ಕುಡಿತಿನಿ ಭೂಹೋರಾಟ – ರೈತರ ಬಂಧನ: ಸಿಪಿಐ(ಎಂ) ಖಂಡನೆ; ರೈತರನ್ನು ಬಿಡುಗಡೆ ಮಾಡಲು ಆಗ್ರಹ

ಬೆಂಗಳೂರು: ಬಳ್ಳಾರಿ ಜಿಲ್ಲೆ ಕುಡಿತಿನಿ ಮತ್ತು ಸುತ್ತಲ ಗ್ರಾಮಗಳ ಸುಮಾರು 900 ಎಕರೆ ರೈತರ ಜಮೀನನ್ನು ಜಿಂದಾಲ್ ಕಂಪನಿಗೆ ವರ್ಗಾವಣೆ ಮಾಡುವ ತೀರ್ಮಾನದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರು, ಸಿಪಿಐ(ಎಂ)ನ ರಾಜ್ಯ ಮುಖಂಡರೂ ಆದ ಯು. ಬಸವರಾಜ ಮತ್ತು ಸಿಐಟಿಯು ರಾಜ್ಯ ಉಪಾಧ್ಯಕ್ಷರೂ, ಸಿಪಿಐ(ಎಂ) ಬಳ್ಳಾರಿ ಜಿಲ್ಲಾ ಕಾರ್ಯದರ್ಶಿಯಾದ ಜೆ. ಸತ್ಯಬಾಬು ಅವರನ್ನೂ ಒಳಗೊಂಡು ಸುಮಾರು 300ಕ್ಕೂ ಹೆಚ್ಚು ರೈತರು ಮತ್ತು ರೈತ ಮಹಿಳೆಯರನ್ನು ಬಂಧಿಸಿರುವುದನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಬಂಧಿತರನ್ನು ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದೆ. ಕುಡಿತಿನಿ

ಅರ್ಸೆಲರ್ ಮಿತ್ತೆಲ್ ಕಂಪನಿಗಾಗಿ 2016 ರಲ್ಲಿ ಕೆಐಎಡಿಬಿ ಸ್ವಾಧೀನ ಮಾಡಿ ಇದುವರೆಗೂ ಉಪಯೋಗಿಸಿದೇ ಇದ್ದ ರೈತರ ಜಮೀನುಗಳನ್ನು ಅಕ್ರಮವಾಗಿ ಜಿಂದಾಲ್ ಕಂಪನಿಗೆ ಕಳ್ಳತನದಲ್ಲಿ ಮಾರಾಟ ಮಾಡಿರುವುದನ್ನು ಖಂಡಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದರು. ಶತಾಯಗತಾಯ ಜಿಂದಾಲ್ ಕಂಪನಿಗೆ ಜಮೀನನ್ನು ವರ್ಗಾವಣೆ ಮಾಡಲೇಬೇಕೆಂದು ಪಟ್ಟು ಹಿಡಿದಿರುವ ಕೆಐಎಡಿಬಿ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ. ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಸಂಸದರು, ಶಾಸಕರು ಮತ್ತು ಸರ್ಕಾರ ರೈತರ ವಿರುದ್ಧ ಕುಮ್ಮಕ್ಕು ನೀಡಿ, ಪೊಲೀಸರನ್ನು ದೊಡ್ಡ ಪ್ರಮಾಣದಲ್ಲಿ ಬಳಸಿ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಕುಡಿತಿನಿ

ಅರ್ಸೆಲರ್ ಮಿತ್ತಲ್ ಕಂಪನಿಗೆ ಸುಮಾರು 14 ವರ್ಷಗಳ ಹಿಂದೆ ರೈತರಿಂದ 5 – 10 ಲಕ್ಷ ರೂಗಳಿಗೆ ಜಮೀನನ್ನು ಕೆಐಎಡಿಬಿ ವಶಪಡಿಸಿಕೊಂಡಿತ್ತು. ಇದರ ವಿರುದ್ಧ ರೈತರ ಕಾನೂನಿನ ಹೋರಾಟವನ್ನೂ ನಡೆಸುತ್ತಿದ್ದರು. ಇಲ್ಲಿನ ರೈತರ ಫಲವತ್ತಾದ ಭೂಮಿ ಎಕರೆಗೆ ಒಂದೂವರೆ ಕೋಟಿ ರೂಗಳಿಗೂ ಹೆಚ್ಚು ಬೆಲೆ ಬಾಳುತ್ತದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದಾಗಿ ನೂರಾರು ರೈತರಿಗೆ ಒಂದು ಕೋಟಿಗೂ ಹೆಚ್ಚಿನ ಪರಿಹಾರ ನೀಡುವಂತಾಗಿದೆ. ಕುಡಿತಿನಿ

ಇದನ್ನೂ ಓದಿ: ಬಳ್ಳಾರಿ ಭೂ ಹೋರಾಟ: ರೈತರ ವಿರುದ್ಧ 144 ಸೆಕ್ಷನ್ ಜಾರಿ, ಆಕ್ರೋಶ

ಮಿತ್ತೆಲ್ ಕಂಪನಿ ಬಳಿಯಿದ್ದ ಹೆಚ್ಚಿನ ಭೂಮಿಯನ್ನು ವಾಪಸ್ ಕೊಡಬೇಕೆಂದು ರೈತರು ಹೋರಾಟ ನಡೆಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಸುಮಾರು ೯೦೦ ಎಕರೆ ಜಮೀನನ್ನು ಜಿಂದಾಲ್ ಕಂಪನಿಗೆ ಎಕರೆಗೆ ಕೇವಲ 28 ಲಕ್ಷ ರೂಗಳಿಗೆ ಮಾರಾಟ ಮಾಡಲು ಕೆಐಎಡಿಬಿ ಅಕ್ರಮವಾಗಿ ತೀರ್ಮಾನ ಮಾಡಿದೆ. ಇದರ ಹಿಂದೆ ಬೃಹತ್ ಭ್ರಷ್ಟಾಚಾರ ನಡೆದಿದೆ. ಜಿಂದಾಲ್ ಕಂಪನಿಗೆ ಭೂಮಿಯನ್ನು ಕೊಡಬಾರದೆಂದು ರೈತರು ಸತತವಾಗಿ ಹೋರಾಡುತ್ತಿದ್ದಾರೆ.

ಜಿಂದಾಲ್ ಕಂಪನಿಗೆ ಹೇಗಾದರೂ ಮಾಡಿ ಭೂಮಿಯನ್ನು ಅಳತೆ ಮಾಡಿ ಕೊಡಬೇಕೆಂದು ಹಠತೊಟ್ಟಿರುವ ಕೆಐಎಡಿಬಿ ವಾದವನ್ನು ಪುಷ್ಟೀಕರಿಸಿ ಏಪ್ರಿಲ್‌ 27 ರಿಂದ ದಿನಾಂಕ ಮೇ 7ರ ವರೆಗೆ ಬಳ್ಳಾರಿ ಉಪವಿಭಾಗಾಧಿಕಾರಿಗಳು ಹೊರಡಿಸಿರುವ ಬಿ.ಎನ್.ಎಸ್. 2023ರ ಕಲಂ 163ರ ನಿಷೇದಾಜ್ಞೆಯು ರಾಜ್ಯ ಸರ್ಕಾರದ ದಮನಕಾರಿ ಪ್ರವೃತ್ತಿಗೆ ಮತ್ತು ಪೊಲೀಸ್ ಬಲ ಬಳಸಿ ಶಾಂತಿಯುತ ಹೋರಾಟ ಹತ್ತಿಕ್ಕುವ ಸರ್ವಾಧಿಕಾರಿ ನಡವಳಿಕೆಗೆ ಸಾಕ್ಷಿಯಾಗಿದೆ.

ಕಾನೂನು ಸುವ್ಯವಸ್ಥೆಗೆ ಯಾವುದೇ ಭಂಗ ಉಂಟು ಮಾಡದಿದ್ದರೂ, ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದರೂ ಅಪಾರವಾದ ಪೊಲೀಸ್ ಪಡೆಯನ್ನು ಬಳಸಿ ರೈತರನ್ನು, ಮುಖಂಡರನ್ನು, ಮಹಿಳೆಯರನ್ನು ಬಂಧಿಸಿರುವುದು ರಾಜ್ಯ ಸರ್ಕಾರದ ರೈತ ವಿರೋಧಿ ಮತ್ತು ಕಾರ್ಪೊರೇಟ್ ಪರವಾದ ನೀತಿಗಳನ್ನು ಬಯಲುಗೊಳಿಸಿದೆ.

ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ರೈತರಿಗಾದ ಅನ್ಯಾಯವನ್ನು ಸರಿಪಡಿಸಬೇಕು. ಕೆಐಎಡಿಬಿ ಜಿಂದಾಲ್ ಕಂಪನಿ ಜೊತೆ ಮಾಡಿಕೊಂಡಿರುವ ಅಕ್ರಮವಾದ ಜಮೀನು ಪರಭಾರೆಯನ್ನು ರದ್ದುಪಡಿಸಬೇಕು. ಸುಪ್ರೀಂ ಕೋರ್ಟ್ ತೀರ್ಪಿನಂತೆ ಪರಿಹಾರ ಒದಗಿಸಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಅಥವಾ ರೈತರಿಗೆ ಅವರ ಭೂಮಿಯನ್ನು ವಾಪಸು ನೀಡಬೇಕು.

ಬಂಧನ ಮಾಡಿರುವ ಎಲ್ಲಾ ರೈತ ಮುಖಂಡರನ್ನು, ರೈತರನ್ನು ಮತ್ತು ಮಹಿಳೆಯರನ್ನು ಬಿಡುಗಡೆ ಮಾಡಬೇಕು. ಮುಖ್ಯಮಂತ್ರಿಗಳು ಕೂಡಲೇ ಮಧ್ಯಪ್ರವೇಶಿಸಿ ರೈತರೊಂದಿಗೆ ಮಾತುಕತೆ ನಡೆಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸುತ್ತದೆ. ದಮನಕಾರಿ ನೀತಿಯನ್ನು ಮುಂದುವರಿಸಿದರೆ ರಾಜ್ಯವ್ಯಾಪಿ ಹೋರಾಟವನ್ನು ನಡೆಸುವ ಎಚ್ಚರಿಕೆಯನ್ನು ನೀಡಿದೆ.

ಇದನ್ನೂ ನೋಡಿ: ಜಿಂದಾಲ್‌ಗೆ 900 ಎಕರೆ ಭೂ ಹಸ್ತಾಂತರ ವಿರೋಧಿಸಿ ತೀವ್ರಗೊಂಡ ರೈತರ ಹೋರಾಟ; ಹೋರಾಟಗಾರರ ಬಂಧನಕ್ಕೆ ಆಕ್ರೋಶ

Donate Janashakthi Media

Leave a Reply

Your email address will not be published. Required fields are marked *