ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ. 20ರಂದು ಸಾರಿಗೆ ನೌಕರರ ಮುಷ್ಕರ

ಬೆಂಗಳೂರು: ಕೆಎಸ್‌‍ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ವೇತನ ಹಿಂಬಾಕಿ ಮತ್ತು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆಬ್ರವರಿ 20ರಂದು ರಾಜ್ಯಾದ್ಯಾಂತ ಮುಷ್ಕರ ನಡೆಸಲು ಮುಂದಾಗಿದ್ದಾರೆ.
ಸಾರಿಗೆ ನೌಕರರ ಮುಖಂಡ ಅನಂತ್‌ ಸುಬ್ಬರಾವ್‌ ನಿಧನದ ಹಿನ್ನೆಲೆ ಕಳೆದ ಬಾರಿ ಬೆಂಗಳೂರು ಚಲೋ ಮುಂದೂಡಿಕೆ ಮಾಡಲಾಗಿತ್ತು. ಆದರೆ ಈ ಬಾರಿ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ದೃಢ ನಿರ್ಧಾರ ಮಾಡಿದ್ದು, ಭಾರೀ ಪ್ರತಿಭಟನೆಗೆ ಮುಂದಾಗಿದೆ.

38 ತಿಂಗಳ ಹಿಂಬಾಕಿ ಹಣ, 2024ರ ಜನವರಿ 1ಕ್ಕೆ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಯನ್ನು ಮುಂದಿಟ್ಟುಕೊಂಡು ಸಾರಿಗೆ ಇಲಾಖೆಯೇ ನೌಕರರು ಮತ್ತೆ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಫೆಬ್ರವರಿ 20ರಿಂದ ಕೆಎಸ್‌‍ಆರ್‌ಟಿಸಿಯ 4 ನಿಗಮದ ನೌಕರರು ಪ್ರತಿಭಟನೆಗೆ ಇಳಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಸರ್ಕಾರ ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಪ್ರತಿಭಟನೆ: ಕೆಎಸ್‌ಸಿಎ ಎಚ್ಚರಿಕೆ

ವೇತನ ಪರಿಷ್ಕರಣೆ ಹಾಗೂ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಬೆಂಗಳೂರು ಚಲೋಗೆ ಕರೆ ನೀಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಬರುವ ಸಾವಿರಾರು ಸಾರಿಗೆ ನೌಕರರು ಫ್ರೀಡಂಪಾರ್ಕ್‌ನಲ್ಲಿ ಜಮಾಯಿಸಲಿದ್ದಾರೆ.

ಬಸ್‌‍ ಸಂಚಾರ ಸ್ಥಗಿತಗೊಳ್ಳುವ ಬಗ್ಗೆ ಯಾವುದೇ ಆದೇಶ ಹೊರ ಬಂದಿಲ್ಲ. ಹೀಗಾಗಿ ಬಸ್‌‍ಗಳ ಓಡಾಟ ಎಂದಿನಂತೆ ಇರಲಿದೆ. ಆದರೆ, ನೌಕರರು ಕೆಲಸ ಹಾಜರಾಗದಿದ್ದರೆ, ಬಸ್‌‍ಗಳ ಓಡಾಟದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಈ ಹಿಂದೆ ರಾಜ್ಯ ಸರ್ಕಾರದೊಂದಿಗೆ ಸಾರಿಗೆ ನೌಕರರು ಈಗಾಗಲೇ ಕೆಲವು ಬಾರಿ ಮಾತುಕತೆ ನಡೆಸಲಾಗಿತ್ತು. ಆದರೆ ಸರ್ಕಾರ ಭರವಸೆ ನೀಡಿತೇ ವಿನಃ ಬೇಡಿಕೆ ಈಡೇರಿಕೆಗೆ ಮುಂದಾಗಿಲ್ಲ. 2024 ಜನವರಿ 1ರಿಂದ ಜಾರಿಗೆ ಬರಬೇಕಿದ್ದ ವೇತನ ಪರಿಷ್ಕರಣೆ ಜಾರಿಗೆ ಬಂದಿಲ್ಲ. ವೇತನ ಹೆಚ್ಚಳ ಹಿಂಬಾಕಿ ಇದುವರೆಗೂ ನೌಕರರ ಕೈ ಸೇರಿಲ್ಲ. ಹೀಗಾಗಿ ನಾಲ್ಕು ಸಾರಿಗೆ ನಿಗಮಗಳ ನೌಕರರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಸ್ಪಂದಿಸದ ಸರ್ಕಾರ:

2025ರ ಆಗಸ್ಟ್‌ ತಿಂಗಳಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದರು. ಆದರೆ ಸರ್ಕಾರ ನೀಡಿದ ಭರವಸೆ, ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶದ ಮೇರೆಗೆ ಅಂದಿನ ಮುಷ್ಕರ ಮುಂದೂಡಿಕೆ ಆಗಿತ್ತು. ಕಳೆದ ದೀಪಾವಳಿ ಹಬ್ಬದ ಹೊತ್ತಿಗೆ ಮತ್ತೆ ಮುಷ್ಕರಕ್ಕೆ ನೌಕರರು ಸಜ್ಜಾಗಿದ್ದರು. ಅಂದು ವ್ಯವಸ್ಥಾಪಕ ನಿರ್ದೇಶಕರು ಮೌಖಿಕ ಭರವಸೆ ನೀಡಿದ್ದರು. ಚರ್ಚೆಗೆ 15 ದಿನಗಳ ಕಾಲಾವಕಾಶ ಕೋರಿದ್ದರು.

ಈ ಹಿನ್ನೆಲೆ 38 ತಿಂಗಳ ಹಿಂಬಾಕಿ ಸಿಗುವುದೆಂಬ ಆಶಾಭಾವನೆಯಿಂದ ಮುಷ್ಕರವನ್ನು ಮತ್ತೆ ಕೈ ಬಿಡಲಾಗಿತ್ತು. ಆದರೆ ಸರ್ಕಾರ ಭರವಸೆ ನೀಡಿತೇ ವಿನಃ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡಿರುವ ಸಾರಿಗೆ ನೌಕರರು ಇದೀಗ ಮತ್ತೆ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.

ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿರುವ ಸರ್ಕಾರದ ಶಕ್ತಿ ಯೋಜನೆಗೆ ಖರ್ಚಾಗುವ ಸಾವಿರಾರು ಕೋಟಿ ರೂಪಾಯಿಯನ್ನು ಸರ್ಕಾರವೇ ಭರಿಸುತ್ತದೆ. ಈ ಯೋಜನೆಯ ಸಾಕಾರಕ್ಕೆ ಎಲ್ಲ ಸಾರಿಗೆ ನೌಕರರು ಶ್ರಮಿಸಿದ್ದಾರೆ. ನಾಲ್ಕು ನಿಗಮಗಳ ಒಟ್ಟು ಸಾಲದ ಹೊರೆ 7000 ಕೋಟಿ ರೂಪಾಯಿಗೂ ಹೆಚ್ಚಿದೆ. ಇದರಲ್ಲಿ ಭವಿಷ್ಯ ನಿಧಿ ಹಾಗೂ ನಿವೃತ್ತ ನೌಕರರ ಸವಲತ್ತುಗಳ ಬಾಕಿಯೂ ಇದೆ. ನಿಗಮಗಳಿಗೆ ಶಕ್ತಿ ತುಂಬಿದ ನೌಕರರಿಗೆ ಶಕ್ತಿಯೇ ಇಲ್ಲದಂತಾಗಿದೆ. ಸಾರಿಗೆ ಇಲಾಖೆ ಲಾಭದಲ್ಲಿದೆ ಎಂದು ಸಚಿವರು, ಸರ್ಕಾರದ ಪ್ರಮುಖ ಹೇಳುತ್ತಾರೆ. ಲಾಭದಲ್ಲಿದ್ದರೆ ನೌಕರರಿಗೆ ಹಂತ ಹಂತವಾಗಿ ಬಾಕಿ ನೀಡಬಹುದಿತ್ತು ಎಂದು ನೌಕರರು ತಮ ಅಳಲನ್ನು ಹೊರಹಾಕಿದ್ದಾರೆ.

ಸಾರಿಗೆ ನೌಕರರಿಗೂ ಮನೆ, ಮಕ್ಕಳು ಕುಟುಂಬ ಇದೆ. ತಿಂಗಳುಗಟ್ಟಲೇ ವೇತನ ಹೆಚ್ಚಳ ಬಾಕಿ ಉಳಿಸಿಕೊಂಡರೇ ಹೇಗೆ ಎಂದು ಕೆಲವರು ನೌಕರರ ಪರ ಮಾತನಾಡಿದ್ದಾರೆ. ಇನ್ನು ಕೆಲವರು ಸರ್ಕಾರ ಸುಸೂತ್ರವಾಗಿ ಆಡಳಿತ ನಡೆಸಬೇಕು. ಮುಷ್ಕರಕ್ಕೆ ಅವಕಾಶ ನೀಡಬಾರದು. ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲವಾದರೆ ರಾಜ್ಯದ ಜನರಿಗೆ ತೊಂದರೆ ಆಗುತ್ತದೆ. ನಿತ್ಯ ವ್ಯಾಪಾರ ವಹೀವಾಟಿನ ಮೇಲೆ ಮುಷ್ಕರ ಪರಿಣಾಮ ಬೀರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ, ಜನರ ಸಂಚಾರಕ್ಕೆ, ಉದ್ಯೋಗಿಗಳಿಗೆ ತೊಂದರೆ ಆಗುತ್ತದೆ. ಸರ್ಕಾರ ಎಚ್ಚೆತ್ತು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ನೌಕರರು ಒತ್ತಾಯಿಸಿದ್ದಾರೆ.

ಸರ್ಕಾರದ ಎದುರು ಸಾರಿಗೆ ನೌಕರರು ಎರಡು ಬೇಡಿಕೆ ಇಟ್ಟಿದ್ದಾರೆ. ಈ ಪೈಕಿ 2020ರ ಜನವರಿ 1ರಿಂದ 2023ರ ಫೆಬ್ರವರಿ 28ರವರೆಗಿನ 38 ತಿಂಗಳ ವೇತನ ಪರಿಷ್ಕರಣೆಯ ಹಿಂಭಾಕಿ ನೀಡಬೇಕು. 2024ರಿಂದ ನಾಲ್ಕು ವರ್ಷಗಳ ವೇತನ ಒಪ್ಪಂದಕ್ಕೆ ಆಗ್ರಹಿಸಲಾಗುತ್ತಿದೆ.

ಇನ್ನೂ ಸಾರಿಗೆ ಸಂಘಟನೆಗಳ ಮತ್ತೊಂದು ಸಂಘಟನೆಯಾದ ಕೆಎಸ್‌‍ ಆರ್‌ ಟಿಸಿ ನೌಕರರ ಕೂಟವೂ ಸಹ ಪ್ರತಿಭಟನೆಗೆ ಮುಂದಾಗಿದ್ದು, ಶಿವರಾತ್ರಿ ನಂತರ ಫೆಬ್ರವರಿ 15ರಿಂದ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದೆ.

ಸಾರಿಗೆ ನೌಕರರು ಯಾವುದೇ ಮುಷ್ಕರ ಹೂಡುವಂತಿಲ್ಲ. ಮುಷ್ಕರಕ್ಕೆ ಬೆಂಬಲವನ್ನು ಸೂಚಿಸುವಂತಿಲ್ಲ. ಕರ್ತವ್ಯಕ್ಕೆ ಗೈರು ಹಾಜರಾದರೆ, ೆ ನೋ ವರ್ಕ್‌ ನೋ ಪೇ ಎಂದು ಕೆಎಸ್‌‍ಆರ್‌ಟಿಸಿ ಎಂ.ಡಿ ಅಕ್ರಂ ಪಾಷ ಅವರು ಕಳೆದ ಬಾರಿ ಆದೇಶ ಹೊರಡಿಸಿದ್ದನ್ನು ಸರಿಸಬಹದು.

ನೌಕರರ ಬೇಡಿಕೆಗಳು:

1. 38 ತಿಂಗಳ ವೇತನ ಬಾಕಿ ಹಣ ನೀಡಬೇಕು.

2. ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನ ವೇತನ

3. ಕಾರ್ಮಿಕರ ಕಿರುಕುಳ ನಿಲ್ಲಬೇಕು

4. 1-1-2024 ರಿಂದ ವೇತನ ಜಾರಿಗೊಳಿಸುವುದು

ಇದನ್ನೂ ನೋಡಿ: “ಮ್ಯಾಗ್ನೆಟ್ ಯೋಜನೆಗೆ ವಿರೋಧ – ಆಂದೋಲನವಾಗುತ್ತಿರುವ ಸರ್ಕಾರಿ ಶಾಲೆ ಉಳಿಸಿ ಹೋರಾಟ” Janashakthi Media

Donate Janashakthi Media

Leave a Reply

Your email address will not be published. Required fields are marked *