ಬೆಂಗಳೂರು | ಎಸ್ಐಟಿ ತನಿಖೆ ಮುಂದುವರೆಸುವ ಸರ್ಕಾರದ ನಿರ್ಧಾರ ಮತ್ತು ಜನಚಳವಳಿಗಳು – ನವೀನ್ ಸೂರಿಂಜೆ

ಬೆಂಗಳೂರು : ‘ಇವರು ಬಾಯಿ ಬಿಟ್ಟೊಡನೆ ಅವರ ಬಾಯಿ ಕಟ್ಟಿತು’ – ಎಲ್ಲವೂ ಅವರಂದುಕೊಂಡಂತೆ ನಡೆದಿದ್ದರೆ, ಎಸ್ಐಟಿ ಸ್ಥಗಿತಕ್ಕೆ ತೀರ್ಮಾನ ಎಂದು ಸೆಪ್ಟೆಂಬರ್ 25 ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಘೋಷಿಸಬೇಕಿತ್ತು. ಆದರೆ ಸಂಪುಟ ಸಭೆಯಲ್ಲಿ ಅವರ ಬಾಯಿ ಕಟ್ಟಿತ್ತು. ಸಂಪುಟ ಸಭೆ ನಡೆಯುತ್ತಿದ್ದ ವಿಧಾನ ಸಭೆಯ ಅನತಿ ದೂರಲ್ಲಿರುವ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಎರಡುವರೆ ಸಾವಿರಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿ ಹೋರಾಟಗಾರರು, ಸಾಹಿತಿಗಳು, ಚಿಂತಕರು ಸೇರಿ ಧರ್ಮಸ್ಥಳ ದೌರ್ಜನ್ಯವನ್ನು ಖಂಡಿಸುತ್ತಿದ್ದರು. ಬೆಂಗಳೂರು

‘ಧರ್ಮಸ್ಥಳದ ವಿರುದ್ದದ ಆರೋಪ, ಹೋರಾಟಗಳೆಲ್ಲವೂ ಷಡ್ಯಂತ್ರ’ ಎಂದು ಬಿಂಬಿಸಿ ಇನ್ನೇನು ಎಸ್ಐಟಿಯನ್ನು ಮುಚ್ಚಿ ಬಿಡುತ್ತಾರೆಯೇ ? ಎಂಬ ಸಮಯದಲ್ಲೇ ನ್ಯಾಯ ಸಮಾವೇಶದ ನಡೆಯುತ್ತಿತ್ತು. ಸೆಪ್ಟೆಂಬರ್ 25 ರ ಸಚಿವ ಸಂಪುಟ ಸಭೆಯಲ್ಲಿ ‘ಎಸ್ಐಟಿ ಸ್ಥಗಿತ ತೀರ್ಮಾನ’ ತೆಗೆದುಕೊಳ್ಳಲಿದ್ದಾರೆ ಎಂದು ಹೆಚ್ಚಿನ ಟಿವಿ ಮಾಧ್ಯಮಗಳು ವಾರದಿಂದ ಸುದ್ದಿ ಕೂಡಾ ಪ್ರಸಾರ ಮಾಡಿದ್ದವು. ಬೆಂಗಳೂರು

