ಬಿಜೆಪಿಗೆ ಯಡಿಯೂರಪ್ಪ ಡೂಪ್ಲಿಕೇಟ್‌, ಈಶ್ವರಪ್ಪ ಒರಿಜಿನಲ್‌ ಅಂತೆ

ಶಿವಮೊಗ್ಗ:ತಾವು ಕಟ್ಟಿರುವ ಬಿಜೆಪಿ ಪಕ್ಷದಲ್ಲಿ ಬಿ.ಎಸ್.ಯಡಿಯೂರಪ್ಪ ಡೂಪ್ಲಿಕೇಟ್‌, ತಮ್ಮನ್ನು ಒರಿಜಿನಲ್‌ ಎಂದಿರುವ ಕೆ.ಎಸ್.ಈಶ್ವರಪ್ಪ, ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಯಡಿಯೂರಪ್ಪ ಹಿರಿಯ ಪುತ್ರ ಬಿ.ವೈ.ವಿಜಯೇಂದ್ರನನ್ನು ಎಳಸು ಎಂದಿದ್ದಾರೆ. ಆರು ವರ್ಷಗಳ ಕಾಲ ಬಿಜೆಪಿ ಉಚ್ಛಾಟಿಸಿದ್ದಕ್ಕೆ ಈಶ್ವರಪ್ಪ ವಿಜಯೇಂದ್ರಗೆ ಸೂಚ್ಯವಾಗಿ ಧನ್ಯವಾದ ಸಲ್ಲಿಸಿದ್ದು, ಇದು ತಾತ್ಕಾಲಿಕವಷ್ಟೇ ಎಂದಿದ್ದಾರೆ. ಕುತಂತ್ರ, ಷಡ್ಯಂತ್ರದಿಂದಾಗಿ ಬಿಜೆಪಿಯಿಂದ ಹೊರಬಂದಿರುವುದಾಗಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಈಶ್ವರಪ್ಪ, ಜಗದೀಶ್ ಶೆಟ್ಟರ್ ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದರು. ಈಗ ಅವರನ್ನೇ ಹೋಗಿ ಕಾಲು ಹಿಡಿದು ಮತ್ತೆ ಬಿಜೆಪಿಗೆ ಕರೆತಂದಿದ್ದಾರೆ. ಬಿಜೆಪಿಯಿಂದ ಬಿ.ವೈ.ವಿಜಯೇಂದ್ರ ನನ್ನನ್ನು ಉಚ್ಛಾಟಿಸಿದ್ದು ತಾತ್ಕಾಲಿಕ ಮಾತ್ರ. ಬಿಜೆಪಿ ಬಗ್ಗೆ ಏನೂ ಗೊತ್ತಿಲ್ಲದೇ ಇರುವ ಒಬ್ಬ ವ್ಯಕ್ತಿ ನನ್ನನ್ನು ಬಿಜೆಪಿಯಿಂದ ಹೊರ ಹಾಕಿದ್ದಾನೆ.ಉಚ್ಛಾಟಿಸಲು ಆತ ಕಾಯುತ್ತಿದ್ದ ಎನ್ನಿಸುತ್ತದೆ. ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ ಈ ಮೂವರು ನನ್ನ ಸ್ಪರ್ಧೆ ಬಗ್ಗೆ ಮತದಾರರಲ್ಲಿ ಬಹಳಷ್ಟು ಗೊಂದಲ ಮೂಡಿಸುತ್ತಿದ್ದರು.

ಈ ಗೊಂದಲಗಳಿಗೆಲ್ಲಾ ಈಗ ಉತ್ತರ ಸಿಕ್ಕಿದೆ.ನಾನು ಮತ್ತೆ ಬಿಜೆಪಿಗೆ ಸೇರುವವನೇ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದ ಈಶ್ವರಪ್ಪ

ಯಡಿಯೂರಪ್ಪ ಕೆಜೆಪಿ ಪಕ್ಷದ ಜೊತೆ ಹಿಂದೆ ಹೋದಾಗ ಟಿಪ್ಪು ಸುಲ್ತಾನ್ ಜಯಂತಿಯಂದು ಟೋಪಿ ಹಾಕಿಕೊಂಡು ಹೋಗಿದ್ದರು. ಆಗಲೇ ಅವರಿಗೆ ಬಿಜೆಪಿ ಬಗ್ಗೆ ನೈತಿಕತೆ ಇಲ್ಲ ಎಂಬುದು ಸಾಬೀತಾಗಿದೆ. ನಾನು ಗೆದ್ದ ಕೂಡಲೇ ವಿಜಯೇಂದ್ರ ಅಪ್ಪನೇ ಅರ್ಥಾತ್‌ ಯಡಿಯೂರಪ್ಪನೇ ಬಿಜೆಪಿಗೆ ಮತ್ತೆ ನನ್ನನ್ನು ಕರೆದುಕೊಂಡುಹೋಗುತ್ತಾನೆ. ನಾನು ಕಟ್ಟಿ ಬೆಳೆಸಿದ ಪಕ್ಷ ಇದು.

