ಬೆಂಗಳೂರು:ಮಹಿಳೆಯೋರ್ವರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿ ಕಳೆದ ಐದು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಹೊಳೆ ನರಸೀಪುರದ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಹೆಚ್.ಡಿ.ರೇವಣ್ಣ, ನಾಳೆ ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆಯಿದೆ. 5 ಲಕ್ಷ ರೂ. ಬಾಂಡ್ ನೀಡಬೇಕು. ಸಾಕ್ಷ್ಯಾಧಾರ ನಾಶಪಡಿಸಕೂಡದು ಹಾಗೂ ಎಸ್ಐಟಿ ತನಿಖೆಗೆ ಸಹಕರಿಸಬೇಕು ಎಂದು ಷರತ್ತುವಿಧಿಸಿ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ನಿವಾಸಕ್ಕೆ ಎಫ್‌ಎಸ್‌ಎಲ್ ತಂಡ ಭೇಟಿ
ಪ್ರಕರಣದ ಸಂಬಂಧ ಇಂದು ಸೋಮವಾರ ಮಧ್ಯಾಹ್ನ ವಿಚಾರಣೆ ಕೈಗೆತ್ತಿಕೊಂಡಿತ್ತು.ಎಸ್ಐಟಿ ಪರ ವಿಶೇಷ ಅಭಿಯೋಜಕರು ರೇವಣ್ಣ ಪರ ವಕೀಲರ ವಾದಕ್ಕೆ ಪ್ರತಿವಾದ ಮುಂದುವರೆಸಿದರು. ಪ್ರತಿವಾದ ಮಂಡನೆ ಪೂರ್ಣಗೊಂಡ ಬಳಿಕ ಅಂತಿಮವಾಗಿ ಸಾಧ್ಯವಾದರೆ 5 ಗಂಟೆ ವೇಳೆಗೆ ಜಾಮೀನು ಅರ್ಜಿ ಬಗ್ಗೆ ಆದೇಶ ನೀಡುವುದಾಗಿ ನ್ಯಾಯಮೂರ್ತಿ ಸಂತೋಷ್ ಗಜಾನನ್ ಭಟ್ ತಿಳಿಸಿದ್ದರು.
ಇಬ್ಬರ ಶ್ಯೂರಿಟಿ, 5 ಲಕ್ಷ ರೂಪಾಯಿ ಬಾಂಡ್ ನೀಡುವಂತೆ ರೇವಣ್ಣಗೆ ಸೂಚಿಸಿರುವ ಕೋರ್ಟ್ ಸಾಕ್ಷಿ ನಾಶಕ್ಕೆ ಮುಂದಾಗಬಾರದು, ಮಂಡ್ಯ ಜಿಲ್ಲೆಯ ಕೆಆರ್ ನಗರ ತಾಲೂಕಿಗೆ ಹೋಗಬಾರದು, ಸಂತ್ರಸ್ತೆಯರಿಗೆ ಬೆದರಿಕೆ ಹಾಕಬಾರದು. ಎಸ್ಐಟಿ ತನಿಖೆಗೆ ಸಹಕರಿಸಬೇಕು ಷರತ್ತುಗಳ ಮೇಲೆ ಜಾಮೀನು ನೀಡಿದೆ.
ಜಾಮೀನು ದೊರೆತಿರುವ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಅಥವಾ ಮಂಗಳವಾರ ಬೆಳಿಗ್ಗೆ ಅವರು ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಜೈಲಿನಿಂದ ಹೊರಬರಲಿದ್ದಾರೆ ಎಂದು ಹೇಳಲಾಗಿದೆ. ಒಂದು ವಾರದ ಪೊಲೀಸ್ ಕಸ್ಟಡಿ ಬಳಿಕ ಅವರನ್ನು ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಮೇ ೮ರಂದು ನ್ಯಾಯಾಲಯ ಆದೇಶ ನೀಡಿತ್ತು.
ಈ ನಡುವೆ ರೇವಣ್ಣ ಅವರಿರುವ ಪರಪ್ಪನ ಅಗ್ರಹಾರದ ಕಂದ್ರ ಕಾರಾಗೃಹದ ಸುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ರಕ್ಷಣೆ ನೀಡಲಾಗಿದ್ದು ರೇವಣ್ಣ ಬೆಂಬಲಿಗರು ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.