೆ: ಜನರಿಂದ ಭಿನ್ನವಾಗಿರುವ “ರಾಷ್ಟ್ರ”ದ ದೈವೀಕರಣ ಮತ್ತು ಪ್ರತಿಯಾಗಿ ಇದು “ನಾಯಕ”ನನ್ನು ದೈವೀಕರಿಸುತ್ತದೆ. “ನಾಯಕ”ನ ಬಗ್ಗೆ ಮಾಡುವ ಯಾವುದೇ ಟೀಕೆಯು ವಾಸ್ತವಿಕವಾಗಿ ಒಂದು “ರಾಷ್ಟ್ರವಿರೋಧಿ” ಕೃತ್ಯವಾಗುತ್ತದೆ.

ತಮ್ಮ ಹಿತಾಸಕ್ತಿಗಳನ್ನು ಕಾಪಾಡುವ “ನಾಯಕ”ನನ್ನು ಜನರು ಆಯ್ಕೆ ಮಾಡುವುದರ ಬದಲು, ಜನರು “ನಾಯಕ”ನಿಗೆ ಸೇವೆ ಸಲ್ಲಿಸಬೇಕೆಂದು ನಿರೀಕ್ಷಿಸಲಾಗುತ್ತಿರುವುದು ರಾಷ್ಟ್ರದ ಪರಿಕಲ್ಪನೆಯಲ್ಲಿ ಆಗಿರುವ ತಿರುಗುಮುರುಗನ್ನು ವ್ಯಕ್ತಪಡಿಸುತ್ತದೆ(ಇನ್ನೂ ದೊಡ್ಡವ್ಯಂಗ್ಯವೆಂದರೆ, ತಾನು ಯಾರನ್ನು ಪ್ರತಿನಿಧಿಸುವ ನಾಯಕನಾಗಿರಬೇಕೋ ಆ”ಜನರನ್ನು” ಈ “ನಾಯಕ”ನೇ ಆಯ್ಕೆ ಮಾಡುವುದನ್ನು ನಾವು ನೋಡುತ್ತಿದ್ದೇವೆ).

ಈ ತಲೆಕೆಳಗಾಗಿಸುವ ಪ್ರವೃತ್ತಿಯು ಹಲವಾರು ಸಂದರ್ಭಗಳಲ್ಲಿ ಹಲವಾರು ರೀತಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಂಥಹ ಸ್ಥಾನ-ಮಾನವನ್ನು ಹೊಂದಿರುವ ಯೋಗಿ ಆದಿತ್ಯನಾಥ್ ಭಾರತದ ಸೇನೆಯನ್ನು “ಮೋದಿಜಿಯ ಸೈನ್ಯ” ಎಂದು ಉಲ್ಲೇಖಿಸುತ್ತಾರೆ. ಇದು “ರಾಷ್ಟ್ರ”ದ ಗುರುತನ್ನು “ನಾಯಕ” ಅತಿಕ್ರಮಿಸುವ ಒಂದು ವಿಸ್ಮಯಕರವಾದ ಪ್ರಯತ್ನವನ್ನು ತೋರಿಸುತ್ತದೆ. ಅದೇ ರೀತಿಯಲ್ಲಿ, ನಾಗರಿಕ ಹಕ್ಕುಗಳ ಮೇಲೆ ಭಾರಿ ದಾಳಿ ನಡೆದಿದೆ. ಕೆಲವು ವರ್ಷಗಳ ಹಿಂದೆ ಎಡ ಪಕ್ಷಗಳ ಬೆಂಬಲದೊಂದಿಗೆ ಯುಪಿಎ-1 ಸರ್ಕಾರ ಅಧಿಕಾರದಲ್ಲಿದ್ದಾಗ, ಅದು ಜನರಿಗೆ ಹಕ್ಕುಗಳನ್ನು ನೀಡುವ ಮೂರು ಮಹತ್ವದ ಶಾಸನಗಳನ್ನು ಅಳವಡಿಸಿಕೊಂಡಿತ್ತು: ಅರಣ್ಯ ಹಕ್ಕುಗಳ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಮನರೆಗ). ಈ ಎಲ್ಲಾ ಕಾಯ್ದೆಗಳನ್ನೂ ಈಗ ರದ್ದುಗೊಳಿಸಲಾಗುತ್ತಿದೆ.

ದಯಾಳು ಪ್ರಧಾನಿ ಮತ್ತು ಹಕ್ಕುಗಳ ಕಸಿತ

ಅರಣ್ಯ ಹಕ್ಕುಗಳ ಕಾಯ್ದೆಯು ಹೆಸರಿಗೆ ಮಾತ್ರ ಮುಂದುವರಿದಿದೆ,ಅರಣ್ಯ (ಸಂರಕ್ಷಣೆ) ತಿದ್ದುಪಡಿ ಕಾಯ್ದೆ 2023 ಅದನ್ನುಮೀರಿಬಂದಿದೆ. ಈ ತಿದ್ದುಪಡಿಯ ಪ್ರಕಾರ, ಈಗ ಗ್ರಾಮ ಸಭೆಯ ಅನುಮೋದನೆ ಇಲ್ಲದೆಯೂ “ಮೂಲಸೌಕರ್ಯ” ಉದ್ದೇಶಗಳಿಗಾಗಿ (ಅಂದರೆ, ಏಕಸ್ವಾಮ್ಯ ಬಂಡವಾಳದ ಉಪಯೋಗಕ್ಕಾಗಿ) ಅರಣ್ಯ ಭೂಮಿಯನ್ನು ಸುಲಭವಾಗಿ ಬೇರೆ ಬೇರೆ ಉದ್ದೇಶಗಳಿಗೆ ತಿರುಗಿಸಬಹುದಾಗಿದೆ. ಮಾಹಿತಿ ಹಕ್ಕು ಕಾಯ್ದೆಯನ್ನು 2019ರಲ್ಲಿ ಮತ್ತು 2023ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ಮಾಹಿತಿ ಕೋರಿಕೆಗಳನ್ನು ತಿರಸ್ಕರಿಸುವ ಅವಕಾಶಗಳನ್ನು ಹೆಚ್ಚಿಸಲಾಗಿದೆ. ಉದ್ಯೋಗ ಕೇಳುವವರಿಗೆ ಉದ್ಯೋಗ ನೀಡುವುದನ್ನು ಕಡ್ಡಾಯಗೊಳಿಸುವ (ಅಥವಾ ಪರಿಹಾರ ಒದಗಿಸುವ) ಮೂಲಕ ಲಕ್ಷಾಂತರ ಗ್ರಾಮೀಣ ಕುಟುಂಬಗಳಿಗೆ ಒಂದು ಜೀವನಾಡಿಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ರದ್ದುಗೊಳಿಸಲಾಗಿದೆ; ಸಾರ್ವಜನಿಕ ಚಿಂತಕರು ಮತ್ತು ಕಾರ್ಮಿಕರ ಪ್ರತಿನಿಧಿಗಳೊಂದಿಗೆ ಮತ್ತು ಸದನದೊಳಗೆ ವಿವರವಾಗಿ ಚರ್ಚಿಸಿದ ನಂತರ ಸರ್ವಾನುಮತದಿಂದ ಸಂಸತ್ತು ಅಂಗೀಕರಿಸಿದ ಈ ಕಾಯ್ದೆಯನ್ನು ಕೇವಲ ಧ್ವನಿ ಮತದ ಮೂಲಕ, ಅದೂ ಸಹ ಯಾವ ಚರ್ಚೆಯೂ ಇಲ್ಲದೆ ತಿದ್ದುಪಡಿ ಮಾಡಲಾಗಿದೆ.

ಜನರಿಂದ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆಯಾದರೂ,ಪ್ರಧಾನ ಮಂತ್ರಿಯ ಹೆಸರನ್ನು ಹೊತ್ತ ಮತ್ತು ನಾನಾ ಉದ್ದೇಶಗಳಿಂದ ಕೂಡಿದ ಯೋಜನೆಗಳು ಸಂಖ್ಯೆಯಲ್ಲಿ ಹೇರಳವಾಗಿವೆ. ಭಾರತದ ನಾಗರಿಕರಾಗಿರುವುದರಿಂದ ಅವರು ಪಡೆಯಬೇಕಾದ ಹಕ್ಕಗಳನ್ನು ಈ ಯೋಜನೆಗಳು ಓರ್ವ ದಯಾಳು ಪ್ರಧಾನ ಮಂತ್ರಿಯು (“ನಾಯಕ”) ಫಲಾನುಭವಿಗಳಿಗೆ ನೀಡುವ ಒಂದು ಔದಾರ್ಯದ ಕೊಡುಗೆಯನ್ನಾಗಿ ಪರಿವರ್ತಿಸುತ್ತವೆ. ಜನರಹಕ್ಕುಗಳನ್ನು ಈ ರೀತಿಯಲ್ಲಿ ಹಿಂಪಡೆಯುವಾಗ ಅವರು ನಿರ್ವಹಿಸಬೇಕಾದ “ಕರ್ತವ್ಯ”ಗಳಮೇಲೆ ಒತ್ತು ನೀಡಲಾಗುತ್ತದೆ. ಪ್ರಧಾನ ಮಂತ್ರಿಯಿಂದ ಹಿಡಿದು ಅವರ ಅಧೀನದ ಸರ್ಕಾರಿ ಅಧಿಕಾರಿಗಳು, ನಾಗರಿಕರ “ಕರ್ತವ್ಯಗಳನ್ನು” ಒತ್ತಿ ಒತ್ತಿ ಹೇಳುತ್ತಾರೆ, ಆಯಾಸವಿಲ್ಲದೆ. ಈಗ, ಗಣರಾಜ್ಯೋತ್ಸವದಂದು ಭಾರತದ ರಾಷ್ಟ್ರಪತಿಗಳು ವಂದನೆ ಸ್ವೀಕರಿಸುವ ರಾಜಧಾನಿ ನಗರದ ಅತ್ಯಂತ ಪ್ರಮುಖ ರಸ್ತೆಯನ್ನು “ಕರ್ತವ್ಯ ಪಥ” ಎಂದು ಮರುನಾಮಕರಣ ಮಾಡಲಾಗಿದೆ, ಕರ್ತವ್ಯಗಳನ್ನುನಿರ್ವಹಿಸುವ ಜವಾಬ್ದಾರಿಯನ್ನು ಜನರು ಎಲ್ಲಿ ಮರೆತುಬಿಡುತ್ತಾರೋ ಎಂಬ ರೀತಿಯಲ್ಲಿ.

“ಒಳ್ಳೆನಡೆ! ಅವರ ಕರ್ತವ್ಯಗಳನ್ನು ನೆನಪಿಸಲು ಏನಾದರೂ ಬೇಕಿತ್ತು!”

ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ

ರಾಷ್ಟ್ರದ ಪರಿಕಲ್ಪನೆಯಲ್ಲಿ ಆಗಿರುವ ಈ ತಿರುಗುಮುರುಗಿನ ಅತ್ಯಂತ ವಿಲಕ್ಷಣವಾದ ಒಂದು ಉದಾಹರಣೆಯನ್ನು ಚುನಾವಣೆಗಳು ಈಗ ನಡೆಯುತ್ತಿರುವ ರಾಜ್ಯಗಳಲ್ಲಿ ಭಾರತದ ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ಪರಿಷ್ಕರಣೆ (ವಿಶೇಷ ತೀವ್ರ ಪರಿಷ್ಕರಣೆ) ಮಾಡುತ್ತಿರುವ ವಿಧಾನವೇ ಒದಗಿಸುತ್ತದೆ. ಚುನಾವಣಾ ಆಯೋಗದ ಸಂಯೋಜನೆಯನ್ನು ಇತ್ತೀಚಿನ ದಿನಗಳಲ್ಲಿ ಹೇಗೆ ನಿರ್ಧರಿಸಲಾಗುತ್ತದೆ ಎಂಬುದನ್ನು ಮೊದಲು ನೋಡೋಣ.

ಈ ಹಿಂದೆ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಇಬ್ಬರು ಆಯುಕ್ತರನ್ನು ಪ್ರಧಾನ ಮಂತ್ರಿ, ವಿಪಕ್ಷದ ನಾಯಕ ಮತ್ತು ಭಾರತದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಒಂದು ತ್ರಿ-ಸದಸ್ಯ ಸಮಿತಿಯು ಆಯ್ಕೆ ಮಾಡುತ್ತಿತ್ತು. ಈ ಕಾನೂನನ್ನು ಬಿಜೆಪಿ ಸರ್ಕಾರವು, ಯಾವ ಕಾರಣವನ್ನೂ ಕೊಡದೆ, ಬದಲಾಯಿಸಿತು. ಈ ಕಾಯ್ದೆಯ ಪ್ರಕಾರ, ಮುಖ್ಯ ನ್ಯಾಯಾಧೀಶರ ಬದಲಿಗೆ ಪ್ರಧಾನಿ ಆಯ್ಕೆ ಮಾಡಿದ ಒಬ್ಬ ಮಂತ್ರಿಯನ್ನು ಸೇರಿಸಲಾಗಿದೆ. ಈಗ ಕೇಂದ್ರ ಗೃಹ ಸಚಿವರು(ಅಮಿತ್‌ ಷಾ) ಆ ಸ್ಥಾನವನ್ನು ತುಂಬಿದ್ದಾರೆ. ಹಾಗಾಗಿ, ಚುನಾವಣಾ ಆಯೋಗವನ್ನು ನೇಮಿಸುವ ಪ್ರಸ್ತುತ ತ್ರಿ-ಸದಸ್ಯ ಸಮಿತಿಯಲ್ಲಿ ಪ್ರಧಾನ ಮಂತ್ರಿಯು ಬಹುಮತವನ್ನು (ಮೂರರಲ್ಲಿ ಎರಡು ಮತಗಳನ್ನು) ಹೊಂದಿದ್ದಾರೆ.

ಜನತೆಯನ್ನುಆಯ್ಕೆಮಾಡುವಸರಕಾರ!

ಈ ಆಯೋಗವು ಪಟ್ಟಿಯಿಂದ ಅನಧಿಕೃತ ಮತದಾರರನ್ನು ತೆಗೆದುಹಾಕುವ ಹೆಸರಿನಲ್ಲಿ, ತೋರಿಸಲು ಅಸಾಧ್ಯವಾದ ದಾಖಲೆಗಳನ್ನು ಕೋರುವ ಮೂಲಕ ಮತದಾರರ ಹೆಸರುಗಳನ್ನು ಅಳಿಸಿ ಹಾಕಿದೆ. ಆದರೆ, ಮತದಾನದ ಅರ್ಹತೆಯ ಪುರಾವೆಯಾಗಿ ಆಯೋಗವು ಮೂಲತಃ ಮಾನ್ಯ ಮಾಡದ ಹಲವಾರು ದಾಖಲೆಗಳನ್ನು ಸುಪ್ರೀಂ ಕೋರ್ಟ್ ಮರುಸ್ಥಾಪಿಸಿದೆ. ಅಷ್ಟಾಗಿಯೂ, ಲಕ್ಷಾಂತರ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಾತ್ರವೇ, ಅಂದಾಜು 90 ಲಕ್ಷ ಮತದಾರನ್ನು, ಅಂದರೆ ಒಟ್ಟು ಮತದಾರರಲ್ಲಿ ಶೇ. 11ಕ್ಕಿಂತ ಹೆಚ್ಚು ಮಂದಿಯ ಹೆಸರನ್ನು ತೆಗೆದುಹಾಕಲಾಗಿದೆ. ಅವರಲ್ಲಿ ಹೆಚ್ಚಿನವರು ನವ-ಫ್ಯಾಸಿಸ್ಟ್ ಸಂಘಟನೆಯು ತನ್ನ ಗುರಿಯನ್ನಾಗಿಸಿಕೊಂಡಿರುವ ಅಲ್ಪಸಂಖ್ಯಾತ ಸಮುದಾಯದವರು. ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಯ ಅಂತಿಮ ಹಂತವನ್ನು ಸುಪ್ರೀಂ ಕೋರ್ಟ್ ಸ್ವಲ್ಪಮಟ್ಟಿಗೆ ತಡೆಹಿಡಿದಿದೆ ಮತ್ತು ಅಂಥವರ ದೂರುಗಳನ್ನು ಆಲಿಸುವ ಕಾಲ ಮಿತಿಯನ್ನು ವಿಸ್ತರಿಸಿದೆ. ಇದು ಸ್ವಾಗತಾರ್ಹವಾಗಿದ್ದರೂ, ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಅಥವಾ, ಹೆಚ್ಚೆಂದರೆ, ಹಾನಿಯನ್ನು ಸ್ವಲ್ಪಮಟ್ಟಿಗೆ ತಗ್ಗಿಸುತ್ತದೆಯಲ್ಲದೆ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸುವುದಿಲ್ಲ.

ಈ ರೀತಿಯಲ್ಲಿ, ದೇಶದಲ್ಲಿ ಈಗ ನಾವು ಹೊಂದಿರುವುದು ಏನೆಂದರೆ, ಸರ್ಕಾರವನ್ನು ಆಯ್ಕೆ ಮಾಡುವ “ಜನರು” ಯಾರು ಎಂಬುದನ್ನು ಪ್ರಧಾನ ಮಂತ್ರಿ ಮತ್ತು ಅವರ ನಾಮನಿರ್ದೇಶಿತ ಸದಸ್ಯರು ನಿರ್ಧರಿಸುತ್ತಾರೆ. ಅಂದರೆ, “ಜನರು” ಸರ್ಕಾರವನ್ನು ಆಯ್ಕೆ ಮಾಡುವುದರ ಬದಲು,”ಜನರನ್ನು” ಆಯ್ಕೆ ಮಾಡುವ ಸರ್ಕಾರವನ್ನು ನಾವು ಹೊಂದಿದ್ದೇವೆ. ಇದು ರಾಷ್ಟ್ರದ ಬಗ್ಗೆ ಹೊಂದಿದ ಪರಿಕಲ್ಪನೆಯನ್ನು ಮೂಲಭೂತವಾಗಿ ತಲೆಕೆಳಗು ಮಾಡುತ್ತದೆ. ಈ ವಿದ್ಯಮಾನವು ಬರ್ಟೋಲ್ಟ್ ಬ್ರೆಕ್ಟ್ ಅವರ ಪ್ರಸಿದ್ಧ ಕವಿತೆಗಳಲ್ಲಿ ಒಂದನ್ನು ನೆನಪಿಸುತ್ತದೆ: “ಸರ್ಕಾರವು ಜನರ ವಿಶ್ವಾಸವನ್ನು ಕಳೆದುಕೊಂಡಿದೆ ಎಂದು ತೋರುತ್ತದೆ; ಅದುಜನತೆಯನ್ನು ವಜಾ ಮಾಡಿ ಬೇರೊಂದನ್ನುಏಕೆ ಆಯ್ಕೆ ಮಾಡುವುದಿಲ್ಲ?” ಬ್ರೆಕ್ಟ್ ಅವರ ವ್ಯಂಗ್ಯದಿಂದ ಕೂಡಿದ ಈ ಸಲಹೆಯ ಅಕ್ಷರಶಃ ಅನುಷ್ಠಾನವನ್ನು ನಾವಿಲ್ಲಿ ನೋಡುತ್ತಿದ್ದೇವೆ. ಅವರ ಈ ವ್ಯಂಗ್ಯವು ನವ-ಫ್ಯಾಸಿಸಂನ ಸಾರವನ್ನು ಮತ್ತು ರಾಷ್ಟ್ರದ ಪರಿಕಲ್ಪನೆಯಲ್ಲಿ ಆಗಿರುವ ಈ ತಿರುಗುಮುರುಗಿಗೆ ಪೂರಕವಾಗಿ ಅದು ತಂದಿರುವ “ಜನರು-ನಾಯಕ”ಇವರ ತಲೆಕೆಳಗಾದ ಸಂಬಂಧವನ್ನು ಅದ್ಭುತವಾಗಿ ಸೆರೆಹಿಡಿದಿದೆ.

ಜನಾದೇಶವೋ, ಆದೇಶಿತಜನವೋ?

 ವ್ಯಂಗ್ಯಚಿತ್ರ: ಸಂದೀಪ ಅಧ್ವರ್ಯು

ಆದರೆ, ನವ-ಫ್ಯಾಸಿಸಂ ಈಗಅಂತಾರಾಷ್ಟ್ರೀಯವಾಗಿ ಹಿನ್ನಡೆಯಲ್ಲಿದೆ. ಎಲ್ಲೆಡೆಯೂ ಅದು ಹಿನ್ನಡೆಯನ್ನು ಅನುಭವಿಸುತ್ತಿದೆ: ಇರಾನಿನ ಮೇಲೆ ಟ್ರಂಪ್ ನಡೆಸಿದ ಮತ್ತು ಅವರು ಹೇಳಿಕೊಂಡ ಯಾವ ಉದ್ದೇಶವೂ ಈಡೇರದ ದಾಳಿಯು ಒಂದು ಸೋಲನ್ನು ಅನುಭವಿಸಿದೆ; ಹಂಗೇರಿಯ ಚುನಾವಣೆಯಲ್ಲಿ ವಿಕ್ಟರ್ ಓರ್ಬನ್ ಸೋಲು ಅನುಭವಿಸಿದ್ದಾರೆ; ಕಟ್ಟಾಫ್ಯಾಸಿಸ್ಟ್ ನೆತನ್ಯಾಹು ಕೂಡ ತಮ್ಮ ಕೊಲೆಗಡುಕ ಯೋಜನೆಗಳಿಗೆ ಇಸ್ರೇಲಿನಲ್ಲಿ ಬೆಂಬಲ ಕಳೆದುಕೊಳ್ಳುತ್ತಿದ್ದಾರೆ; ಮತ್ತು ಭಾರತದಲ್ಲಿ ಸ್ವತಃ ಮೋದಿ ಬಿಜೆಪಿಯ ಆಳ್ವಿಕೆಸದಾ ಮುಂದುವರಿಯುತ್ತಲೇ ಇರುವಂತೆ ಮಾಡಬಹುದಾಗಿದ್ದ ಲೋಕಸಭಾ ಸದಸ್ಯರ ಸಂಖ್ಯೆಯ ಹೆಚ್ಚಳಕ್ಕೆ ಭಾರತದ ಸಂವಿಧಾನವನ್ನು ಬದಲಾಯಿಸಲು ಸಂಸತ್ತಿನ ಬೆಂಬಲವನ್ನು ಪಡೆಯುವಲ್ಲಿ ಸೋಲು ಅನುಭವಿಸಿದ್ದಾರೆ.

ನಿಜ, ಇದರಅರ್ಥ ಖಂಡಿತವಾಗಿಯೂ ನವ-ಫ್ಯಾಸಿಸಂನ ಅಂತ್ಯಬಂದಿದೆಯೆಂದಲ್ಲ. ನವ-ಉದಾರವಾದದ ಬಿಕ್ಕಟ್ಟಿನ ಸನ್ನಿವೇಶದ ಒಂದು ನಿರ್ದಿಷ್ಟ ಸಂದರ್ಭದಲ್ಲಿ ನವ-ಫ್ಯಾಸಿಸಂ ಉದ್ಭವಿಸಿದೆ. ನವ-ಉದಾರವಾದದ ಮಿತಿಯೊಳಗೆ ಈ ನವ-ಫ್ಯಾಸಿಸಮನ್ನು ಜಯಿಸುವುದು ಸಾಧ್ಯವಿಲ್ಲ. ಆದರೆ, ಈ ನವ-ಉದಾರವಾದವನ್ನೇ ಮೀರುವ ಮೂಲಕ ನವ-ಫ್ಯಾಸಿಸಮನ್ನು ಜಯಿಸದಿದ್ದರೆ, ನವ-ಫ್ಯಾಸಿಸಮನ್ನು ಉತ್ಪಾದಿಸಿದ ಅವೇ ಪರಿಸ್ಥಿತಿಗಳು ಮುಂದುವರಿಯುತ್ತವೆ ಮತ್ತು ಚುನಾವಣೆಯಲ್ಲಿ ಸೋತರೂ, ಸ್ವತಃ ಟ್ರಂಪ್ ತೋರಿಸಿರುವಂತೆ, ನವ-ಫ್ಯಾಸಿಸಂ ಮತ್ತೆ ತಲೆ ಎತ್ತುತ್ತದೆ. ಆದರೆ, ಚುನಾವಣೆಯಲ್ಲಿ ನವ-ಫ್ಯಾಸಿಸಂನ ಸೋಲು ಪ್ರಜಾಪ್ರಭುತ್ವದ ಪುನರ್ಸ್ಥಾಪನೆಗೆ ಮಾತ್ರವಲ್ಲದೆ, ನವ-ಉದಾರವಾದವನ್ನೇ ಮೀರುವುದಕ್ಕೂ ಒಂದು ಅಗತ್ಯಷರತ್ತಂತೂ ಹೌದು.

ಇದನ್ನೂ ನೋಡಿ: “(ಲೇಬರ್‌ ಕೋಡ್ಸ್‌) ಶ್ರಮ ಸಂಹಿತೆಗಳ ಜಾರಿ: ರಾಜ್ಯಗಳ ಮುಂದಿನ ದಾರಿ ಯಾವುದು?” Janashakthi Media

Donate Janashakthi Media

Leave a Reply

Your email address will not be published. Required fields are marked *