7 ನೇ ಸುತ್ತಿನ ಮಾತುಕತೆ ವಿಫಲ : ತೀವ್ರಗೊಂಡ ರೈತರ ಪ್ರತಿಭಟನೆ

ನವದೆಹಲಿ, ಜ4: ಕೇಂದ್ರ ಸರಕಾರದ ಮೂರು ಕೃಷಿ ಕಾನೂನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ 40 ನೇ ದಿನಕ್ಕೆ ಕಾಲಿಟ್ಟಿದೆ.  ರೈತರು ಮತ್ತು ಸರಕಾರದ ನಡುವೆ ಇಲ್ಲಿಯವರೆಗೆ 6 ಸುತ್ತಿನ ಮಾತುಕತೆಗಳು ನಡೆದಿದ್ದವು. ಇಂದು 7 ನೇ ಸುತ್ತಿನ  ಮಾತುಕತೆ ನಿಗದಿಯಾಗಿತ್ತು, ಸರಕಾರ ರೈತರ ಬೇಡಿಕೆಗಳನ್ನು ಒಪ್ಪಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ 7 ನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿದೆ.

ಇಂದು ನಡೆದ ಸಭೆಯಲ್ಲಿ ಪ್ರತಿಭಟನಾ ನಿರತ ರೈತರ ಮುಖಂಡರು ಕೃಷಿ ಕಾನೂನನ್ನು ಹಿಂಪಡೆಯಬೇಕೆಂಬ ಪಟ್ಟು ಮುಂದುವರೆಸಿದರು. ಇತ್ತ ಹೊಸ ಕಾನೂನಿನಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ಕೇಂದ್ರದ ಮೂವರು ಸಚಿವರು ವಿವರಿಸಿದರು. ಇದಕ್ಕೆ ರೈತರು ಒಪ್ಪಿಗೆ ನೀಡದ್ದರ ಪರಿಣಾಮ ಯಾವುದೇ ನಿರ್ಣಯ ತೆಗೆದುಕೊಳ್ಳದೇ ಸಭೆ ಅಂತ್ಯಗೊಂಡಿದೆ.

ಒಂದು ಗಂಟೆಯ ಚರ್ಚೆಯ ಬಳಿಕ ದೀರ್ಘಾವಧಿ ವಿರಾಮ ತೆಗೆದುಕೊಂಡ ರೈತರು, ತಾವು ಲಂಗರ್ (ಕಮ್ಯುನಿಟಿ ಕಿಚನ್) ನಿಂದ ತರಿಸಿಕೊಂಡಿದ್ದ ಆಹಾರವನ್ನು ಸೇವಿಸಿದರು. ಆದರೆ ಕಳೆದ ಬಾರಿಯಂತೆ (ಡಿ.30 ರ ಸಭೆ) ಈ ಬಾರಿ ಕೇಂದ್ರ ಸಚಿವರು-ರೈತರು ಒಟ್ಟಿಗೆ ಆಹಾರ ಸೇವಿಸಲಿಲ್ಲ. ಅಷ್ಟೇ ಅಲ್ಲದೇ ವಿರಾಮದ ವೇಳೆ ರೈತ ಮುಖಂಡರು, ಕೇಂದ್ರ ಸಚಿವರು ಪ್ರತ್ಯೇಕವಾಗಿ ತಮ್ಮ ತಮ್ಮಲ್ಲೇ ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದ್ದು ವಿಶೇಷವಾಗಿತ್ತು.

ಸುದೀರ್ಘ ವಿರಾಮದ ನಂತರ ಉಭಯ ಪಕ್ಷಗಳ ನಾಯಕರೂ ಸಂಜೆ 5.15 ಕ್ಕೆ ಮಾತುಕತೆ ಪುನಾರಂಭ ಮಾಡಿದರು. ಈ ಸಭೆ ಕೇಂದ್ರದ ಕಾನೂನುಗಳನ್ನು ಹಿಂಪಡೆಯುವ ರೈತರ ಬೇಡಿಕೆ ಕೇಂದ್ರಿತವಾಗಿದ್ದ ಪರಿಣಾಮ ಯಾವುದೇ ನಿರ್ಣಯ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. “ಸರ್ಕಾರ ಆಂತರಿಕವಾಗಿ ಸಮಾಲೋಚನೆ ನಡೆಸಿ ನಂತರ ರೈತರ ಒಕ್ಕೂಟಕ್ಕೆ ತಿಳಿಸಲಿದೆ” ಎಂದು ಸಚಿವರು ಹೇಳಿದ್ದಾಗಿ ರೈತ ಮುಖಂಡರು ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ ಜ.05 ರಂದು ರೈತ ಒಕ್ಕೂಟದ ಆಂತರಿಕ ಸಭೆ ನಡೆಯಲಿದ್ದು, ರೈತರ ಮುಂದಿನ ನಡೆಯ ಬಗ್ಗೆ ತೀರ್ಮಾನವಾಗುವ ಸಾಧ್ಯತೆ ಇದೆ. ಜ.04 ರ ಸಭೆಯಲ್ಲಿ ರೈತರ ಪ್ರಮುಖ ಬೇಡಿಕೆಗಳಾದ ಎಂಎಸ್ ಪಿ ಬಗ್ಗೆಯೂ ಚರ್ಚೆಯಾಗದೇ ಇದ್ದದ್ದು ಮತ್ತೊಂದು ವಿಶೇಷ.

ಸರಕಾರ ತನ್ನ ಹಠಮಾರಿ ನಿಲುವನ್ನು ಮುಂದುವರೆಸಿದರೆ ಹೋರಾಟವನ್ನು ತೀವ್ರಗೊಳಿಸಲು ಸಂಯುಕ್ತ ಕಿಸಾನ್‍ ಮೋರ್ಚಾ ನಿರ್ಧರಿಸಿದೆ. ಈಗಾಗಲೆ ತೀರ್ಮಾನ ಮಾಡಿಕೊಂಡಂತೆ ಜನವರಿ 6 ರಂದು ಕುಂಡ್ಲಿ-ಮಾನೇಸರ್-ಪಲ್ವಲ್‍ (ಕೆಎಂಪಿ) ರಸ್ತೆಯಲ್ಲಿ ಟ್ರಾಕ್ಟರ್ ಮೆರವಣಿಗೆ ನಡೆಸಲು ಸಿದ್ದತೆ ಮಾಡಿಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *