ಎಫ್‌ಐಆರ್‌ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಎಚ್‌ಡಿಕೆ, ನಿಖಿಲ್‌

ಬೆಂಗಳೂರು: ಎಸ್‌ಐಟಿ ಮುಖ್ಯಸ್ಥರಾದ ಎಂ ಚಂದ್ರಶೇಖರ್‌ ದೂರು ಆಧರಿಸಿ ಬೆಂಗಳೂರಿನ ಸಂಜಯ್‌ನಗರ ಠಾಣೆಯ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಬುಧವಾರ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡುವುದರ ಜೊತೆಗೆ ಬೆದರಿಕೆ ಹಾಕಲಾಗಿದೆ ಎಂದು ಚಂದ್ರಶೇಖರ್‌ ದೂರುದಾಖಲಿಸಿದ್ದರು.

ಕೇಂದ್ರ ಸಚಿವ ಕುಮಾರಸ್ವಾಮಿ, ಅವರ ಪುತ್ರ ಹಾಗೂ ಹಾಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿರುವ ನಿಖಿಲ್‌ ಕುಮಾರಸ್ವಾಮಿ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಹಾಗೂ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್‌ ಬಾಬು ಅವರು ಎಫ್‌ಐಆರ್‌ ರದ್ದತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಮುಂದೆ ವಿಚಾರಣೆಗೆ ಇನ್ನಷ್ಟೇ ನಿಗದಿಯಾಗಬೇಕಿದೆ.

ತಮ್ಮ ರಾಜಕೀಯ ಎದುರಾಳಿಗಳ ಪ್ರಚೋದನೆಗೆ ಒಳಗಾಗಿ ದೂರುದಾರ ಎಂ ಚಂದ್ರಶೇಖರ್‌ ಅವರು ತಮ್ಮ ವಿರುದ್ಧ ಆರೋಪ ಮಾಡಿ, ಘನತೆಗೆ ಹಾನಿ ಮಾಡಿದ್ದಾರೆ. ಕುಮಾರಸ್ವಾಮಿ ಅವರ ವಿರುದ್ಧ ಚಂದ್ರಶೇಖರ್‌ ಅವರು ದಾಳಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಾರದಿತ್ತು. ಅರ್ಜಿದಾರರನ್ನು ಅವಮಾನಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ. ಹಲವು ರಾಜಕೀಯ ವಿರೋಧಿಗಳು ಚಂದ್ರಶೇಖರ್‌ ಅವರನ್ನು ಪ್ರಚೋದಿಸಿದ್ದು, ಅವರು ಬರೆದಿರುವ ಪತ್ರವನ್ನು ಪೊಲೀಸ್‌ ಇಲಾಖೆಯಲ್ಲಿ ಹಂಚಿಕೆ ಮಾಡಲಾಗಿದೆ. ಈಗ ದೂರಿನಲ್ಲಿ ಮಾಡಿರುವ ಆರೋಪಗಳು ಸೃಷ್ಟಿತವಾಗಿದ್ದು, ಎಫ್‌ಐಆರ್‌ ದಾಖಲಿಸುವ ಉದ್ದೇಶದಿಂದ ಮಾಡಲಾಗಿದೆ. ಹೀಗಾಗಿ, ಅದನ್ನು ವಜಾ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ರದ್ದು

ಇದನ್ನೂ ಓದಿ: “ಪ್ರಧಾನಿ, ಗೃಹ ಸಚಿವರು ಕಾನೂನನ್ನು ಮೀರಿದವರೇ?”: ಸಿಪಿಐ(ಎಂ) ಪ್ರಶ್ನೆ

ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ಆಧರಿಸಿ ಬೆಂಗಳೂರಿನ ಸಂಜಯ್‌ ನಗರ ಠಾಣಾಧಿಕಾರಿಯು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ, ನಿಖಿಲ್‌ ಮತ್ತು ಸುರೇಶ್‌ ಬಾಬು ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 224 (ಸರ್ಕಾರಿ ಅಧಿಕಾರಿಗೆ ಬೆದರಿಕೆ) ಅಡಿ ಪ್ರಕರಣ ದಾಖಲಿಸಿದ್ದಾರೆ. ರದ್ದು

ಎಫ್‌ಐಆರ್ ನಲ್ಲಿ ಏನಿದೆ? 

ಆಂಧ್ರಪ್ರದೇಶ ಮೂಲದ ಜಂತಕಲ್‌ ಮೈನಿಂಗ್‌ ಕಂಪನಿಯ ಸಹವರ್ತಿ ಸಂಸ್ಥೆಯಾಗಿರುವ ಶ್ರೀ ಸಾಯಿ ವೆಂಕಟೇಶ್ವರ್‌ ಮಿನರಲ್ಸ್‌ ಕಂಪನಿಗೆ ಆಗ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಎನ್‌ಇಬಿ ರೇಂಜ್‌ನಲ್ಲಿ 550 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಲೀಸ್‌ ನೀಡಲು ಪರವಾನಗಿಗೆ ಅನುಮೋದನೆ ಕಡತಕ್ಕೆ ಸಹಿ ಹಾಕಿದ್ದರು. 2007ರ ಅಕ್ಟೋಬರ್‌ 5ರಂದು ಸಹಿ ಹಾಕಲಾಗಿತ್ತು. ಈ ವೇಳೆ ಸಲ್ಲಿಕೆಯಾಗಿದ್ದ 29 ಅರ್ಜಿಗಳ ಪೈಕಿ ಕೊನೆಯದಾಗಿ ಸಲ್ಲಿಕೆಯಾಗಿದ್ದ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಅರ್ಜಿಯನ್ನು ಸರ್ಕಾರ ನಿಯಮಾವಳಿ ಉಲ್ಲಂಘಿಸಿ ಅನುಮೋದಿಸಿ ಮಂಜೂರು ಮಾಡಲಾಗಿತ್ತು ಎಂಬುದು ಕುಮಾರಸ್ವಾಮಿ ಅವರ ಮೇಲಿರುವ ಆರೋಪವಾಗಿದೆ.

ಈ ಪ್ರಕರಣದಲ್ಲಿ ಹೆಚ್ಚುವರಿ ಸಾಕ್ಷ್ಯಾಧಾರಗಳು ದೊರೆತಿದ್ದರಿಂದ ಕಾನೂನು ಕ್ರಮಕೈಗೊಳ್ಳಲು ಅನುಮತಿ ನೀಡುವಂತೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಎಸ್‌ಐಟಿ ಮುಖ್ಯಸ್ಥರಾಗಿರುವ ಎಂ ಚಂದ್ರಶೇಖರ್‌ ಮನವಿ ಮಾಡಿದ್ದರು.

ಇದರಿಂದ ಕೆರಳಿದ ಕುಮಾರಸ್ವಾಮಿ ಅವರು ಸೆಪ್ಟೆಂಬರ್‌ 28 ಮತ್ತು 29ರಂದು ಮಾಧ್ಯಮಗೋಷ್ಠಿ ನಡೆಸಿ ತನ್ನ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪ ಮಾಡಿ, ಬೆದರಿಕೆ ಹಾಕಿದ್ದಾರೆ. ಕರ್ನಾಟಕ ಕೇಡರ್‌ನಿಂದ ಬೇರೆ ರಾಜ್ಯಕ್ಕೆ ಕಳುಹಿಸುವುದಾಗಿ ಮೌಖಿಕವಾಗಿ ಬೆದರಿಕೆ ಹಾಕಿದ್ದು, ತಮ್ಮ ಕುಟುಂಬದ ವಿರುದ್ಧ ಸುಳ್ಳು ಆರೋಪ ಮಾಡಿ, ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ. ತಾನು ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ ನಕಲಿ ವೈದ್ಯಕೀಯ ದಾಖಲೆ ಪಡೆದು ಕರ್ನಾಟಕ ಕೇಡರ್‌ಗೆ ಸೇರ್ಪಡೆಯಾಗಿರುವುದಾಗಿ ಆರೋಪಿಸಿದ್ದಾರೆ. ಅಲ್ಲದೇ, ತಾನು ಲಂಚ ಸ್ವೀಕರಿಸುತ್ತಿರುವುದಾಗಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಚಂದ್ರಶೇಖರ್‌ ದೂರಿನಲ್ಲಿ ತಿಳಿಸಿದ್ದರು.

ಸೆಪ್ಟೆಂಬರ್‌ 29ರಂದು ನಿಖಿಲ್‌ ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ಮಾಧ್ಯಮ ಗೋಷ್ಠಿಯಲ್ಲಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಆನಂತರ ಜೆಡಿಎಸ್‌ ಶಾಸಕ ಸುರೇಶ್‌ ಬಾಬು ಅವರು ತನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಕ್ರಮಕ್ಕೆ ಆಗ್ರಹಿಸಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ಚಂದ್ರಶೇಖರ್‌ ಅವರ ದೂರಿನಲ್ಲಿ ವಿವರಿಸಿದ್ದರು.

ಇದನ್ನೂ ನೋಡಿ: ನೈಸ್ ಕಂಪನಿ ಪರ ನಿಂತ ಡಿಕೆ ಶಿವಕುಮಾರ್ ವಿರುದ್ಧ ರೈತರ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *