ಮರಳಿ ಮಹಾತ್ಮನೆಡೆಗೆ: ಸಮಾನತೆ ಮತ್ತು ಮಾನವೀಯತೆಯ ಹುಡುಕಾಟ

ಜಾತಿ, ಅಸ್ಪೃಶ್ಯತೆ ಮತ್ತು ಧರ್ಮದ ಹೆಸರಿನಲ್ಲಿ ಸಮಾಜ ವಿಭಜಿತವಾಗುತ್ತಿರುವ ಇಂದಿನ ಸಂದರ್ಭದಲ್ಲಿ, ಮಹಾತ್ಮ ಗಾಂಧಿಯವರ ಸಮಾನತೆ ಮತ್ತು ಮಾನವೀಯತೆಯ ಚಿಂತನೆಗಳನ್ನು ಮತ್ತೆ ನೆನಪಿಸುವ ಪ್ರಯತ್ನವಾಗಿ ಧಾರವಾಡ ರಂಗಾಯಣ ರೆಪರ್ಟರಿ ಕಲಾವಿದರು “ಮರಳಿ ಮಹಾತ್ಮನೆಡೆಗೆ” ನಾಟಕವನ್ನು ರಂಗಕ್ಕೆ ತಂದಿದ್ದಾರೆ. ಇತಿಹಾಸದ ಘಟನೆಗಳನ್ನು ಇಂದಿನ ಸಾಮಾಜಿಕ ವಾಸ್ತವಿಕತೆಗೆ ಜೋಡಿಸುತ್ತಾ, ಸಮಾಜವನ್ನು ಆತ್ಮಪರಿಶೀಲನೆಗೆ ಆಹ್ವಾನಿಸುವ ರಂಗಪ್ರಯೋಗವಾಗಿ ಇದು ಗಮನ ಸೆಳೆಯುತ್ತದೆ.

– ಗುರುರಾಜ ದೇಸಾಯಿ

ಧಾರವಾಡದ ರಂಗಾಯಣ ರೆಪರ್ಟರಿ ಕಲಾವಿದರು ಪ್ರದರ್ಶಿಸಿದ “ಮರಳಿ ಮಹಾತ್ಮನೆಡೆಗೆ” ನಾಟಕವು ಕೇವಲ ಐತಿಹಾಸಿಕ ಸ್ಮರಣೆಯಲ್ಲ; ಇಂದಿನ ಸಮಾಜಕ್ಕೆ ಒಂದು ಪ್ರಶ್ನೆಯನ್ನು ಎತ್ತುವ ರಂಗಪ್ರಯೋಗವಾಗಿದೆ. ಮಹಾತ್ಮ ಗಾಂಧಿಯವರ ಚಿಂತನೆಗಳು ಇಂದಿನ ಯುವಜನತೆ ಮತ್ತು ಸಮಾಜದ ಬದುಕಿನಲ್ಲಿ ಹೇಗೆ ಅರ್ಥಪೂರ್ಣವಾಗಬಹುದು ಎಂಬುದನ್ನು ಹುಡುಕುವ ಪ್ರಯತ್ನವಾಗಿ ಈ ನಾಟಕ ರೂಪುಗೊಂಡಿದೆ. ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಧರ್ಮದ ಹೆಸರಿನಲ್ಲಿ ಮಾನವನ ವಿಭಜನೆ ಹಾಗೂ ಸಮಾಜದಲ್ಲಿ ಗಾಢವಾಗಿರುವ ಅಸಮಾನತೆಗಳನ್ನು ನಾಟಕ ತೀವ್ರವಾಗಿ ಪ್ರಶ್ನಿಸುತ್ತದೆ.

