ಚಿಲಿ ಮಿಲಿಟರಿ ಕ್ಷಿಪ್ರದಂಗೆಗೆ 50 ವರ್ಷ

– ವಸಂತರಾಜ ಎನ್.ಕೆ

50 ವರ್ಷಗಳ ಹಿಂದೆ, ಸೆಪ್ಟೆಂಬರ್ 11, 1973 ರಂದು, ಚಿಲಿಯಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸಾಲ್ವಡಾರ್ ಅಲೆಂಡೆ ಸರ್ಕಾರವನ್ನು ಜನರಲ್ ಪಿನೋಶೆ ನಾಯಕತ್ವದ ಮಿಲಿಟರಿ ಕ್ಷಿಪ್ರದಂಗೆಯ ಮೂಲಕ ಯುಎಸ್ ಉರುಳಿಸಿತ್ತು.  ಅಧ್ಯಕ್ಷ ಅಲೆಂಡೆ ಅವರ ಹತ್ಯೆ ಮಾಡಲಾಯಿತು. ಪಿನೋಶೆ ಸರ್ವಾಧಿಕಾರಿ ಸರಕಾರವು, ಅಧ‍್ಯಕ್ಷ ಅಲೆಂಡೆ ಅವರನ್ನು ಸಕ್ರಿಯವಾಗಿ ಬೆಂಬಲಿಸಿದ ಸಾವಿರಾರು ಕಮ್ಯುನಿಸ್ಟರ, ಸಮಾಜವಾದಿಗಳ, ಕಾರ್ಮಿಕರ, ಕಲಾವಿದರ ಕಗ್ಗೊಲೆ ಮಾಡಿಸಿತು. ಅಲೆಂಡೆ ಅವರ ನೇತೃತ್ವದ ಎಡಪಂಥೀಯ ಸರಕಾರ 1970 ರಲ್ಲಿ ಚುನಾಯಿತವಾಗಿದ್ದು, 1973ರ ಹೊತ್ತಿಗೆ  ಚಿಲಿಯಲ್ಲೂ ಇಡೀ ಜಗತ್ತಿನಲ್ಲೂ ಹಲವು ಜನಪರ ಪ್ರಗತಿಪರ ಕಾರ್ಯಕ್ರಮಗಳ ಜಾರಿ ಮೂಲಕ ಜನಪ್ರಿಯವಾಗಿತ್ತು. ಮೂರನೇಯ ಜಗತ್ತಿನ ಪ್ರಗತಿಪರ, ಎಡಪಂಥೀಯ ಶಕ್ತಿಗಳಿಗೆ ಮಾದರಿಯಾಗುವತ್ತ ಸಾಗಿತ್ತು.  ಇದಕ್ಕೆ ಪ್ರತಿಕ್ರಿಯೆಯಾಗಿ ಬಂದ ಚಿಲಿಯ ಮಿಲಿಟರಿ ಕ್ಷಿಪ್ರದಂಗೆಯು, ಆ ದೇಶದ ಮಾತ್ರವಲ್ಲ ಆಫ್ರಿಕಾ, ಏಷ್ಯಾ, ಲ್ಯಾಟಿನ್ ಅಮೆರಿಕಾದ ಮೂರನೇಯ ಜಗತ್ತಿನ ದೇಶಗಳ ಸ್ವತಂತ್ರ ಸಾರ್ವಭೌಮ ಸಮೃದ್ಧ ಬದುಕಿನ ಆಶೋತ್ತರಗಳಿಗೆ ನಡೆದ  ಸಂಘರ್ಷದ ಇತಿಹಾಸದಲ್ಲಿ ಒಂದು ಭಾರೀ ಆಘಾತದ ಕ್ಷಣವಾಗಿತ್ತು, ನಕಾರಾತ್ಮಕ ತಿರುವಿನ ಬಿಂದು ಆಗಿತ್ತು.

ಚಿಲಿಯ ಮಿಲಿಟರಿ ಕ್ಷಿಪ್ರದಂಗೆ ಎರಡು ರೀತಿಯಲ್ಲಿ ಸಾಮ್ರಾಜ್ಯಶಾಹಿಗೆ ಪ್ರಯೋಜನವನ್ನು ನೀಡಿತು–ಅಡೆತಡೆಯಿಲ್ಲದ ಶೋಷಣೆಗಾಗಿ ಚಿಲಿಯ ಆರ್ಥಿಕತೆಯನ್ನು ತೆರೆಯುವ ಮೂಲಕ ಉಳಿದ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜಾರಿಗೆ ಅತ್ಯಂತ ಪ್ರತಿಗಾಮಿ ನವ-ಉದಾರವಾದಿ ಮಾದರಿಯನ್ನು ಹಾಕಿಕೊಟ್ಟಿತು; ಮತ್ತು ಈ ಮಾದರಿಗೆ ಬರುವ ಎಲ್ಲಾ ಪ್ರಗತಿಪರ ಮತ್ತು ಎಡಪಂಥೀಯ ಶಕ್ತಿಗಳ ವಿರೋಧವನ್ನು ಭೀಕರ ದಮನದ ಮೂಲಕ ಹತ್ತಿಕ್ಕಲಾಗುವುದು ಎಂಬ ಸಂದೇಶ ರವಾನಿಸಲಾಯಿತು. ಆದರೆ ಸರ್ವಾಧಿಕಾರ ಮತ್ತು ನವ-ಉದಾರವಾದಿ ನೀತಿಗಳ ವಿರುದ್ಧ ದಶಕಗಳ ದೃಡ ಹೋರಾಟಗಳ ನಂತರ, ಇತ್ತೀಚೆಗೆ ಮತ್ತೆ  ಪ್ರಗತಿಪರ ಸರ್ಕಾರವು ಚಿಲಿಯಲ್ಲಿ ಅಧಿಕಾರ ವಹಿಸಿಕೊಂಡಿದೆ. ಈ  ಸರ್ಕಾರವು ನಿಸ್ಸಂದೇಹವಾಗಿ ಅಲೆಂಡೆ ನಿಗದಿ ಪಡಿಸಿದ ಅಡಿಪಾಯದ ಮೇಲೆ ನಿಂತಿದೆ.

