ಮತ್ತೊಮ್ಮೆ  ವಿದ್ಯುತ್ ತಿದ್ದುಪಡಿ ಮಸೂದೆಯನ್ನು ತರುವ ಕಸರತ್ತು ಸಾರ್ವಜನಿಕ ವಿದ್ಯುತ್ ವಲಯ ಮತ್ತು ವಿದ್ಯುಚ್ಛಕ್ತಿ ಹಕ್ಕನ್ನು ರಕ್ಷಿಸಲು ಸಿಐಟಿಯು ಕರೆ

ನವದೆಹಲಿ : ಮೋದಿ ಸರಕಾರ ಮತ್ತೊಂದು ವಿದ್ಯುತ್ (ತಿದ್ದುಪಡಿ)ಮಸೂದೆಯ ಕರಡನ್ನು, 2025 ರ ಕರಡನ್ನು ಬಿಡುಗಡೆ ಮಾಡಿದೆ.  2014 ರಿಂದ ತಿದ್ದುಪಡಿ ಮಸೂದೆಯ ವಿವಿಧ ಆವೃತ್ತಿಗಳನ್ನು ಜಾರಿಗೆ ತರುವಲ್ಲಿ ಪದೇ ಪದೇ ವಿಫಲವಾದರೂ, ಅದು ಮತ್ತೆ ಅದೇ ಕುಖ್ಯಾತಿಯ ಕಸರತ್ತನ್ನು ಸುಧಾರಣೆಗಳ ಹೆಸರಿನಲ್ಲಿ ಮುಂದೊತ್ತಲು ಪ್ರಯತ್ನಿಸುತ್ತಿದೆ ಎಂದು ಈ ಹೊಸ 2025ರ ಕರಡನ್ನು  ವಿರೋಧಿಸುತ್ತ ಸಿಐಟಿಯು ಹೇಳಿದೆ. ವಿದ್ಯುತ್

ಮಸೂದೆಯ 2025 ರ ಈ ಆವೃತ್ತಿಯು, ಹಿಂದಿನ ಕರಡುಗಳಿಗಿಂತ ಹೆಚ್ಚು ಆಕ್ರಮಣಕಾರಿಯಾಗಿದೆ. ಇದು ಭಾರತದ ವಿದ್ಯುತ್ ವಲಯವನ್ನು ಖಾಸಗೀಕರಿಸುವ, ವಾಣಿಜ್ಯೀಕರಿಸುವ ಮತ್ತು ಕೇಂದ್ರೀಕರಿಸುವ ಗುರಿಯನ್ನು ಹೊಂದಿದೆ. ಇದು ಸಾರ್ವಜನಿಕ ಉಪಯೋಗದ ಏರ್ಪಾಟು(ಯುಟಿಲಿಟಿ)ಗಳು, ಗ್ರಾಹಕ ಹಕ್ಕುಗಳು, ಒಕ್ಕೂಟ ತತ್ವ ಮತ್ತು ಲಕ್ಷಾಂತರ ವಿದ್ಯುತ್ ಕಾರ್ಮಿಕರ ಜೀವನೋಪಾಯಕ್ಕೆ ಬೆದರಿಕೆ ಹಾಕುತ್ತದೆ. ಇದನ್ನು ಜಾರಿಗೆ ತಂದರೆ, ದಶಕಗಳಿಂದ ನಿರ್ಮಿಸಲಾದ ನಮ್ಮ ಸಮಗ್ರೀಕೃತ ಮತ್ತು ಸಾಮಾಜಿಕವಾಗಿ ಚಾಲಿತವಾಗಿರುವ ವಿದ್ಯುತ್ ಚೌಕಟ್ಟನ್ನು ಕಳಚಿ ಹಾಕುತ್ತದೆ, ಲಾಭದಾಯಕ ಬಾಬ್ತುಗಳನ್ನು ಖಾಸಗಿ ಕಾರ್ಪೊರೇಟ್‍ಗಳಿಗೆ ಹಸ್ತಾಂತರಿಸಿ, ಸಾಮಾಜಿಕ ಬಾಧ್ಯತೆಗಳನ್ನು ಮತ್ತು ನಷ್ಟಗಳನ್ನು ರಾಜ್ಯ ವಿದ್ಯುತ್‍ ವಿತರಣಾ ಸಂಸ್ಥೆಗಳ ಮೇಲೆ ಹೊರಿಸುತ್ತದೆ ಎಂದು ಸಿಐಟಿಯು ಹೇಳಿದೆ.

ಈ ಮಸೂದೆಯು ಒಂದೇ ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚು ವಿತರಣಾ ಲೈಸೆನ್ಸ್ ಗಳನ್ನು  ನೀಡಲು ಅವಕಾಶ ನೀಡುವ ಮೂಲಕ, ಸಾರ್ವಜನಿಕ-ನಿಧಿಯಿಂದ ನಡೆಸುವ ಜಾಲವನ್ನೇ ಬಳಸಿಕೊಂಡು ಖಾಸಗಿ ಕಂಪನಿಗಳು ತಮಗೆ ಬೇಕಾದಂತೆ ಹೆಚ್ಚಿನ ಆದಾಯ ಪಾವತಿ ಮಾಡುವ ಗ್ರಾಹಕರನ್ನು ಆರಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ ಮತ್ತು ಅತ್ತ ಸಾರ್ವಜನಿಕ ವಿತರಣಾ ಸಂಸ್ಥೆಗಳನ್ನು ಕಡಿಮೆ ಆದಾಯದ ಗ್ರಾಮೀಣ ಮತ್ತು ಮನೆಬಳಕೆಯ ಗ್ರಾಹಕರಿಗೆ ಮಾತ್ರ ಸೀಮಿತಗೊಳಿಸುತ್ತದೆ. ಇದು ಸಾರ್ವಜನಿಕ ಹಣಕಾಸುಗಳನ್ನು ದುರ್ಬಲಗೊಳಿಸುತ್ತದೆ, ಅಡ್ಡ-ಸಬ್ಸಿಡಿಗಳನ್ನು ನಾಶಪಡಿಸುತ್ತದೆ ಮತ್ತು ವಿದ್ಯುತ್‍ ದರಗಳನ್ನು ಹೆಚ್ಚಿಸುತ್ತದೆ. ಕೇಂದ್ರ ಸರಕಾರವು  ಉತ್ತೇಜಿಸುತ್ತಿರುವ ಸ್ಮಾರ್ಟ್ ಮೀಟರ್‍ ವ್ಯವಸ್ಥೆ, ಈ ಖಾಸಗೀಕರಣದ ಧಾವಂತದ ತಾಂತ್ರಿಕ ಸಾಧನವಾಗಿದೆ ಎಂದು ಸಿಐಟಿಯು ಹೇಳಿದೆ.

ಇದನ್ನೂ ಓದಿ :ಮಂಗಳೂರು | ಹಳೆ ಬಂದರು ಇಂದಿರಾ ಕ್ಯಾಂಟೀನ್ ಶೀಘ್ರ ಆರಂಭಕ್ಕೆ ಒತ್ತಾಯಿಸಿ ಡಿವೈಎಫ್ಐ ಪ್ರತಿಭಟನೆ 

ಐದು ವರ್ಷಗಳಲ್ಲಿ ಅಡ್ಡ-ಸಬ್ಸಿಡಿಗಳನ್ನು ತೆಗೆದುಹಾಕುವ ಪ್ರಸ್ತಾಪವು ಇದರಲ್ಲಿದ್ದು, ಇದು ಸಾರ್ವಜನಿಕ ಉಪಯೋಗದ ಏರ್ಪಾಟು(ಯುಟಿಲಿಟಿ)ಗಳಿಗೆ ಭಾರಿ ನಷ್ಟವನ್ನುಂಟು ಮಾಡುತ್ತದೆ ಮತ್ತು ವಿದ್ಯುತ್‍ ದರಗಳು ಬಡ ಮತ್ತು ಗ್ರಾಮೀಣ ಗ್ರಾಹಕರ ಕೈಗೆಟುಕದಂತೆ ಹೆಚ್ಚಿಸುತ್ತದೆ. ಅಡ್ಡ-ಸಬ್ಸಿಡಿ ಒಂದು ಸಾಮಾಜಿಕ ಅವಶ್ಯಕತೆಯಾಗಿದೆಯೇ ವಿನಃ ಅದಕ್ಷತೆಯಲ್ಲ. ಇದನ್ನು ತೆಗೆದುಹಾಕುವುದು ಅಸಮಾನತೆಯನ್ನು ಹೆಚ್ಚಿಸುತ್ತದೆ  ಮತ್ತು ರೈತರು ಹಾಗೂ  ಕಾರ್ಮಿಕರ ಸಂಕಷ್ಟಗಳನ್ನು ಹೆಚ್ಚಿಸುತ್ತದೆ.

