ಬಿಡಿಎ ಕಾಂಪ್ಲೆಕ್ಸ್‌ಗಳ ಖಾಸಗೀಕರಣ ವಿರೋಧಿಸಿ ಸೆಪ್ಟೆಂಬರ್ 12 ರಂದು ಪ್ರತಿಭಟನೆ

ಬೆಂಗಳೂರು: ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಮರುನಿರ್ಮಾಣ ಮಾಡಲು ಏಳು ಬಿಡಿಎ ಕಾಂಪ್ಲೆಕ್ಸ್ ಗಳನ್ನು ಸಾರ್ವಜನಿಕ – ಖಾಸಗಿ ಸಹಭಾಗಿತ್ವದಲ್ಲಿ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿರುವ ಆದೇಶವನ್ನು ರದ್ದು ಮಾಡಲು ಆಗ್ರಹಿಸಿ ಸೆಪ್ಟೆಂಬರ್ 12 ರಂದು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಬಿಡಿಎ ಕಾಂಪ್ಲೆಕ್ಸ್‌ ಉಳಸಿ ಹೋರಾಟ ಸಮಿತಿ ನಿರ್ಧರಿಸಿದೆ

ಈ ಕುರಿತು ಹೋರಾಟ ಸಮಿತಿಯು ಇಂದು ಪ್ರೆಸ್‌ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿತು, ಹೋರಾಟ ಸಮಿತಿ ಸಂಚಾಲಕ ಲಿಂಗರಾಜ ಮಳವಳ್ಳಿ  ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ,  ಬೆಂಗಳೂರು ನಗರದ ಏಳು ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಮರು ನಿರ್ಮಾಣ ಮಾಡುವ ಹೆಸರಿನಲ್ಲಿ ಖಾಸಗಿ ಕಂಪನಿಗಳಿಗೆ ಕೊಡಲು ಕರ್ನಾಟಕ ರಾಜ್ಯ ಸರ್ಕಾರ ತೀರ್ಮಾನಿಸಿರುವುದು ಅತ್ಯಂತ ದುರದೃಷ್ಟಕರ. ಇಂದಿರಾ ನಗರ ವಾಣಿಜ್ಯ ಸಂಕೀರ್ಣವನ್ನು Mavrick Holdings Investments Pvt. Ltd ಕಂಪನಿಗೂ ಹಾಗೂ ಕೋರಮಂಗಲ, ಹೆಚ್.ಎಸ್.ಆರ್.ಬಡಾವಣೆ, ಆರ್.ಟಿ.ನಗರ, ಆಸ್ಟಿನ್ಟೌನ್, ಸದಾಶಿವನಗರ ಮತ್ತು ವಿಜಯನಗರ ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು M-FAR Developers Pvt Ltd ಕಂಪನಿಗೆ ಸಾರ್ವಜನಿಕ–ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಮರುನಿರ್ಮಾಣ ಮಾಡುವ ಗುತ್ತಿಗೆ ನೀಡಲಾಗಿದೆ. ಈ ಕಂಪನಿಗಳು ಈಗಿರುವ ಬಿಡಿಎ ಕಾಂಪ್ಲೆಕ್ಸ್ ಗಳನ್ನು ಕೆಡವಿ ಹಾಕಿ, ಇದೇ ಜಾಗದಲ್ಲಿ ಬಹು ಮಹಡಿ ಶಾಪಿಂಗ್ ಕಾಂಪ್ಲೆಕ್ಸ್ ಗಳನ್ನು ನಿರ್ಮಾಣ ಮಾಡಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಏಳೂ ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಟೆಂಡರ್ ಪಡೆದ ಖಾಸಗಿ ಕಂಪನಿಗಳು ಮರುನಿರ್ಮಾಣ ಮಾಡಿ, ಅದರಲ್ಲಿ 65:35 ಅನುಪಾತದಲ್ಲಿ 20 ವರ್ಷಕ್ಕೆ ಗುತ್ತಿಗೆ ನೀಡುವುದೆಂದೂ; ಮುಂದಿನ 30 ವರ್ಷಕ್ಕೆ ಗುತ್ತಿಗೆ ಅವಧಿಯನ್ನು ವಿಸ್ತರಿಸಲು ಕರಾರಿನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