ಅಲೆಂಡೆ ಜನಪ್ರಿಯ ಕಮ್ಯುನಿಸ್ಟ್ ನಾಯಕರಾಗಿದ್ದು, ಅವರು 1950 ರ ದಶಕದಿಂದ ಚಿಲಿಯಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದರು. ಆಡಳಿತ ವರ್ಗದ ಪ್ರತಿನಿಧಿಗಳ ಕೈಯಲ್ಲಿ ಅವರ ಸೋಲುಗಳ ಹೊರತಾಗಿಯೂ, ಅವರು ಕಾರ್ಮಿಕ ವರ್ಗ ಮತ್ತು ಚಿಲಿಯ ಇತರ ಬಡ ಜನರಿಂದ ಸಾಕಷ್ಟು ಬೆಂಬಲವನ್ನು ಗಳಿಸುತ್ತಲೇ ಇದ್ದರು. ಅಲೆಂಡೆಗೆ ಅಧ‍್ಯಕ್ಷೀಯ ಸ್ಪರ್ಧೆಗಳಲ್ಲಿ ಹೆಚ್ಚುತ್ತಾ ಹೋದ ಚುನಾವಣಾ ಬೆಂಬಲಕ್ಕೆ  ಚಿಲಿಯ ಕಾರ್ಮಿಕ ವರ್ಗದ ಚಳವಳಿ ಕಾರಣವಾಗಿತ್ತು.

ಶ್ರಮಿಕರ ನಾಯಕ ಅಲೆಂಡೆ ಅಧ್ಯಕ್ಷ

ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಿಂದ, ಚಿಲಿಯು ಅತ್ಯಂತ ಬಲವಾದ ಕಾರ್ಮಿಕ ಆಂದೋಲನವನ್ನು ಹೊಂದಿತ್ತು. ಇದು ಉತ್ತರದ ಗಣಿಗಾರಿಕೆ ಉದ್ಯಮದಲ್ಲಿ ಮತ್ತು ದಕ್ಷಿಣದಲ್ಲಿ ಜವಳಿ ಮತ್ತು ಕಲ್ಲಿದ್ದಲು ಗಣಿಗಾರಿಕೆಯನ್ನು ಆಧರಿಸಿತ್ತು. ಚಿಲಿಯ ಕಮ್ಯುನಿಸ್ಟ್ ಪಕ್ಷ ಮತ್ತು ಸಮಾಜವಾದಿ ಪಕ್ಷ ಎರಡೂ ಕಾರ್ಮಿಕ ವರ್ಗದ ಹೋರಾಟಗಳ  ಭಾಗವಾಗಿ ಬೆಳೆದಿತ್ತು. ಅಂತಹ ಹೋರಾಟಗಳಿಂದಾಗಿ ಕಾರ್ಮಿಕ ವರ್ಗವು 1930 ರ ದಶಕದಲ್ಲಿ ಗಣನೀಯ ರಾಜಕೀಯ ಹಕ್ಕುಗಳನ್ನು ಗಳಿಸಿತು. ಈ ಮೂಲಕ ಕಾರ್ಮಿಕ ವರ್ಗವು ತಮ್ಮ ಪ್ರಭಾವ ಮತ್ತು ಸಂಘಟನೆಯನ್ನು ವಿಸ್ತರಿಸಲು ಪ್ರಾರಂಭಿಸಿತು. ಕಾರ್ಮಿಕ ವರ್ಗದ ಹಿತಾಸಕ್ತಿಗಳನ್ನು ಮುನ್ನಡೆಸಲು, ಅಲೆಂಡೆ ಅವರನ್ನು 1950 ರ ದಶಕದಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗಿಸಲಾಯಿತು. ಅವರು ಸೋತರೂ, 1960 ರ ದಶಕದಲ್ಲಿ ಅಲೆಂಡೆ ಅವರಿಗೆ ಜನಪ್ರಿಯ ಬೆಂಬಲದಲ್ಲಿ ಭಾರಿ ಹೆಚ್ಚಳ ಕಂಡು ಬಂದಿತ್ತು. ಕಾರ್ಮಿಕ ವರ್ಗದ ಜೊತೆಯಲ್ಲಿ, ಸಮಾಜದ ಇತರ ಅನೇಕ ವಿಭಾಗಗಳು ಹೋರಾಟಗಳಿಗೆ ಸೇರಿಕೊಂಡವು, ವಿಶೇಷವಾಗಿ ರೈತರು. ವಿಶ್ವವಿದ್ಯಾನಿಲಯಗಳಲ್ಲಿ ಸುಧಾರಣೆಗೆ ಒತ್ತಾಯಿಸುವ ವಿದ್ಯಾರ್ಥಿ ಚಳುವಳಿ ಮತ್ತು ಕೊಳಚೆ ಪ್ರದೇಶಗಳ ಜನರ ಚಳುವಳಿ ಈ ಅವಧಿಯಲ್ಲಿ ಸಂಭವಿಸಿದೆ. ಈ ಎಲ್ಲಾ ವರ್ಗ ಮತ್ತು ಸಾಮಾಜಿಕ ಹೋರಾಟಗಳ ಕ್ರೋಢೀಕರಣ 1970 ರಲ್ಲಿ ಅಲೆಂಡೆ ವಿಜಯಕ್ಕೆ ಕಾರಣವಾಯಿತು. ಮಿಲಿಟರಿ 

ಸೆಪ್ಟೆಂಬರ್ 4, 1970 ರಂದು ಪಾಪ್ಯುಲರ್ ಯೂನಿಟಿ ಫ್ರಂಟ್ (ಹಲವು ಎಡ ಪ್ರಗತಿಪರ ಪಕ್ಷಗಳ ಕೂಟ) ಅಭ್ಯರ್ಥಿಯಾಗಿ ಅಧ್ಯಕ್ಷೀಯ ಚುನಾವಣೆಯಲ್ಲಿ ಅಲೆಂಡೆ ಸ್ಪರ್ಧಿಸಿ,  36.4 ಶೇಕಡಾ ಮತ ಪಡೆದು ಆಯ್ಕೆಯಾದರು. ಅವರ ಕ್ರಿಶ್ಚಿಯನ್ ಡೆಮೊಕ್ರಾಟ್ ಎದುರಾಳಿ 34.9 ಶೇಕಡಾ ಮತಗಳನ್ನು ಪಡೆದರು. ಅಷ್ಟೇನೂ ನಿರ್ಣಾಯಕವಲ್ಲದಿದ್ದರೂ ಈ ಜನಾದೇಶದೊಂದಿಗೆ ಅಲೆಂಡೆ ಬೂರ್ಜ್ವಾ ಪ್ರಜಾಪ್ರಭುತ್ವದ ನಿರ್ಬಂಧದೊಳಗೆ ಸರಕಾರದ ದೋರಣೆಗಳನ್ನು ದಿಟ್ಟವಾಗಿ ಜನಪರವಾಗುವತ್ತ ಬದಲಾಯಿಸಲು ಪ್ರಾರಂಭಿಸಿದರು.

ಅಲೆಂಡೆ ಸರಕಾರದ ಸಾಧನೆಗಳು

ಅಲೆಂಡೆ ಸಂಪತ್ತನ್ನು ಪುನರ್ವಿತರಣೆ ಮಾಡುವ, ಆರ್ಥಿಕತೆಯ ಮೇಲೆ ವಿದೇಶಿ ಮತ್ತು ಏಕಸ್ವಾಮ್ಯ ನಿಯಂತ್ರಣವನ್ನು ಕೊನೆಗೊಳಿಸುವ, ಕಾರ್ಖಾನೆಗಳಲ್ಲಿ ಕಾರ್ಮಿಕರ ಭಾಗವಹಿಸುವಿಕೆಯನ್ನು ಸಾಧ್ಯಗೊಳಿಸುವ ಮೂಲಕ ಪ್ರಜಾಪ್ರಭುತ್ವವನ್ನು ಆಳಗೊಳಿಸುವ ಭರವಸೆಯ ಮೇಲೆ ಆಯ್ಕೆಯಾಗಿದ್ದರು. ಬ್ಯಾಂಕುಗಳ ರಾಷ್ಟ್ರೀಕರಣದೊಂದಿಗೆ ಈ ಭರವಸೆಗಳ ಜಾರಿ ಪ್ರಾರಂಭವಾಯಿತು. ಸರ್ಕಾರವು ಅಧಿಕಾರದಲ್ಲಿದ್ದ ಸಾವಿರ ದಿನಗಳಲ್ಲಿ, ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿದ ತಾಮ್ರದ ಗಣಿಗಳ ರಾಷ್ಟ್ರೀಕರಣ, ಸಾಮಾಜಿಕ ಬಳಕೆಗಾಗಿ ಖಾಸಗಿ ಆಸ್ತಿಗಳನ್ನು ಸ್ವಾಧೀನ ಪಡಿಸಿ ‘ಸಾಮಾಜಿಕ ಆಸ್ತಿ ಪ್ರದೇಶಗಳ’ ರಚನೆ, ಪುರಸಭೆಯ ಮಟ್ಟದಲ್ಲಿ ನಿರ್ಣಯಗಳಲ್ಲಿ ಜನ ಭಾಗವಹಿಸಲು ‘ಸಮುದಾಯ ಕಮಾಂಡ್‌ಗಳ ರಚನೆ, ರಾಷ್ಟ್ರೀಯಗೊಳಿಸಿದ ಕೈಗಾರಿಕೆಗಳ ನಿರ್ವಹಣೆಯಲ್ಲಿ ಭಾಗವಹಿಸುವ ‘ಕಾರ್ಮಿಕರ ಶಕ್ತಿ ಕೇಂದ್ರ’ಗಳ ರಚನೆ  – ಇವೆಲ್ಲವನ್ನು ಸಾಧಿಸಲಾಯಿತು.

ಇದನ್ನೂ ಓದಿ:ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ : ಮರೆಮಾಚಿದ ಸತ್ಯಗಳು

ಕೃ಼ಷಿ ಭೂಒಡೆತನದಲ್ಲಿ  ದೊಡ್ಡ ಸಾಂದ್ರತೆ ನಿವಾರಿಸಲು ಭೂ ಸುಧಾರಣೆಗಳನ್ನು ಕೈಗೊಂಡು, ಒಂದು ವರ್ಷದೊಳಗೆ 5 ಲಕ್ಷ  ಹೆಕ್ಟೇರ್ ಭೂಮಿಯನ್ನು ಭೂಹೀನರಿಗೆ ವಿತರಿಸಲಾಯಿತು. ಅಂತೆಯೇ, ವಸತಿ ಪ್ರಶ್ನೆಯನ್ನು ಬಗೆಹರಿಸಲು ವಸತಿ ನಿರ್ಮಾಣದ ಮಿಷನ್ ಆರಂಭಿಸಲಾಯಿತು.

ಸಾಂಸ್ಕೃತಿಕ ಮಟ್ಟದಲ್ಲಿ, ಸಾವಿರಾರು ಪುಸ್ತಕಗಳನ್ನು ಪ್ರಕಟಿಸುವ, ಪ್ರಕಟಿತ ಪುಸ್ತಕಗಳನ್ನು ಪ್ರಸಾರ ಮಾಡುವ ವ್ಯಾಪಕ ಕಾರ್ಯಕ್ರಮ, ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಲು, ಕಡಿಮೆ-ಆದಾಯದ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಖಾತರಿಪಡಿಸಲು ರಾಷ್ಟ್ರೀಯ ಏಕೀಕೃತ ಶಾಲೆಯನ್ನು (ಇಎನ್ ಯು) ಪ್ರಾರಂಭಿಸಲಾಯಿತು.

ಅಲೆಂಡೆ ಆಡಳಿತದ 1000 ದಿನಗಳಲ್ಲಿ, ರಾಷ್ಟ್ರೀಯ ಆದಾಯದಲ್ಲಿ ಶೇಕಡಾ 50 ರಷ್ಟು ಬಡಜನರ ಪಾಲು ಶೇ. 16.1 ರಿಂದ 17.6 ಕ್ಕೆ, ಮಧ್ಯಮ ವರ್ಗಗಳ  ಪಾಲು ಶೇ. 53.9 ರಿಂದ ಶೇ 57.7ಕ್ಕೆ ಏರಿಕೆಯಾಯಿತು. ಮತ್ತೊಂದೆಡೆ, ಶೇ. 5 ಶ್ರೀಮಂತ ಪಾಲು ಶೇ. 30 ರಿಂದ 24.7 ಕ್ಕೆ ಇಳಿಯಿತು.

ಸರಕಾರದ ಕತ್ತು ಹಿಸುಕುವ ಪ್ರಯತ್ನ

ಸ್ವಾಭಾವಿಕವಾಗಿ, ಈ ಎಲ್ಲಾ ಕ್ರಮಗಳು ಆಳುವ  ವರ್ಗಗಳಿಗೆ ಕೋಪ ಬರಿಸಿದವು, ಈ ಕ್ರಮಗಳು ಪ್ರಭುತ್ವದ ಮೇಲಿನ ತಮ್ಮ ನಿಯಂತ್ರಣದ ಮೇಲೆ ಆಕ್ರಮಣವೆಂದು ಅವು ಪರಿಗಣಿಸಿದವು. 1972 ರಿಂದ, ಅವರು ಆರ್ಥಿಕತೆಯನ್ನು ಸ್ಥಗಿತಗೊಳಿಸುವ ಹಾಳುಗೆಡಹುವ, ಅಗತ್ಯ ಸರಕುಗಳ ಕೃತಕ ಕೊರತೆಯನ್ನು ಸೃಷ್ಟಿಸುವ  ಆಂದೋಲನವನ್ನು ಪ್ರಾರಂಭಿಸಿದರು. ಇದನ್ನು ‘ಧಣಿಗಳ  ಲಾಕ್ ಔಟ್’’ ಎಂದು ಕರೆಯಲಾಯಿತು. ಯುಎಸ್ ಒತ್ತಡದಿಂದ ವಿಶ್ವಬ್ಯಾಂಕ್ ಚಿಲಿಗೆ ಎಲ್ಲಾ ಸಾಲಗಳನ್ನು ನಿರಾಕರಿಸಿತು. ಈ ರೀತಿಯಾಗಿ ಯುಎಸ್ ಮತ್ತು ಚಿಲಿಯ ಆಳುವ ವರ್ಗಗಳು ಅಲೆಂಡೆ ಆಡಳಿತವನ್ನು ಕತ್ತು ಹಿಸುಕಲು ಪ್ರಯತ್ನಿಸಿದವು.

ಈ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಅಲೆಂಡೆ ಅವರ ಜನಪ್ರಿಯತೆ, ಬೆಂಬಲ ಹೆಚ್ಚುತ್ತಾ ಹೋಯಿತು. ಈ ಅವಧಿಯಲ್ಲಿ ಪ್ರಸಾರವಾದ ಕ್ಲಾಸಿಕ್ ಚಿತ್ರಗಳಲ್ಲಿ ಒಂದು ಸೂಪರ್ ಮಾರ್ಕೆಟ್ ಮುಂದೆ ಉದ್ದ ಸಾಲಿನಲ್ಲಿ ನಿಂತಿದ್ದ ಒಬ್ಬ ಹಿಡಿದ ಪೋಸ್ಟರ್‌ನಲ್ಲಿ ಹೀಗೆ ಬರೆದಿತ್ತು “ ಈ ಸರ್ಕಾರದ ಅಡಿಯಲ್ಲಿ, ನಾನು ಒಂದು ಉದ್ದದ ಸಾಲಿನಲ್ಲಿ ಕಾಯಬೇಕಾಗಿದೆ, ಆದರೆ ನಾನು ಈ ಸರ್ಕಾರವನ್ನು ಬೆಂಬಲಿಸುತ್ತೇನೆ ಏಕೆಂದರೆ ಅದು ನನ್ನದು ”. ಆಡಳಿತ ವರ್ಗಗಳು ಮತ್ತು ಸಾಮ್ರಾಜ್ಯಶಾಹಿ ವಿಧ್ವಂಸಕತೆಯ ಬಗ್ಗೆ ಜನರಿಗೆ ಅರಿವು ಮೂಡಿಸಿದ್ದರಿಂದ ಇದು ಸಾಧ್ಯವಾಯಿತು.

ಮಾರ್ಚ್ 1973 ರಲ್ಲಿ ನಡೆದ ಪಾರ್ಲಿಮೆಂಟರಿ ಚುನಾವಣೆಯಲ್ಲಿ, ಅಲೆಂಡೆ ಅವರ ಪಕ್ಷವು ಶೇ. 43.4 ಮತಗಳನ್ನು ಗಳಿಸಿತು. ಅಧ್ಯಕ್ಷೀಯ ಚುನಾವಣೆಯಲ್ಲಿ ಪಡೆದಕ್ಕಿಂತ ಶೇ. 7 ಹೆಚ್ಚು. ಕಾರ್ಮಿಕರು, ರೈತರು ಮತ್ತು ವಿದ್ಯಾರ್ಥಿಗಳು ಬೃಹತ್ ಪ್ರದರ್ಶನಗಳಲ್ಲಿ ಅಲೆಂಡೆಯನ್ನು ಬೆಂಬಲಿಸಿದರು. ಸೂಪರ್ ರ್ಮಾರ್ಕೆಟ್ ಮುಚ್ಚಿದ್ದಾಗ ಸಮುದಾಯ ಕೇಂದ್ರಗಳನ್ನು ಆರಂಭಿಸಿ ಲಭ್ಯ ಆಹಾರವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಯಿತು.

ಅಕ್ಟೋಬರ್ 1972 ರಲ್ಲಿ ಟ್ರಕ್ ಉದ್ಮಮ ಮುಷ್ಕರದಿಂದ ಆರ್ಥಿಕತೆಯನ್ನು ಅಡ್ಡಿಪಡಿಸುವ ಪ್ರಯತ್ನಗಳನ್ನು ಕಾರ್ಮಿಕರು ಯಶಸ್ವಿಯಾಗಿ ತಡೆದರು. ಚಿಲಿಯಲ್ಲಿ ತೀವ್ರ ವರ್ಗ ಹೋರಾಟವೇ ನಡೆಯಿತು.  ಆ ಅವಧಿಯಲ್ಲಿ ಚಿಲಿ ರಾಜಧಾನಿ ಸ್ಯಾಂಟಿಯಾಗೊದ ಗೋಡೆಗಳ ಮೇಲೆ ಅರೆಸೈನಿಕ ಪಡೆಗಳು ಬರೆದ ಈ ಘೋಷಣೆಗಳು ಕಾಣಿಸಿಕೊಂಡವು : ‘ ಜಕಾರ್ತಾ ಬರುತ್ತಿದೆ ’. ಇದು 1965-66 ರಲ್ಲಿ ಜಕಾರ್ತಾ ರಾಜಧಾನಿಯಾಗಿರುವ ಇಂಡೋನೇಷ್ಯಾದಲ್ಲಿ ಸಿಐಎ ಪ್ರಾಯೋಜಿತ ಜನರಲ್ ಸುಹಾರ್ತೊ ಮಿಲಟರಿ ಕ್ಷಿಪ್ರಕ್ರಾಂತಿ ನಂತರ ನಡೆಸಿದ 10 ಲಕ್ಷ  ಕಮ್ಯುನಿಸ್ಟರು ಮತ್ತು ಸಮಾಜವಾದಿಗಳ ನರಮೇಧ ನೆನಪಿಸುತ್ತಾ, ಮುಂಬರುವ ಮಿಲಿಟರಿ ಕ್ಷಿಪ್ರದಂಗೆಯ ಎಚ್ಚರಿಕೆಯಾಗಿತ್ತು.ಸಿಐಎ ಭಾರೀ ರಹಸ್ಯ ಬೆಂಬಲದ ನಂತರವೂ ಪಾರ್ಲಿಮೆಂಟರಿ ಚುನಾವಣೆಯ ನಂತರ ಪ್ರಮುಖ ವಿರೋಧ ಪಕ್ಷ ಕ್ರಿಶ್ಚಿಯನ್ ಡೆಮೊಕ್ರಾಟಿಕ್ ಪಕ್ಷ ಕೈಚೆಲ್ಲಿ ಹತಾಶವಾಗಿ ಕುಳಿತಿತ್ತು. ಅಲೆಂಡೆ ಸರಕಾರಕ್ಕೆ ಭಾರೀ ಅಡೆತಡೆಗಳ ಕಷ್ಟನಷ್ಟಗಳ ನಡುವೆಯೂ ಜನಬೆಂಬಲ ಹೆಚ್ಚುತ್ತಿತ್ತು. ಇದು ಯು.ಎಸ್ ಮತ್ತು ಚಿಲಿಯ ಆಳುವ ವರ್ಗಳನ್ನು ಆತಂಕ್ಕೀಡು ಮಾಡಿತು.

ಮಿಲಿಟರಿ ಕ್ಷಿಪ್ರದಂಗೆ

ಸೆಪ್ಟೆಂಬರ್ 11 ರಂದು, ಅಲೆಂಡೆ ಮತ್ತು ಅವರ ಆಡಳಿತವು ತಮ್ಮ ಜನರ ಪರ ನೀತಿಗಳನ್ನು ಕೈಗೊಳ್ಳಲು ಸರಕಾರದ ಕೈಗಳನ್ನು ಬಲಪಡಿಸಲು ಸಾಂವಿಧಾನಿಕ ಜನಾಭಿಪ್ರಾಯ ಸಂಗ್ರಹವನ್ನು ಘೋಷಿಸಬೇಕಾಗಿತ್ತು. ಈ ಕ್ರಮವನ್ನು ನಿರೀಕ್ಷಿಸುತ್ತಾ, ಆಡಳಿತ ವರ್ಗಗಳು ಮಿಲಿಟರಿಯಲ್ಲಿ ತಮ್ಮ ಏಜೆಂಟರ ಮೂಲಕ ಮತ್ತು ಯುಎಸ್ ಬೆಂಬಲದೊಂದಿಗೆ ಮಿಲಿಟರಿ ಕ್ಷಿಪ್ರದಂಗೆಯನ್ನು ನಡೆಸಿದವು. ಅವರು ಅಧ್ಯಕ್ಷೀಯ ಅರಮನೆಗೆ ನುಗ್ಗಿ ಭಯೋತ್ಪಾದಕ ದಾಳಿಯನ್ನು ಹರಿಯಬಿಟ್ಟರು. ಇಡೀ ರಾತ್ರಿ ನಗರ  ಮಿಲಿಟರಿ ಭಯೋತ್ಪಾದಕ ದಾಳಿಗೆ ಗುರಿಯಾಯಿತು. ಇದನ್ನು ಪತ್ರಿಕೆಗಳು ‘ಭೀಕರ ಭಯೋತ್ಪಾದನೆಯ ರಾತ್ರಿ ‘ ಎಂದು ಕರೆದವು. ವಿದ್ಯುತ್ ಕಡಿತ ಮಾಡಿದ್ದರಿಂದ ಸ್ಯಾಂಟಿಯಾಗೊದ ಹೊರಗಿನ ಕಾರ್ಮಿಕ ವರ್ಗದ ನೆರೆಹೊರೆಗಳಲ್ಲಿ ಸುಮಾರು 2 ಲಕ್ಷ ಜನರು ಬ್ಲ್ಯಾಕೌಟ್ ಅನುಭವಿಸಿದರು. ಈ ಕಾರ್ಮಿಕ ವರ್ಗದ ನೆರೆಹೊರೆಗಳಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಭೀಕರ ಕಾಳಗಗಳು ನಡೆದವು.

ಸಾವಿರಾರು ಕಮ್ಯುನಿಸ್ಟರು, ಸಮಾಜವಾದಿಗಳು ಮತ್ತು ಅವರ ಬೆಂಬಲಿಗರನ್ನು ಸುತ್ತುವರೆದು ರಾಜಧಾನಿಯ ರಾಷ್ಟ್ರೀಯ ಕ್ರೀಡಾಂಗಣಕ್ಕೆ ತಂದು ಕಗ್ಗೊಲೆ ಮಾಡಲಾಯಿತು.. ಶ್ರೇಷ್ಠ ಗೀತರಚನೆಕಾರ ವಿಕ್ಟರ್ ಜಾರಾ ಅವರನ್ನು ಚಿಲಿಯ ರಾಷ್ಟ್ರೀಯ ಕ್ರೀಡಾಂಗಣದೊಳಗೆ ಬಂಧಿಸಿ, ಹಿಂಸಿಸಿ, ವಿರೂಪಗೊಳಿಸಿ ಕೊಲ್ಲಲಾಯಿತು.  ನೊಬೆಲ್ ಪ್ರಶಸ್ತಿ ವಿಜೇತ ಪಾಬ್ಲೊ ನೆರುದಾ ರನ್ನೂ ಆಸ್ಪತ್ರೆಗೆ ಒಯ್ಯಲಾಯಿತು. ಕೆಲವೇ ದಿನಗಳಲ್ಲಿ ಅವರೂ ನಿಧನ ಹೊಂದಿದರು. ಅವರಿಗೆ ವಿಷಭರಿತ ಇಂಜೆಕ್ಷಶನ್ ಕೊಡಲಾಯಿತು ಎಂದು ಶಂಕಿಸಲಾಗಿದೆ. ನಂತರದ ದಿನಗಳಲ್ಲೂ ಈ ಕ್ರೂರ ದಬ್ಬಾಳಿಕೆ ಮುಂದುವರೆಯಿತು. ಪಿನೋಶೆ ಸರ್ವಾಧಿಕಾರ ಮುಗಿದ ನಂತರ ರಚಿಸಲಾದ ಆಯೋಗ 3,200 ಚಿಲಿಯ ನಾಗರಿಕರನ್ನು ಪಿನೋಶೆ ಸರಕಾರ ಕೊಲೆ ಮಾಡಿದೆ; 38,000 ರಾಜಕೀಯ ಕಾರ್ಯಕರ್ತರು ದೀರ್ಘ ಬಂಧನ ಮತ್ತು ಚಿತ್ರಹಿಂಸೆಗಳ ನಂತರವೂ ಬದುಕುಳಿದಿದ್ದರು; 1 ಲಕ್ಷಕ್ಕೂ ಹೆಚ್ಚು  ಜನರು ಕಡಿಮೆ ಅವಧಿಯ ಬಂಧನ ಗಳು, ತಮ್ಮ ಕಾಲೋನಿಗಳ ಮೇಲೆ ಆಗಾಗ ಸಾಮೂಹಿಕ ದಾಳಿಗಳನ್ನು ಅನುಭವಿಸಿದರು, ಎಂದಿದೆ.

