ಬೆಂಗಳೂರು: ನಗರದಲ್ಲಿ ದೇಶದ ಮೊದಲ ಆತ್ಮನಿರ್ಭರ ಭಾರತ ಸ್ವದೇಶಿ ‘ಬಿ 28 ಬುಲೆಟ್ ರೈಲು’ ಬೋಗಿಗಳು ಸಿದ್ದವಾಗುತ್ತಿವೆ. ಮುಂದಿನ ವರ್ಷಾಂತ್ಯಕ್ಕೆ ಮೊದಲ ಮಾದರಿ (ಪ್ರೊಟೋ ಟೈಪ್) ನಿರೀಕ್ಷಿಸಲಾಗಿದ್ದು, 2027 ರ ಅಂತ್ಯಕ್ಕೆ ರೈಲು ಸಂಪೂರ್ಣವಾಗಿ ಸಿದ್ಧಗೊಳ್ಳಲಿದೆ ಎಂದು ನಗರದ ಬಿಇಎಂಎಲ್ನಲ್ಲಿ ನಿರ್ಮಿಸಲಾಗಿರುವ ‘ಆದಿತ್ಯ ಹೈಸ್ಪೀಡ್ ಬುಲೆಟ್ ರೈಲು ಬಿ28 ಬೋಗಿ ಉತ್ಪಾದನಾ ಕೇಂದ್ರ’ ವನ್ನು ಉದ್ಘಾಟಿಸಿ ಮಾತನಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
‘‘ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಮತ್ತು ಬಿಇಎಂಎಲ್ ಸಹಯೋಗದಲ್ಲಿ ಬುಲೆಟ್ ರೈಲಿನ ಬಿ28 ಬೋಗಿಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ಇದು ಆತ್ಮನಿರ್ಭರ ಭಾರತದ ಸ್ವದೇಶಿ ಬುಲೆಟ್ ರೈಲಾಗಿರಲಿದೆ. ಬಿಇಎಂಎಲ್ನ ಆದಿತ್ಯ ಘಟಕದಲ್ಲಿ ತಯಾರಿಸಲಾಗುತ್ತಿದ್ದು, ಮುಂದಿನ ವರ್ಷಾಂತ್ಯಕ್ಕೆ ಸಂಪೂರ್ಣವಾಗಿ ಸಿದ್ಧಗೊಳ್ಳುವ ವಿಶ್ವಾಸವಿದೆ,’’ ಎಂದರು.
ಹಾಸನ-ಮಂಗಳೂರು ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಪ್ರಕ್ರಿಯೆ
“ಕರ್ನಾಟಕದಲ್ಲಿ ಹೈಸ್ಪೀಡ್ ರೈಲುಗಳು ದೊಡ್ಡ ಪರಿವರ್ತನೆ ತರಲಿವೆ. ಈಗಾಗಲೇ ಘೋಷಣೆಯಾಗಿರುವ ಬೆಂಗಳೂರು- ಚೆನ್ನೈ ರೈಲು ಕೇವಲ 73 ನಿಮಿಷದಲ್ಲಿ ಎರಡು ನಗರಗಳ ನಡುವೆ ಸಂಚರಿಸಲಿದೆ. ಬೆಂಗಳೂರಿನಿಂದ ಮಂಗಳೂರು ಮಾರ್ಗವಾಗಿ ಮಡಗಾಂವ್ವರೆಗೆ ರೈಲು ಸೇವೆಯನ್ನು ಯೋಜಿಸಲಾಗಿದೆ. ಪ್ರಸ್ತುತ, ಹಾಸನ-ಮಂಗಳೂರು ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ಅತಿ ಶೀಘ್ರದಲ್ಲಿ ವಂದೇ ಭಾರತ್ ರೈಲು ಸಂಚರಿಸಲಿದೆ. ಈ ಮೂಲಕ ಕರಾವಳಿ ಪ್ರದೇಶಕ್ಕೆ ವಂದೇ ಭಾರತ್ ರೈಲು ಸೇವೆ ಲಭಿಸಲಿದೆ,’’ ಎಂದು ತಿಳಿಸಿದರು.
ಇದನ್ನೂ ಓದಿ: ‘ನೈಜ ಅಪರಾಧಗಳ ತನಿಖೆ ಇಲ್ಲ’: ಕರ್ನಾಟಕ ಪೊಲೀಸರ ವಿರುದ್ಧ ಹೈಕೋರ್ಟ್ ಕಿಡಿ
ಜತೆಗೆ ‘‘ಬೆಂಗಳೂರು-ಮುಂಬಯಿ ಮಾರ್ಗದಲ್ಲಿ ಎರಡು ಸೂಪರ್ಫಾಸ್ಟ್ ರೈಲುಗಳ ಕಾರ್ಯಾರಂಭ ಪ್ರಗತಿಯಲ್ಲಿದೆ. ಒಂದು ಹುಬ್ಬಳ್ಳಿ- ಧಾರವಾಡ ಮಾರ್ಗವಾಗಿ ಸಂಚರಿಸಲಿದ್ದು, ಇದು ಸೂಪರ್ ಫಾಸ್ವ್ ಸೇವೆಯಾಗಿರಲಿದೆ. ಮತ್ತೊಂದು ವಂದೇ ಭಾರತ್ ಸ್ಲೀಪರ್ ರೈಲು ಸಂಚಾರವನ್ನು ಆರಂಭಿಸಲು ಸಹ ಕ್ರಮ ಕೈಗೊಳ್ಳಲಾಗಿದೆ,’’ ಎಂದರು.
ಉಪನಗರ ರೈಲು ಯೋಜನೆಯಲ್ಲಿ ಉತ್ತಮ ಪ್ರಗತಿ
ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿಯ ಪ್ರಗತಿ ಉತ್ತಮವಾಗಿದ್ದು, ಕಳೆದ ಕೆಲ ತಿಂಗಳಲ್ಲಿಹಲವೆಡೆ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ಚಿನಿ ವೈಷ್ಣವ್ ತಿಳಿಸಿದರು.
‘‘ಬಿಎಸ್ಆರ್ಪಿ ಕೆಲಸಗಳು ಪ್ರಗತಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿ, ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ರೈಲ್ವೆ ತಾಂತ್ರಿಕ ಕಾರ್ಯವಾಗಿದ್ದರಿಂದ, ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿಗೆ (ಕೆ-ರೈಡ್) ತಾಂತ್ರಿಕ ಪರಿಣಿತರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲು ಕೇಳಿದ್ದೆವು. ಅದರಂತೆ ರಾಜ್ಯ ಸರಕಾರ ಸಮ್ಮತಿಸಿ ಇದೀಗ ಲಕ್ಷ್ಮಣ್ ಸಿಂಗ್ ಅವರನ್ನು ಎಂಡಿಯಾಗಿ ನೇಮಿಸಿದೆ,’’ ಎಂದು ಹೇಳಿದರು.
ಇದನ್ನೂ ನೋಡಿ: ಅಂಬೇಡ್ಕರ್–ಮಾರ್ಕ್ಸವಾದ: ಚಿಂತನೆ ಮತ್ತು ಹೋರಾಟ | ಕೆ.ಎನ್.ಉಮೇಶ್ Janashakthi Media