ಹೋರಾಟ ಸಮಿತಿ ಮುಖ್ಯಸ್ಥ ಆರ್‌ ನಾಗೇಶ್‌ ಮಾತನಾಡಿ, ಬಿಡಿಎ ಕಾಂಪ್ಲೆಕ್ಸ್ ಗಳನ್ನು ಒಡೆದು ಕಟ್ಟುವ ಉದ್ದೇಶವಿದ್ದಲ್ಲಿ ಇದನ್ನು ಬಿಡಿಎ ಮೂಲಕವೇ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಿದೆ. ಈ ಯೋಜನೆಗೆ ಬ್ಯಾಂಕ್ ಸಾಲವೂ ಸುಲಭವಾಗಿ ಸಿಗಲಿದೆ. ಇದರಿಂದ ಬಿಡಿಎಗೆ ಆದಾಯವೂ ವೃದ್ಧಿಯಾಗಲಿದೆ. ಹೀಗಿರುವಾಗ ಇದನ್ನು ಖಾಸಗಿ ಕಂಪನಿಗಳಿಗೆ ವಹಿಸಿರುವುದು ಸರಿಯಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ ಎಂದು ಹೇಳಿದರು.

ಈ ಏಳೂ ಬಿಡಿಎ ಕಾಂಪ್ಲೆಕ್ಸ್ ಗಳು ಆಯಕಟ್ಟಿನ ಜಾಗದಲ್ಲಿವೆ. ಈ ಕಾಂಪ್ಲೆಕ್ಸ್ ಗಳ ವಿಸ್ತೀರ್ಣ ಸುಮಾರು 12 ಎಕರೆ. ಈ ಭೂಮಿಯ ಒಟ್ಟು ಮೌಲ್ಯ ಸುಮಾರು 20,000 ಕೋಟಿ ರೂಪಾಯಿ. ಉದಾಹರಣೆಗೆ ಹೆಚ್‌ ಎಸ್‌ ಆರ್ ಮತ್ತು ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್ ಇರುವ ಜಾಗ ಪ್ರಸ್ತುತ ಚದರ ಅಡಿಗೆ 50 ಸಾವಿರ ರೂಪಾಯಿವರೆಗೂ ಇದೆ.

ಸಾವಿರಾರು ಕೋಟಿ ರೂಪಾಯಿ ಬೆಲೆಬಾಳುವ ಸಾರ್ವಜನಿಕ ರಸ್ವತ್ತನ್ನು ಖಾಸಗಿಯವರಿಗೆ ನೀಡುವ ತೀರ್ಮಾನದ ಹಿಂದೆ ನೂರಾರು ಕೋಟಿ ರೂಪಾಯಿಗಳ ಕಿಕ್‌ ಬ್ಯಾಕ್‌ ವ್ಯವಹಾರ ನಡೆದಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಇಂತಹ ಬೆಲೆಬಾಳುವ ಆಸ್ತಿಗಳನ್ನು ಖಾಸಗಿಯವರಿಗೆ ವಹಿಸುವುದು ಅಕ್ಷರಶಃ ಆತ್ಮಾಹುತಿ ನಿರ್ಧಾರವಾಗುತ್ತದೆ. ಮಾತ್ರವಲ್ಲದೇ ಸಾರ್ವಜನಿಕ ಆಸ್ತಿಗಳನ್ನು ಮಾರಾಟ ಮಾಡುತ್ತಾ ಹೋದಲ್ಲಿ ಭವಿಷ್ಯದ ಪೀಳಿಗೆಗೆ ಆಸ್ಪತ್ರೆ, ಶಾಲೆ, ಸ್ಮಶಾನ, ಆಟದ ಮೈದಾನ ಇತ್ಯಾದಿಗಳಿಗಾಗಿ ಜಮೀನುಗಳೇ ಇಲ್ಲದ ಸ್ಥಿತಿ ನಿರ್ಮಾಣವಾಗುವ ಅಪಾಯವಿದೆ ಎಂದರು.

ಇದನ್ನೂ ಓದಿ: ಒಕ್ಕೂಟ ವ್ಯವಸ್ಥೆ| ಮೂಲ ಆಶಯದಂತೆ ಪಾಲನೆಯಾಗುತ್ತಿಲ್ಲ- ಡಾ.ಜಿ.ರಾಮಕೃಷ್ಣ ಅಸಮಾಧಾನ

ಬಹುಜನ ದಲಿತ ಸಂಘರ್ಷ ಸಮಿತಿಯ ಆರ್‌.ಎಂ.ಎನ್‌ ರಮೇಶ್‌ ಮಾತನಾಡಿ,  ಇತ್ತೀಚೆಗಷ್ಟೆ ಹೆಚ್‌ಎಸ್‌ಆರ್ ಮತ್ತು ಕೋರಮಂಗಲ ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ದುರಸ್ತಿಗೊಳಿಸಲಾಗಿದೆ. ಹೀಗಿರುವಾಗ ಕಾಂಪ್ಲೆಕ್ಸ್ ಅನ್ನು ಒಡೆದು ಕಟ್ಟುವುದಾದರೆ, ದುರಸ್ತಿ ಮಾಡಿದ್ದಾದರೂ ಏಕೆ? ಸಾರ್ವಜನಿಕರ ತೆರಿಗೆ ಹಣವನ್ನುಈ ರೀತಿ ಪೋಲು ಮಾಡುವುದು ಸರಿಯೇ? ಪ್ರಸ್ತಾಪಿತ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣದಿಂದ ಖಾಸಗಿ ಕಂಪನಿಯು ಅಪಾರ ಪ್ರಮಾಣದ ಲಾಭ ಮಾಡಿಕೊಳ್ಳಲಿದೆ ಎಂದರು.

ಶಿಥಿಲಾವಸ್ಥೆಯಲ್ಲಿರುವ ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಮರು ನಿರ್ಮಾಣ ಮಾಡುವುದೇ ಆದಲ್ಲಿ ಸರ್ಕಾರವೇ ಬ್ಯಾಂಕ್ ಸಾಲ ಪಡೆದು ಮರು ನಿರ್ಮಾಣ ಮಾಡಲು ಸಾಧ್ಯವಿದೆ. ಜೊತೆಗೆ ಹೆಚ್‌ಎಸ್‌ಆರ್ ಮತ್ತು ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್ ಗಳು ಸೇರಿದಂತೆ ಕೆಲ ಬಿಡಿಎ ಕಾಂಪ್ಲೆಕ್ಸ್ ಗಳು ಇನ್ನೂ ಹತ್ತಾರು ವರ್ಷ ಬಾಳಿಕೆ ಬರುವಷ್ಟು ಸದೃಢವಾಗಿವೆ. ಹೀಗಿರುವಾಗ ಒಡೆದು ಕಟ್ಟುವುದಾದರೂ ಏಕೆ? ಎಂಬುದನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಇಲ್ಲಿವರೆಗೆ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಿಲ್ಲ ಎಂದರು.

ಬಿಡಿಎ ವಸತಿ ಬಡಾವಣೆ ನಿರ್ಮಾಣ ಮಾಡುವಾಗ ನಿವಾಸಿಗಳ ಅನುಕೂಲಕ್ಕಾಗಿ ಅಲ್ಲಿನ ಸಿ.ಎ. ನಿವೇಶನಗಳಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಾಣ ಮಾಡಲಾಗಿತ್ತು. ಹೀಗಿರುವಾಗ ಬಡಾವಣೆಯ ನಿವಾಸಿಗಳ ಅಭಿಪ್ರಾಯವನ್ನೂ ಸಂಗ್ರಹಿಸದೇ, ಏಕಾಏಕಿ ನಿರ್ಧಾರಕ್ಕೆ ಬಂದಿರುವುದು ಸರಿಯೇ? ಎಂದು ಪ್ರಶ್ನಿಸಿದರು.

ಸಿಪಿಐಎಂ ರಾಜ್ಯ ಸಮಿತಿ ಸದಸ್ಯೆ ಗೌರಮ್ಮ ಮಾತನಾಡಿ, ಕೋರಮಂಗಲ ಬಿಡಿಎ ವಾಣಿಜ್ಯ ಸಂಕೀರ್ಣದಲ್ಲಿ ಬೆಸ್ಕಾಂ, ರೈಲ್ವೆ, ಉಪನೋಂದಣಾಧಿಕಾರಿ ಕಚೇರಿಗಳು ಇರುವುದರಿಂದ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಿದೆ. ಜೊತೆಗೆ ಬಿಡಿಎ ವಾಣಿಜ್ಯ ಸಂಕೀರ್ಣಗಳಲ್ಲಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಸರಕುಗಳನ್ನು ಖರೀದಿಸಬಹುದಾಗಿದೆ. ಅಷ್ಟುಮಾತ್ರವಲ್ಲದೇ, ಅಲ್ಲಿನ ನಿವಾಸಿಗಳಿಗೆ ಬಿಡಿಎ ವಾಣಿಜ್ಯ ಸಂಕೀರ್ಣಗಳು, ಕೇವಲ ವಾಣಿಜ್ಯ ವ್ಯವಹಾರದ ಕೇಂದ್ರವಾಗಿರದೇ, ಬಹಳ ಧೀರ್ಘಕಾಲದಿಂದ ಭಾವನಾತ್ಮಕ ಸಂಬಂಧವನ್ನು ಬೆಸೆದಿವೆ ಎಂದರು.

ಎಎಪಿ ಬೆಂಗಳೂರು ಜಿಲ್ಲಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ,  ಬೆಂಗಳೂರಿನ ನಾಗರಿಕರ ವಿರೋಧದ ನಡುವೆಯೂ ಈ ಯೋಜನೆಯನ್ನು ಶತಾಯ ಗತಾಯ ಕಾರ್ಯಗತಗೊಳಿಸಲು ಸರ್ಕಾರ ಮುಂದಾಗಿದೆ. ಹೀಗಾಗಿ ಈ ಯೋಜನೆಯನ್ನು ರದ್ದು ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ನಗರದ ಹಲವು ಸಂಘ – ಸಂಸ್ಥೆಗಳು ಹಾಗೂ ಸ್ಥಳೀಯ ನಿವಾಸಿಗಳು ಸೇರಿದಂತೆ ‘ಬಿಡಿಎ ಕಾಂಪ್ಲೆಕ್ಸ್ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ’ ಫ್ರೀಡಂ ಪಾರ್ಕ್ ನಲ್ಲಿ12 ಸೆಪ್ಟೆಂಬರ್2024, ಗುರುವಾರ ಬೃಹತ್ ಪ್ರತಿಭಟನೆಗೆ ಯೋಜಿಸಿವೆ. ಆಮ್ ಆದ್ಮಿ ಪಕ್ಷ, ಸಿಪಿಐ(ಎಂ) ಪಕ್ಷಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಸಮಾಜ ಪರಿವರ್ತನಾ ವೇದಿಕೆಯ ಎಸ್.ಆರ್.ಹಿರೇಮಠ್, ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು, ಸಿಪಿಐ(ಎಂ) ಪಕ್ಷದ ರಾಜ್ಯಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಕೆ.ಪ್ರಕಾಶ್ ಹಾಗು ಇತರರು ಮಾತನಾಡುವರು ಎಂದು ತಿಳಿಸಿದರು.

ಈ ವೇಳೆ ಮುಖಂಡರಾದ ನಜೀಬ್‌ ಎಂ, ಅನಿಲ್‌ ನಾಚಪ್‌, ರಾಜಣ್ಣ, ಮಿನರ್ವಾ ಚಂದ್ರು,  ತಾಯ್ನಾಡು ರಾಘವೇಂದ್ರ ಸೇರಿದಂತೆ ಅನೇಕರಿದ್ದರು.

ಇದನ್ನೂ ನೋಡಿ: ಹೊಸ ಕ್ರಿಮಿನಲ್ ಕಾನೂನುಗಳು ಯಾರ ಪರ? – ವಕೀಲ ವಿನಯ್‌ ಶ್ರೀನಿವಾಸ ಜೊತೆ ಮಾತುಕತೆ |New Criminal Laws |Janashakthi

Donate Janashakthi Media

Leave a Reply

Your email address will not be published. Required fields are marked *