ಇದನ್ನೂ ಓದಿ:ಬಾರಾಮುಲ್ಲಾ ಎನ್ಕೌಂಟರ್: ಇಬ್ಬರ ಉಗ್ರರ ಸೆದಬಡಿದ ಸೇನೆ

ಆ ಅವಧಿಯ ಕೆಲವು ರಹಸ್ಯ ಫೈಲ್‌ಗಳು ಈಗ ಬಹಿರಂಗವಾಗಿದ್ದು, ಮಿಲಿಟರಿ ಕ್ಷಿಪ್ರ ದಂಗೆ ಮತ್ತು ಹತ್ಯಾಕಾಂಡದಲ್ಲಿ ಸಿಐಎ ಯ ಪ್ರಧಾನ ಪಾತ್ರ ಈಗ ಖಚಿತವಾಗಿದೆ.  ಸೆಪ್ಟೆಂಬರ್ 1973 ರಲ್ಲಿ ಚಿಲಿಯಲ್ಲಿ ನಡೆದ ಮಿಲಿಟರಿ ಕ್ಷಿಪ್ರದಂಗೆ ‘ಆಪರೇಷನ್ ಕಾಂಡೋರ್’ನ ಭಾಗವಾಗಿದ್ದು, ಲ್ಯಾಟಿನ್ ಅಮೆರಿಕದ ಹಲವು ಮಿಲಿಟರಿ ಸರ್ವಾಧಿಕಾರಗಳ ಜತೆ ರಹಸ್ಯ ಒಡನಾಟವನ್ನು ಒಳಗೊಂಡಿತ್ತು ಮತ್ತು ಅಲೆಂಡೆ ಸರಕಾರದ ವಿರುದ್ಧ ಸಮನ್ವಯ ಕಾರ್ಯಾಚರಣೆಯನ್ನು ಒಳಗೊಂಡಿತ್ತು. ಕಾಂಡೋರ್ ತಂಡವು ಚಿಲಿ, ಪರಾಗ್ವೆ, ಬ್ರೆಜಿಲ್, ಉರುಗ್ವೆ ಮತ್ತು ಅರ್ಜೆಂಟೀನಾದ ರಹಸ್ಯ ಪೊಲೀಸ್ ಪಡೆಗಳ ಪ್ರತಿನಿಧಿಗಳನ್ನು ಹೊಂದಿತ್ತು. ನಾಲ್ಕು ಯುಎಸ್ ಯುದ್ಧ ಹಡಗುಗಳು ಸೆಪ್ಟೆಂಬರ್ 11 ರಂದು ಚಿಲಿಯ ಕರಾವಳಿಯಲ್ಲಿ ಲಂಗರು ಹಾಕಿದ್ದವು ಮತ್ತು ದಂಗೆಯ ನಾಯಕರೊಂದಿಗೆ ಶಾಶ್ವತ ಸಂಪರ್ಕವನ್ನು ಹೊಂದಿದ್ದವು.. ಜುಲೈ ಮತ್ತು ಆಗಸ್ಟ್‌ನಲ್ಲಿ ದಂಗೆಗೆ ಮುಂಚಿತವಾಗಿ, ಯುಎಸ್ ಗುಪ್ತಚರ ಸಂಸ್ಥೆಗಳಿಂದ ತರಬೇತಿ ಪಡೆದ ಬಲಪಂಥೀಯ ಭಯೋತ್ಪಾದಕರು 250 ಕ್ಕೂ ಹೆಚ್ಚು ವಿಧ್ವಂಸಕ ಕ್ರಮಗಳನ್ನು ಕೈಗೊಂಡರು, ವಿದ್ಯುತ್ ಮಾರ್ಗಗಳನ್ನು ಸ್ಫೋಟಿಸಿಸುವುದು, ಉದ್ಯಮಗಳನ್ನು ನಾಶಮಾಡುವುದು ಮತ್ತು ಪ್ರಮುಖ ನಾಗರಿಕರನ್ನು ಹತ್ಯೆ ಮಾಡುವುದು ಅವರ ಕಾರ್ಯಾಚರಣೆಗಳಲ್ಲಿ ಸೇರಿತ್ತು.

ಬದಲಿ ವ್ಯವಸ್ಥೆಯ ಚಾಂಪಿಯನ್ ಆಗಿ ಅಲೆಂಡೆ

ಅಲೆಂಡೆ ಸರಕಾರವನ್ನು ಯು.ಎಸ್ ಸಾಮ್ರಾಜ್ಯಶಾಹಿ ಮಿಲಿಟರಿ ಕ್ಷಿಪ್ರದಂಗೆ ನಡೆಸಿ ಉರುಳಿಸಿದ್ದು, ಅದು ಚಿಲಿಯ ತಾಮ್ರದ ಗಣಿಗಳನ್ನು ರಾಷ್ಟ್ರೀಕರಿಸಿ, ಚಿಲಿಯ ಸ್ವತಂತ್ರ, ಸಾರ್ವಭೌಮ ನೀತಿಗಳನ್ನು ಎತ್ತಿ ಹಿಡಿದು,  ಸಮಾಜವಾದಿ ನೀತಿಗಳ ಜಾರಿಗೆ ಪ್ರಯತ್ನಿಸಿದ್ದಕ್ಕೆ ಮಾತ್ರವಲ್ಲ. ನವ-ವಸಾಹತುಶಾಹಿ ಗೆ ಬದಲಿ ಅಂತರ್ರಾಷ್ಟ್ರೀಯ ಆರ್ಥಿಕ-ವ್ಯಾಪಾರ ವ್ಯವಸ್ಥೆ ಒತ್ತಾಯಿಸುವ ಮೂರನೇಯ ಜಗತ್ತಿನ ದೇಶಗಳ ಚಳುವಳಿಯಲ್ಲೂ, ಅಲೆಂಡೆ ನೇತೃತ್ವದಲ್ಲಿ ಚಿಲಿ ಮುಂಚೂಣಿಯಲ್ಲಿ ಇದ್ದಿದ್ದು ಯು.ಎಸ್ ನಾಯಕತ್ವದ ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ನುಂಗಲಾರದ ತುತ್ತಾಗಿತ್ತು.

ಅಲಿಪ್ತ ಚಳುವಳಿ (NAM) ಮತ್ತು ವ್ಯಾಪಾರ ಹಾಗೂ ಅಭಿವೃದ್ಧಿಗೆ ವಿಶ್ವಸಂಸ್ಥೆಯ ಸಮ್ಮೆಳನ (UNCTAD) ಮೂಲಕ ಮೂರನೆಯ ಜಗತ್ತಿನ ದೇಶಗಳು 1960ರ ದಶಕದಿಂದಲೇ ಬದಲಿ ಅಂತರ್ರಾಷ್ಟ್ರೀಯ ಆರ್ಥಿಕ ವ್ಯವಸ್ಥೆಗೆ ಒತ್ತಾಯಿಸುತ್ತಿದ್ದವು. ಅಲಿಪ್ತ ಚಳುವಳಿ 1961 ರಲ್ಲಿ ಆರಂಭವಾಗಿದ್ದರೂ, ಲ್ಯಾಟಿನ್ ಅಮೆರಿಕಾದಿಂದ (ಆ ಅವಧಿಯಲ್ಲಿ ಹಲವು ದೇಶಗಳು ಯು.ಎಸ್ ಬಾಲಂಘೋಚಿಯಾಗಿದ್ದ ಮಿಲಿಟರಿ ಸರ್ವಾಧಿಕಾರದ ಅಡಿಯಲ್ಲಿದ್ದವು) ಕ್ಯೂಬಾ ಮಾತ್ರ ಅದರ ಸದಸ್ಯವಾಗಿತ್ತು. 1971ರಲ್ಲಿ ಚಿಲಿ NAM ಸದಸ್ಯ ದೇಶವಾಯಿತು. UNCTAD ನಲ್ಲೂ ಸಕ್ರಿಯವಾಯಿತು. ಅಲೆಂದೆ ಒತ್ತಾಯದ ಮೇರೆಗೆ ಚಿಲಿಯಲ್ಲಿ 1972ರಲ್ಲಿ ನಡೆದ ಮೂರನೆಯ UNCTAD ಸಮಾವೇಶ ಚಾರಿತ್ರಿಕವಾಗಿತ್ತು. ಅಲ್ಲಿ ಅವರು ಹೊಸ ಅಂತರ್ರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯ (New International Economic Order – NIEO) ಸ್ಪಷ್ಟ ಪರಿಕಲ್ಪನೆಯನ್ನು ಮಂಡಿಸಿದರು. ಈ ಸಮ್ಮೇಳನದಲ್ಲಿ ಈ ಹೊಸ ವ್ಯವಸ್ಥೆಯ ಪ್ರಮುಖ ಅಂಶಗಳನ್ನು ಮಂಡಿಸಿ ಅದರ ಸುತ್ತ ಮೂರನೇ ಜಗತ್ತಿನ ದೇಶಗಳು ಒಂದುಗೂಡಿ ‘ಹಳೆಯ ಅನ್ಯಾಯುತ ವ್ಯವಸ್ಥೆಯನ್ನು ಕೊನೆಗಾಣಿಸಿ, ಮಾನವ ಘನತೆ, ಸಮಾನತೆಗೆ ಒತ್ತು ಕೊಡುವ ಹೊಸ ನ್ಯಾಯಯುತ ವ್ಯವಸ್ಥೆಯನ್ನು ಸ್ಥಾಪಿಸಬೇಕೆಂದು ಕರೆ ಕೊಟ್ಟರು.

ಅವರು ಪ್ರತಿಪಾದಿಸಿದ ಹೊಸ ವ್ಯವಸ್ಥೆಯ ಪ್ರಮುಖ ಅಂಶಗಳೆಂದರೆ : 1) ಯಾವುದೇ ಮೂರನೇ ಜಗತ್ತಿನ ಪ್ರಾತಿನಿಧ್ಯ ವಿಲ್ಲದೆ 1944 ಬ್ರೆಟ್ಟನ್ ವುಡ್ಸ್ ಸಮ್ಮೇಳನದಲ್ಲಿ ರೂಪಿಸಿದ ವಿಶ್ವಬ್ಯಾಂಕ್, ಐಎಂಎಫ್ ಮತ್ತು 1947 ರ GATT ಒಪ್ಪಂದಗಳು ಅಂತರ್ರಾಷ್ಟ್ರೀಯ ಹಣಕಾಸು ಮತ್ತು ವ್ಯಾಪಾರ ವ್ಯವಸ್ಥೆಗಳನ್ನು ನಿರ್ದೇಶಿಸುತ್ತಿದ್ದು ಅವುಗಳಲ್ಲಿ ತೀವ್ರ ಸುಧಾರಣೆಗಳು ಅಗತ್ಯ 2) ನವ-ವಸಾಹತುಶಾಹಿ ವ್ಯವಸ್ಥೆಯ ಪರಿಣಾಮದಿಂದ ಮೂರನೇ ಜಗತ್ತಿನ ದೇಶಗಳ ಮೇಲೆ ಇರುವ 70 ಶತಕೋಟಿ ಡಾಲರ್ ಸಾಲದ ಹೊರೆಯನ್ನು ರದ್ದು ಪಡಿಸಬೇಕು 3) ಪ್ರತಿಯೊಂದು ದೇಶಕ್ಕೆ ಅದರ ಪ್ರಾಕೃತಿಕ ಸಂಪತ್ತಿನ ಮೇಲೆ ಪೂರ್ಣ ಸಾರ್ವಭೌಮ ಹಕ್ಕನ್ನು ಮನ್ನಿಸಬೇಕು 4) ಪ್ರತಿಯೊಂದು ದೇಶಕ್ಕೆ ತಮ್ಮದೇ ವಿಜ್ಞಾನ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ಹಕ್ಕು ಇರಬೇಕು 5) ಜಗತ್ತಿನ ಜನಸಂಖ್ಯೆಯ ಅರ್ಧ ಇರುವ ಬಡಜನರ ಆದಾಯಕ್ಕೆ ಸಮನಾಗಿ ಶಸ್ತ್ರಾಸ್ತ್ರಗಳ ಮೇಲೆ ಖರ್ಚನ್ನು ಮಾಡುತ್ತಿರುವ ಜಾಗತಿಕ ‘ಯುದ್ಧ ಆರ್ಥಿಕ’ದ ಬದಲು ‘ಶಾಂತಿ ಆರ್ಥಿಕ’ ಸ್ಥಾಪಿಸಬೇಕು.

ಈ ಅಂಶಗಳು ಮೂರನೇ ಜಗತ್ತಿನ ದೇಶಗಳಲ್ಲಿ ಭಾರೀ ಸಂಚಲನ ಮೂಡಿಸಿದವು. ಇದರಿಂದ ಆತಂಕಿತರಾದ ಯು.ಎಸ್, ಯುರೋ, ಜಪಾನ್ ತ್ರಿವಳಿಗಳು ಜಿ-7 ಗುಂಪು ರಚಿಸಿದವು. “ಜಗತ್ತಿನ ಆರ್ಥಿಕ ವ್ಯವಸ್ಥೆ ಹೇಗಿರಬೇಕು ಎಂಬುದನ್ನು ನಿರ್ಧರಿಸುವ ಜವಾಬ್ದಾರಿಯನ್ನು ಫಾಶ್ಚಿಮಾತ್ಯ ದೇಶಗಳು ಏಶ‍್ಯಾ, ಆಫ್ರಿಕಾದ ದೇಶಗಳಿಗೆ ಬಿಟ್ಟು ಕೊಡಲು ಸಾಧ‍್ಯವಿಲ್ಲ’ ಎಂದು ಆಗಿನ ಪ.ಜರ್ಮನಿ ನಾಯಕ ಹೇಳಿದ್ದರು. ಹಾಗಾಗಿ ಇದಕ್ಕೆ ಮುಳುವಾಗಿದ್ದ ಅಲೆಂದೆ ಹತ್ಯೆ, ಮಿಲಿಟರಿ ಕ್ಷಿಪ್ರಕ್ರಾಂತಿಗೆ ಇವರೆಲ್ಲರ ಸಮ್ಮತಿ ಇದ್ದೇ ಇತ್ತು.

ಅಲೆಂಡೆ ಕೊನೆಯ ಮಾತುಗಳು

ಅಧ‍್ಯಕ್ಷೀಯ ಭವನದ ಮೇಲೆ ಮಿಲಿಟರಿ ದಾಳಿ ನಡೆಯುತ್ತಿದ್ದಂತೆ ಪಲಾಯನ ಮಾಡದಿರಲು, ಅಥವಾ ರಾಜೀನಾಮೆ ನೀಡದಿರಲು ಅಲೆಂಡೆ ಧೈರ್ಯದಿಂದ ನಿರ್ಧರಿಸಿದರು. ಅವರು ತಮ್ಮ ಕೊನೆಯ ತನಕ ಅಧ್ಯಕ್ಷೀಯ ಅರಮನೆಯಲ್ಲಿ ಉಳಿಯಲು ನಿರ್ಧರಿಸಿದರು. ಅಧ್ಯಕ್ಷೀಯ ಅರಮನೆಯಿಂದ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು, ಅದು ಅವರ ಕೊನೆಯ ಮಾತುಗಳಾಗಿ ಉಳಿದಿದೆ. ಅವರು ಹೀಗೆ ಹೇಳಿದರು:

“ಈ ನಿರ್ಣಾಯಕವಾದ ಕ್ಷಣದಲ್ಲಿ, ನಾನು ನಿಮ್ಮನ್ನು ಉದ್ದೇಶಿಸಬಹುದಾದ ಕೊನೆಯ ಕ್ಷಣದಲ್ಲಿ, ನೀವು ಈ ಪಾಠವನ್ನು ಮನದಟ್ಟು ಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ: ವಿದೇಶಿ ಬಂಡವಾಳ, ಸಾಮ್ರಾಜ್ಯಶಾಹಿ, (ನಮ್ಮ ದೇಶದ) ಪ್ರತಿಗಾಮಿಗಳೊಂದಿಗೆ, ಸಶಸ್ತ್ರ ಪಡೆಗಳು ತಮ್ಮ ಸಂಪ್ರದಾಯವನ್ನು ಮುರಿದ ವಾತಾವರಣವನ್ನು ಸೃಷ್ಟಿಸಿದವು.. … ನನ್ನ ಧ್ವನಿಯ ಇನ್ನು ಮುಂದೆ ನಿಮ್ಮನ್ನು ತಲುಪುವುದಿಲ್ಲ.. ಆದರೆ ನೀವು ಅದನ್ನು ಕೇಳುತ್ತಲೇ ಇರುತ್ತೀರಿ. ನಾನು ಯಾವಾಗಲೂ ನಿಮ್ಮ ಪಕ್ಕದಲ್ಲಿರುತ್ತೇನೆ. ಕನಿಷ್ಠ ನನ್ನ ಸ್ಮರಣೆಯು ಕಾರ್ಮಿಕರಿಗೆ ನಿಷ್ಠರಾಗಿರುವ ಘನತೆಯ ವ್ಯಕ್ತಿಯದ್ದಾಗಿರುತ್ತದೆ…”“ನನ್ನ ದೇಶದ ಶ್ರಮಿಕರೇ, ನನಗೆ ಚಿಲಿ ಮತ್ತು ಅದರ ಭವಿಷ್ಯದಲ್ಲಿ ನಂಬಿಕೆ ಇದೆ. ದೇಶದ್ರೋಹವು ಮೇಲುಗೈ ಸಾಧಿಸಲು ಪ್ರಯತ್ನಿಸಿದಾಗ ಇತರ ಜನರು ಈ ಕರಾಳ ಮತ್ತು ಕಹಿ ಕ್ಷಣವನ್ನು ನಿವಾರಿಸುತ್ತಾರೆ. ಉತ್ತಮ ಸಮಾಜವನ್ನು ನಿರ್ಮಿಸಲು ಸ್ವತಂತ್ರ ಜನರು ನಡೆಯುವಲ್ಲಿ ಮಹಾನ್ ದಾರಿಗಳು ಮತ್ತೆ ತೆರೆದುಕೊಳ್ಳುತ್ತವೆ ಎಂದು ತಿಳಿದು ಮುಂದುವರಿಯಿರಿ.

ಚಿಲಿ ಚಿರಾಯುವಾಗಲಿ! ಜನತೆ ಚಿರಾಯುವಾಗಲಿ! ಕಾರ್ಮಿಕರು ಚಿರಾಯುವಾಗಲಿ !”

ಇವು ನನ್ನ ಕೊನೆಯ ಮಾತುಗಳು, ಮತ್ತು ನನ್ನ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ನನಗೆ ಖಾತ್ರಿಯಿದೆ …. ”

ಚಿಲಿಯ ಕಮ್ಯುನಿಸ್ಟರು ಮತ್ತು ಸಮಾಜವಾದಿಗಳು ಬಲಗೊಂಡು ಮತ್ತು ಈಗ ಮತ್ತೆ ಅಧಿಕಾರದಲ್ಲಿದ್ದ ಕಾರಣ, ಅಲೆಂಡೆ ಅವರ ಕನಸುಗಳನ್ನು ನನಸಾಗಿಸಲು ಪ್ರಯತ್ನಿಸುತ್ತಿರುವುದರಿಂದ ಅವರ ತ್ಯಾಗ ವ್ಯರ್ಥವಾಗಿಲ್ಲ. ಸಹಜವಾಗಿ, ಅವರು ಮತ್ತೊಮ್ಮೆ ಆಳುವ ವರ್ಗಗಳ ವಿರುದ್ಧ ಹೋರಾಡುತ್ತಿದ್ದಾರೆ, ಅವರು ಸರ್ವಾಧಿಕಾರದ ಅವಧಿಯಲ್ಲಿ ಮಾಡಿದ ಯಾವುದೇ ಮುನ್ನಡೆಗಳನ್ನು ಕಳೆದುಕೊಳ್ಳದಂತೆ ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಚಿಲಿಯಲ್ಲಿ ಹೋರಾಟ ಮುಂದುವರೆದಿದೆ.

ವೀಡಿಯೋ ನೋಡಿ:ಒಂದು ದೇಶ, ಒಂದು ಚುನಾವಣೆ : ಬಿಜೆಪಿ ಸರ್ಕಾರದ ಗುಪ್ತ ಅಜೆಂಡವೇನು? ಈ ವಾರದ ನೋಟ ಕಾರ್ಯಕ್ರಮದಲ್ಲಿ

Donate Janashakthi Media

Leave a Reply

Your email address will not be published. Required fields are marked *