ಬೆಂಗಳೂರು | ಯುದ್ಧದ ಹೊರೆ ಜನರ ಮೇಲೆ: ಎಲ್‌ಪಿಜಿ ಬೆಲೆ ಏರಿಕೆ ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ

ಬೆಂಗಳೂರು : ಯುದ್ಧೋನ್ಮಾದ ಮತ್ತು ಅದರ ಪರಿಣಾಮವಾಗಿ ಸಾಮಾನ್ಯ ಜನರ ಬದುಕಿನ ಮೇಲೆ ಬಿದ್ದಿರುವ ಹೊರೆ ವಿರುದ್ಧ ಇಂದು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಹಾಗೂ ಉತ್ತರ ಜಿಲ್ಲಾ ಸಮಿತಿಗಳು ಮತ್ತು ಸ್ಥಳೀಯ ಐಟಿ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಅಡುಗೆ ಅನಿಲ (LPG) ಬೆಲೆಗಳ ನಿರಂತರ ಏರಿಕೆಯಿಂದ ಜನರ ಜೀವನೋಪಾಯ ಸಂಕಷ್ಟಕ್ಕೆ ತಳ್ಳಲ್ಪಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಪಿಐ(ಎಂ) ಕಾರ್ಯಕರ್ತರು ಬೀದಿಯಲ್ಲೇ ಸೌದೆ ಒಲೆ ಹಚ್ಚಿ ಪ್ರತಿಕಾತ್ಮಕವಾಗಿ ಪ್ರತಿಭಟನೆ ನಡೆಸಿದರು. ಅನಿಲದ ಬೆಲೆ ಏರಿಕೆ ಸಾಮಾನ್ಯ ಕುಟುಂಬಗಳ ಮೇಲೆ ಭಾರವಾಗುತ್ತಿದೆ; ಯುದ್ಧೋನ್ಮಾದ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳ ಬದಲು ಜನರ ಬದುಕು ಮುಖ್ಯವೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪ್ರತಿಭಟನೆ ಉದ್ದೇಶಿಸಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಗೋಪಾಲಕೃಷ್ಣ ಹರಳಹಳ್ಳಿ ಮಾತನಾಡಿ, ತೈಲ ಸಂಪತ್ತಿನ ಜಾಗತಿಕ ಅಧಿಪತ್ಯಕ್ಕಾಗಿ ಅಮೆರಿಕಾ–ಇಸ್ರೇಲ್ ಕೂಟವು ಇರಾನ್ ಮೇಲೆ ನಡೆಸುತ್ತಿರುವ ಯುದ್ಧದ ಪರಿಣಾಮವಾಗಿ ಭಾರತಕ್ಕೆ ತೈಲ ಪೂರೈಕೆ ಸರಪಳಿಗಳು ಅಸ್ಥಿರಗೊಂಡಿವೆ ಎಂದು ಹೇಳಿದರು. ದೇಶದ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಾದ ಅನಿಲ ದಾಸ್ತಾನುಗಳನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಬೆಲೆ ಏರಿಕೆಯ ಹೊರೆ ಈಗಾಗಲೇ ಜನರನ್ನು ಸಂಕಷ್ಟಕ್ಕೆ ತಳ್ಳಿರುವಾಗ ಅನಿಲ ದರ ಹೆಚ್ಚಳ ಮತ್ತಷ್ಟು ಬಾಧೆ ತಂದಿದೆ ಎಂದು ಅವರು ಹೇಳಿದರು. ದೇಶದ ಹಲವೆಡೆ ಜನರು ಅಡುಗೆ ಅನಿಲದ ತೀವ್ರ ಕೊರತೆಯನ್ನು ಎದುರಿಸುತ್ತಿದ್ದು, ಮರು ಸಿಲಿಂಡರ್‌ಗಾಗಿ ಎರಡು ತಿಂಗಳು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ದೀರ್ಘ ಸಾಲಿನಲ್ಲಿ ಕಾಯುವಂತಹ ಸ್ಥಿತಿಗೆ ಕೇಂದ್ರ ಸರ್ಕಾರ ಜನರನ್ನು ದೂಡಿದೆ ಎಂದು ಆರೋಪಿಸಿದರು.

ಇದನ್ನೂ ಓದಿ : ಒಳಮೀಸಲಾತಿ ಗೊಂದಲ ಮಾರ್ಚ್ 28ಕ್ಕೆ ಬಗೆಹರಿಯುವ ಸಾಧ್ಯತೆ: ಗೃಹ ಸಚಿವ ಜಿ. ಪರಮೇಶ್ವರ್ ಭರವಸೆ

ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಬಿ.ಎನ್‌. ಮಂಜುನಾಥ್ ಮಾತನಾಡಿ, ಅನಿಲ ಕೊರತೆಯ ಪರಿಣಾಮವಾಗಿ ಕಾಳಸಂತೆ ಮಾರುಕಟ್ಟೆ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಹೇಳಿದರು. ದೇಶೀಯ ಬಳಕೆಗೆ ಮೀಸಲಾದ ಗ್ಯಾಸ್ ಸಿಲಿಂಡರ್‌ಗಳನ್ನು ಕಾಳಸಂತೆ ಮಾರುಕಟ್ಟೆಯಲ್ಲಿ ₹1,500 ರಿಂದ ₹4,000ರವರೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಕಾಳಸಂತೆ ಮಾರುಕಟ್ಟೆ ತಡೆಯಲು ಮತ್ತು ನಿಜವಾಗಿ ಅಗತ್ಯವಿರುವವರಿಗೆ ಸಿಲಿಂಡರ್‌ಗಳ ಲಭ್ಯತೆಯನ್ನು ಖಚಿತಪಡಿಸಲು ಸರ್ಕಾರಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಡುಗೆ ಅನಿಲ ಕೊರತೆಯ ಪರಿಣಾಮ ಶೈಕ್ಷಣಿಕ ಸಂಸ್ಥೆಗಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಹಲವು ವಿದ್ಯಾರ್ಥಿ ನಿಲಯಗಳಲ್ಲಿ ಆಹಾರ ಮೆನು ಕಡಿತಗೊಳಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಸಮರ್ಪಕ ಆಹಾರದ ಬದಲು ಕೇವಲ ದಾಲ್ ಅಥವಾ ಸಬ್ಜಿ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆ ಹಾಸ್ಟೆಲ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಿ ವಿದ್ಯಾರ್ಥಿಗಳನ್ನು ಮನೆಗಳಿಗೆ ಕಳುಹಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಆರೋಗ್ಯ ಮತ್ತು ಶಿಕ್ಷಣದ ಮೇಲೆ ದುಷ್ಪರಿಣಾಮ ಬೀಳುತ್ತಿದೆ ಎಂದು ಅವರು ಹೇಳಿದರು.

ಸಿಪಿಐ(ಎಂ) ಉತ್ತರ ಜಿಲ್ಲಾ ಸಮಿತಿ ಮುಖಂಡರಾದ ಗೌರಮ್ಮ ಮಾತನಾಡಿ, ಮೋದಿ ಸರ್ಕಾರದ ವಿದೇಶಾಂಗ ನೀತಿಯ ಪರಿಣಾಮವಾಗಿ ಅನಿಲ ಕೊರತೆ ಉಂಟಾಗಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕಾರ್ಖಾನೆ ಮತ್ತು ಕಚೇರಿಗಳ ಕ್ಯಾಂಟೀನ್‌ಗಳಲ್ಲೂ ಸಮಸ್ಯೆ ಉಂಟಾಗಿದೆ ಎಂದು ಹೇಳಿದರು. ಇದರ ಪರಿಣಾಮವಾಗಿ ಆಹಾರದ ಬೆಲೆಗಳು ಏರಿಕೆಯಾಗುತ್ತಿವೆ. ಕಾರ್ಮಿಕರು ಮತ್ತು ನೌಕರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆಹಾರ ವಿತರಣೆಯಲ್ಲಿ ತೊಡಗಿರುವ ಗಿಗ್ ಕಾರ್ಮಿಕರ ಉದ್ಯೋಗಕ್ಕೂ ಹೊಡೆತ ಬಿದ್ದಿದೆ ಎಂದರು.

ಇದೇ ವೇಳೆ ಇಂಡಕ್ಷನ್ ಸ್ಟೌವ್‌, ಎಲೆಕ್ಟ್ರಿಕ್ ಕುಕ್ಕರ್‌ಗಳಂತಹ ಪರ್ಯಾಯ ಅಡುಗೆ ಸಾಧನಗಳ ಬೆಲೆಗಳು ತೀವ್ರವಾಗಿ ಏರಿಕೆಯಾಗಿವೆ. ಉರುವಲಿನ ಬೆಲೆಯೂ ನಾಲ್ಕು–ಐದು ಪಟ್ಟು ಹೆಚ್ಚಾಗಿದೆ. ಖಾದ್ಯ ತೈಲದ ಬೆಲೆಗಳೂ ಏರಿಕೆಯಾಗುತ್ತಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು.

ಅಮೆರಿಕಾ–ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಭಾರತದ ಜನರ ಜೀವನದ ಮೇಲೆ ದುಷ್ಪರಿಣಾಮ ಬೀರುವುದನ್ನು ತಡೆಯಬೇಕು ಹಾಗೂ ಅನಿಲ ದರ ಏರಿಕೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಸಿಪಿಐ(ಎಂ) ದೇಶವ್ಯಾಪಿ ಪ್ರತಿಭಟನೆಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ಸಿಪಿಐ(ಎಂ) ನಾಯಕರು ಎಚ್‌.ಎನ್‌. ಗೋಪಾಲಗೌಡ, ಟಿ. ಲೀಲಾವತಿ, ಮುನಿರಾಜು, ವಿನಾಯಕ, ಕೆ.ಎಸ್‌. ಲಕ್ಷ್ಮಿ, ಲಿಂಗರಾಜು, ರವಿಚಂದ್ರ, ಶ್ರೀಪತಿ ಸೇರಿದಂತೆ ಅನೇಕರಿದ್ದರು.

ಇದನ್ನೂ ನೋಡಿ : ಸಾಮ್ರಾಜ್ಯಶಾಹಿ ಸಖ್ಯತೆ ಬೇಡ: ಶಾಂತಿಗಾಗಿ ಮೇಣದ ಬತ್ತಿ ಪ್ರತಿಭಟನೆ Janashakthi Media

 

Donate Janashakthi Media

Leave a Reply

Your email address will not be published. Required fields are marked *