ಎಲ್‌ಪಿಜಿ ಸಿಲಿಂಡರ್‌ಗಳ ಸರಬರಾಜು ಸ್ಥಗಿತ; ಮಾ. 10ರಿಂದ ಹೋಟೆಲ್‌ಗಳ ಬಂದ್ ಸಾಧ್ಯತೆ

ಬೆಂಗಳೂರು: ನಗರ ಸೇರಿದಂತೆ ರಾಜ್ಯದ ಹಲವೆಡೆ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ಸರಬರಾಜು ಸ್ಥಗಿತವಾಗಿರುವ ಕಾರಣ ಕೆಲ ಹೋಟೆಲ್‌ಗಳನ್ನು ಮಾರ್ಚ 10ರಿಂದ ಬಂದ್ ಆಗುವ ಸಾಧ್ಯತೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಹೋಟೆಲ್‌ಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಹಾಗೂ ರಾಜ್ಯ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಜಿ.ಕೆ. ಶೆಟ್ಟಿ ಹೇಳಿದರು.

‘ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ಅಡುಗೆ ಅನಿಲ ಸಿಲಿಂಡರ್‌ಗಳ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಕೇಂದ್ರ ಸರ್ಕಾರ ಈಚೆಗೆ ಸಿಲಿಂಡರ್‌ ದರ ಹೆಚ್ಚಳ ಮಾಡಿದೆ. ಈಗ ದಿಢೀರನೇ ಸರಬರಾಜು ಮಾಡುವುದನ್ನೇ ನಿಲ್ಲಿಸಿರುವುದರಿಂದ ಹೋಟೆಲ್‌ಗಳನ್ನು ನಡೆಸುವುದೇ ಕಷ್ಟವಾಗಿದೆ. ಹೀಗಾಗಿ ಬಂದ್‌ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.

‘ಹೋಟೆಲ್‌ಗಳಲ್ಲಿ ಸದ್ಯ ಇರುವ ಅಡುಗೆ ಅನಿಲ ಬಳಸಿಕೊಂಡು ಸಾರ್ವಜನಿಕರಿಗೆ ತಿಂಡಿ–ತಿನಿಸುಗಳನ್ನು ಪೂರೈಕೆ ಮಾಡಲಾಗುವುದು. ಅಡುಗೆ ಅನಿಲ ಸಿಲಿಂಡರ್‌ ಮುಗಿದ ನಂತರ ಹೋಟೆಲ್‌ಗಳನ್ನು ಬಂದ್‌ ಮಾಡಲಾಗುವುದು. ಹೋಟೆಲ್‌ ಉದ್ಯಮ ಅಗತ್ಯ ಸೇವೆಯ ಅಡಿಯಲ್ಲಿ ಬರುವುದರಿಂದ ಇದನ್ನೇ ಅವಲಂಬಿಸಿರುವ ಜನಸಾಮಾನ್ಯರು, ಹಿರಿಯ ನಾಗರಿಕರು ವಿದ್ಯಾರ್ಥಿಗಳು, ವೈದ್ಯಕೀಯ ಹಾಗೂ ಇನ್ನಿತರ ಸೇವೆಯಲ್ಲಿರುವ ಹೆಚ್ಚಿನ ಜನರಿಗೆ ತಮ್ಮ ದಿನನಿತ್ಯದ ತಿಂಡಿ-ತಿನಿಸುಗಳಿಗೆ ತೊಂದರೆಯಾಗಲಿದೆ’ ಎಂದು ಅವರು ವಿವರಿಸಿದರು.

‘ಸಿಲಿಂಡರ್‌ಗಳ ಸರಬರಾಜು ಸಹಜ ಸ್ಥಿತಿಗೆ ಬರುವವರೆಗೆ ಹೋಟೆಲ್‌ ಉದ್ಯಮ ಸಂಕಷ್ಟ ಎದುರಿಸಲಿದೆ. 70 ದಿನಗಳವರೆಗೆ ಅಡುಗೆ ಅನಿಲ ಸಿಲಿಂಡರ್‌ಗಳ ಸರಬರಾಜಿನಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲವೆಂದು ಕೇಂದ್ರ ಸರ್ಕಾರ ತಿಳಿಸಿತ್ತು. ಈಗ ಏಕಾಏಕಿ ನಿಲ್ಲಿಸಿರುವುದರಿಂದ ಹೊಟೇಲ್‌ ಉದ್ಯಮಕ್ಕೆ ದೊಡ್ಡ ಹೊಡೆತವಾಗಿದೆ. ಅಡುಗೆ ಅನಿಲ ಸಿಲಿಂಡರ್‌ಗಳ ಸರಬರಾಜು ಮತ್ತೆ ಪ್ರಾರಂಭಿಸುವಂತೆ ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಅವರು ಹೇಳಿದರು.

ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಸುಬ್ರಮಣ್ಯ ಹೊಳ್ಳ ಎಸ್., ಕಾರ್ಯದರ್ಶಿ ವೀರೇಂದ್ರ ಎನ್. ಕಾಮತ್‌, ನಿಸರ್ಗ ಹೋಟೆಲ್ ಮಾಲೀಕ ಎಸ್.ಪಿ. ಕೃಷ್ಣರಾಜು ಸುದ್ದಿಗೋಷ್ಠಿಯಲ್ಲಿದ್ದರು.

ಇದನ್ನೂ ನೋಡಿ: “ಆ್ಯಸಿಡ್ ದಾಳಿ ಮೆಟ್ಟಿ ನಿಂತ ಶಾನುವಿನ ಜಯಗಾಥೆ” Janashakthi Media

Donate Janashakthi Media

Leave a Reply

Your email address will not be published. Required fields are marked *