ಅಪ್ಪಮಕ್ಕಳು ಬಿಜೆಪಿಗೆ ಡೂಪ್ಲೀಕೇಟ್, ನಾನು ಒರಿಜಿನಲ್ ಎಂದು ಮತ್ತೊಮ್ಮೆ ಈಶ್ವರಪ್ಪ ಒತ್ತಿ ಹೇಳಿದರು.

ಎರಡು ಕಬ್ಬು ಇರುವ ರೈತನ ಚಿಹ್ನೆಯಡಿ ತಾವು ಕಣಕ್ಕಿಳಿದಿದ್ದು, ರಾಷ್ಟ್ರಭಕ್ತ ಬಳಗ ಸೇರ್ಪಡೆಗೊಂಡಿದ್ದಾರೆ. ಹೊಸನಗರ ಭಾಗದಿಂದ ಅನೇಕ ಜನರು ಸಹ ನನ್ನನ್ನು ಬೆಂಬಲಿಸಿದ್ದಾರೆ. ಈ ರೈತನ ಚಿಹ್ನೆ  ಸಿಗಲು ನಾನು ಯಾವ ಜನ್ಮದಲ್ಲಿ ಪುಣ್ಯ ಮಾಡಿದ್ದನೋ ಗೊತ್ತಿಲ್ಲ.ನಾಳೆಯಿಂದ ಈ ಚಿಹ್ನೆಯಡಿ ಎಲ್ಲಾ ಕಡೆ ಪ್ರಚಾರ ಆರಂಭಿಸುವುದಾಗಿ ಈಶ್ವರಪ್ಪ ಹೇಳಿದರು.

ಬಿ.ವೈ. ವಿಜಯೇಂದ್ರ ಕುಂಕುಮ ಅಳಿಸಿಕೊಂಡ ವಿಡಿಯೋ ವೈರಲ್ ವಿಚಾರವಾಗಿ ಪ್ರತಿಕಿಯಿಸಿದ ಈಶ್ವರಪ್ಪ, ಅವರಿಗೆ ನೈತಿಕತೆಯಿಲ್ಲ ಎಂದಷ್ಟೇ ಹೇಳಿದರು.

ಇದೇ ವೇಳೆ ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣಕ್ಕೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕೆ.ಎಸ್.ಈಶ್ವರಪ್ಪ, ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಉಸ್ತುವಾರಿ ಸುರ್ಜೇವಾಲಾ ಹೇಳಿಕೆ ನನಗೆ ಆಶ್ಚರ್ಯ ತಂದಿದೆ.ನಿನ್ನೆ ರಾಜ್ಯದಲ್ಲಿ ಮತ್ತೊಂದು ಯುವತಿ ಮೇಲೆ ಮುಸಲ್ಮಾನ್ ಯುವಕ ಹಲ್ಲೆ ಮಾಡಿದ್ದಾನೆ. ಎಲ್ಲಿಯವರೆಗೆ ಕಾಂಗ್ರೆಸ್ ಸರ್ಕಾರವಿರುತ್ತೋ, ಅಲ್ಲಿಯವರೆಗೆ ಮುಸಲ್ಮಾನರ ಓಲೈಕೆ ಮಾಡಲಾಗುತ್ತದೆ.ಕಾಂಗ್ರೆಸ್ ಅನ್ನು ಕಿತ್ತೊಗೆಯುವುದೇ ಇದಕ್ಕೆ ಪರಿಹಾರ.ಕಾಂಗ್ರೆಸ್ ಅನ್ನು ರಾಜ್ಯದಿಂದಲೂ ಕಿತ್ತೊಗೆಯಬೇಕು ಎಂದರು.

ಇದನ್ನೂ ನೋಡಿ: “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಎಂದರೆ, ಹಿಂದುತ್ವ ಕೋಮುವಾದ ಘೋಷಣೆಯಾ ಮೋದಿಯವರೆ? ಕೆ.ಎಸ್.ವಿಮಲಾ

Donate Janashakthi Media

Leave a Reply

Your email address will not be published. Required fields are marked *