ನಾಟಕದ ಪ್ರಮುಖ ಬಲವೆಂದರೆ ಗಾಂಧಿಯವರ ತತ್ವಗಳನ್ನು ಕೇವಲ ಭಾಷಣಗಳ ಮೂಲಕವಲ್ಲದೆ ದೃಶ್ಯಗಳ ಮೂಲಕ ಪ್ರೇಕ್ಷಕರ ಮನಸ್ಸಿಗೆ ತಲುಪಿಸುವ ವಿಧಾನ. ಬ್ರಾಹ್ಮಣ ಅರ್ಚಕನಿಂದಲೇ ಶೌಚಾಲಯ ತೊಳೆಯುವ ದೃಶ್ಯವು ಜಾತಿಯ ಆಧಾರದ ಮೇಲೆ ನಿರ್ಮಿತವಾಗಿರುವ “ಶುದ್ಧ–ಅಶುದ್ಧ” ಎಂಬ ಕಲ್ಪನೆಯನ್ನು ನೇರವಾಗಿ ಪ್ರಶ್ನಿಸುತ್ತದೆ. ಗಾಂಧಿ ಪ್ರತಿಪಾದಿಸಿದ ಸಮಾನತೆ ಮತ್ತು ಮಾನವೀಯತೆಯ ಸಂದೇಶವನ್ನು ಈ ದೃಶ್ಯ ದೃಢವಾಗಿ ಪ್ರತಿಪಾದಿಸುತ್ತದೆ. “ದೇವರು ಎಂದರೆ ಮಂತ್ರ ಜಪಿಸುವುದು ಅಥವಾ ಧರ್ಮದ ಹೆಸರಿನಲ್ಲಿ ಆಚರಣೆಗಳನ್ನು ಕಟ್ಟಿಕೊಳ್ಳುವುದಲ್ಲ; ದೇವರು ಅಂದರೆ ಪ್ರೇಮ ಮತ್ತು ಸತ್ಯ” ಎಂಬ ಸಂದೇಶದ ಮೂಲಕ ಧರ್ಮವನ್ನು ಮಾನವೀಯ ಮೌಲ್ಯಗಳೊಂದಿಗೆ ಮರುಪರಿಗಣಿಸುವ ಚಿಂತನೆ ನಾಟಕದಲ್ಲಿ ಮೂಡಿಬರುತ್ತದೆ.

ಇದನ್ನೂ ಓದಿ: ಹಿರಿಯ ಕಲಾವಿದರ ಕೇಂದ್ರ ಸಹಾಯಧನದಲ್ಲಿ ಇಳಿಕೆ: ಡಾ. ವಿ. ಸಿವದಾಸನ್ ಆತಂಕ

ಗಾಂಧಿಯವರ ಶೌಚತೆ ಮತ್ತು ಸ್ವಚ್ಛತೆ ಕುರಿತ ದೃಷ್ಟಿಕೋನವೂ ನಾಟಕದಲ್ಲಿ ಪರಿಣಾಮಕಾರಿಯಾಗಿ ಪ್ರಸ್ತಾಪಿತವಾಗುತ್ತದೆ. ಬಯಲುಮುಕ್ತ ಶೌಚಾಲಯದ ಪರಿಕಲ್ಪನೆ, ಪಾಳಿ ಪ್ರಕಾರ ಶೌಚಾಲಯ ಸ್ವಚ್ಛತೆ ಮಾಡುವ ಅಭ್ಯಾಸ ಮತ್ತು ತಮ್ಮ ಅನುಯಾಯಿಗಳಿಂದಲೇ ಶೌಚಾಲಯ ತೊಳೆಯಿಸುವ ಮೂಲಕ ಸಮಾಜದಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಗಾಂಧಿಯವರು ಮಾಡಿದ ಪ್ರಯತ್ನಗಳನ್ನು ನಾಟಕ ನೆನಪಿಸುತ್ತದೆ. ಸ್ವಚ್ಛತೆ ಎನ್ನುವುದು ಕೇವಲ ಆರೋಗ್ಯದ ಪ್ರಶ್ನೆಯಲ್ಲ; ಅದು ಸಮಾನತೆ ಮತ್ತು ಮಾನವ ಗೌರವದ ಪ್ರಶ್ನೆಯೂ ಹೌದು ಎಂಬ ಸಂದೇಶ ಇಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ.

ಇತಿಹಾಸದ ಸ್ಥಳೀಯ ಅಧ್ಯಾಯಗಳನ್ನೂ ನಾಟಕ ಸೂಕ್ತವಾಗಿ ನೆನಪಿಸುತ್ತದೆ. ಧಾರವಾಡದ ಜಕಣಿ ಬಾವಿಯಲ್ಲಿ ನಡೆದ ಸಾರಾಯಿ ವಿರೋಧಿ ಚಳವಳಿಯನ್ನು ಪ್ರಸ್ತಾಪಿಸುವ ಮೂಲಕ ಬ್ರಿಟಿಷರ ವಿರುದ್ಧ ನಡೆದ ಅಸಹಕಾರ ಚಳವಳಿಯ ಒಂದು ಮಹತ್ವದ ಕ್ಷಣವನ್ನು ನಾಟಕ ನೆನಪಿಸುತ್ತದೆ. 1921ರ ಜುಲೈ 1ರಂದು ಸಾರಾಯಿ ಅಂಗಡಿ ಎದುರು ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಮಲ್ಲಿಕಸಾಬ್, ಗೌಸುಸಾಬ್ ಮತ್ತು ಅಬ್ದುಲ್ ಗಫಾರ್ ಹುತಾತ್ಮರಾದ ಘಟನೆ ಪ್ರೇಕ್ಷಕರಲ್ಲಿ ಇತಿಹಾಸದ ನೋವನ್ನು ಮತ್ತೆ ಜೀವಂತಗೊಳಿಸುತ್ತದೆ.

ಹಾವೇರಿಯ ಸಂಗೂರಿನ ಕರಿಯಪ್ಪ ನಡೆಸಿದ ಹೋರಾಟ ಹಾಗೂ ದಲಿತ ಹುಡುಗಿಯೊಂದಿಗಿನ ಅಂತರ್ಜಾತಿ ವಿವಾಹದ ಪ್ರಸಂಗ ನಾಟಕದ ಅತ್ಯಂತ ಸ್ಪರ್ಶಕ ಕ್ಷಣಗಳಲ್ಲಿ ಒಂದಾಗಿದೆ. ಜಾತಿ ವ್ಯವಸ್ಥೆಯ ಕಟ್ಟಳೆಗಳನ್ನು ಮೀರಿ ಮಾಡಿದ ಈ ವಿವಾಹದಿಂದ ಮೇಲ್ಜಾತಿಯವರಿಂದ ಎದುರಾದ ಅವಮಾನ, ಹಿಂಸೆ ಮತ್ತು ತ್ಯಾಗಗಳು ಸಮಾಜದ ಕ್ರೂರ ವಾಸ್ತವವನ್ನು ನೆನಪಿಸುತ್ತವೆ. ಕರಿಯಪ್ಪ, ಅವರ ಪತ್ನಿ ವೀರಮ್ಮ ಮತ್ತು ಅವರ ಎಳೆಯ ಕಂದಮ್ಮ ಸ್ವಾತಂತ್ರ್ಯ ಹೋರಾಟದ ನಡುವೆ ಪ್ರಾಣತ್ಯಾಗ ಮಾಡುವ ದೃಶ್ಯ ಪ್ರೇಕ್ಷಕರ ಮನಸ್ಸನ್ನು ಗಾಢವಾಗಿ ತಟ್ಟುತ್ತದೆ.

1924ರಲ್ಲಿ ಬೆಳಗಾವಿಯಲ್ಲಿ ನಡೆದ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿನ ಘಟನೆಯೂ ನಾಟಕದಲ್ಲಿ ಮನೋಜ್ಞವಾಗಿ ಮೂಡಿಬರುತ್ತದೆ. ಸಾವಿರಾರು ಜನರಿಗೆ ನೀರು ಒದಗಿಸಲು ಗಂಗಾಧರಾವ್ ದೇಶಪಾಂಡೆ ನೇತೃತ್ವದಲ್ಲಿ ಸ್ವಯಂಸೇವಕರು ಒಗ್ಗಟ್ಟಿನಿಂದ ತೋಡಿದ ಪಂಪಾ ಸರೋವರದ ದೃಶ್ಯ ಜನಸಾಮಾನ್ಯರ ಸಹಕಾರ ಮತ್ತು ಸ್ವಯಂಸೇವೆಯ ಮಹತ್ವವನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ.

ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂ ಸಮುದಾಯದ ಪಾತ್ರವನ್ನು ನೆನಪಿಸುವ ಪ್ರಯತ್ನವೂ ನಾಟಕದಲ್ಲಿ ಗಮನಾರ್ಹವಾಗಿದೆ. ಹಿಂದು–ಮುಸ್ಲಿಂರು ಅಣ್ಣತಮ್ಮಂದಿರಂತೆ ಬದುಕಿದ್ದ ಕಾಲವನ್ನು ನೆನಪಿಸುವ ಮೂಲಕ ಪುರೋಹಿತಷಾಹಿ ಮತ್ತು ರಾಜಕೀಯ ಸ್ವಾರ್ಥಗಳು ಹೇಗೆ ಸಮುದಾಯಗಳನ್ನು ವಿಭಜಿಸುತ್ತವೆ ಎಂಬುದನ್ನು ನಾಟಕ ಎಚ್ಚರಿಸುತ್ತದೆ. ಚುನಾವಣಾ ಸಮಯದಲ್ಲಿ ಉಂಟಾಗುವ ಕೋಮುಗಲಭೆಗಳ ಪ್ರಸ್ತಾಪದ ಮೂಲಕ ಸಮಾಜದಲ್ಲಿ ದ್ವೇಷದ ಬೀಜ ಬಿತ್ತುವ ವಿಭಜನಾ ರಾಜಕಾರಣವನ್ನೂ ಪ್ರಶ್ನಿಸುತ್ತದೆ.

ನಾಟಕದ ರಚನೆ ಕುಮಾರಲಾಲ್ ಸಾಬ್ ಮತ್ತು ಲಕ್ಷ್ಮಣ ಪೀರಗಾರ ಅವರಿಂದ ವಿಚಾರಪೂರ್ಣವಾಗಿ ರೂಪುಗೊಂಡಿದೆ. ರಾಘವ ಕಮ್ಮಾರ ಅವರ ಸಂಗೀತ ಸಂಯೋಜನೆ ದೃಶ್ಯಗಳ ಭಾವವನ್ನು ಇನ್ನಷ್ಟು ಗಾಢಗೊಳಿಸುತ್ತದೆ. ದಿ. ರಾಜು ತಾಳಿಕೋಟೆ ಅವರ ಪರಿಕಲ್ಪನಾ ಮಾರ್ಗದರ್ಶನ ನಾಟಕಕ್ಕೆ ದೃಢವಾದ ಕಲಾತ್ಮಕ ದಿಕ್ಕನ್ನು ನೀಡಿದೆ. ಯೋಗೇಶ ಬಗಲಿ ಅವರ ಬೆಳಕು ವಿನ್ಯಾಸ ಪ್ರದರ್ಶನಕ್ಕೆ ದೃಶ್ಯಾತ್ಮಕ ಮೆರಗು ನೀಡಿದೆ.

ವಿನೋದ್ ದಂಡಿನ್‌, ಸುನೀಲ್ ಲಗಳಿ, ಹನುಮಂತ ನಾಯ್ಕರ್‌, ಅಕ್ಕಮ್ಮ ದೇವರಮನಿ, ಇಂದು ಡಿ, ಕೀರ್ತಿ ಸಿಂದೋಗಿ, ದುಂಡೇಶ್ ಹಿರೇಮಠ, ಸಂತೋಷ ಕುರಿ, ರೋಹನ್ ದೇಸಾಯಿ ಮತ್ತು ರೇಖಾ ಹೊಂಗಲ ಅವರ ಅಭಿನಯಗಳು ಪಾತ್ರಗಳಿಗೆ ಜೀವ ತುಂಬುತ್ತವೆ. ಸಮೂಹ ಅಭಿನಯದ ಶಕ್ತಿಯೇ ನಾಟಕದ ಪ್ರಮುಖ ಆಕರ್ಷಣೆಯಾಗಿ ಕಾಣಿಸುತ್ತದೆ.

ಒಟ್ಟಿನಲ್ಲಿ, “ಮರಳಿ ಮಹಾತ್ಮನೆಡೆಗೆ” ನಾಟಕವು ಕೇವಲ ಗಾಂಧಿಯವರ ಜೀವನದ ಘಟನೆಗಳನ್ನು ನೆನಪಿಸುವ ರಂಗಪ್ರಯೋಗವಲ್ಲ; ಅವರ ಚಿಂತನೆಗಳು ಇಂದಿನ ಸಮಾಜದಲ್ಲಿ ಎಷ್ಟು ಅಗತ್ಯವಿವೆ ಎಂಬ ಪ್ರಶ್ನೆಯನ್ನು ಪ್ರೇಕ್ಷಕರ ಮುಂದೆ ಇಡುತ್ತದೆ. ಜಾತಿ, ಅಸ್ಪೃಶ್ಯತೆ, ಧರ್ಮದ ಹೆಸರಿನ ವಿಭಜನೆ ಮತ್ತು ರಾಜಕೀಯ ಸ್ವಾರ್ಥಗಳ ನಡುವೆ ಮಾನವೀಯತೆ ಮತ್ತು ಸಮಾನತೆ ಎಂಬ ಮೌಲ್ಯಗಳು ಇನ್ನಷ್ಟು ಪ್ರಸ್ತುತವಾಗಿವೆ ಎಂಬುದನ್ನು ಈ ನಾಟಕ ನೆನಪಿಸುತ್ತದೆ. ಪ್ರೇಕ್ಷಕರಲ್ಲಿ ಆತ್ಮಪರಿಶೀಲನೆ ಮೂಡಿಸಿ ಸಮಾಜದ ದಿಕ್ಕನ್ನು ಮರುಚಿಂತನೆ ಮಾಡಲು ಪ್ರೇರೇಪಿಸುವ ನಾಟಕವಾಗಿ “ಮರಳಿ ಮಹಾತ್ಮನೆಡೆಗೆ” ಗಮನಾರ್ಹವಾಗುತ್ತದೆ.

ಇದನ್ನೂ ನೋಡಿ: ಸಾಹಿತ್ಯ ಓದಿಗೆ ವಿಮರ್ಶಾತ್ಮಕ ದೃಷ್ಟಿ ಅಗತ್ಯ – ಬಂಜಗೆರೆ ಜಯಪ್ರಕಾಶ Janashakthi Media

Donate Janashakthi Media

Leave a Reply

Your email address will not be published. Required fields are marked *