ಗಾಯ ಕಥಾ ಸರಣಿ | ಸಂಚಿಕೆ – 16 | “ಧಣಿ”ಯ ಮತ್ತೊಂದು ಮಸಲತ್ತು

ಗುರುರಾಜ ದೇಸಾಯಿ
(ಇಲ್ಲಿಯವರೆಗೆ….. ಬಾಡೂಟದ ನಂತರ ರಾಜಣ್ಣ ಕೇರಿಯ ಜನರಿಗೆ ಅಂಬೇಡ್ಕರ್‌ ಮತ್ತು ಕಾರ್ಲ್‌ ಮಾರ್ಕ್ಸ್‌ರವರ ವಿಚಾರಗಳನ್ನು ಎದೆಗೀಳಿಸಿದ್ದ. ಅನ್ಯಾಯವನ್ನು ಪ್ರಶ್ನಿಸಬೇಕು, ಸಮಾನತೆಗಾಗಿ ಹೋರಾಡಬೇಕು, ಅದಕ್ಕಾಗಿ ಸಂಘಟನೆ ಮಾಡಬೇಕು ಎಂದು ಜಾಗೃತಿ ಮೂಡಿಸಿದ್ದ…. ಮುಂದೆ ಓದಿ… ) ಗಾಯ

 

ಬೆಳಗಿನ ಜಾವ 6 ಗಂಟೆ ಸಮಯ. ಧಣಿಯ ಮನೆ ಕದದ ಸದ್ದು ಜೋರಾಗಿ ಬಡಿದುಕೊಳ್ಳುತ್ತಿತ್ತು.

ಧಣಿ… ಧಣಿ … ದಡ್… ದಡ್… ಎಂದು ಕದವನ್ನು ತಟ್ಟುತ್ತಿದ್ದ ಸದ್ದು ಕೇಳುತ್ತಲೇ… ಇತ್ತು.

ಕಿರ್ರ್… ಎಂದ ಸದ್ದು ಕೇಳುತ್ತಲೇ… ಕದ ತೆರೆದರೆಂದು, ಕದ ತಟ್ಟುತ್ತಿದ್ದವನ ಕೈ ಹಿಂದೆ ಹೋಯಿತು.

ಪೂರ್ಣ ಬಾಗಿಲು ತೆಗೆದ ಧಣಿ, ಗೌಡಪ್ಪ!!! ಎಂದು ಗಾಬರಿಯಾಗಿ ಇಷ್ಟು ನಸಿಕಿನ್ಯಾಗ!!! ಬಂದಿಯಲ್ಲೋ!!! ಮರಾಯ ಅಂತಾದ್ದೇನಾಯ್ತು??? ಎಂದ ಧಣಿ.

ಧಣಿ ಲಗೂ ಮುಖ ತೊಳೀರಿ!!!, ದಳಪತಿ ಹೊಲದಾಗ ಆಗ್ಲೇ  ಶ್ಯಾನುಭೋಗ್ರು ನಿಮ್ಮನ್ನ ಕಾಯ ಕತ್ತಾರ… ಮಾತೋಡದೈತಿ. ಬಾಳ ಘಾತದ ಸುದ್ದಿ ಐತಿ!!! ಎಂದು ಗೌಡ ತಡವರಿಸಿದ.

ಗೌಡನ ತಡವರಿಕೆ ನೋಡಿ… ಧಣಿ ಆತು, ಕುಂತ್ಕೋ… ಜಲ್ದೀ ಮುಖ ತೊಳ್ಕೋಂಡು ಬರ್ತಿನಿ ಎಂದು ಬಚ್ಚಲಮನಿ ಕಡೆ ನಡೆದ…

ಸ್ವಲ್ಪ ಹೊತ್ತಿನ ನಂತರ ಧಣಿ ಮತ್ತು ಗೌಡಪ್ಪ ಅಲ್ಲಿಂದ ಹೊರಟರು……,

ರಸ್ತೆಯುದ್ದಕ್ಕೂ ಜನ “ಅಡ್ಡಬಿದ್ದೆ ಧಣಿ”, ಎಂದು ಬೆನ್ನು ಬಾಗಿಸಿ ನಮಿಸುತ್ತಿದ್ದರು. ಗೌಡ್ರು ಧಣಿಯಾರ್ನ ಕರ್ಕೊಂಡು ಹೊಂಟಾನ ಏನ್ ಕಾದೈತೋ ಏನೋ ಇವತ್ತು ಎಂದು ಜನ ಮಾತನಾಡಿಕೊಳ್ಳುತ್ತಿದ್ದರು.

ಧಣಿ ಮತ್ತು ಗೌಡ ದಳಪತಿಯ ಹೊಲದತ್ತ ಸಮೀಪಿಸುತ್ತಿದ್ದರು. ಇತ್ತ ದಳಪತಿ, ಶಾನುಭೋಗ ಇವರಿಬ್ಬರ ಬರುವಿಕೆಗೆ ಕಾಯುತ್ತಾ, ಅತ್ತಿಂದತ್ತ ಇತ್ತಿಂದತ್ತ ಕೈ ಕೈ ಹಿಸುಕಿಕೊಂಡು ಓಡಾಡುತ್ತಿದ್ದರು.

ಯೇ!!!! ದಳಪತಿ  ಅಲ್ಲಿ ನೋಡು… ಧಣಿ ಮತ್ತು ಗೌಡ ಬರೋದು ಕಾಣಕತ್ತೈತಿ  ಎಂದ ಶಾನುಭೋಗ.

ಧಣಿ, ಗೌಡ, ದಳಪತಿಯ ಹೊಲದ ಬದುವಿಗೆ ಇದ್ದ ತ್ವಾಟದ ಮನಿಯ ಕಟ್ಟಿಯ ಮುಂದೆ ಕುಳಿತರು. ಚಹ ತೊಗೊಂಡು ಬಾ ಎಂದು ದಳಪತಿ ಆಳಿಗೆ ಸನ್ನೆ ಮಾಡಿದ. ದೊಡ್ಡದಾದ ಲೋಟದಲ್ಲಿ ಚಹಾ ಇವರಿದ್ದ ಜಾಗಕ್ಕೆ ಬಂತು.

ಇದನ್ನೂ ಓದಿಗಾಯ ಕಥಾ ಸರಣಿ| ಸಂಚಿಕೆ 14 – ಬಾಡೂಟದ ವಾಸನೆ ಧಣಿಯ ಮನೆಗೆ ಬಡಿದಿತ್ತು

ಚಹಾ ಕುಡಿಯುತ್ತಾ… ದಳಪತಿ ಏನೋ ಅರ್ಜೆಂಟ್ ಅಂತ ಈ ಗೌಡನ ಕಡೆ ಹೇಳಿ ಕಳ್ಸಿದ್ದೀ…, ಅದೇನು ಮರಾಯ ಅಂತಾದು ಅರ್ಜೆಂಟ್!!! ಈ ಗೌಡ ಬೇರೆ ಸರಿಯಾಗಿ ಹೇಳದೆ ಘಾತ!!! ಘಾತ!!!  ಅಂತ ಒದರಕತ್ತಾನ ಎಂದ ಧಣಿ.

ಅಯ್ಯೋ!!! ಯಪ್ಪಾ!!! ಧಣಿ… ಎಂದು ದಳಪತಿ ಬಾಯಿಮೇಲೆ ಕೈ ಇಟ್ಟು, ದೊಡ್ಡ ಘಾತ ಆಗೈತಿ!!!  ಆ ರಾಜಣ್ಣ ರಾತ್ರಿ ಊರಿಗೆ ಬಂದಿದ್ದ!!!! ಮಾತು ಇನ್ನೂ ಪೂರ್ಣಗೊಂಡಿರಲಿಲ್ಲ.

ಯೇ!!! ದಳಪತಿ!!! ಮುಂಜ್ಯಾನೆ… ಮುಂಜ್ಯಾನೆ… ಆ ರಾಜಣ್ಣನ ಹೆಸರ ತಗೆದ್ರಾ… ನನ್ನ ಪಿತ್ತ ನೆತ್ತಿಗೇರ್ತ್ತೈತಿ ನೋಡು… ಎಂದ ಧಣಿ.

ಧಣಿ ಸ್ವಲ್ಪ ಸಮಾಧಾನದಿಂದ ಕೇಳ್ರಿ ನಾ ಹೇಳೋದ್ನಾ…  ಕೇರಿ ಮಂದಿಗೆ ನಾವು ಬಹಿಷ್ಕಾರ ಹಾಕಿ ನಮ್ಮ ಮನಿಗೆ ಹೋಗಿ ಅರಾಮ ನಿದ್ದಿ ಮಾಡೀವಿ, ಆದ್ರ!!! ಇಡೀ… ಒಂದು ರಾತ್ರಿಯೊಳಗ ಕೇರಿಗೆ ಕೇರಿನ ಧೈರ್ಯ!!! ತುಂಬಕೊಂಡೈತಿ ಎಂದ ದಳಪತಿ.

ಧೈರ್ಯ!!! ಹ್ಹಾ!!! ಹ್ಹಾ!!! ಎಂದು ಧಣಿ ಗಹಗಹಿಸಿ ನಕ್ಕ. ಶಕ್ತಿನೇ ಇಲ್ದಿರೋ ಆ ಮಂದಿಗೆ ಧೈರ್ಯ ಎಲ್ಲಿಂದ ಬರ್ತೈತೋ…… ದಳಪತಿ ಎಂದು ಧಣಿ ಮತ್ತೆ ನಗಲಾರಂಭಿಸಿದ. ಗಾಯ

ಧಣಿ!!! ಇದು ನಗೋ ವಿಚಾರ ಅಲ್ಲ!!! ರಾತ್ರಿ ಅವರು ಹಚ್ಚಿದ ಒಲಿ ಬೆಂಕಿ ನಮ್ಮ ಬುಡಕ್ಕೆ ಬರೋ ಕಾಲ ಹತ್ರ ಆಗಕತ್ತೈತಿ!!! ಹಾಗಾಗಿ ನಾ ಹೇಳೋದನ್ನ ಗಂಭೀರವಾಗಿ ಕೇಳ್ರಿ… ಎಂದ ದಳಪತಿ.

ಆತು… ಆತು…  ಎಂದು ನಗು ನಿಲ್ಲಿಸಿ, ಹೇಳು ದಳಪತಿ ಅದೇನು ಅಂತ ಕೇಳ್ತಿನಿ ಎಂದ ಧಣಿ.

ಧಣಿ!!! ನಿನ್ನೆ ರಾತ್ರಿ ಆ ರಾಜಣ್ಣ ಕೇರಿ ಹತ್ರ ಬಂದು ಹೋಗಿದ್ನ ನಮ್ಮ ಕಾಳ್ಯಾ ನೋಡಾನ್ರೀ !!! ಅಷ್ಟ ಅಲ್ರೀ… ರಾತ್ರಿ ಕುರಿ ಕೊಯ್ದು ಹಬ್ಬ ಆಚರಿಸಿ ಊಟ ಮಾಡ್ಯಾರಂತ್ರೀ … ಜೋರಾಗಿ ಹಲಗಿ ಬ್ಯಾರೆ ಬಾರ್ಸ್ಸಾರಂತ್ರಿ!!! ಎಲ್ಲಾನೂ ದೂರದಿಂದ ನಿಂತು ಈ ನಮ್ಮ ಕಾಳ್ಯಾ ನೋಡ್ಯಾನ್ರೀ…, ಎಂದು ದಳಪತಿ ತಮ್ಮ ಆಳಿನ ಕಡೆ ತೋರಿಸಿದ.

ಹೌದಾ!!!  ಒಂದು ರಾತ್ರಿಯಲ್ಲಿ ಇಷ್ಟೆಲ್ಲಾ… ಆಗಿ ಹೋಯ್ತಾ!!!???? ರಾಜಣ್ಣಾ!!! ನಿನ್ನ ಬುದ್ದೀನಾ ನಮ್ಮೂರ ವರೆಗೂ ತಂದ್ಯಾ??? ಎಂದು ಹಲ್ಲು ಕಡಿಯತೊಡಗಿದ…  ಇದಕ್ಕೊಂದು ಗತಿ ಕಾಣಿಸ್ಬೇಬೇಕು ದಳಪತಿ… ಎಂದು ದಳಪತಿಯ ಹೆಗಲ ಮೇಲೆ ಧಣಿ ಕೈ ಹಾಕಿದ.

ಧಣಿ!!! ಅದೇನೋ ಸಂಘ ಕಟ್ಟಬೇಕು, ನಿಮ್ಮ ವಿರುದ್ಧ ಹೋರಾಡಬೇಕು ಅಂತ ಆ ರಾಜಣ್ಣ ಏನೋ ಹೇಳ್ತಾ ಇದ್ದ ಧಣಿ ಎಂದ ಕಾಳ್ಯಾ…

ಸಂಘ!!! ಸಂಘ!!! ಕಟ್ತಾರಂತಾ … ಆ ಕೆಳ ಜಾತಿ ಜನ!!! ಧಣಿ ಕೋಪದಿಂದ ಕೆಂಡಾಮಂಡಲವಾಗಿದ್ದ ರಾಜಣ್ಣನ ಹೆಸರನ್ನು ಹೇಳಿ ಹಲ್ಲು ಕಚ್ಚುತ್ತಲೇ… ಇದ್ದ…

ಹೌದು ಧಣಿ!!! ಇಷ್ಟೆಲ್ಲಾ ಹೊಡಿದ್ರು… ಬಡಿದ್ರು… ಬಹಿಷ್ಕಾರ ಹಾಕಿದ್ರು… ಆ ನನ್ ಮಕ್ಕಳ ಕೊಬ್ಬು ಮಾತ್ರ… ಇನ್ನು ಕರ್ಗಿಲ್ಲ ನೋಡ್ರಿ!!! ಎಂದ ಶಾನುಭೋಗ .

ಧಣಿ… ರಾಜಣ್ಣ ಅವರ ಎದೆಗೆ ಹಾಕಿದ ಅಕ್ಷರ… ಅವರ ಬುದ್ದಿಗೆ ಬಂದು, ಅವರ ಕೈಯಿಂದ ಏನಾದ್ರು ಮಾಡೋದಕ್ಕು ಮೊದಲೇ ನಾವು ಏನಾದ್ರು ಮಾಡಬೇಕ್ರಿ!!! ಇಲ್ಲಾ ಅಂದ್ರ… ನಮ್ಮ ಕತಿ ಅಷ್ಟೇ… ಎಂದ ಗೌಡ. ಗಾಯ

ಈ ಜಾತಿ ವ್ಯವಸ್ಥೆಯೊಳಗ ಅವರು ನಮ್ಮ ಕಾಲ ಕೆಳಗ ಇರ್ಲೇ!!! ಬೇಕು, ಗೌಡ, ಶಾನುಭೋಗ… ನೀ… ಚಿಂತಿ ಮಾಡಬ್ಯಾಡ. ನಾನು ದಳಪತಿ ಸೇರಿ ಏನಾದ್ರು… ಯೋಚನೆ ಮಾಡ್ತೀವಿ ಎಂದು ಧಣಿ ಅವರನ್ನು ಸಮಾಧಾನ ಪಡಿಸಿದ.

“ಅದ್ಹೇಂಗ್ರಿ!!!  ಸಮಾಧಾನ ಮಾಡ್ಕೊಂತೀರಿ???? ಹೆದರ್ಕೊಂಡು ರಾತ್ರೋ… ರಾತ್ರಿ… ಊರ್ ಬಿಟ್ಟು ಹೋಗ್ತಾರಾ…… ಅನ್ಕೊಂಡಿದ್ದ ಕೇರಿ ಮಂದಿ. ಕುರಿ ಕುಡದು ಹಬ್ಬದ ಸಂಭ್ರಮ ಮಾಡಿದ್ನಾ… ನೆಪ್ಪು ಮಾಡ್ಕೊಂಡ್ರ… ಕುರಿ ಕೊಯ್ದ ಕತ್ತಿ ನಮ್ಮ ಕತ್ತ ಕೊಯ್ತಾವೇನೋ” ಅನ್ಸಕತ್ತೈತಿ… ಎಂದ ಶಾನುಭೋಗ.

ಧಣಿ ಪಟ್ಟನೆ ತಲೆಗೆ ಏನೋ ಹೊಳೆದವರಂತೆ ಬೆರಳಿನಿಂದ ಲಟಿಕೆ ಹೊಡೆದು, ಶಾನಭೋಗ ಇಂತ ವ್ಯಾಳ್ಯೇದಾಗ ಎಂಥಾ ಒಳ್ಳೆ ಮಾತು ಹೇಳಿದ್ಯೋ!!! ನೀವಿಬ್ರು ಹೊಂಡ್ರೀ… ನಾನು, ದಳಪತಿ ಕೂಡ ಏನೋ ಮಾತಾಡೋದೈತಿ ಎಂದ ಧಣಿ.

ಇದನ್ನೂ ಓದಿ : ಗಾಯ ಕಥಾ ಸರಣಿ | ಸಂಚಿಕೆ – 15 | ಎದೆಗೆ ಬಿದ್ದ ಮಾರ್ಕ್ಸ್ ಮತ್ತು ಅಂಬೇಡ್ಕರ್…

ಆತ್ರೀ… ಧಣಿ ಏನ್ ಮಾಡ್ತಿರಿ ನೋಡ್ರಿ??? ನೋವು ಹೊಕ್ಕೀವ್ರೀ ಎಂದು ಗೌಡ ಮತ್ತು ಶಾನುಭೋಗ ಅಲ್ಲಿಂದ ಹೊರಟರು.

ಧಣಿ ಮತ್ತು ದಳಪತಿ ಇಬ್ಬರು ಆ ಕಡೆಯಿಂದ ಈ ಕಡೆ ಈ ಕಡೆಯಿಂದ ಆ ಕಡೆ ಈ ಕಡೆ ಓಡಾಡುತ್ತಾ ಇದ್ದರು. ಹೀಗೆ ಹತ್ತಾರು ನಿಮಿಷ ಕಳೆದ ನಂತರ…

ಧಣಿ!!! ಏನ್… ಮಾಡೋದು ಅಂತ ತಲಿಗೆ ಈಗ ಹೊಳಿತು ನೋಡ್ರೀ…  ಎಂದು ಧಣಿಯ ಕಿವಿಯಲ್ಲಿ ದಳಪತಿ ಸಂಚಿನ ವಿವರವನ್ನು ಊದಿದ…

ಶಹಬ್ಬಾಸ್!!! ದಳಪತಿ, ಬಾಳ ಖುಷಿ ಆಯ್ತು, ಈ ಕೆಲಸ ಆದಷ್ಟು ಬೇಗ ಆಗ್ಲೀ… ಎಂದು ಧಣಿ ದಳಪತಿಯ ಬೆನ್ನು ತಟ್ಟಿದ.

ಧಣಿ… ಧಣಿ… ಧಣಿ… ಧಣಿ… ಎಂದು ಯಾರೋ ಕೂಗಿದ ಹಾಗಾಯ್ತು…

ಧಣಿ ಮತ್ತು ದಳಪತಿ ಯಾರೆಂದು ಕೊರಳೆತ್ತಿ ನೋಡೊದರು.

ಧಣಿ!!! ಧಣಿ!!! ಧ್ವನಿ ಮಾತ್ರ ಕೇಳುತಿತ್ತು…

ಧಣಿ !!! ಅಲ್ನೋಡ್ರೀ… ಶಾನುಭೋಗ ಓಡಿ ಬರಕತ್ತಾನ್ರೀ… ಎಂದ.

ಮತ್ತೇನಾತೋ!!! ಮರಾಯ… ಎಂದು ಧಣಿ ಚಡಪಡಿಸತೊಡಗಿದ.

ಶಾನುಭೋಗ ಧಣಿಯ ಹತ್ತಿರ ಬಂದು ಧ…ಣಿ… ಧಣಿ… ಧಣಿ ಎಂದು ಏದುಸಿರು ಬಿಡತೊಡಗಿದ.

ನೀ ಸುದಾರ್ಸ್ಕೋ… ಮರಾಯಾ… ನಿಧಾನಕ್ಕ ಏನಾಯ್ತು ಅಂತ ಹೇಳು ಎಂದ ಧಣಿ.

ಸ್ವಲ್ಪ ಹೊತ್ತಿನ ನಂತರ ಸಾವರಿಸಿಕೊಂಡು… ಧಣಿ ನಿಮ್ಮ ಅಣ್ಣನ ಮಗ ಶ್ರೀಧರ… ಮತ್ತೆ… ಮಾದಾರ ನಾಗ್ಯಾ… ಇಬ್ಬರು ಹೆಗಲ ಮ್ಯಾಲೆ ಕೈ ಹಾಕೊಂಡು ಸಾಲಿಗೆ ಹೊಂಟಾರ್ರೀ… ಎಂದು ಉಗುಳು ನುಂಗುತ್ತಾ ನೋಡಿದ್ದೆಲ್ಲವನ್ನು ಧಣಿಗೆ ವರದಿ ಒಪ್ಪಿಸಿದ.

ಧಣಿಯ ಪಿತ್ತ ನೆತ್ತಿಗೇರಿತ್ತು… ಲೇ!!! ಶ್ರೀಯಾ … ಲೇ!!! ಶ್ರೀಯಾ……… ಎಂದು ಜೋರಾಗಿ ಕೂಗತೊಡಗಿದ

 

(ಮುಂದುವರೆಯುವುದು………)

ಈ ವಿಡಿಯೋ ನೋಡಿ : ಮನೆ ಮನೆಗೆ ಬರುತ್ತಿರುವುದು ಮಂತ್ರಾಕ್ಷತೆಯೇ? ಬಿಜೆಪಿ ಪ್ರಣಾಳಿಕೆಯೇ? ಆರೆಸ್ಸೆಸ್ ಸಿದ್ಧಾಂತವೇ?  ಗಾಯ

 

 

Donate Janashakthi Media

Leave a Reply

Your email address will not be published. Required fields are marked *