ಪೂರ್ವ ಪ್ರಾಥಮಿಕ ಶಿಕ್ಷಣ ಬಲಗೊಂಡರೆ ಭಾರತದ ಭವಿಷ್ಯ ಉತ್ತಮಗೊಳ್ಳಲಿದೆ – ಜಸ್ಟೀಸ್‌ ಮುರಳಿಧರ

ಬೆಂಗಳೂರು: ಮಕ್ಕಳ ಉತ್ತಮ ಭವಿಷ್ಯವೇ ಭಾರತದ ಉತ್ತಮ ಭವಿಷ್ಯ ಇದು ನಿಜವಾಗಬೇಕಾದರೆ ಅಂಗನವಾಡಿ ಕೇಂದ್ರಗಳು ಬಲಗೊಳ್ಳಬೇಕು, ಹಾಗೂ ಅಂಗನವಾಡಿಗಳಲ್ಲಿಯೇ ಪೂರ್ವಪ್ರಾಥಮಿಕ ಶಿಕ್ಷಣ ಸಿಗುವಂತಾಗಬೇಕು ಎಂದು ಜಸ್ಟೀಸ್‌ ಎಸ್‌, ಮುರಳಿಧರ ಹೇಳಿದರು. ಪ್ರಾಥಮಿಕ

ಅವರು ಐಸಿಡಿಎಸ್‌ ಯೋಜೆನೆಗೆ 50 ವರ್ಷ ಸಂದ ಪ್ರಯುಕ್ತ ಅಂಗನವಾಡಿ ಉಳಿಸಿ, ಮಕ್ಕಳನ್ನು ರಕ್ಷಿಸಿ ವೇದಿಕೆಯು “ಪೌಷ್ಟಿಕತೆ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣದ ಹಕ್ಕಿನೆಡೆಗೆ” ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣದ ಮೂಲಕ ಆಗ್ರಹಿಸಿದರು.

ಮಾನವ ಅಭಿವೃದ್ಧಿ ಸೂಚಂಕ್ಯದಲ್ಲಿ ಭಾರತ ಹಿನ್ನಡೆ ಅನುಭವಿಸುತ್ತಿದೆ. ನಮ್ಮ ನೆರೆಯ ರಾಷ್ಟ್ರಗಳು ಸೂಚ್ಯಂಕದಲ್ಲಿ ಸುಧಾರಣೆ ಕಾಣುತ್ತಿವೆ. ನಮ್ಮಲ್ಲಿ ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳು, ಆರ್ಥಿಕ ಸಂಪನ್ಮೂಲ ಇದ್ದರೂ ನಾವು ಸುಧಾರಣೆ ಕಾಣಲಾಗುತ್ತಿಲ್ಲ. ಕಾರಣ ಏನೆಂದರೆ ಭಾರತದಲ್ಲಿ ಇನ್ನೂ ಅಪೌಷ್ಟಿಕತೆ ಇದೆ. ಅಪೌಷ್ಟಿಕತೆ ಹೋಗಲಾಡಿಸಲು ಅಂಗನವಾಡಿ ಕೇಂದ್ರಗಳು ಸೇತುವೆಯಾಗಿ ಕೆಲಸ ಮಾಡುತ್ತಿವೆ. ಅವು ಉಳಿದು, ಆ ಮಕ್ಕಳ ಶಿಕ್ಷಣ ಬಲಗೊಂಡಲ್ಲಿ ನಾವು ನೆಗತ ಸಾಧಿಸಲು ಸಾಧ್ಯ ಎಂದರು.

ಇದನ್ನೂ ಓದಿ: ಕೋಲ್ಕತ್ತಾ| 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಮೃತ ಶವ ಪತ್ತೆ

ಭಾರತದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿದೆ. ಆ ಮಕ್ಕಳೆಲ್ಲ ಬಡವರ ಮಕ್ಕಳು, ಶೋಷಿತರ ಮಕ್ಕಳು , ಈ ಎಲ್ಲಾ ಮಕ್ಕಳ ಅಪೌಷ್ಟಿಕತೆಯ್ನು ನಿವಾರಿಸಲು ಅಂಗನವಾಡಿ ಕೇಂದ್ರಗಳನ್ನು ಸರ್ಕಾರ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮಕ್ಕಳನ್ನು ದೈಹಿಕವಾಗಿ, ಶೈಕ್ಷಣಿಕವಾಗಿ ಬಲಗೊಳಿಸಲು ಅಂಗನವಾಡಿ ಕೇಂದ್ರಗಳು ಕೊಂಡಿ ಇದ್ದಂತೆ, ಸದೃಢ ಭಾರತ ನಿರ್ಮಾಣ ಆಗಬೇಕಾದರೆ ಅಂಗನವಾಡಿಗಳು ಸುಧಾರಣೆಯಾಗಬೇಕು, ಅಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರ ವೇತನವೂ ಹೆಚ್ಚಳ ಆಗಬೇಕು ಎಂದು ಹೇಳಿದರು.

ಜಾತಿ ತಾರತಮ್ಯ, ವರ್ಗ ವಿಭಜನೆ, ಧರ್ಮಾಧಾರಿತ ದ್ವೇಷಬೀಜ ಬಿತ್ತುವ ಕೆಲಸ ಎಳೆಯ ಹಂತದಲ್ಲಿಯೇ ನಡೆಯುತ್ತಿರುವ ವಿಷಮಯ ಸಂಗತಿಗೆ ನಾವು ಎಲ್ಲ ಸಾಕ್ಷಿಗಳಾಗುತ್ತಿದ್ದೇವೆ. ಇದನ್ನು ತಡೆಯುವ ದೊಡ್ಡ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರ ಮೇಲಿದೆ. ವಿವಿಧ ಪ್ರದೇಶದಲ್ಲಿ ಅಂಗನವಾಡಿ ನೌಕರರು ಗ್ಯಾಚ್ಯುಯಿಟಿ ಗಾಗಿ ಹೋರಾಟ ನಡೆಸಿದ್ದಾರೆ. ಕೆಲ ರಾಜ್ಯಗಳಲ್ಲಿ ಗ್ರ್ಯಾಚುಯುಟಿಯನ್ನು ಪಡೆದುಕೊಂಡಿದ್ದಾರೆ. ಇದು ಅವರ ನ್ಯಾಯಯುತ ಹಕ್ಕು ಎಂದರು.

ಪ್ರೊ. ಮಧುರಾ ಸ್ವಾಮಿನಾಥನ್‌ ಮಾತನಾಡಿ, ಶಾಲ ಪೂರ್ವ ಶಿಕ್ಷಣ ಮಕ್ಕಳ ಶೈಕ್ಷಣಿಕ ಬದುಕಿಗೆ ಬುನಾದಿ ಇದ್ದಂತೆ. 6 ತಿಂಗಳಿಂದ 6 ವರ್ಷದ ವರೆಗೆ ಮಕ್ಕಳ ಆರೋಗ್ಯ, ಕಲಿಕೆಯಲ್ಲಿ ಅಂಗನವಾಡಿ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಕೊಡುಗೆ ಪ್ರಮುಖವಾಗಿದೆ.

ಅಂಗನವಾಡಿಗಳನ್ನು ಸುಧಾರಿಸಲು ವಿಶ್ವಸಂಸ್ಥೆ ಹಲವು ಸೂತ್ರಗಳನ್ನು ನೀಡಿದೆ. ಆ ಸೂತ್ರಗಳನ್ನು ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯಗಳ ಸರ್ಕಾರಗಳು ಜಾರಿ ಮಾಡಬೇಕು ಎಂದರು.

