ಬೆಂಗಳೂರು: ರಾಜ್ಯದ ಜನರಲ್ಲಿ ಹೊಸ ಆತಂಕ ಸೃಷ್ಟಿಸಿದೆ ಕರ್ನಾಟಕದಲ್ಲಿ ಬೆಳೆಯುವ ತರಕಾರಿಗಳಲ್ಲಿ ಅಧಿಕ ಸೀಸ ಹಾಗೂ ಕೀಟನಾಶಕಗಳ ಅಂಶ ಪತ್ತೆಯಾಗಿದ್ದು. ತಿನ್ನುವ ತರಕಾರಿ-ಹಣ್ಣುಗಳು ವಿಷಯುಕ್ತವಾದರೆ ಆರೋಗ್ಯದ ಗತಿಯೇನು? ಎಂಬ ಪ್ರಶ್ನೆ ಮೂಡಿಸಿದೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ, ಸಿಪಿಸಿಬಿ ಗೆ ಸ್ಥಳ ಪರಿಶೀಲನೆ ನಡೆಸುವಂತೆ ಸೂಚಿಸಿತ್ತು. ಈಗ ಮತ್ತೊಮ್ಮೆ ಮಾಡಿದ ಅಧ್ಯಯನದಿಂದಲೂ ರಾಜ್ಯದ ವಿವಿಧ ಭಾಗದ ತರಕಾರಿಗಳಲ್ಲಿ ಸೀಸದ ಪ್ರಮಾಣ ಹೆಚ್ಚಿರುವುದು ಬೆಳಕಿಗೆ ಬಂದಿದೆ. ಈ ಹಿಂದೆ ಎರಡು ವರ್ಷಗಳ ಹಿಂದೆಯೂ ತರಕಾರಿಗಳಲ್ಲಿ ಭಾರಿ ಪ್ರಮಾಣದಲ್ಲಿ ಲೋಹದ ಅಂಶ ಪತ್ತೆಯಾಗಿತ್ತು. 2023ರ ಅಕ್ಟೋಬರ್ 25ರಂದು ಇಎಂಪ್ರಿ ಸಂಸ್ಥೆ 400 ಮಾದರಿಗಳ ಪರಿಶೀಲನೆ ಆಧಾರವಾಗಿ ಸೀಸ ಸೇರಿದಂತೆ ಭಾರಿ ಲೋಹಗಳು ಇವೆ ಎಂದು ತಿಳಿಸಿತ್ತು.
ಇದನ್ನೂ ಓದಿ : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಬೆಂಗಳೂರು – ಕರಾವಳಿ ಸೇರಿ 12 ಜಿಲ್ಲೆಗಳಲ್ಲಿ ಮಳೆ ಸಾದ್ಯತೆ
ಎಫ್ಎಸ್ಎಸ್ಎಐ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಬೇಕು ಎಂದು ಹೇಳಿದ ಸಿಪಿಸಿಬಿ, ಐದು ಸದಸ್ಯರ ಸಮಿತಿಯನ್ನು ರಚಿಸಿ 72 ತರಕಾರಿ ಮಾದರಿಗಳನ್ನು ಸಂಗ್ರಹಿಸಿತ್ತು. ಇದರಲ್ಲಿ ನೆಲಮಂಗಲ, ರಾಜಾಜಿನಗರ, ಕೋಲಾರ ಮಾರುಕಟ್ಟೆಗಳಿಂದ 53 ಮಾದರಿಗಳು ಹಾಗೂ ನೆಲಮಂಗಲ, ಕೋಲಾರ, ಚಿಕ್ಕಬಳ್ಳಾಪುರ ಕೃಷಿ ಕ್ಷೇತ್ರಗಳಿಂದ ಉಳಿದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು, ಸೀಸ ಹಾಗೂ ಕೀಟನಾಶಕಗಳ ಅಂಶ ಪತ್ತೆಯಾಗಿದೆ.
72 ತರಕಾರಿ ಮಾದರಿಗಳಲ್ಲಿ 19 ಮಾದರಿಗಳು ಮಾನದಂಡಕ್ಕಿಂತ ಹೆಚ್ಚಾದ ಸೀಸದ ಅಂಶ ಹೊಂದಿರುವುದು ಪ್ರಯೋಗಾಲಯದ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಆರ್ಗ್ಯಾನಿಕ್ ಎಂದು ಮಾರಾಟವಾಗಿದ್ದ ಬದನೆಕಾಯಿಯಲ್ಲಿ 1.953 ಮಿ.ಗ್ರಾಂ/ಕೆಜಿ ಸೀಸ ಪತ್ತೆಯಾಗಿದ್ದು, ಇದು ನಿಗದಿತ 0.1 ಮಿ.ಗ್ರಾಂ ಮಿತಿಗಿಂತ ಸುಮಾರು 20 ಪಟ್ಟು ಹೆಚ್ಚಾಗಿದೆ. ತೊಂಡೆಕಾಯಿ, ಅವರೆಕಾಯಿ, ಸೊಪ್ಪು, ಕೋಸು ಸೇರಿದಂತೆ ಹಲವು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದ ಸೀಸ ಕಂಡುಬಂದಿದೆ.
ಪರಿಶೀಲನೆ ವೇಳೆ ಎಫ್ಎಸ್ಎಸ್ಆರ್ ಮಾನದಂಡಕ್ಕಿಂತ ಹೆಚ್ಚು ಪ್ರಮಾಣದ 12 ವಿಧದ ಕೀಟನಾಶಕ ಅವಶೇಷಗಳು ಪತ್ತೆಯಾಗಿವೆ. ಕ್ಯಾಪ್ಸಿಕಂ, ಮೆಣಸಿನಕಾಯಿ (ಬಜ್ಜಿ ಮೆಣಸು), ಶುಂಠಿ ಹಾಗೂ ಸೌತೆಕಾಯಿ ಮಾದರಿಗಳಲ್ಲಿ ಅತಿಯಾದ ಕೀಟನಾಶಕ ಅಂಶ ಕಂಡುಬಂದಿದೆ.
ಸೌತೆಕಾಯಿ, ಹೀರೇಕಾಯಿ, ಕ್ಯಾಪ್ಸಿಕಂ, ಬೀಟ್ರೂಟ್, ಹಾಗಲಕಾಯಿ, ಶಲಗಂ, ಸ್ಕ್ವಾಶ್ ಮತ್ತು ಮೆಣಸಿನಕಾಯಿ ಮಾದರಿಗಳಲ್ಲೂ ಅತಿಯಾದ ಸೀಸದ ಅಂಶ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಇನ್ನು ಕೋಲಾರ, ಚಿಕ್ಕಬಳ್ಳಾಪುರ ಮತ್ತು ನೆಲಮಂಗಲ ಪ್ರದೇಶಗಳಿಂದ ಸಂಗ್ರಹಿಸಿದ 26 ಮಣ್ಣಿನ ಮಾದರಿಗಳಲ್ಲಿ 23 ಮಾದರಿಗಳು ದೋಷಪೂರಿತವಾಗಿವೆ. ಇದು ಪ್ರಾಥಮಿಕ ವರದಿ ಮಾತ್ರವಾಗಿದ್ದು, ಮುಂದಿನ ದಿನಗಳಲ್ಲಿ ಸಮಗ್ರ ಅಧ್ಯಯನ ನಡೆಸುವಂತೆ ಸೂಚಿಸಲಾಗಿದೆ.
ಇನ್ನೊಂದು ಆಘಾತಕಾರಿ ಅಂಶವೆಂದರೆ ಭಾರತದಲ್ಲಿ 2023ರಲ್ಲಿ ನಿಷೇಧಿಸಲಾಗಿದ್ದ ಭಾರೀ ವಿಷಕಾರಿ ಕೀಟನಾಶಕವಾದ ಮೊನೋಕ್ರೋಟೊಫೋಸ್ ಕೂಡ ಪತ್ತೆಯಾಗಿದೆ. ಮೆಣಸಿನಕಾಯಿ ಮಾದರಿಗಳಲ್ಲಿ ನಿಗದಿತ 0.2 ಮಿ.ಗ್ರಾಂ/ಕೆಜಿ ಮಿತಿಗಿಂತ ಎರಡು ಪಟ್ಟು ಹೆಚ್ಚು ಮೊನೋಕ್ರೋಟೊಫೋಸ್ ಪತ್ತೆಯಾಗಿದೆ.
ಅಲ್ಲದೇ ಏಸಿಫೇಟ್, ಇಥಿಯಾನ್, ಫಿಪ್ರೋನಿಲ್ ಹಾಗೂ ಪ್ರೊಫೆನೋಫೋಸ್ ಮುಂತಾದ ಕೀಟನಾಶಕಗಳು ಸಹ ಪತ್ತೆಯಾಗಿದ್ದು, ಅವುಗಳ ವಿಷಕಾರಿ ಪರಿಣಾಮದ ಹಿನ್ನೆಲೆಯಲ್ಲಿ ಯುರೋಪಿಯನ್ ಯೂನಿಯನ್ನಲ್ಲಿ ಈಗಾಗಲೇ ನಿಷೇಧಿಸಲಾಗಿದೆ ಆದರೆ ಇವುಗಳು ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ಬಳಕೆಯಲ್ಲಿರುವುದು ತರಕಾರಿ ತಿನ್ನಲು ಯೋಚಿಸಬೇಕಾದ ಸ್ಥಿತಿ ಎದುರಾಗಿದೆ
