ಗಾಯ ಕಥಾ ಸರಣಿ | ಸಂಚಿಕೆ – 15 | ಎದೆಗೆ ಬಿದ್ದ ಮಾರ್ಕ್ಸ್ ಮತ್ತು ಅಂಬೇಡ್ಕರ್…

ಗುರುರಾಜ ದೇಸಾಯಿ
(ಇಲ್ಲಿಯವರೆಗೆ….. ಬಾಡೂಟಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಂಡು, ಬೆಂಕಿಗೆ ಹಲಗೆಯನ್ನು ಕಾಸಿ ಜೋರಾಗಿ ಬಾರಿಸತೊಡಗಿದರು. ಕುಣಿದರು, ಮೆರವಣಿಗೆ ನಡೆಸಿದರು, ರಾಜಣ್ಣ ಬಂದಿದ್ದನ್ನು ಕಂಡು ಸಂಭ್ರಮ ಪಟ್ಟರು. ರಾಜಣ್ಣ ತೋರಿಸಿದ ಪೋಟೊಗಳಲ್ಲಿದ್ದ ವ್ಯಕ್ತಿಗಳ ಬಗ್ಗೆ ಹತ್ತಾರು ಪ್ರಶ್ನೆಗಳನ್ನು ಕೇಳಿ ಕೊನೆಗೆ ಒಪ್ಪಿಕೊಂಡರು ಮುಂದೆ ಓದಿ……. ) ಗಾಯ

ಬಾಡೂಟ ಮುಗಿದ ನಂತರ ಕಟ್ಟೆಯ ಮೇಲೆ ಜಮಖಾನಿ ಹಾಸಿದರು.  ರಾಜಣ್ಣ, ಮಲ್ಯಾ, ದೇವ್ಯಾ, ಹಿರಿಯ ಎಲ್ಲರೂ ಜಮಖಾನಿ ಮ್ಯಾಲೆ ಕುಂತರು. ಬಾಲವ್ವ ಗಂಗಾಳದಾಗ ಎಲಿ, ಅಡಕಿ ಸುಣ್ಣ ತಂದಿಟ್ಟಳು.

ರಾಜಣ್ಣಾರ… ಎಲಿ ಅಡಕಿ ಹಾಕೋರಿ… ಎಂದ ಹಿರಿಯ.

ಯೇ!!! ಹಾಕ ಬೇಕ್ರಿ…  ಜಬರ್ದಸ್ತ ಬಾಡೂಟ ತಿಂದ ಮ್ಯಾಲೆ ಎಲಿ, ಅಡಿಕಿ ಹಾಕಿದ್ರನಾ ಮಜ ಇರ್ತೈತಿ ನೋಡ್ರಿ!!! ಎಂದು ಎರಡು ಎಲೆಯನ್ನು ತಿರಿವಿಸಿ ಅದಕ್ಕೆ ಸುಣ್ಣ ಹಚ್ಚಿ ಅಡಿಕೆಯನ್ನು ಹಾಕಿ, ಒಂದೆರಡು ಲವಂಗ, ಯಾಲಕ್ಕಿ ಹಾಕಿಕೊಂಡು  ಮಡಚಿ ರಾಜಣ್ಣ ಬಾಯಿಗೆ ಹಾಕಿಕೊಂಡು ಮಾತಿಗೆ ಕುಳಿತರು.

ರಾಜಣ್ಣನ ಬಾಡೂಟದ ವರ್ಣನೆಗೆ ಜನ ಹುಚ್ಚೆದ್ದು ನಗ ತೊಡಗಿದರು, ಹೀಗೆ 10-20 ನಿಮಿಷ ಹರಟೆ ಹೊಡೆದರು.  ರಾಜಣ್ಣ ಮಾತನಾಡುತ್ತಲೇ ಇದ್ದ. ಆದರೆ ಕೇರಿಯ ಜನರಿಗೆ ಮಾರ್ಕ್ಸ್ ಮತ್ತು ಅಂಬೇಡ್ಕರ್ ಬಗ್ಗೆ ತಿಳಿಯುವ ಕುತೂಹಲ ಇತ್ತು. ಈಗ ಹೇಳಿಯಾರು, ಸ್ವಲ್ಪ ಹೊತ್ತು ಬಿಟ್ಟು ಹೇಳಿಯಾರು ಎಂದು ಆಸೆಗಣ್ಣಿನಿಂದ ನೋಡುತ್ತಲೇ  ಇದ್ದರು…

ರಾಜಣ್ಣಾರ  ಆ ಫೋಟೋದಾಗ ಇರೋರ ಬಗ್ಗೆ ಏನೋ ಹೇಳ್ತಿನಿ ಅಂದಿದ್ರಿ? ಎಂದು ಸಣಕಲು ದೇಹದ ಸಣ್ಣ್ಯಾ ತಲೆ ಕೆರೆಯುತ್ತಾ… ನೆನಪಿಸಿದ. ಉಳಿದವರು ಸಣ್ಣ್ಯಾನ ಮಾತಿಗೆ ಹೌದೆಂದು ತಲೆ ಅಲ್ಲಾಡಿಸಿದರು. ಗಾಯ

ರಾಜಣ್ಣ ಎಲ್ಲರನ್ನೂ ಸುತ್ತಲು ಕೂರಿಸಿಕೊಂಡು ಅವರಿಬ್ಬರ ಬಗ್ಗೆ ಹೇಳಲು ಶುರು ಮಾಡಿದ. ಅಂಬೇಡ್ಕರ್ ಅವರ ಭಾವ ಚಿತ್ರವನ್ನು ತೋರಿಸಿ “ಇವರ ಹೆಸರು ಅಂಬೇಡ್ಕರ್ ಅಂತ, ಮಹಾರಾಷ್ಟ್ರ ಅಂಬೆವಾಡ ಅನ್ನೋ ಊರಾಗ ಹುಟ್ಟಿದರು.  ಇವರು ದಲಿತರ ಪಾಲಿನ ಬೆಳಕು. ನೀವು ಅನುಭವಿಸಿದ್ದೀರಲ್ಲ ಅದಕ್ಕಿಂತ ಕೆಟ್ಟಸ್ಥಿತಿಯನ್ನು ಇವರು ನೋಡಿದ್ರು, ಸ್ವತಃ ಅನುಭವಿಸಿದ್ರು ಕೂಡಾ. ಹಾಗಾಗಿ ಆ ಶೋಷಣೆಯಿಂದ ದಲಿತರನ್ನು ಮುಕ್ತರನ್ನಾಗಿ ಮಾಡಬೇಕು ಅಂತ ಸಾಕಷ್ಟು ಹೋರಾಟ ಮಾಡಿದ್ರು.  ಮನು ಜಾತಿಯವರಿಗೆ ಬ್ರಾಹ್ಮಣ್ಯ ಅಂದ್ರೆ ಶ್ರೇಷ್ಟ, ಉಳಿದವರು ಇವರ ಪಾಲಿಗೆ ಕೀಳು..!, ಯಾರೂ ಮುಟ್ಟಬಾರ್ದು, ಮಾತಾಡಬಾರ್ದು, ಇವರ ಧ್ವನಿಯನ್ನು ಯಾರು ಕೇಳಸ್ಕೋಬಾರ್ದು, ಬೀದಿಗೆ ಬಂದಾಗ ಹೆಜ್ಜೆ ಗುರುತು ನೆಲದ ಮ್ಯಾಲೆ ಇರಬಾರ್ದು ಅಂತ ಬೆನ್ನಿಗೆ ಪೊರಕೆ ಕಟ್ಕೊಂಡು ಓಡಾಡ್ತ ಇದ್ರು, ಉಗುಳಿನ ಎಂಜಲು‌ ನೆಲಕ್ಕ ಬೀಳಬಾರ್ದು ಅಂತಾ ಕೊರಳಿಗೆ ಮಡಿಕೆ ಕಟ್ಕೊತಿದ್ರು, ಇವರ ನೆರಳು ಮೇಲ್ವರ್ಗದವರ ಮ್ಯಾಲೆ ಬೀಳಬಾರ್ದು ಅಂತಾ ಮಧ್ಯಾಹ್ನ ಊರೊಳಗ ಬರ್ತಿದ್ರು…!, ಆಗ ಇವರ ನೆರಳು ಮೇಲ್ವರ್ಗದವರ ಕಾಲಕೆಳಗ ಬರ್ತಿತ್ತು, ಸಾರ್ವಜನಿಕವಾಗಿ ಇದ್ದ ಬಾವ್ಯಾಗಿನ ನೀರು ಇವರು ಕುಡಿಯಂಗೆ ಇರ್ಲಿಲ್ಲ! ಇದೆಲ್ಲದರ ವಿರುದ್ದ ಅಂಬೇಡ್ಕರ್‌ ದೊಡ್ಡ ಹೋರಾಟ ನಡೆಸಿದ್ರು. ಇವರು ತೋರಿದ ದಿಟ್ಟತನದಿಂದ ನಾವು ಇವತ್ತು ನೆಮ್ಮದಿಯಿಂದ ಊಟ ಮಾಡಕತ್ತೀವಿ. ದಲಿತರನ್ನು, ಹಿಂದುಳಿದವರನ್ನು ಮಹಿಳೆಯರನ್ನು ಕೀಳಾಗಿ ಕಾಣ್ತಿದ್ದ ಮನು ಜಾತಿ ವ್ಯವಸ್ಥೆಗೆ ಬುದ್ದಿ  ಕಲಿಸಿದವರು ಇವರು”… ರಾಜಣ್ಣನ ಮಾತು ಪೂರ್ತಿ ಆಗಿರಲಿಲ್ಲ.

ಮನು ಜಾತಿ ಅಂದ್ರ ಎಂತದ್ರಿ ಅದು? ಎಂದು ಚೂರಿ ಪರ್ಸ್ಯಾ ಪ್ರಶ್ನಿಸಿದ.

ಚಲೋ ಪ್ರಶ್ನೆ ಕೇಳಿದ್ರಿ!!! ನಿಮಗ ಸುಲಭವಾಗಿ ಅದನ್ನ ಅರ್ಥ ಮಾಡಿಸ್ಬೇಕು ಅಂದ್ರೆ, ನಿಮ್ಮೂರ ಧಣಿ, ಶಾನಭೋಗ, ಗೌಡ, ದಳಪತಿ ಅದಾರಲ್ಲ… ಅಂತಹ ಮನಸ್ಥಿತಿ ಇರೋರ್ನ ಮನು ಜಾತಿಯವರು ಅಂತಾರ. ಅವರಿಗೆ ಬ್ರಾಹ್ಮಣರು ಮಾತ್ರ ಶ್ರೇಷ್ಟ, ಉಳಿದವರೆಲ್ಲ ಕನಿಷ್ಠ. ಬ್ರಾಹ್ಮಣರು ತುಳಿದ ನೀರನ್ನು ತೀರ್ಥ ಅಂತ ಕುಡದ್ರಿ… ನೀವು ಒಳ್ಳೆ ಮಂದಿ, ಅದು ಹೊಲಸು ನೀರು ಅಂದ್ರಿ ಅಂದ್ರ ನೀವು ಕೆಟ್ಟೋರು, ಹಿಂಗ ದಬ್ಬಾಳಿಕಿ ನಡೆಸಿ ಬ್ರಾಹ್ಮಣ ಶಾಹಿ ವ್ಯವಸ್ಥೆ ದಲಿತರ ಮ್ಯಾಲೆ ದಬ್ಬಾಳಿಕೆ ನಡಸ್ತಿತ್ತು,  ಇರ್ಲಿ… ಇಂತಹ ಮನು ಜಾತಿಯವರ್ದು ಒಂದು ಗ್ರಂಥ ಇತ್ತು “ಮನುಸ್ಮೃತಿ” ಅಂತ ಅದನ್ನ ಸುಟ್ಟು, ಎಲ್ಲರೂ ಸಮನಾಗಿ ಬಾಳಬೇಕು, ಬೇಧ ಭಾವ ಹೋಗಬೇಕು, ಅಣ್ಣ-ತಮ್ಮಂದಿರ ಹಂಗ ಇರಬೇಕು ಅಂತ ಸಂವಿಧಾನ ರಚಿಸಿದ. ಸಮಾಜದಾಗ ತಾರತಮ್ಯ ಅನುಭವಿಸ್ತಿರೋ  ಜನಾಂಗಗಳ ಹಕ್ಕುಗಳನ್ನು ರಕ್ಷಣೆ ಮಾಡದ್ಕ ಮೀಸಲಾತಿ ಜಾರಿ ಮಾಡಿ ದಲಿತರ ಧ್ವನಿ ಗಟ್ಟಿ ಆಗಂಗ ಮಾಡಿದ ಮಹಾತ್ಮ ಈ ಅಂಬೇಡ್ಕರ್ ಎಂದು ರಾಜಣ್ಣ ಹೇಳಿದಾಗ… ಎಲ್ಲರೂ ಅಂಬೇಡ್ಕರ್ ಭಾವ ಚಿತ್ರವನ್ನು ತದೇಕ ಚಿತ್ತದಿಂದ ನೋಡುತ್ತಿದ್ದರು!!!!

ಇದನ್ನೂ ಓದಿಗಾಯ ಕಥಾ ಸರಣಿ| ಸಂಚಿಕೆ 13 – ನೆಮ್ಮದಿಯ ನಾಳೆಗಾಗಿ ಬದುಕೋಣ

ರಾಜಣ್ಣರ… ಇನ್ನೋಬ್ರು ಅದಾರಲ್ರಿ? ಕೆಂಪು ಕೋಟು ಹಾಕಿ ಗಡ್ಡ ಬಿಟ್ಟಾರಲ್ಲ ಅವರು ಇವರ ಹಂಗ ಹೋರಾಟ ಮಾಡ್ಯಾರೇನ್ರಿ? ಎಂದು ಬಾಲವ್ವ ಪ್ರಶ್ನಿಸಿದಳು.

ಪಕ್ಕದಲ್ಲಿದ್ದ ನೀರನ್ನು ಕುಡಿದ ರಾಜಣ್ಣ, ಇವರ ಬಗ್ಗೇನೂ ಹೇಳ್ತಿನಿ… ಎಂದು ಬಾಯಿ ಒರಸಿಕೊಂಡು, ಇವರು ಕಾರ್ಲ್ ಮಾರ್ಕ್ಸ್ ಅಂತ  ಜರ್ಮನಿಯ ರೈನ್ ಪ್ರದೇಶದ ಟ್ರಿಯರ್ ನಗರದಲ್ಲಿ ಹುಟ್ಟಿದವರು. ಇವರು ದಲಿತರ ಪರವಾಗಿ, ಕಾರ್ಮಿಕರ ಪರವಾಗಿ ಹೋರಾಟ ಮಾಡಿದವರು. ಶೋಷಣೆ ರಹಿತ ಸಮಾಜ ನಿರ್ಮಾಣ ಆಗಬೇಕು ಅಂತ ಕನಸು ಕಂಡವರಲ್ಲಿ ಇವರು ಮೊದಲಿಗರು. ಶಿಕ್ಷಣ ಉಚಿತವಾಗಿ ಸಿಗಬೇಕು ಅಂತ ಪ್ರತಿಪಾದನೆ ಮಾಡಿದವರು. ಸಂಪತ್ತು ಎಲ್ಲರ ಕೈಯಲ್ಲಿ ಇರಬೇಕು ಎಂದು ಹೋರಾಡಿದವರು, ಎಂದು ರಾಜಣ್ಣ ಮಾರ್ಕ್ಸ್ ಬಗ್ಗೆ ವಿವರವಾಗಿ ಹೇಳಿದರು.

ರಾಜಣ್ಣಾರಾ… ಸಂಪತ್ತು ಎಲ್ಲರ ಕೈಯಾಗ… ಇರಬೇಕು ಅಂದ್ರೇನು? ಅಂತ ಅರ್ಥ ಆಗಲಿಲ್ಲ ನೋಡ್ರಿ!!! ಅದನ್ನ ಒಂದಿಷ್ಟು ತಿಳಿಸಿ ಹೇಳ್ರಿ… ಎಂದು ಕೆಂಪ್ಯಾ ಮರುಪ್ರಶ್ನೆ ಮಾಡಿದ. ಉಳಿದವರು ತಲೆ ಅಲ್ಲಾಡಿಸಿದರು.

ಆತು…ಆತು… ಹೇಳ್ತಿನಿ… ಅದಕ್ಕಿಂತ ಮುಂಚೆ ನಾನೊಂದಿಷ್ಟು ಪ್ರಶ್ನೆ ಕೇಳ್ತಿನಿ… ಅದಕ್ಕ ಉತ್ತರ ಕೊಡ್ರಿ. ನಿಮ್ಮ ಊರಾಗ ಶ್ರೀಮಂತರು ಯಾರು ಹೇಳ್ರಿ? ಎಂದ ರಾಜಣ್ಣ. ಧಣಿ… ದಳಪತಿ… ಗೌಡ… ಶಾನುಭೋಗ… ಎಂದು ಒಬ್ಬೊಬ್ಬರು ಉತ್ತರ ನೀಡಿದರು. ಜಾಸ್ತಿ ಆಸ್ತಿ ಇರೋದು ಯಾರದು? ಎಂದು ರಾಜಣ್ಣ ಮರು ಪ್ರಶ್ನೆ ಹಾಕಿದ.

ಧಣಿ… ದಳಪತಿ… ಗೌಡ… ಶಾನುಭೋಗ ಎಂದು ಮತ್ತದೇ ಧಾಟಿಯಲ್ಲಿ ಹೇಳಿದರು. ಜಾಸ್ತಿ ದುಡಿಯೋರು ಯಾರು? ಎಂದು ರಾಜಣ್ಣ ಮತ್ತೊಂದು ಪ್ರಶ್ನೆ ಹಾಕಿದ.

ಯೇ!!! ನಾವಾರೀ… ಎಂದು ಎಲ್ಲರೂ ತಮ್ಮ ಎದೆ ಮುಟ್ಟಿಕೊಂಡು ಹೇಳಿದರು. ದುಡೀತಾ ಇರೋರು ನೀವು? ಆದ್ರೇ… ಆಸ್ತಿ ಇರೋದು ಅವರ ಹತ್ರ ಇದ್ಯಾಕೆ ಹಿಂಗೆ? ಎಂದು ಪ್ರಶ್ನಿಸಿದ ರಾಜಣ್ಣ.

ಊಹುಂ….., ಗೊತ್ತಿಲ್ರಿ… ಎಂದು ತಲೆ ಅಲ್ಲಾಡಿಸಿದರು.

ಇದು ದೊಡ್ಡ ಅಸಮಾನತೆ, ಇವತ್ತು ನಮ್ಮ ದೇಶ ಬೆಳೀದೆ… ಇರೋದಕ್ಕೆ ಇದೇ… ದೊಡ್ಡ ಕಾರಣ. ಇಂತಹ ಅಸಮಾನತೆ ಇರಬಾರ್ದು. ದುಡಿಯುವ ಜನರಿಗೆ ಸಂಪತ್ತಿನಲ್ಲಿ ಹಕ್ಕಿದೆ. ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು. ಆಗ ಬಡತನ ನಿವಾರಣೆಯಾಗುತ್ತೆ. ತಾರತಮ್ಯ ಹೋಗುತ್ತೆ ಅಂತಾ ಹೋರಾಟ ಮಾಡಿದವರು. ಈಗಲೂ ಇವರ ಸಿದ್ದಾಂತ ಜಾರಿ ಆಗಬೇಕು ಅಂತ ಜಗತ್ತಿನಾಧ್ಯಂತ ಜನ ಹೋರಾಟ ಮಾಡ್ತಾ ಇದ್ದಾರೆ ಎಂದು ರಾಜಣ್ಣ ವಿವರಿಸಿದ.

ಎಲ್ಲರೂ ಮಾರ್ಕ್ಸ್ ಮತ್ತು ಅಂಬೇಡ್ಕರ್ ಗೆ ಮತ್ತೊಂದು ಬಾರಿ ನಮಸ್ಕರಿಸಿದರು. ಮೊಂಬತ್ತಿ ಬೆಳಗಿದರು.

ಇದನ್ನೂ ಓದಿ : ಗಾಯ ಕಥಾ ಸರಣಿ| ಸಂಚಿಕೆ 14 – ಬಾಡೂಟದ ವಾಸನೆ ಧಣಿಯ ಮನೆಗೆ ಬಡಿದಿತ್ತು

ರಾಜಣ್ಣಾರಾ… ಬಾಳ ಒಳ್ಳೆ ಕೆಲಸ ಮಾಡಿದ್ರಿ, ಇವರ ಬಗ್ಗೆ ತಿಳಿಸಿ. ನಮ್ಮ ಕೇರಿ ಜನರಿಗೆ ತಿಳುವಳಿಕೆ ಮೂಡಿಸಿದ್ರಿ… ಎಂದು ಹಿರಿಯ ಕೈ ಮುಗಿದ.

ರಾಜಣ್ಣನು ಹಿರಿಯನಿಗೆ ಕೈ ಮುಗಿದು, ನಿಮ್ಮಂತ ಹಿರಿಯರು ಧೈರ್ಯದಿಂದ, ಕಿರಿಯರಲ್ಲಿ ಮೂಡಿದ ಉತ್ಸಾಹವನ್ನು ಉತ್ತೇಜಿಸಬೇಕು, ಇವರು ಕಂಡ ಕನಸು ನನಸು ಮಾಡೋ ಜವಬ್ದಾರಿ ತೊಗೊಬೇಕು ಎಂದ ರಾಜಣ್ಣ.

ಅದಕ್ಕ ಏನ್ ಮಾಡಬೇಕ್ರಿ??? ರಾಜಣ್ಣಾರಾ… ನೀವ ಹೇಳ್ರಿ??? ಎಂದು ಮಲ್ಯಾ ಮತ್ತು ದೇವ್ಯಾ ವಿನಂತಿಸಿದರು.

ಇವರು ಹಾಕಿ ಕೊಟ್ಟ ದಾರಿಯಲ್ಲಿ ನಡಿಯೋಕೆ ನಾವು ಸಂಘ ಮಾಡಬೇಕು. ಆ ಸಂಘಕ್ಕೆ ಸರಿಯಾದ ತಿಳುವಳಿಕೆ ಕೊಟ್ಟು, ಅನ್ಯಾಯ ಆದ ಕಡೆ ಹೋರಾಟ ಮಾಡೋಹಂಗ ಗಟ್ಟಿ ಧೈರ್ಯ ತುಂಬ ಬೇಕು ಎಂದ ರಾಜಣ್ಣ. ಗಾಯ

ಸಂಘ ಕಟ್ಟೋಕೆ ನಾವು ಸಿದ್ದ ಎಂಬಂತೆ ಎಲ್ಲರೂ ಉತ್ಸಾಹದಿಂದ ತಲೆ ಅಲ್ಲಾಡಿಸಿದರು.

ನಿಮ್ಮ ಉತ್ಸಾಹ ನೋಡಿ ನನಗ ಬಾಳ ಖುಷಿ ಆಗಕತ್ತೈತಿ. ಸಂಘ ಕಟ್ಟಾಕ ಏನೆಲ್ಲಾ ಬೇಕೋ ಅದನ್ನ ತಯಾರಿ ಮಾಡ್ಕೋಳೋಣ. ಇನ್ನೊಂದೆರಡು ದಿನ ನನಗೆ ವ್ಯಾಳೆ ಕೊಡ್ರಿ… ಎಂದು ಮನವಿ ಮಾಡಿದ ರಾಜಣ್ಣ.

ಎಲ್ಲರೂ ಆಯ್ತು ಎಂದು ತಲೆ ಅಲ್ಲಾಡಿಸಿದರು.

ಯೇ!!!! ಹುಡ್ಗುರ ಸ್ವಲ್ಪ ಹೊತ್ತು ಹಲಗಿ ಬಾರ್ಸೋಣ. ಆಮ್ಯಾಲೆ ನಿಮಗೊಂದು ಹಾಡು ಹೇಳಿಕೊಡ್ತೀನಿ ಎಂದ ರಾಜಣ್ಣ.

ಹುಡುಗರು ಅಲ್ಲಿಯೇ ಇದ್ದ ಕೆಂಡಕ್ಕೆ ಕಟ್ಟಿಗೆ ಹಾಕಿ ಜೋರಾಗಿ ಬೆಂಕಿ ಉರಿಯುವಂತೆ ಮಾಡಿದರು, ಹಲಗೆಯನ್ನು ಕಾಸಿದರು. ನಾದ ಸರಿಯಾಗಿ ಬರತೊಡಗಿದಾಗ ಜೋರಾಗಿ ಹಲಗೆಯನ್ನು ಬಾರಿಸಲು ಆರಂಭಿಸಿದರು.

ರಾಜಣ್ಣ ಕ್ರಾಂತಿ ಗೀತೆ ಶುರುಮಾಡಿದ…

“ಗೆಲ್ಲಾಕೊಂದು ಜಗತ್ತೈತಿ,

ಅದಕ್ಕಾಗಿ ನಮಗ ದಾರಿ ಐತಿ…

ನಾವೆಲ್ಲ ಒಗ್ಗೂಡಬೇಕು

ಗುರಿಯನ್ನು ಮುಟ್ಟಬೇಕು

ಛಲವನ್ನು ಹೊಂದಬೇಕು

ಕೆಂಪು, ನೀಲಿ ಉಸಿರಾಗಬೇಕು

ಅದಕ್ಕಾಗಿ ನಾವು ದುಡಿಬೇಕು “

ಎಂದು ಹಾಡು ಹೇಳತೊಡಗಿದ. ಉಳಿದವರು ರಾಜಣ್ಣ ಹೇಳಿದಂತೆ ಹಾಡನ್ನು ಹಾಡ ತೊಡಗಿದರು. ಹಲಗೆಯ ಸದ್ದು , ಹಾಡಿನ ಸದ್ದು ಧಣಿ ಮನೆಯ ಕದವ ತಟ್ಟುತ್ತಿತ್ತು.

        (ಮುಂದುವರೆಯುವುದು…….)

ಈ ವಿಡಿಯೋ ನೋಡಿತುಮಕೂರು : ದಲಿತರು ಓಡಾಡಬಾರದೆಂದ ರಸ್ತೆಗೆ ಮರದ ತುಂಡು ಹಾಕಿದ ಜೆಡಿಎಸ್‌ ಮುಖಂಡ Janashakthi Media  ಗಾಯ

 

 

 

Donate Janashakthi Media

Leave a Reply

Your email address will not be published. Required fields are marked *