ಅಂಗನವಾಡಿಗಳ ಮೂಲಕ ಬಾಣಂತಿಯರಿಗೆ ಪೌಷ್ಟಿಕ ಆಹಾರ ಸಿಗತ್ತಿದೆ, ಆದರೆ ಅದು ಇನ್ನಷ್ಟು ಗುಣ ಮಟ್ಟದಿಂದ ಕೂಡಿರಬೇಕಿದೆ. ಈಗ ಸರ್ಕಾರ ಕೇವಲ ದಿನಕ್ಕೆ 42 ರೂ ಖರ್ಚು ಮಾಡುತ್ತಿದೆ. ಇದರಿಂದ ಪೌಷ್ಟಿಕಾಂಶಯುಕ್ತ ಆಹಾರ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಅವರಿಗೆ ಒಂದು ದಿನಕ್ಕೆ 82 ರೂ ಖರ್ಚು ಮಾಡಬೇಕು. ಮಕ್ಕಳಿಗೆ 8 ರೂ ಮಾತ್ರ ಖರ್ಚು ಮಾಡುತ್ತಿದೆ. ಅದು ಸಾಲದು ಅದು ಹೆಚ್ಚಳ ಆಗಬೇಕು. ಆ ಮೂಲಕ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಪ್ರಭಾವ ಬೀರುವ ಹೋರಾಟಗಳು ರೂಪಗೊಳ್ಳಲಿ ಎದು ಕರೆ ನೀಡಿದರು.

ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಅಖಿಲ ಭಾರತ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ಆರ್.‌ ಸಿಂಧು ಮಾತನಾಡಿ, ಐಸಿಡಿಎಸ್‌ನ ಉದ್ದೇಶ ಮತ್ತು ಸೇವೆಗಳನ್ನು ಸುಧಾರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ನೀತಿ ಆಯೋಗದ ಶಿಫಾರಸ್ಸಿನಂತೆ 60:40ರಂತೆ ಅನುಪಾತದಲ್ಲಿ ಬದಲಾವಣೆ ಆಯಿತು. 8453 ಕೋಟಿ ರೂ ಅನುದಾನ ಕಡಿತವಾಗಿದೆ. ಕೇಂದ್ರ ಸರ್ಕಾರ ತನ್ನ ಪಾಲಿನ ಹಣವನ್ನು ನೀಡಲು ವಿಳಂಬ ಮಾಡುತ್ತಿದೆ. ನಾಲ್ಕು ಕಂತುಗಳಲ್ಲಿ ಅನುದಾನ ಬಿಡುಗಡೆಯಾಗುತ್ತಿರುವ ಕಾರಣ ಸಮರ್ಪಕ ಸೇವೆಗಳನ್ನು ನೀಡಲು ವ್ಯತ್ಯಯವಾಗುತ್ತಿದೆ ಎಂದರು.

ಪೂರ್ವ ಪ್ರಾಥಮಿಕ ಶಿಕ್ಷಣ ಹಕ್ಕಾಗಲಿ ಎಂಬುದು 1975ರ ಐಸಿಡಿಎಸ್‌ ಮಾರ್ಗದರ್ಶಿ ಸೂತ್ರಗಳಲ್ಲಿ ಒಂದಾಗಿದೆ. ಯೋಜನೆಯನ್ನು ಆರಂಭಿಸಿದ್ದಾಗಲೇ ಇದನ್ನು ಜಾರಿ ಮಾಡಿದ್ದರೆ ಸಾಕಷ್ಟು ಸುಧಾರಣೆ ಆಗುತ್ತಿತ್ತು. ಅಂಗನವಾಡಿಗಳು ಪಾಲನೆ ಮತ್ತು ಪೋಷಣೆಗೆ ಅಷ್ಟೆ ಸೀಮತವಾಗಬಾರದು ಹಾಗಾಗಿ ಶಾಲಾಪೂರ್ವ ಶಿಕ್ಷಣ ಅಂಗನವಾಡಿಗಳಲ್ಲಿಯೇ ಜಾರಿಯಾಗಬೇಕು ಎಂದು ಆಗ್ರಹಿಸಿದರು.

ಸಿಐಟಿಯು ರಾಜ್ಯಾಧ್ಯಕ್ಷೆ ಎಸ್‌ ವರಲಕ್ಷ್ಮೀ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕರಿಗೆ ಗ್ರ್ಯಾಚ್ಯುಯಿಟಿ ಕಾಯ್ದೆ ಅನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಕರ್ನಾಟಕದಲ್ಲಿ ಸಿಐಟಿಯು ಮತ್ತು ಅಂಗನವಾಡಿ ನೌಕರರ ಸಂಘ ಪರಿಣಾಮಕಾರಿಯಾಗಿ ಹೋರಾಟ ನಡೆಸಿದ ಕಾರಣ ಜಾರಿಯಾಗಿದೆ ಇದು ಎಲ್ಲಡೆ ಜಾರಿಯಾಗಬೇಕು ಎಂದರು.

ಅಂಗನವಾಡಿಗಳಲ್ಲಿ ಕೆಲಸ ಮಾಡುವ ನೌಕರರು ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ. ಇವರನ್ನು ಉದ್ಯೋಗಸ್ಥರೆಂದು ಪರಿಗಣಿಸಬೇಕು ಎಂದು 45ನೇ ವಿಶ್ವ ಕಾರ್ಮಿಕ ಸಮ್ಮೇಳ ಶಿಫಾರಸ್ಸು ಮಾಡಲಾಗಿದ್ದರೂ ಅದು ಜಾರಿಯಾಗಿಲ್ಲ. ಸಮರ್ಪಕ ವೇತನ ಸಿಗುತ್ತಿಲ್ಲ ಇದು ಕುಟುಂಬದ ನಿರ್ವಣೆಗೆ ಸಂಕಷ್ಟ ತಂದೊಡ್ಡಿದೆ. ಅವರಿಗೆ ವೇತನ ಹೆಚ್ಚಳವಾಗಬೇಕು, ಹಾಗೂ ಅಂಗನವಾಡಿಗಳು ಬಲಗೊಂಡು ಅಲ್ಲಿಯೇ ಶಾಲಾಪೂರ್ವ ಶಿಕ್ಷಣ ಜಾರಿಯಾಗಬೇಕು ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಸಬೀಹಾ ಭೂಮಿಗೌಡ ಮಾತನಾಡಿ, ಈ ಸಮಾಜವನ್ನು ಕಟ್ಟುವಲ್ಲಿ ಅಂಗನವಾಡಿ ನೌಕರರ ಕೊಡುಗೆ ದೊಡ್ಡದಿದೆ. ಸಮಾಜದ ಹೊರೆಯನ್ನು ನಿಮ್ಮ ಮೇಲೆ ಹಾಕಿರುವ ಸರ್ಕಾರಗಳು ತಮ್ಮ ಮನಸಾಕ್ಷಿಯನ್ನು ಅವಲೋಕಿಸಿಕೊಳ್ಳಬೇಕಿದೆ. ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಬಲಗೊಳಿಸಲು ಅದನ್ನು ಹಕ್ಕಾಗಿಸಲು ಹೋರಾಡುತ್ತಿರುವ ಅಂಗನವಾಡಿ ಹೋರಾಟವನ್ನು ಇಡೀ ದೇಶ ಬೆಂಬಲಿಸಬೇಕು ಎಂದರು.

ಬಾಣಂತಿಯರು, ಮತ್ತು ಅಂಗನವಾಡಿ ಮಕ್ಕಳು”ಪೌಷ್ಟಿಕತೆ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣದ ಹಕ್ಕಿನೆಡೆಗೆ” ಎಂಬ ಬ್ಯಾನರ್‌ ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಂಗನವಾಡಿ ನೌಕರರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌. ಸುನಂದ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಜಿಲ್ಲೆಗಳಿಂದ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರು, ಚಿಂತಕರು, ಜನಪರ ಸಂಘಟನೆಗಳ ನಾಯಕರು ಭಾಗವಹಿಸಿದ್ದರು.

ಇದನ್ನೂ ನೋಡಿ: RSS ಸುಳ್ಳುಗಳನ್ನು ಹೇಗೆ ಹರಡುತ್ತದೆ ಗೊತ್ತೆ? ಈ ವಿಡಿಯೋ ನೋಡಿ

Donate Janashakthi Media

Leave a Reply

Your email address will not be published. Required fields are marked *