ನವದೆಹಲಿ: ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಗೆ ಸಂಬಂಧಿಸಿದಂತೆ ಪತ್ರವನ್ನು ಬರೆದಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ʻತಾವು ಈ ನಿರ್ಧಾರ ಮೊದಲೇ ಮಾಡಿದ್ದರೆ ಅನೇಕ ರೈತರ ‘ಮುಗ್ಧ ಜೀವಗಳನ್ನು’ ಉಳಿಸಬಹುದಿತ್ತು ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಪಿಲಿಭಿತ್‌ನ ಬಿಜೆಪಿ ಸಂಸದ ವರುಣ್ ಗಾಂಧಿ ಈ ಕೆಲಸವನ್ನು ಮೊದಲೇ ಮಾಡಿದ್ದರೆ, ಪ್ರಾಣತೆತ್ತ 700ಕ್ಕೂ ಹೆಚ್ಚು ಅನ್ನದಾತರು ಈಗಲೂ ಜೀವಂತವಾಗಿಯೇ ಇರುತ್ತಿದ್ದರು. ದಯವಿಟ್ಟು ಮೃತರ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಿ ಎಂದು ವರುಣ್ ಗಾಂಧಿ ಬೇಡಿಕೆ ಇಟ್ಟಿದ್ದಾರೆ. ಹಾಗೇ, ಪ್ರತಿಭಟನಾ ನಿರತ ರೈತರ ವಿರುದ್ಧ, ಹಲವು ರಾಜಕೀಯ ಪ್ರೇರಿತ ಎಫ್ಐಆರ್ಗಳು ದಾಖಲಾಗಿವೆ. ಈ ಮೂಲಕ ಅವರ ಮೇಲೆ ದೌರ್ಜನ್ಯ ಎಸಗಲಾಗಿದೆ. ಅಂಥಹ ಎಲ್ಲಾ ಪ್ರಕರಣಗಳನ್ನು ಕೂಡಲೇ ರದ್ದುಗೊಳಿಸಿ ಎಂದೂ ಕೇಳಿಕೊಂಡಿದ್ದಾರೆ.
ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಕಾನೂನುಬದ್ಧಗೊಳಿಸಬೇಕು ಎಂದು ಸಹ ಉಲ್ಲೇಖಿಸಿದ್ದಾರೆ.
ಅಲ್ಲದೆ, ಅಕ್ಟೋಬರ್ 3 ರಂದು ಉತ್ತರ ಪ್ರದೇಶ ರಾಜ್ಯದ ಲಖಿಂಪುರ ಜಿಲ್ಲೆಯ ಖೇರಿ ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಬಂಧಿಸಲಾಗಿದ್ದು ಅವರ ವಿರುದ್ಧ ‘ಕಟ್ಟುನಿಟ್ಟಿನ ಕ್ರಮ’ ತೆಗೆದುಕೊಳ್ಳುವಂತೆ ವರುಣ್ ಗಾಂಧಿ ಪ್ರಧಾನಿಯನ್ನು ಕೇಳಿದ್ದಾರೆ. ಹೃದಯವಿದ್ರಾವಕ ಘಟನೆ ನಮ್ಮ ಪ್ರಜಾಪ್ರಭುತ್ವಕ್ಕೆ ಕಳಂಕ. ಈ ಘಟನೆ ಸಂಬಂಧ ಕೇಂದ್ರ ಸಚಿವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ನ್ಯಾಯಯುತ ವಿಚಾರಣೆ ನಡೆಯಬೇಕು ಎಂಬುದು ನನ್ನ ಮನವಿ’ ಎಂದು ಬಿಜೆಪಿ ಸಂಸದರು ಪತ್ರದಲ್ಲಿ ಬರೆದಿದ್ದಾರೆ.