ಸಂಧ್ಯಾ ಸೊರಬ
ಬೆಂಗಳೂರು: ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿರುವ ಬಿಜೆಪಿಗೆ, ಚುನಾವಣಾ ಹೊಸ್ತಿಲಿನಲ್ಲಿ ಇದೀಗ ಸಂವಿಧಾನದ ಭಯ ಕಾಡಿದಂತಿದ್ದು, ಸಂವಿಧಾನವಿರೋಧಿ ಎಂಬ ಆರೋಪದಿಂದಾದ ಡ್ಯಾಮೇಜನ್ನು ಚುನಾವಣೆ ಗೆಲ್ಲಲು ಕಮಲ ಪಾಳಯ ಮುಂದಾಗಿರುವಂತಹ ಲಕ್ಷಣಗಳು ಗೋಚರಿಸುತ್ತಿವೆ.
ದೇಶಾದ್ಯಂತ ಪ್ರಜಾಪ್ರಭುತ್ವವನ್ನು ಉಳಿಸಲು ಹೋರಾಟದ ಕೂಗುಗಳು ಕೇಳಿಬರುತ್ತಿದ್ದರೆ,ಇನ್ನೊಂದೆಡೆ ಸಂವಿಧಾನವಿರೋಧಿಗಳಿಗೆ ತಕ್ಕಪಾಠ ಕಲಿಸಲೇಬೇಕೆಂಬ ಹೋರಾಟಗಳು ಪ್ರಜ್ವಲಿಸುತ್ತಿವೆ.
ಚುನಾವಣೆಗೂ ಘೋಷಣೆಗೂ ಮುನ್ನ ಬಿಜೆಪಿಯ ಅನಂತ್‌ಕುಮಾರ್ ಹೆಗಡೆ, ಮತ್ತೆ ಸಂವಿಧಾನ ವಿರೋಧದ ಹೇಳಿಕೆಯನ್ನು ನೀಡಿ ಮತ್ತೊಮ್ಮೆ ತಮ್ಮ ಪಕ್ಷದ ನಿಲುವು ಏನೆಂಬುದನ್ನು ಹೇಳಿದ್ದರು.ಅಲ್ಲದೇ ಬಿಜೆಪಿ ಆಡಳಿತಕ್ಕೆ ಬಂದರೆ,ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಬಿಜೆಪಿಯ ಕೆಲವರು ಹೇಳಿಕೆ ನೀಡಿದ್ದರು.ಸಂವಿಧಾನ ವಿರೋಧದ ಈ ಹೇಳಿಕೆಗೆ ಬಿಜೆಪಿ ಪಾಳಯದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅನಂತ್ ಕುಮಾರ್ ಹೆಗಡೆ ಸೇರಿದಂತೆ ಸಂವಿಧಾನದ ವಿರೋಧದ ಈ ಹೇಳಿಕೆಯ ಬಗ್ಗೆ ಇಷ್ಟು ದಿನ ಕೇಂದ್ರದ ಬಿಜೆಪಿ ನಾಯಕರಾಗಲೀ, ರಾಜ್ಯದ ನಾಯಕರಾಗಲೀ ಅಷ್ಟಾಗಿ ಪ್ರತಿಕ್ರಿಯಿಸಿರಲಿಲ್ಲ.
ಈ ಎಲ್ಲಾ ಬೆಳವಣಿಗೆ ಎಲ್ಲೋ ಬಿಜೆಪಿಗೆ ಡ್ಯಾಮೇಜ್ ಆದಂತಿದೆ.ಈಗಲಾದರೂ ಚುನಾವಣಾ ದೃಷ್ಟಿಯಿಂದಲಾದರೂ ಎಚ್ಚೆತ್ತುಕೊಂಡು ಹೇಳಿಕೆ ನೀಡಬೇಕೆಂಬ ಸೂಚನೆ ಹಿಂದಿನಿಂದ ಸಿಕ್ಕಂತಿದೆ. ಹೀಗಾಗ ಕೆಲವುದಿನಗಳ ಹಿಂದೆ ಪ್ರಧಾನಿ ಮೋದಿ, ಬಾರ್ಮರ್‌ನಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಚುನಾವಣಾ ಜಾಥಾವನ್ನು ಉದ್ದೇಶಿಸಿ ಮಾತನಾಡಿ, ದೇಶದ ಸಂವಿಧಾನವನ್ನು ಭಗವದ್ಗೀತೆ, ಬೈಬಲ್, ಕುರಾನ್, ರಾಮಾಯಣ, ಮಹಾಭಾರತಕ್ಕೆ ಹೋಲಿಸಿದ್ದಾರೆ. ಅಷ್ಟೇ ಅಲ್ಲ, ಸ್ವತಃ ಸಂವಿಧಾನವನ್ನು ಬರೆದ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರು ಬಂದರೂ ಸಂವಿಧಾನವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಯಾವಾಗ ಮೋದಿಯವರಿಂದ ಈ ಹೇಳಿಕೆ ಹೊರಬಿತ್ತೋ ಆಗ ಮೋದಿಯವರ ನಡೆಯನ್ನು ಅನುಸರಿಸಲು ರಾಜ್ಯದ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಒಂದೆರಡು ದಿನಗಳ ಹಿಂದೆ ವಿಪಕ್ಷ ನಾಯಕ ಆರ್. ಅಶೋಕ್, ಸುದ್ದಿಗೋಷ್ಠಿಯನ್ನುದ್ದೇಶಿಸಿ ನೀಡಿದ ಹೇಳಿಕೆಯಲ್ಲಿ ಸಂವಿಧಾನ ಬದಲಾವಣೆ ಮಾಡುವಂಥ ದುಸ್ಸಾಹಕ್ಕೆ ಬಿಜೆಪಿ ಎಂದಿಗೂ ಕೈ ಹಾಕುವುದಿಲ್ಲ ಎಂದಿದ್ದಾರೆ.
ಇನ್ನು ಗದಗದಲ್ಲಿ ಮಾಜಿ ಸಿಎಂ ಬಿಜೆಪಿಯ ಅಭ್ಯರ್ಥಿ ಸಂವಿಧಾನದ ಮಾರ್ಗದಲ್ಲಿ ನಡೆಯುವುದೇ ದೇಶಕ್ಕೆ ಸಲ್ಲಿಸುವ ಗೌರವ ಎಂದಿರುವುದು ಇಲ್ಲಿ ಗಮನಾರ್ಹ.