ಸಟ್ಟಾಕೋರ ವಿದ್ಯುತ್ ಮಾರುಕಟ್ಟೆಗಳನ್ನು ಉತ್ತೇಜಿಸುವ ಮೂಲಕ, ಈ ಮಸೂದೆಯು ಮೂಲಭೂತ ಮಾನವ ಅಗತ್ಯವಾದ ವಿದ್ಯುಚ್ಛಕ್ತಿಯನ್ನು ವ್ಯಾಪಾರದ ಸರಕಾಗಿ ಪರಿವರ್ತಿಸುತ್ತದೆ. ಇಂತಹ ಅನಿಯಂತ್ರಣವು ಬೆಲೆಗಳಲ್ಲಿ  ಏರುಪೇರು, ವಿಶ್ವಾಸಾರ್ಹವಲ್ಲದ ಪೂರೈಕೆ ಮತ್ತು ಇಂಧನ ಭದ್ರತೆಯ ಮೇಲೆ ಸಾರ್ವಜನಿಕ ನಿಯಂತ್ರಣವನ್ನು ದುರ್ಬಲಗೊಳಿಸಲು ಕಾರಣವಾಗುತ್ತದೆ ಎಂದು ಸಿಐಟಿಯು ಆತಂಕ ವ್ಯಕ್ತಪಡಿಸಿದೆ.

ಈ 2025ರ ತಿದ್ದುಪಡಿ ಮಸೂದೆಯು ಕೇಂದ್ರ ಸರ್ಕಾರಕ್ಕೆ ರಾಜ್ಯಗಳ ವಿದ್ಯುತ್ ಧೋರಣೆಗಳ ಮೇಲೆ ವ್ಯಾಪಕ ಅಧಿಕಾರಗಳನ್ನು ಕೊಡುತ್ತದೆ- ರಾಜ್ಯ  ನಿಯಂತ್ರಣ ಆಯೋಗಗಳ ಮೇಲಿನ ಹತೋಟಿ ಮತ್ತು ನವೀಕರಿಸಬಹುದಾದ ವಿದ್ಯುತ್‍ ಗುರಿಗಳ ಮೇಲಿನ ಅಧಿಕಾರಗಳೂ ಇದರಲ್ಲಿ ಸೇರಿವೆ. ಇದು ಸಂವಿಧಾನದ ಒಕ್ಕೂಟ ಸ್ವರೂಪದ ಮೇಲೆ ನೇರ ದಾಳಿಯಾಗಿದ್ದು, ಈಗಾಗಲೇ  ಪಕ್ಷಪಾತ ಭರಿತ ಜಿಎಸ್‌ಟಿ ಮತ್ತು ನಿಧಿ ಹಂಚಿಕೆಯಿಂದಾಗಿ ಹಣಕಾಸಿನ ಒತ್ತಡವನ್ನು ಎದುರಿಸುತ್ತಿರುವ ಪ್ರತಿಪಕ್ಷಗಳ ಆಳ್ವಿಕೆಯ ರಾಜ್ಯಗಳನ್ನು ಬಹಳವಾಗಿ ತಟ್ಟುತ್ತದೆ.

ಖಾಸಗೀಕರಣ ಮತ್ತು ಬಹಿರಂಗ ಅವಕಾಶ ದೊಡ್ಡ ಪ್ರಮಾಣದ ಉದ್ಯೋಗ ನಷ್ಟ, ಗುತ್ತಿಗೆಕರಣ ಮತ್ತು ಹೊರಗುತ್ತಿಗೆಗೆ ಕಾರಣವಾಗುತ್ತದೆ. ಅಲ್ಲದೆ ರಕ್ಷಣಾ ವಲಯಗಳಲ್ಲಿ ಖಾಸಗಿ ಪರವಾನಗಿದಾರರಿಗೆ ಅವಕಾಶ ನೀಡುವ ಮೂಲಕ, ಮಸೂದೆಯು “ವ್ಯಾಪಾರದ ಸುಗಮತೆ’ಯ  ಹೆಸರಿನಲ್ಲಿ ರಾಷ್ಟ್ರೀಯ ಭದ್ರತೆಯನ್ನು ಕೂಡ ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಸಿಐಟಿಯು ಎಚ್ಚರಿಸಿದೆ.

ಈ ಮಸೂದೆಯು ಉತ್ಪಾದನೆಯಿಂದ ವಿತರಣೆಯ ವರೆಗಿನ ಸಂಪೂರ್ಣ ವಿದ್ಯುತ್ ಸರಬರಾಜು ಸರಪಳಿಯನ್ನು ಖಾಸಗಿ ಏಕಸ್ವಾಮ್ಯಗಳಿಗೆ ಹಸ್ತಾಂತರಿಸುವ ಒಟ್ಟಾರೆ ನವ ಉದಾರವಾದಿ ತಂತ್ರದ ಭಾಗವಾಗಿದೆ ಎಂದು ಪುನರುಚ್ಚರಿಸಿರುವ  ಸಿಐಟಿಯು, ಒಡಿಶಾ, ದಿಲ್ಲಿ ಮತ್ತು ಇತರ ರಾಜ್ಯಗಳ ಅನುಭವಗಳು ಖಾಸಗೀಕರಣವು ದರಗಳನ್ನು ಮಾತ್ರ ಹೆಚ್ಚಿಸುತ್ತವಷ್ಟೇ , ಆದರೆ ಸೇವೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಉದ್ಯೋಗ ನಷ್ಟಗಳಿಗೆ ಕಾರಣವಾಗುತ್ತದೆ ಎಂದು ಸಾಬೀತುಪಡಿಸಿವೆ ಎಂದು ಹೇಳಿದೆ.

ವಿದ್ಯುತ್ (ತಿದ್ದುಪಡಿ) ಮಸೂದೆ, 2025 ಅನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಮತ್ತು ವಿದ್ಯುತ್  ಒಂದು ಸರಕು ಅಲ್ಲ,  ಅದು ಸಾಮಾಜಿಕ ಹಕ್ಕು ಎಂಬ ಗ್ಯಾರಂಟಿ ಕೊಡಬೇಕು, ಉತ್ಪಾದನೆ ಮತ್ತು ವಿತರಣೆಯಲ್ಲಿ ಎಲ್ಲಾ ರೀತಿಯ ಖಾಸಗೀಕರಣ ಮತ್ತು ಫ್ರ್ಯಾಂಚೈಸಿಂಗನ್ನು ನಿಲ್ಲಿಸಬೇಕು, ಒಕ್ಕೂಟ ಅಧಿಕಾರಗಳನ್ನು ರಕ್ಷಿಸಬೇಕು ಮತ್ತು ರಾಜ್ಯ ಉಪಯೋಗದ ವ್ಯವಸ್ಥೆ(ಯುಟಿಲಿಟಿ)ಗಳನ್ನು ಬಲಪಡಿಸಬೇಕು ಎಂದು ಸರಕಾರವನ್ನು ಆಗ್ರಹಿಸಿರುವ  ಸಿಐಟಿಯು ಎಲ್ಲಾ ಕಾರ್ಮಿಕರು, ರೈತರು ಮತ್ತು ಜನರು ಇದಕ್ಕೆ ಪ್ರತಿರೋಧದಲ್ಲಿ ಒಟ್ಟುಗೂಡಬೇಕು ಎಂದು  ಕರೆ ನೀಡಿದೆ. ಈ ಜನವಿರೋಧಿ ಮಸೂದೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲು ನಾವು ದೇಶಾದ್ಯಂತ ಅಭಿಯಾನಗಳನ್ನು ಪ್ರಾರಂಭಿಸುತ್ತೇವೆ ಮತ್ತು ಇತರ ಕಾರ್ಮಿಕ ಸಂಘಗಳು ಮತ್ತು ಜನ ಚಳುವಳಿಗಳೊಂದಿಗೆ ಸಂಯೋಜಿತ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತೇವೆ ಎಂದು ಅದು ಹೇಳಿದೆ.

ಇದನ್ನೂ ನೋಡಿ : ಗುಜರಾತ್‌ | ವರ್ಚಸ್ಸಿನ ಭೀತಿ ಬಿಜೆಪಿ – ಸಚಿವ ಸಂಪುಟಕ್ಕೆ ಫುಲ್‌ ಸರ್ಜರಿ Janashakthi Media

Donate Janashakthi Media

Leave a Reply

Your email address will not be published. Required fields are marked *