81 ಕೋಟಿ ಜನಗಳಿಗೆ  ಒಂದು ವರ್ಷ ಪುಕ್ಕಟೆ ಆಹಾರಧಾನ್ಯಗಳು: ಪಿಎಂಜಿಕೆಎವೈ ಜನವರಿಯಿಂದ ಸ್ಥಗಿತ

ನವದೆಹಲಿ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ 81.35 ಕೋಟಿ ಫಲಾನುಭವಿಗಳಿಗೆ ಒಂದು ವರ್ಷದ ವರೆಗೆ 35 ಕೆಜಿ ಆಹಾರಧಾನ್ಯಗಳನ್ನು ಉಚಿತವಾಗಿ ವಿತರಿಸಲು ನಿರ್ಧರಿಸಿರುವುದಾಗಿ ಕೇಂದ್ರ ಆಹಾರ ಮಂತ್ರಿಗಳು ಪ್ರಕಟಿಸಿದ್ದಾರೆ. ಕೇಂದ್ರ ಸಂಪುಟ ಈ ಕುರಿತು ಡಿಸೆಂಬರ್‍ 23ರಂದು ಈ ಸಂಬಂಧ ನಿರ್ಣಯ ಕೈಗೊಂಡಿದೆ.  ಇದಕ್ಕೆ ತಗಲುವ ರೂ.2 ಲಕ್ಷ ಕೋಟಿ ವೆಚ್ಚವನ್ನು ಕೇಂದ್ರ ಸರಕಾರವೇ ಭರಿಸುತ್ತದೆ ಎಂದು ಅವರು ಇದು ಪ್ರಧಾನ ಮಂತ್ರಿಗಳ ಬಡವರ-ಪರ ನಿಲುವನ್ನು ಮತ್ತೊಮ್ಮೆ ಬಿಂಬಿಸಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಆಹಾರ ಭದ್ರತೆಯ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸಬೇಕು

ವಾಸ್ತವವಾಗಿ, ಇದು ಪ್ರಧಾನಿಗಳ ಉದಾರತೆಯನ್ನಲ್ಲ, ದೇಶವನ್ನು ಹಸಿವಿನ ಭೂತ ಕಾಡುತ್ತಿದೆ ಎಂದು ಕೇಂದ್ರ ಸರಕಾರ ಕೊನೆಗೂ ಒಪ್ಪಿಕೊಂಡಿರುವುದನ್ನು ಸೂಚಿಸುತ್ತದೆ ಎಂದು ಈ ರಂಗದ ವೀಕ್ಷಕರು ಹೇಳುತ್ತಾರೆ. ಕೆಲವೇ ಸಮಯದ ಹಿಂದೆ ಜಾಗತಿಕ ಹಸಿವಿನ ಸೂಚ್ಯಂಕ ಭಾರತದಲ್ಲಿನ ಪರಿಸ್ಥಿತಿಯನ್ನು ‘ಬಹಳ ಗಂಭೀರ’ ಎಂದು ವರ್ಣಿಸಿದಾಗ, 121 ದೇಶಗಳ ಪೈಕಿ 107ನೇಸ್ಥಾನದಲ್ಲಿದೆ ಎಂದಾಗ ಅದನ್ನು ಕೇಂದ್ರ ಸರಕಾರದ ಮಂತ್ರಿಗಳೂ ಸೇರಿದಂತೆ ಆಳುವ ಪಕ್ಷದ ಮುಖಂಡರುಗಳು ಬಲವಾಗಿ ನಿರಾಕರಿಸಿದ್ದರು, ಕೆಲವರಂತೂ ಇದು ಫೇಕ್‍ ನ್ಯೂಸ್‍ ಎಂದೂ ಹೇಳಿದ್ದರು.

“..ನಮ್ಮಲ್ಲಿ ಅಷ್ಟೊಂದು ಬಡ ಹಸಿದ ಜನಗಳಿಲ್ಲ”

“80 ಕೋಟಿ ಬಡ ಹಸಿದ ಜನಗಳಿದ್ದಾರೆಯೇ?”
ವ್ಯಂಗ್ಯಚಿತ್ರ: ಅಲೋಕ್‍ನಾಥ್, ಫೇಸ್‍ಬುಕ್

ಅಲ್ಲದೆ,  ಈಗ ನಿರ್ಧರಿಸಿರುವ ಈ ಸ್ಕೀಮ್  ಹೊಸತೇನಲ್ಲ ಎಂದೂ ಈ ವೀಕ್ಷಕರು ಹೇಳುತ್ತಾರೆ. ಏಕೆಂದರೆ ಈಗಾಗಲೇ ಪ್ರಧಾನ ಮಂತ್ರಿ ಗರೀಬ್‍ ಕಲ್ಯಾಣ ಅನ್ನ ಯೋಜನೆ(ಪಿಎಂಜಿಕೆಎವೈ)ಅಡಿಯಲ್ಲಿ 81.35 ಕೋಟಿ ಜನಗಳಿಗೆ 5 ಕೆಜಿ ಪುಕ್ಕಟೆ ಆಹಾರ ಧಾನ್ಯಗಳು ಮತ್ತು ಯುಪಿಎ-2 ಸರಕಾರದ ಆಳ್ವಿಕೆಯ ಅವಧಿಯಲ್ಲಿ ಜಾರಿಗೆ ತಂದ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ 5 ಕೆಜಿ ಅಕ್ಕಿ ಕೆ.ಜಿ.ಗೆ 3ರೂ ಮತ್ತು  ಗೋಧಿ 2ರೂ. ದರದಲ್ಲಿ ಸಿಗುತ್ತಿತ್ತು.  ಈಗ ಇವೆರಡು ಸ್ಕೀಮುಗಳನ್ನು ವಿಲೀನಗೊಳಿಸಲಾಗಿದೆ ಎಂದು ಆಹಾರ ಮಂತ್ರಿಗಳು ಹೇಳಿದ್ದಾರೆ. ಅಂದರೆ ಪಿಎಂಜಿಕೆವೈ ಜನವರಿ 1ರಿಂದ ಮುಂದುವರೆಯುವುದಿಲ್ಲ.

ಇದನ್ನು ಓದಿ: ಆಹಾರಕ್ಕೆ ಸಂಬಂಧಿಸಿದ ಆರ್ಥಿಕ ಭ್ರಮೆಗಳು

ಉದ್ಯೋಗಹೀನತೆ ಮತ್ತು ಹಣದುಬ್ಬರದಿಂದಾಗಿ ಜನಗಳ ಪೋಷಣಾಂಶ ಕೊರತೆ ಹೆಚ್ಚಿರುವಾಗ ದೇಶದ ಮೂರನೇ ಎರಡು ಭಾಗ ಬಡಜನಗಳಿಗೆ ಈ ಎರಡೂ ಯೋಜನೆಗಳು ಮುಂದುವರೆಯುವುದು ಅಗತ್ಯವಿತ್ತು. ಇಂತಹ ಸನ್ನಿವೇಶದಲ್ಲಿ ಈ 81 ಕೋಟಿ ಬಡವರು ಅಗತ್ಯ ಪೋಷಣಾಂಶ ಪಡೆಯಲು ಬಹಿರಂಗ ಮಾರುಕಟ್ಟೆಯಿಂದ  ಆಹಾರಧಾನ್ಯಗಳನ್ನು ಖರೀದಿಸಬೇಕಾಗುತ್ತದೆ. ಬಹಿರಂಗ ಮಾರುಕಟ್ಟೆಯಲ್ಲಿ ಈಗ ಸಾಮಾನ್ಯ ಅಕ್ಕಿಯ ಬೆಲೆ ಕೆಜಿಗೆ 40ರೂ. ಮತ್ತು ಗೋದಿ ಹಿಟ್ಟಿಗೆ 30ರೂ.ಇದೆ ಎಂದು ಈ ಬಗ್ಗೆ ಟಿಪ್ಪಣಿ ಮಾಡುತ್ತ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.

ಹಿಡಿಯಷ್ಟು ಉದ್ಯಮಪತಿಗಳ 10ಲಕ್ಷ ಕೋಟಿ ರೂ. ಸುಸ್ತಿಸಾಲವನ್ನು  ಬ್ಯಾಂಕುಗಳು, ಬಹುಪಾಲು ಸರಕಾರೀ ಒಡೆತನದ ಬ್ಯಾಂಕುಗಳು ರೈಟ್‍ ಆಫ್‍ ಮಾಡಿರುವುದಾಗಿ ಮತ್ತು ಇವುಗಳಲ್ಲಿ ಕನಿಷ್ಟ 1ಲಕ್ಷ ಕೋಟಿ ರೂ. ಉದ್ದೇಶಪೂರ್ವಕವಾಗಿಯೇ ಮರುಪಾವತಿ ಮಾಡದ ಸಾಲಗಳು ಎಂದು  ಇತ್ತೀಚೆಗಷ್ಟೇ  ಸರಕಾರವೂ ಒಪ್ಪಿಕೊಂಡಿರುವಾಗ, ಇದರ ಜೊತೆಗೆ ಈ ಕಾರ್ಪೊರೇಟ್‍ಗಳಿಗೆ ತೆರಿಗೆ ರಿಯಾಯ್ತಿಗಳನ್ನು ಕೊಡುತ್ತಿರುವಾಗ ದೇಶದ ಮೂರನೇ ಎರಡು ಭಾಗದಷ್ಟಿರುವ ಈ ಬಡಜನಗಳಿಗೆ ತುಸುವಾದರೂ ಪರಿಹಾರ ಒದಗಿಸುತ್ತಿದ್ದ ಈ ಎರಡು ಸ್ಕೀಮುಗಳನ್ನು ಮುಂದುವರೆಸುವುದು ಕಷ್ಟವಾಗಬಾರದಿತ್ತು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *