- ಒಲ್ಲದ ಮನಸಿನಿಂದಲೇ ಚುನಾವಣಾ ಅಖಾಡಕ್ಕೆ ಧುಮುಕಿದ ವೈದ್ಯ!
- ಡಿ.ಕೆ.ಬ್ರದರ್ಸ್ಗೆ ಇಕ್ಕಟ್ಟು!!
ವಿಶೇಷ ವರದಿ: ಸಂಧ್ಯಾ ಸೊರಬ
ಡಾ.ಚೋಳೇನಹಳ್ಳಿ ನಂಜಪ್ಪ ಮಂಜುನಾಥ್ ಅರ್ಥಾತ್ ಡಾ.ಸಿ.ಎನ್.ಮಂಜುನಾಥ್, ಹೃದಯ ತಜ್ಞರು ಹಾಗೂ ಜಯದೇವ ರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರು.ಜೆಡಿಎಸ್ನ ವರಿಷ್ಠರೂ ಆಗಿರುವ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡರ ಅಳಿಯ ಎನ್ನುವುದಕ್ಕಿಂತಲೂ ಜಯದೇವ ಆಸ್ಪತ್ರೆಯ ವೈದ್ಯರಾಗಿ ಅದ್ರಲ್ಲೂ ಹೃದಯರೋಗ ತಜ್ಞರಾಗಿ ನೇಮ್ ಎಂಡ್ ಫ್ರೇಮ್ ಪಡೆದಿದ್ದೇ ಹೆಚ್ಚು. ದೇವೇಗೌಡರ ಅಳಿಯ ಆಗುವುದಕ್ಕಿಂತಲೂ ಮೊದಲೇ ಈ ಮಂಜುನಾಥ್ ವೈದ್ಯರು.ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಖ್ಯಾತಿ ಅಲ್ಲದೇ ಆಸ್ಪತ್ರೆಯಲ್ಲಿ ಪರಿಣಿತ ನುರಿತ ವೈದ್ಯರ ತಂಡ ಇವರದ್ದಾಗಿದೆ. ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಈ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಲು ಡಾ.ಸಿ.ಎನ್.ಮಂಜುನಾಥ್ ಅವರೇ ಕಾರಣ. ಸರ್ಕಾರಿ ಆಸ್ಪತ್ರೆಯನ್ನು ಖಾಸಗಿಯವರು ಸಹ ಮೂಗುಮುಟ್ಟಿಕೊಳ್ಳುವಂತೆ ಮಾಡಿದ್ದು ಸಹ ಇವರೇ. ಇನ್ನು ರಾಜ್ಯದ ಕೆಲವೆಡೆ ಜಯದೇವ ಹೃದ್ರೋಗ ಆಸ್ಪತ್ರೆ ವಿಸ್ತಾರಗೊಂಡಿದ್ದಕ್ಕೆ ಡಾ.ಸಿ.ಎನ್.ಮಂಜುನಾಥ್ ಅವರ ಶ್ರಮವೇ ಹೆಚ್ಚು. ಡಾ.ಸಿ.ಎನ್.ಮಂಜುನಾಥ್
ದೊಡ್ಡಗೌಡರ ಈ ಹಿರಿಯ ಅಳಿಯ ಇದೀಗ ಲೋಕಸಭಾ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.ದೇವೇಗೌಡರ ಕುಟುಂಬ ಎಂದರೆ ಈ ಹಿಂದಿನಿಂದಲೂ ಕುಟುಂಬ ರಾಜಕಾರಣ, ಪದ್ಮನಾಭನಗರ ಮನೆಯ ರಾಜಕಾರಣ ಎಂತಲೇ ಕರೆಸಿಕೊಂಡಿದೆ. ಕುಟುಂಬ ರಾಜಕಾರಣ ಇತರೆ ಪಕ್ಷಗಳಲ್ಲಿ ಇಲ್ಲ ಅಂತೇನಿಲ್ಲ. ಆದರೆ, ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ಅಂದರೆ, ಅದು ದೇವೇಗೌಡರ ರಾಜಕಾರಣ ಅಂತಾಗಿದೆ. ದೊಡ್ಡಗೌಡರ ಈ ಮನೆರಾಜಕಾರಣಕ್ಕೆ ಅವರ ಅಳಿಯ ಹೊಸ ಎಂಟ್ರಿಯಾಗುತ್ತಿದ್ದಾರೆ.
ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಂದರೆ ಹಳೆ ಮೈಸೂರು ಭಾಗ. ಅಂದರೆ ಒಕ್ಕಲಿಗರ ಬೆಲ್ಟ್ ಇರುವ ಪ್ರದೇಶ. ಈ ಭಾಗವನ್ನು ಕಮಲ ಪಾಳಯ ಕೆಲ ವರ್ಷಗಳ ಹಿಂದೆ ಬಹುತೇಕ ಆವರಿಸಿದಂತಿದ್ದರೂ ಒಕ್ಕಲಿಗರದ್ದೇ ಇಲ್ಲಿ ಮೇಲುಗೈ. ಬಿಜೆಪಿಯಲ್ಲಿ ಒಕ್ಕಲಿಗರ ಈ ಮತಗಳನ್ನು ಸೆಳೆದುಕೊಳ್ಳಬಲ್ಲ ಅಂತಹ ಖ್ಯಾತ ಮುಖಗಳೇನಿಲ್ಲ. ಸದ್ಯಕ್ಕೆ ಒಕ್ಕಲಿಗರ ನಾಯಕರೆಂದು ಗುರುತಿಸಿಕೊಂಡಿದ್ದು ಈ ದೊಡ್ಡಗೌಡರು. ದೇವೇಗೌಡರು ಒಕ್ಕಲಿಗರ ಪ್ರಶ್ನಾತೀತ ನಾಯಕರೂ ಹೌದು. ಹಾಗೂ ಹೆಚ್.ಡಿ.ಕುಮಾರಸ್ವಾಮಿ ದೇವೇಗೌಡರನ್ನು ಮೀರಿಸುವಷ್ಟೇನು ಇಲ್ಲ. ಆದರೂ ತಕ್ಕಮಟ್ಟಿಗೆ ಒಕ್ಕಲಿಗರಲ್ಲಿ ಹೆಸರಿದೆ. ಇನ್ನು ಇವರಿಬ್ಬರಿಗೆ ಇರುವಷ್ಟೂ ಪ್ರಾಬಲ್ಯ ಹೆಚ್.ಡಿ.ರೇವಣ್ಣರಿಗೆ ಹಾಸನ ಬಿಟ್ಟು ಹೊರಗಷ್ಟೇನಿಲ್ಲ.
ಇದನ್ನು ಓದಿ : ದಸರಾ ಉದ್ಘಾಟನೆಗೆ ಡಾ.ಮಂಜುನಾಥ್ ಆಯ್ಕೆ
ಅದಿರಲಿ…, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಬರುವುದಾದರೆ ಇಡೀ ಭಾರತದಲ್ಲಿಯೇ ದೊಡ್ಡ ಲೋಕಸಭಾ ಕ್ಷೇತ್ರ ಅಂದರೆ, ಈ “ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರʼʼ. ಸದ್ಯಕ್ಕೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಅಂತ ಕರೆಯಲ್ಪಡುವ ಇದು ಕ್ಷೇತ್ರವಿಂಗಡನೆಗೂ ಮುನ್ನ ಅಂದರೆ 2008 ಕ್ಕೂ ಮೊದಲೇ ಕನಕಪುರ ಲೋಕಸಭಾ ಕ್ಷೇತ್ರವಾಗಿತ್ತು. ಬಳಿಕ 2009 ರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವಾಯಿತು. ಈಗಾಗಲೇ ಹೇಳಿದಂತೆ ಇದು ಒಕ್ಕಲಿಗರ ಪ್ರಾಬಲ್ಯ ಕ್ಷೇತ್ರ. ತೆನೆಹೊತ್ತ ಮಹಿಳೆ ಈಗ ತೆನೆಹೊತ್ತ ಮಹಿಳೆಯಾಗಿ ಉಳಿದಿಲ್ಲ. ಎನ್‌ಡಿಎ ಒಕ್ಕೂಟವನ್ನು ಜೆಡಿಎಸ್ ಸೇರಿ ಆಗಿದೆ. ಒಕ್ಕಲಿಗರ ಪ್ರಾಬಲ್ಯ ಇರುವ ಈ ಬೆಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಕೇಸರಿ ಬಣ್ಣವನ್ನು ಬಿಡಬೇಕು ಎನ್ನುವುದು ಮುಖ್ಯ. ಆದರೆ ಸದ್ಯಕ್ಕೆ ಇಲ್ಲಿರುವುದು ಡಿ.ಕೆ.ಸುರೇಶ್. ಈ ಬೆಂಗಳೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವವರು. ಅಷ್ಟೇ ಅಲ್ಲ, ಡಿ.ಕೆ.ಸುರೇಶ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ರಾಜ್ಯದ ಡಿಸಿಎಂ ಡಿ.ಕೆ.ಶಿವಕುಮಾರ್ ಸಹೋದರ ಬೇರೆ. ಒಂದು ಕಡೆ ಒಕ್ಕಲಿಗ ಮತವನ್ನು ಸೆಳೆದಿದ್ದೂ ಆಯಿತು ಇನ್ನೊಂದು ಕಡೆ ಡಿ.ಕೆ.ಬ್ರದರ್ಸ್‌ನ ಕೋಟೆಯನ್ನು ಬೇಧಿಸಿದ್ದು ಆಯಿತು ಎನ್ನುವ ಎಲ್ಲಾ ಲೆಕ್ಕಾಚಾರವನ್ನು ಡಾ.ಸಿ.ಎನ್.ಮಂಜುನಾಥ್‌ರನ್ನು ಕಣಕ್ಕಿಳಿಸುತ್ತಿದೆ.
ಇದು ವಾರದ ಬೆಳವಣಿಗೆಯಾದರೂ ಎರಡು ತಿಂಗಳ ಹಿಂದೆಯೇ ನಡೆದಿದ್ದಂತಹ ಚರ್ಚೆ ಎನ್ನುತ್ತವೆ ಮೂಲಗಳು. ಜೆಡಿಎಸ್ನಲ್ಲಿ ಒಕ್ಕಲಿಗ ಮುಖವೆನ್ನುವವವರು ಈ ಕೋಟೆಯನ್ನು ಬೇಧಿಸುವವರು ಯಾರೂ ಇಲ್ಲ. ಜನಪರ ಕಾಳಜಿ, ಜನಾರುರಾಗಿ ಹೆಸರು ಹೊಂದಿರುವ ಡಾ.ಸಿ.ಎನ್.ಮಂಜುನಾಥ್, ಒಕ್ಕಲಿಗರೂ ಹೌದು. ಇನ್ನೊಂದುಕಡೆ ಹೆಚ್.ಡಿ.ದೇವೇಗೌಡರ ಅಳಿಯನೂ ಹೌದು. ಒಂದೇ ಏಟಿಗೆ ಮೂರು ಹಕ್ಕಿ ಹೊಡೆಯುವ ಯತ್ನ ಇದಾಗಿದೆ. ಇದಕ್ಕೆ ಬಹುತೇಕ ಬಿಜೆಪಿ ಹೂಂ ಅಂತಾನೂ ಹೇಳಿದೆ. ಬಲವಂತದಿಂದ ಡಾಕ್ಟರ್ ಅವರನ್ನು ಚುನಾವಣಾ ಅಖಾಡಕ್ಕೆ ಧುಮುಕಿಸಿದ್ದಾರೆ. ಒಳ್ಳೆಯ ವೈದ್ಯರಾಗಿ ಹೆಸರುಗಳಿಸಿರುವ ಡಾ.ಸಿ.ಎನ್.ಮಂಜುನಾಥ್ ಸಭ್ಯಸ್ಥ ಅಭ್ಯರ್ಥಿ ಎಂದರೆ ತಪ್ಪಲ್ಲ. ಇದೆಲ್ಲವನ್ನು ಅಳೆದು ತೂಗಿಯೇ ದೇವೇಗೌಡರು ಮತ್ತು ಬಿಜೆಪಿಯ ನಾಯಕರು ಚರ್ಚಿಸಿಯೇ ಎನ್‌ಡಿಎ ಒಕ್ಕೂಟದ ಅಭ್ಯರ್ಥಿಯಾಗಿ ಇವರನ್ನು ಕಣಕ್ಕಿಳಿಸುತ್ತಿದೆ. ಹೆಚ್.ಡಿ.ಕುಮಾರಸ್ವಾಮಿ ಹಾಗೂ ದೇವೇಗೌಡರು ಇರುವ ಅನಿವಾರ್ಯತೆಯನ್ನು ಮಂಜುನಾಥ್ ಅವರಿಗೆ ವಿವರಿಸಿದ್ದಾರೆ. ಒಲ್ಲೆ,ಒಲ್ಲೆ ಎನ್ನುತ್ತಲೇ ಮಂಜುನಾಥ್ ಬಂದಿದ್ದಾರೆ. ಡಾ.ಸಿ.ಎನ್.ಮಂಜುನಾಥ್ ಅವರು, ಕಾಂಗ್ರೆಸ್‌ನಿಂದ ಮತ್ತೊಮ್ಮೆ ಸಂಸದ ಸ್ಥಾನಕ್ಕೆ ಕಣಕ್ಕಿಳಿಯಲಿರುವ ಇದೇ ಒಕ್ಕಲಿಗ ಸಮುದಾಯದ ಡಿ.ಕೆ.ಸುರೇಶ್ ಗೆ ಟಫ್ ಫೈಟ್ ಕೊಡುವುದಂತೂ ಸತ್ಯ.
ಮಂಜುನಾಥ್ ಅವರು ನಾಳೆ ರಾಜ್ಯದ ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡುತ್ತಿದ್ದು, ಅಧಿಕೃತವಾಗಿ ಬಿಜೆಪಿಗೆ ಸೇರಲಿದ್ದಾರೆ ಎನ್ನಲಾಗಿದೆ. ಇದರಿಂದ ಸ್ಪಷ್ಟವಾಗಿ ಗೋಚರಿಸುವುದೇನೆಂದರೆ, ಜೆಡಿಎಸ್ನ ಅಭ್ಯರ್ಥಿಗೆ ಬಿಜೆಪಿ ಚಿಹ್ನೆ. ಇನ್ನು ಎನ್ಡಿಎ ಒಕ್ಕೂಟ ಸೇರಿದ್ದರೂ ತೆನೆಹೊತ್ತ ಮಹಿಳೆಗೆ ಕೇಸರಿಯನ್ನು ಬಳಿದಂತೆ.ಎನ್‌ಡಿಎ ಒಕ್ಕೂಟಕ್ಕೆ ಜಾತ್ಯಾತೀತ ಜನತಾದಳ ಸೇರಿದ್ದರೂ ಬದಲಾದ ರಾಜಕೀಯದಲ್ಲಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಜೆಡಿಎಸ್‌ಗೆ ಸ್ವತಂತ್ರವಿಲ್ಲ ಎನ್ನುವುದು ಎದ್ದುಕಾಣುತ್ತಿರುವುದಂತೂ ಸುಳ್ಳಲ್ಲ.
ಇದನ್ನು ನೋಡಿ : ಹಿಂದುತ್ವವಾದಕ್ಕೆ ಇರುವುದೊಂದೇ ಪರ್ಯಾಯ ಮಾರ್ಗ ಅಂಬೇಡ್ಕರ್‌ವಾದ – ಸಂತೋಷ್ ಲಾಡ್ Janashakthi Media