ಇದನ್ನೂ ಓದಿ : ಧಾರವಾಡ| ವಿವಿಧ ಹುದ್ದೆಗಳ ನೇಮಕಾತಿಗೆ ಎಕೆಎಸ್ಎಸ್ಎ ಪ್ರತಿಭಟನೆ

ಸುಮಾರು ಹತ್ತು ದಿನಗಳ ಕಾಲ ನ್ಯಾಯ ಸಮಾವೇಶದ ಹೆಸರಿನಲ್ಲಿ ಧರ್ಮಸ್ಥಳ ಠಾಣೆಯಲ್ಲಿ‌ನ ಅಸಹಜ ಸಾವುಗಳು, ಭೂಕಬಳಿಕೆ, ದಲಿತ ದೌರ್ಜನ್ಯ, ಮೈಕ್ರೋ ಫೈನಾನ್ಸ್ ಬಡ್ಡಿ ದಂಧೆಯ ಬಗ್ಗೆ ಸೋಶಿಯಲ್ ಮಿಡಿಯಾ ಕ್ಯಾಂಪೇನ್ ಮಾಡಲಾಯಿತು. ಬಹುತೇಕ ಹಿರಿಯ – ಕಿರಿಯ ಸಾಹಿತಿಗಳು ಅವರ ಹೆಸರಿನಲ್ಲಿ ಪೋಸ್ಟರ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಸಮಾವೇಶದ ಹಿನ್ನಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಸಣ್ಣ ಸಣ್ಣ ಸಭೆಗಳು ನಡೆದವು. ಸಚಿವ ಸಂಪುಟ ಸಭೆಯ ದಿನವೇ ನ್ಯಾಯ ಸಮಾವೇಶ ನಡೆಯಿತು. ರಾಜ್ಯದ ಎಲ್ಲೆಡೆಯಿಂದ ಪ್ರಜ್ಞಾವಂತರು ಸಾಗರದಂತೆ ಹರಿದು ಬಂದರು. ಫ್ರೀಡಂ ಪಾರ್ಕ್ ನಲ್ಲಿ ನಡೆದ ನ್ಯಾಯ ಸಮಾವೇಶದಲ್ಲಿ ಸಾವಿರಾರು ಹೋರಾಟಗಾರರು, ಸಾಹಿತಿ, ಚಿಂತಕರು, ವಕೀಲರು ಸೇರಿದ್ದಾರೆ ಎಂದು ಗುಪ್ತಚರ ಇಲಾಖೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿತ್ತು. ಸಚಿವ ಸಂಪುಟ ಸಭೆಯಲ್ಲಿ “ಎಸ್‌ಐಟಿ ಮುಂದುವರೆಸಲು ತೀರ್ಮಾನ” ತೆಗೆದುಕೊಳ್ಳಲಾಯಿತು.

‘ಎಸ್‌ಐಟಿ ತನಿಖೆಯನ್ನು ನಿಲ್ಲಿಸಲಾಗುತ್ತದೆ’ ಎಂದು ಕೆಲವು ಸುದ್ದಿವಾಹಿನಿಗಳಲ್ಲಿ ವರದಿ ಪ್ರಸಾರವಾಗಿರುವ ಬಗ್ಗೆ ಸಂಪುಟದಲ್ಲಿ ಅನೌಪಚಾರಿಕವಾಗಿ ಚರ್ಚೆ ನಡೆಯಿತು. ಅಂತಹ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಈ ಹಂತದಲ್ಲಿ ಎಸ್‌ಐಟಿ ನಿಲ್ಲಿಸುವುದು ತಪ್ಪು ಸಂದೇಶಕ್ಕೆ ಕಾರಣವಾಗುತ್ತದೆ. ಸರ್ಕಾರದ ಮೇಲೆಯೂ ಅನುಮಾನಗಳಿಗೆ ಕಾರಣವಾಗುತ್ತದೆ ಎಂಬ ಅಭಿಪ್ರಾಯ ಸಂಪುಟ ಸಭೆಯಲ್ಲಿ ವ್ಯಕ್ತವಾಯಿತು.

ಎಂತದ್ದೇ ಅಪಪ್ರಚಾರ, ದುಷ್ಟರ ಒಗ್ಗೂಡುವಿಕೆಯ ಮಧ್ಯೆಯೂ ಸ್ವತಂತ್ರ ಮಾಧ್ಯಮಗಳು, ಹೋರಾಟಗಾರರು, ಚಿಂತಕರು, ಸಾಹಿತಿಗಳು ಒಟ್ಟಾದರೆ ಸರ್ಕಾರದ ಜನವಿರೋಧಿ ನಿಲುವಿಗೆ ತಾತ್ಕಾಲಿಕವಾಗಿಯಾದರೂ ಬ್ರೇಕ್ ಹಾಕಬಹುದು ಎಂಬುದಕ್ಕೆ ಸೆಪ್ಟೆಂಬರ್ 25 ರ ಸಚಿವ ಸಂಪುಟ ಸಭೆಯ ಔಟ್ ಪುಟ್ ಉದಾಹರಣೆಯಾಗಿದೆ‌.

ಇದನ್ನೂ ನೋಡಿ : ಧರ್ಮಸ್ಥಳ ಪ್ರಕರಣ | ಅಸಹಜ ಸಾವುಗಳಿಗೂ, ಭೂ ಕಬಳಿಕೆ, ಮೈಕ್ರೋಫೈನಾನ್ಸ್‌ಗೂ ಲಿಂಕ್‌ ಇದೆಯಾ?

Donate Janashakthi Media

Leave a Reply

Your email address will not be published. Required fields are marked *