ಗಾಯ ಕಥಾ ಸರಣಿ | ಸಂಚಿಕೆ – 17 | ಜಾತಿ ಮೀರಿದ ಗೆಳೆತನ : ಉಲ್ಬಣಗೊಂಡ ಧಣಿಯ ಕೋಪ

ಗುರುರಾಜ ದೇಸಾಯಿ
(ಇಲ್ಲಿಯವರೆಗೆ….  ಕೇರಿಯ ಜನ ಬಾಡೂಟ ತಿಂದಿದ್ದ ಸುದ್ದಿ ಕೇಳಿ, ಧಣಿ, ದಳಪತಿ, ಗೌಡ, ಶಾನಭೋಗನ ಹೊಟ್ಟೆಯಲ್ಲಿ ಅವಲಕ್ಕಿ ಕಲಸಿದಂತಾಗಿತ್ತು. ಇದಕ್ಕೇನಾದರೂ ತಂತ್ರ ಹೂಡಬೇಕು ಎಂದು ಹೊಂಚು ಹಾಕಿ, ಸಂಚು ರೂಪಿಸಲು ಪ್ರಯತ್ನ ನಡೆಸಿದ್ದರು ಹೀಗಿರುವಾಗ…… ಮುಂದೆ ಓದಿ ) ಗಾಯ

ದೌರ್ಜನ್ಯ, ಬಹಿಷ್ಕಾರದ ಘಟನೆಗಳು ಶ್ರೀಧರನನ್ನು ಘಾಸಿಗೊಳಿಸಿದ್ದಷ್ಟೇ ಅಲ್ಲದೇ ಮಂಕಾಗಿಸಿ ಬಿಟ್ಟಿದ್ದವು. ರಾತ್ರಿ ಕೇರಿಯಲ್ಲಿ ನಡೆದ ಬಾಡೂಟದ ವಿಚಾರ ಊರ ಜನರ ಬಾಯಿಂದ ಬಾಯಿಗೆ ಹರಡಿ ಶ್ರೀಧರನ ಕಿವಿಗೂ ತಲುಪಿತ್ತು. ಅಪ್ಪ – ಅಮ್ಮನನ್ನು ಕೇಳಿದರೆ ಬೈದಾರು ಎಂದು ಸುಮ್ಮನಾಗಿದ್ದ. ಕೆಂಚಪ್ಪಣ್ಣ – ಬಸ್ಸಪ್ಪಣ್ಣ ಏನಾದ್ರು ಎಂಬ ಪ್ರಶ್ನೆ ಅವನನ್ನು ಹಣ್ಣುಗಾಯಿ ನೀರುಗಾಯಿ ಮಾಡಿತ್ತು. ತನ್ನೊಳಗಡೆ ಇದ್ದ ಬೇಗುದಿಗೆ ಉತ್ತರ ಸಿಗುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು. ತಾನೇ ಸಾವರಿಸಿಕೊಂಡು ಶಾಲೆಗೆ ಹೊರಡಲು ಸಿದ್ದನಾದ.

ಅಮ್ಮಾ… ನಾ ಸಾಲಿಗೆ ಹೋಗಿ ಬರ್ತಿನಿ ಎಂದು ಹಿತ್ತಲಮನಿ ಕಡೆ ಇದ್ದ ಅಮ್ಮನಿಗೆ ಕೂಗಿ ಹೇಳಿದ.

ಆತೂ… ಮಧ್ಯಾನ ಊಟಕ್ಕ ಬಿಟ್ಟಾಗ… ಸೀದಾ… ಮನಿ ಕಡೆ ಬಾ…, ಅಲ್ಲಿ ಇಲ್ಲಿ ನಿಂತ್ಕೋ ಬ್ಯಾಡ ಎಂದಳು ಶ್ರೀಧರನ ಅಮ್ಮ.

ಆತೂ ಅಮ್ಮ, ಎಂದು ಹೆಗಲಿಗೆ ಪಾಟಿ ಚೀಲ ಏರಿಸಿಕೊಂಡು ಶಾಲೆಯ ಕಡೆ ನಡೆದ ಶ್ರೀಧರ.

ಅಗಸಿ ಕಟ್ಟಿಯ ಮೇಲೆ ಕುಳಿತಿದ್ದ ಜನ ಗುಸು ಗುಸು ಮಾತನಾಡುತ್ತಿದ್ದರು. ಕೆಂಚಪ್ಪಣ್ಣ ಮತ್ತು ಬಸ್ಸಪ್ಪಣ್ಣನ ಬಗ್ಗೆ ಏನಾದ್ರೂ ಸುಳಿವು ಸಿಗಬಹುದಾ? ಎಂದು ಕಿವಿ ಅರಳಿಸಿ ಕೇಳಿಕೊಳ್ಳತೊಡಗಿದ ಆದರೆ ಜನರ ಮಾತುಗಳು ಸರಿಯಾಗಿ ಕೇಳುತ್ತಿರಲಿಲ್ಲ. ಶಾಲೆಗೆ ಸಮಯವಾಗಿದ್ದರಿಂದ ನಿಂತು ಕೇಳಿಸಿಕೊಂಡರೆ ಊರ ಮಂದಿ ಬೈದಾರು ಎಂದು ಕೇಳಿದಷ್ಟು ಕೇಳಲಿ ಎಂದು ನಿಧಾನಕ್ಕೆ ಹೆಜ್ಜೆ ಹಾಕಿದ…

ಇದನ್ನೂ ಓದಿಗಾಯ ಕಥಾ ಸರಣಿ | ಸಂಚಿಕೆ – 15 | ಎದೆಗೆ ಬಿದ್ದ ಮಾರ್ಕ್ಸ್ ಮತ್ತು ಅಂಬೇಡ್ಕರ್…

ಕೇರಿ ಸಮೀಪಿಸುತ್ತಿದ್ದಂತೆ ಗೆಳಯ ನಾಗ್ಯಾನನ್ನು ನೋಡಿ ಮುಖ ಅರಳಿಸಿದ ಶ್ರೀಧರ…

ಯೇ… ನಾಗ್ಯಾ… ಯೇ!!! ನಾಗ್ಯಾ… ನಿಂದ್ರೋ… ನಾನು… ಬರ್ತಿನಿ… ಇಬ್ರೂ ಕೂಡಿ… ಹೋಗೋಣ… ಎಂದ ಶ್ರೀಧರ.

ಅಗಸಿಕಟ್ಟಿಯ ಹತ್ತಿರ ಜನ ಇದ್ದದನ್ನು ನೋಡಿ, ಕೇಳಿಯೂ ಕೇಳಿಸದಂತೆ ನಾಗ್ಯಾ ನಟನೆ ಮಾಡಿದ.

ಶ್ರೀಧರ್ ಓಡೋಡಿ ಬಂದವನೇ… ಯೇ!!! ನಾಗ್ಯಾ… ನಿಂದರ್ ಅಂದ್ರೂ… ಹಂಗ ಬರ್ತಿಯಲ್ಲ… ಎಂದು ನಾಗ್ಯಾನ ಹೆಗಲ ಮೇಲೆ ಕೈ ಹಾಕಿದ.

ನಾಗ್ಯಾ… ಶ್ರೀಧರನ ಮುಖ ನೋಡಿದ!!! ಕಣ್ಣಂಚಲ್ಲಿ ನೀರು ಹನಿ ಹನಿಸುತ್ತಾ… ಸಪ್ಪೆ ಮೂತಿ ಮಾಡಿ, ಹೆಗಲಮೇಲೆ ಶ್ರೀಧರ ಹಾಕಿದ್ದ ಕೈಯನ್ನು ತೆಗೆಸಿದ.

ಯಾಕೋ ನಾಗ್ಯಾ!!! ದಿನಾ ನಾವಿಬ್ರು ಹೆಗಲ ಮ್ಯಾಲೆ ಕೈಹಾಕೊಂಡು ಸಾಲಿಗೆ ಹೋಗ್ತೀವಿ… ಇವತ್ಯಾಕ ಹಿಂಗ ಮಾಡಕತ್ತಿ? ಎಂದ ಶ್ರೀಧರ.

ಶ್ರೀಧರನ ಮಾತು ಕೇಳಿ ನಾಗ್ಯಾನಿಗೆ ದು:ಖ ತಡೆಯಲಾಗಲಿಲ್ಲ… ಏನೂ… ಹೇಳಲಾಗದೆ ಸಂಕಟದಿಂದ ಅವನು ಅಳತೊಡಗಿದ…

ಯಾಕೋ… ಅಳ್ತೀ…  ಶಾಲೆಗೆ ಹೋಗೋಣ ನಡೆ… ಎಂದು ಶ್ರೀಧರ್ ನಾಗ್ಯಾನ  ಕಪಾಳದವರೆಗೆ ಬಂದಿದ್ದ ಕಣ್ಣೀರು ಒರೆಸುತ್ತಾ… ಹೇಳಿದ.

ಶ್ರೀಧರ… ಊರ್ ಮಂದಿ…  ನಮ್ಮ ಜೊತಿ ಮಾತಾಡಬಾರ್ದು ಅಂತ ಪಂಚಾಯ್ತಿ ತೀರ್ಮಾನ ಆಗೈತಿ. ಅದು ನಿಂಗೂ ಗೊತ್ತೈತಿ. ಅದಕ್ಕ ನಾವಿಬ್ಬರು ಒಟ್ಟಿಗೆ ಕೂಡೋದು, ಓಡ್ಯಾಡೋದು ಮಾಡಬಾರ್ದು ಊರಾಗಿನ ಮಂದಿ… ನೋಡಿದ್ರ… ಮತ್ತ… ನಮ್ಮ ಕೇರಿ ಮಂದಿಗೆ ಕಿರಿಕಿರಿ ಮಾಡ್ತಾರ ಎಂದ ನಾಗ್ಯಾ…

ಯೇ!!! ನಾಗ್ಯಾ… ಏನೂ ಆಗೋದಿಲ್ಲ… ನಮ್ಮ ಕಾಕಾಗ ನಾನು ಹೇಳ್ತಿನಿ. ನೀನಂದ್ರ ನಂಗ ಇಷ್ಟ ಅಂತ…

ಶ್ರೀಧರ ಕಾಕಾ ಎನ್ನುತ್ತಲೇ… ನಾಗ್ಯಾನ ಎದೆ ಬಡಿತ ಹೆಚ್ಚಾಗತೊಡಗಿತು…  ಸುತ್ತಲೂ ಒಂದು ಬಾರಿ ಕಣ್ಣು ಹಾಯಿಸಿದ… ಅಗಸಿಕಟ್ಟಿಯ ಮುಂದೆ ಕುಳತಿದ್ದ ಜನ ಇತ್ತ ಕಡೆ ನೋಡುತ್ತಿದ್ದಾರೆ ಎಂದು ಅವನಿಗೆ ಅನಿಸಿತು..

ಶ್ರೀಧರ ನೀ… ಮುಂದ ನಡೀ… ನಾ… ನಿನ್ನ… ಹಿಂದ ಬರ್ತಿನಿ ಎಂದ ನಾಗ್ಯಾ…

ಹಿಂದ… ಮುಂದ… ಆಗೋದಿಲ್ಲ ನಡೀ… ಜೊತೀಗ… ಹೋಗೋಣ… ಎಂದು ಶ್ರೀಧರ ನಾಗ್ಯಾನ ಹೆಗಲ ಮೇಲೆ ಮತ್ತೆ ಕೈ ಹಾಕಿದ.

ಶ್ರೀಧರ!!! ಬ್ಯಾಡ!!! ನಾ ಹೇಳದ್ನ ಕೇಳು!!! ಎಂದು ನಾಗ್ಯಾ ಶ್ರೀಧರನ ಕೈ ಕೊಸರಲು ಪ್ರಯತ್ನಿಸಿದ.

ನೋಡು!!! ನಾಗ್ಯಾ ಸುಮ್ನ ನಡಿ… ಇಬ್ರೂ… ದಿನ ಹೆಂಗ ಸಾಲಿಗೆ ಹೋಗ್ತಿದ್ವಿ ಹಂಗ… ಹೋಗೋಣ… ಎಂದು ಶ್ರೀಧರ ಹಠಕ್ಕೆ ಬಿದ್ದ.

ಶ್ರೀಧರನ ಹಠದ ಮುಂದೆ ನಾಗ್ಯಾ ಸೋಲಲೇ ಬೇಕಾಯ್ತು. ಅಳುಕಿನಿಂದಲೇ… ನಮ್ಮ ಕೇರಿ ಮಂದಿಗೆ ಏನಾಗುತ್ತೋ!!! ಅನ್ನೋ ಹೇದ್ರಿಕಿ ಅಷ್ಟೆ… ನೀನಂದ್ರೆ ನಂಗೂ ಇಷ್ಟ. ನಮ್ಮ ಜೊತಿ ಯಾರೂ ಮಾತಾಡಬಾರ್ದು ಅಂತ ಅಂದಾಗ ನಾನು ನಮ್ಮ ಅವ್ವನ್ನ ಸೆರಗ ಹಿಡ್ಕೊಂಡು ಅತ್ತೀನಿ. ಎಂದು ನಾಗ್ಯಾ ತಾನು ಅನುಭವಿಸಿದ ಸಂಕಟವನ್ನು ಶ್ರೀಧರನ ಮುಂದೆ ಹೇಳತೊಡಗಿದ.

ಶ್ರೀಧರ ನಾಗ್ಯಾನನ್ನು ತಬ್ಬಿಕೊಂಡು ಸಮಾಧಾನ ಮಾಡಿದ. ಹೆಗಲ ಮೇಲೆ ಕೈ ಹಾಕಿಕೊಂಡು ಮಾತನಾಡುತ್ತಾ ಇಬ್ಬರೂ ಶಾಲೆಯ ಕಡೆ ಹೆಜ್ಜೆ ಹಾಕಿದರು.

ಇದನ್ನೂ ಓದಿ : ಗಾಯ ಕಥಾ ಸರಣಿ | ಸಂಚಿಕೆ – 16 | “ಧಣಿ”ಯ ಮತ್ತೊಂದು ಮಸಲತ್ತು

ಇವರಿಬ್ಬರೂ ಹೆಗಲ ಮೇಲೆ ಕೈಹಾಕಿಕೊಂಡು ಬರುತ್ತಿರುವದನ್ನು ನೋಡಿ ಶಾಲೆಯ ಮಕ್ಕಳು ದಿಗಿಲುಗೊಂಡರು… ಅಲ್ಲಿ ನೋಡ್ರೋ!!! ಶ್ರೀಧರ ನಾ… ನಾಗ್ಯಾನ… ಎಂದು ಹುಡುಗರು ಬೊಬ್ಬೆ ಹಾಕುತ್ತಿದ್ದರು. ಮಕ್ಕಳ ಗದ್ದಲವನ್ನು ನೋಡಿ ಕಛೇರಿ ಕೊಠಡಿಯಿಂದ ಹೊರ ಬಂದ ಸಂಗಪ್ಪ ಮಾಸ್ತರ ಇವರಿಬ್ಬರನ್ನೂ ನೋಡಿ ತಲೆ ತಲೆ ಚಚ್ಚಿಕೊಂಡರು.

ಕೈಯಲ್ಲಿದ್ದ ಕೋಲನ್ನು ಮೇಲಕ್ಕೆಎತ್ತಿ…  ಯೇ!!! ಶ್ರೀಧರ್… ನಾಗ್ಯಾನ ಹೆಗಲ ಮೇಲೆ ಹಾಕಿದ್ದ ಕೈ ನಾ ಕೆಳಗಿಳಿಸು ಎಂದರು.

ನಾಗ್ಯಾ!!! ಹೆದರಿ ಹಿಂದೆ ಸರಿಯಲು ಪ್ರಯತ್ನಿಸಿದ. ಆದರೆ ಶ್ರೀಧರ ಅವನ ಹೆಗಲ ಮೇಲೆ ಹಾಕಿದ್ದ ಕೈಯನ್ನು ಇನ್ನಷ್ಟು ಬಿಗಿಗೊಳಿಸಿದ. ನಾ ತಗಿಯಂಗಿಲ್ಲ ಸಾರ್… ದಿನಾ ನಾವಿಬ್ರೂ ಹಿಂಗ… ಸಾಲಿಗೆ ಬರ್ತಿದ್ವಿ… ಎಂದು ಶ್ರೀಧರ ಧೈರ್ಯದಿಂದ ಉತ್ತರಿಸಿದ.

ನಿನ್ನೆವರೆಗೂ ನಡೆದಿದ್ದು ಬ್ಯಾರೆ… ಇವತ್ತಿಂದು ಬ್ಯಾರೆ… ನೀವ್ಯಾರು ಕೇರಿ ಮಂದಿ ಹುಡ್ಗುರ ಜೊತಿ ಆಡಂಗಿಲ್ಲ… ಕೂಡಂಗಿಲ್ಲ… ಮಾತಾಡಂಗಿಲ್ಲ… ಎಂದರು ಸಂಗಪ್ಪ ಮಾಸ್ತರ್.

ಶ್ರೀಧರ!!! ಬಾರೋ ಈ ಕಡೆ… ನಾಗ್ಯಾನ… ಮೇಲೆ ಹಾಕಿದ ಕೈನ ತೆಗಿಯೋ… ಬಾರೋ… ಈ ಕಡೆ… ಎಂದು ಊರ ಮಕ್ಕಳು ಶ್ರೀಧರನನ್ನು ಕೂಗತ್ತಲೇ… ಇದ್ದವು. ಇದ್ಯಾವುದಕ್ಕೂ ಶ್ರೀಧರ ಜಗ್ಗಲಿಲ್ಲ. ನಾಗ್ಯಾನ ಮೇಲೆ ಹಾಕಿದ್ದ ಕೈಯನ್ನು ತೆಗೆಯಲೂ… ಇಲ್ಲ.

ನೋಡು!!! ಶ್ರೀಧರ ನೀ ಹಿಂಗ… ಮಾಡಿದ್ರ… ನಿಮ್ಮ ಅಪ್ಪಗ ಹೇಳ್ತಿನಿ… ನಿಮ್ಮ ಕಾಕಾನನ್ನ ಇಲ್ಲಿಗೆ ಕರಸ್ತೀನಿ ಎಂದು ತೋರ್ಬೇರಳು ತೋರಿಸಿದರು ಸಂಗಪ್ಪ ಮಾಸ್ತರ್.

ಸಂಗಪ್ಪ ಮಾಸ್ತರ್ ಎಷ್ಟೇ ಹೆದರಿಸಿದರೂ… ಎಷ್ಟೇ ಬೈದರೂ… ಶ್ರೀಧರ ತನ್ನ ಹಠ ಬಿಡಲಿಲ್ಲ.

ನಾವಿಬ್ರೂ ಜೊತೆಗೆ ಕೂತ್ಕೋತಿವಿ… ಆಟ ಆಡ್ತೀವಿ… ಎಂದು ಶ್ರೀಧರ ಪಟ್ಟು ಹಿಡಿದು ಕುಳಿತ.

ಶ್ರೀಧರನ ಹಠ ಮಾಸ್ತರರಿಗೆ ಬಿಸಿ ತುಪ್ಪವಾಗಿತ್ತು. ಧಣಿ ನೋಡಿದ್ರ… ಕೇರಿ ಮಕ್ಕಳನ್ನ ಬ್ಯಾರೆ ಕಡೆ ಕೂಡ್ಸಿ ಪಾಠ ಮಾಡ್ರಿ ಅಂದರಾ… ಅವರ ಅಣ್ಣನ ಮಗ ನೋಡಿದ್ರ!!! ನಾವು… ಜೊತಿಗೆ ಕೂತ್ಕೊಂಡು ಓದ್ತೀವಿ… ಆಡ್ತೀವಿ… ಅಂತಾರ… ಏನ್ ಮಾಡಬೇಕು? ಎಂದು ತಲೆ ತಲೆ ಚಚ್ಚಿಕೊಂಡ.

ಯೇ!!! ಶ್ರೀಧರ… ನಿಮ್ಮ ಕಾಕಾ ಪಂಚಾಯ್ತಿ ಒಳಗ ಏನ್ ತೀರ್ಪ ಹೇಳ್ಯಾರ? ಅಂತ ನಿಂಗ ಗೊತ್ತೈತಿಲ್ಲೋ? ಯಾಕ ಹಿಂಗ ಹಠ ಮಾಡ್ತಿ? ಎಂದು ಮಾಸ್ತರ್ ಶ್ರೀಧರನನ್ನು ಸಮಾಧಾನ ಪಡಿಸಲು ಮುಂದಾದರು.

ಶ್ರೀಧರ ತನ್ನ ಹಠವನ್ನು ಮಾತ್ರ ಸಡಿಲಿಸಲಿಲ್ಲ. ಮಾಸ್ತರ್ ಗೂ ಏನು ಮಾಡಬೇಕು? ಎಂದು ತೋಚಲಿಲ್ಲ… ಆ ಕಡೆಯಿಂದ… ಈ ಕಡೆಗೆ.. ಈ ಕಡೆಯಿಂದ… ಆ ಕಡೆಗೆ… ನಾಲ್ಕಾರು ಬಾರಿ ನಡೆದಾಡಿದರು.

ಸಾರ್!!! ಸಾರ್!!! ಧಣ್ಯಾರು ಮತ್ತು ದಳಪತಿ, ಶಾನುಭೋಗ್ರು ಸಾಲಿ ಕಡೆ ಬರಕತ್ತಾರೀ… ಎಂದು ಹುಡುಗರು ಕೂಗಲಾರಂಭಿಸಿದರು.

ಮಾಸ್ತರ್ ತಿರುಗಿ ನೋಡಿ… ಓ… ಓಹ್…  ಏನು ಕಾದಿದೆಯೋ? ಗ್ರಹಚಾರ!!! ಎಂದು ಪೇಚಾಡತೊಡಗಿದರು..

ಧಣಿ ಎಂಬ ಪದ ಕಿವಿಗೆ ಬೀಳುತ್ತಲೇ… ನಾಗ್ಯಾ… ಶ್ರೀಧರನ ಕೈ ಕೊಸರಿಕೊಂಡು ಶಾಲೆಯ ಕೊಠಡಿಯೊಳಗೆ ಓಡಿದ.

ಧಣಿ, ಧಳಪತಿ, ಶಾನುಭೋಗ, ಗೌಡ ಶಾಲೆಯ ಅಂಗಳಕ್ಕೆ ಬಂದರು. ಮಕ್ಕಳೆಲ್ಲ ಕೊಠಡಿಯೊಳಗೆ ಓಡಿದರು.

ಮಾಸ್ತರರು ದಿಗಲು ಬಡಿದವರಂತೆ ನಿಂತಿದ್ದರು.. ಶ್ರೀಧರ ತನ್ನ ಚಿಕ್ಕಪ್ಪನನ್ನೇ(ಧಣಿ)… ದುರುಗುಟ್ಟಿಕೊಂಡು ನೋಡುತ್ತಾ… ನಿಂತನು. ಗಾಯ

 

(ಮುಂದುವರೆಯುವುದು………)

ಈ ವಿಡಿಯೋ ನೋಡಿ ಜಾತಿವಾದಿ ವ್ಯವಸ್ಥೆಯ ಸಂಚಿನಿಂದ ಹತ್ಯೆಯಾದ ರೋಹಿತ್ ವೇಮುಲ   ಗಾಯ

 

 

Donate Janashakthi Media

Leave a Reply

Your email address will not be published. Required fields are marked *