ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ : ಮರೆಮಾಚಿದ ಸತ್ಯಗಳು

ಹೈದರಾಬಾದ್ ಕರ್ನಾಟಕ ಗುರುರಾಜ ದೇಸಾಯಿ
ಹೈಕ ವ್ಯಾಪ್ತಿಗೆ ಒಳಪಡುವ ಏಳು  ಜಿಲ್ಲೆಗಳಲ್ಲಿ ಉದ್ಯೋಗ, ಶಿಕ್ಷಣ ಕ್ಷೇತ್ರಗಳಲ್ಲಿ ಶೇ.80ರಷ್ಟು,  ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಶೇ.8 ರಷ್ಟು ಮೀಸಲು ಇದೆ. ಆದರೆ ಇದರ ಅನ್ವಯ ಉದ್ಯೋಗ ಸಿಕ್ಕಿದೆ ಅಥವಾ ಶಿಕ್ಷಣ ಪಡೆದಿದ್ದೇನೆ ಎಂದೂ ಏಳು ಜಿಲ್ಲೆಯಲ್ಲಿ ಹುಡುಕಿದರೂ ಸಿಕ್ಕುವುದಿಲ್ಲ.

1947ರ ಅ.15 ರಂದು ಭಾರತ ದೇಶ ಸ್ವತಂತ್ರವಾಯಿತು. ದೇಶದ ಹಲವು ರಾಜರು ಭಾರತದ ಒಕ್ಕೂಟಕ್ಕೆ ತಮ್ಮ ರಾಜ್ಯವನ್ನು ಸೇರಿಸಿದರು. ಹೈದರಾಬಾದ್​ ಪ್ರಾಂತ್ಯದ ರಾಜ‌ ನಿಜಾಮ ಭಾರತದ ಒಕ್ಕೂಟಕ್ಕೆ ಸೇರಲು ಒಪ್ಪದೇ ಸ್ವತಂತ್ರ ಆಡಳಿತ ನಡೆಸುವುದಾಗಿ ಘೋಷಿಸಿಕೊಂಡಿದ್ದ. ಇದರಿಂದಾಗಿ ಹೈದರಾಬಾದ್​ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು ಬಳ್ಳಾರಿ ಜಿಲ್ಲೆಗಳು ಸ್ವತಂತ್ರವಾಗಲಿಲ್ಲ  ನಿಜಾಮನ ನಿರ್ಧಾರ ಹೈದರಾಬಾದ್​ ಪ್ರಾಂತ್ಯದ ಜನರನ್ನು ರೊಚ್ಚಿಗೆಬ್ಬಿಸಿತು‌. ಭಾರತ ಒಕ್ಕೂಟಕ್ಕೆ ಸೇರಿಸಲು ಈ ಭಾಗದಲ್ಲಿ ಮತ್ತೊಂದು ಸ್ವಾತಂತ್ರ್ಯದ ಚಳುವಳಿ ನಡೆಯಿತು. ಇಲ್ಲಿಯೂ ಸಾಕಷ್ಟು ಜೀವಗಳು ಬಲಿಯಾದವು.

ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿಯಾಗಬೇಕು. ಈ ಭಾಗ ಆರ್ಥಕವಾಗಿ, ಸಮಾಜಿಕವಾಗಿ ಬಲಗೊಳ್ಳಬೇಕು. ಎಂಬ ಆಶಯದೊಂದಿಗೆ ನಡೆದ ಹೈದ್ರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಯ ಆಶಯ ಆಶಯವಾಗಿಯೇ ಉಳಿದಿದೆ. ಪ್ರಭಲ ರಾಜಕಾರಣಿಗಳಿದ್ದರು ಅಭಿವೃದ್ಧಿಯ ಕಂಡಿಲ್ಲ. ಅಭಿವೃದ್ಧಿಯಾಗದಿರುವುದನ್ನೆ ರಾಜಕೀಯ ವಸ್ತುವನ್ನಾಗಿಸಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತಾರೆ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣಿಗಳ ಇಚ್ಚಾ ಶಕ್ತಿ ಕೊರತೆ ಎದ್ದು ಕಾಣುತ್ತಲೇ ಇದೆ. ಈ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಘೋಷಿಸಿದ ಸರ್ಕಾರ ಜನರ ಕಲ್ಯಾಣಕ್ಕೆ ಕನಿಷ್ಟ ರೂಪರೇಷೆಯನ್ನು ಹೊರಹಾಕಿಲ್ಲ. ಹೈದ್ರಾಬಾದ್‌ ಕರ್ನಾಟಕದ ಪಾಡಿನ ಕಥೆ ತಿಳಿಯುವ ಮೊದಲು ಈ ಪ್ರದೇಶ ಯಾಕೆ ತಡವಾಗಿ ವಿಮೋಚನೆ ಆಯಿತು. ಇಲ್ಲಿ ವಿಮೋಚನಾ ಚಳುವಳಿ ನಡೆಯಲು ಕಾರಣ ಏನು ಎಂಬುದರತ್ತ ಒಂದಿಷ್ಟು ಕಣ್ಣು ಹಾಯಿಸೋಣ.

ಮರೆಮಾಚಿದ ಸತ್ಯಗಳು :  ಸೆಪ್ಟೆಂಬರ್ 17ನ್ನು ಹೈದರಾಬಾದ್ ವಿಮೋಚನಾ ದಿನವೆನ್ನುವ ಆಚರಣೆ ಕೆಲ ವರ್ಷಗಳಿಂದ ಆರಂಭವಾಗಿದೆ. ಅದು 1948ರಲ್ಲಿ ಭಾರತೀಯ ಮಿಲಿಟರಿ ಹೈದರಾಬಾದು ಪ್ರಾಂತ್ಯ ಪ್ರವೇಶಿಸಿ, ನಿಜಾಮನ ಆಳ್ವಿಕೆಯಿಂದ ಜನತೆ ವಿಮೋಚನೆಯಾದ ದಿನವೆನ್ನುವುದು ನಿಜ. ಕೆಲವು ರಾಜಕೀಯ ಶಕ್ತಿಗಳು ಅದನ್ನು ಹೈದರಾಬಾದಿನ ಮುಸ್ಲಿಂ ನಿಜಾಮನ ಆಳ್ವಿಕೆಯಿಂದ ಹಿಂದೂ ಜನತೆಯ ವಿಮೋಚನೆಯೆಂದೋ, ಸರದಾರ ಪಟೇಲರ ದಿಟ್ಟ ನಾಯಕತ್ವದ ವಿಜಯ ಎಂಬ ಅರೆಸತ್ಯಗಳನ್ನು ಹರಡಿ ಅಥವಾ ಸರಳೀಕರಣಗಳನ್ನು ಮಾಡಿ ಅದಕ್ಕೆ ಬೇರೆ ಬಣ್ಣ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹಿರಿಯ ಚಿಂತಕ ಎನ್‌. ಕೆ. ವಸಂತರಾಜ್‌ ಸ್ಪಷ್ಟಪಡಿಸಿದ್ದಾರೆ.

ಅವರು ವಿಶ್ಲೇಷಿಸುವ ಪ್ರಕಾರ, ಹೈದರಾಬಾದ್ ವಿಮೋಚನೆ ದಿನದ ಸುತ್ತ ಹುಟ್ಟಿಕೊಂಡಿರುವ ಕಥನಗಳು ಹಲವು ಸತ್ಯಗಳನ್ನು ಮರೆಮಾಚುತ್ತದೆ. ಹಲವು ಮಿಥ್ಯೆಗಳನ್ನು ಸೃಷ್ಟಿಸುತ್ತದೆ. ಮೊದಲನೆಯದಾಗಿ ಹೈದರಾಬಾದಿನ ಜನತೆಯನ್ನು ನಿಜಾಮನ ಆಳ್ವಿಕೆಯಿಂದ ವಿಮೋಚನೆಗೊಳಿಸಿದ್ದರ ಶ್ರೇಯಸ್ಸು ಪ್ರಧಾನವಾಗಿ ಆಂಧ್ರ ಮಹಾಸಭಾ ಮತ್ತು ಕಮ್ಯುನಿಸ್ಟ್ ಪಕ್ಷಕ್ಕೆ ಸಲ್ಲಬೇಕು. ನಿಜಾಮನ ಬರ್ಬರ ಪಾಳೆಯಗಾರಿಯ ವಿರುದ್ಧ 1945ರಿಂದ 3 ವರ್ಷಗಳ ಕಾಲ ನಡೆದ ಅತ್ಯಂತ ಸಮರಶೀಲ ಹೋರಾಟಕ್ಕೆ ಈ ರಾಜಕೀಯ ಶಕ್ತಿಗಳು ನಾಯಕತ್ವ ಕೊಟ್ಟಿದ್ದವು. ಇದನ್ನು ಸದೆಬಡಿಯಲು ನಿಜಾಮ ತನ್ನ ಸೈನ್ಯ ಮತ್ತು ಕುಖ್ಯಾತ ಅರೆಸೈನಿಕ ಪಡೆ ರಜಾಕಾರರನ್ನು ಹರಿಯಬಿಟ್ಟಿದ್ದ. ಅದರ ವಿರುದ್ಧ ಕಮ್ಯನಿಸ್ಟ್ ಪಕ್ಷದ ನಾಯಕತ್ವದಲ್ಲಿ ಸಶಸ್ತ್ರ ಗೆರಿಲ್ಲಾ ಹೋರಾಟ ಮಾಡಬೇಕಾಗಿ ಬಂದಿತ್ತು. 1947ರ ಮೊದಲು ಬ್ರಿಟಿಷ್ ಸರಕಾರ ನಿಜಾಮನಿಗೆ ಭಾರತೀಯ ಒಕ್ಕೂಟಕ್ಕೆ ಸೇರದೆ ಸ್ವತಂತ್ರವಾಗಿರಲು ಕುಮ್ಮಕ್ಕು ಕೊಡುತ್ತಿತ್ತು. 1946ರ ಕಾಂಗ್ರೆಸ್ ಲೀಗ್ ಸರಕಾರವಾಗಲಿ, 1947ರಲ್ಲಿ ಬಂದ ಕಾಂಗ್ರೆಸ್ ಸರಕಾರವಾಗಲಿ ನಿಜಾಮನ ವಿರುದ್ಧ ದಿಟ್ಟ ನಿಲುವನ್ನು ತೆಗೆದುಕೊಳ್ಳಲಿಲ್ಲ. ನಿಜಾಮನ ‘ಸ್ವತಂತ್ರ ಹೈದಾರಾಬಾದು’ ಯೋಜನೆಯನ್ನು ಅಂತರ್ರಾಷ್ಟ್ರೀಯಕರಿಸದಂತೆ ತಡೆಯಲು ಓಲೈಸುವುದರಲ್ಲಿ ಮಗ್ನವಾಗಿತ್ತು. ಇದಕ್ಕಾಗಿ ನವೆಂಬರ್ 1947ರಲ್ಲಿ ನಿಜಾಮನೊಂದಿಗೆ ‘ತಟಸ್ಥ ಒಪ್ಪಂದ’ (Standstill agreement) ಮಾಡಿಕೊಂಡಿತ್ತು.

ಇದನ್ನೂ ಓದಿವಿಶೇಷ ಸ್ಥಾನಮಾನ ಇದ್ದರೂ ಸಿಗದ ಉದ್ಯೋಗ – ಕನ್ನಡಿಯೊಳಗಿನ ಗಂಟಾಯ್ತೆ 371 ಜೆ ಕಲಂ

1947-48ರ ಈ ಘಟ್ಟದಲ್ಲಿ ಹೈದರಾಬಾದು ಇಡಿಯಾಗಿ ಭಾರತದಲ್ಲಿ ವಿಲೀನಗೊಳ್ಳಬೇಕು. ಬರ್ಬರ ಪಾಳೆಯಗಾರಿ ಪದ್ಧತಿ ಹೋಗಬೇಕು ಎಂದು ಗೆರಿಲ್ಲಾ ಹೋರಾಟದ ಮೂಲಕ ನಿಜಾಮನ ಆಡಳಿತ ಕೊನೆಗೊಳಿಸಬೇಕು ಎಂದು ಹೋರಾಡುತ್ತಿದ್ದ ಕಮ್ಯುನಿಸ್ಟ್ ನಾಯಕತ್ವದ ವಿಮೊಚನಾ ಸೈನ್ಯದ ಮೇಲೆ ನಿಜಾಮನ ಸೈನ್ಯ ಮತ್ತು ರಜಾಕಾರ ಪಡೆಗಳ ಬರ್ಬರ ದಮನಚಕ್ರವನ್ನು ನೋಡಿಕೊಂಡು ‘ತಟಸ್ಥ’ವಾಗಿತ್ತು. ನಿಜಾಮನ ಮೇಲೆ ದಮನಚಕ್ರ ನಿಲ್ಲಿಸುವಂತೆ ಒತ್ತಡ ಹೇರಲೂ ಇಲ್ಲ. ಪರೋಕ್ಷವಾಗಿಯಾದರೂ ವಿಮೋಚನಾ ಸೈನ್ಯಕ್ಕೆ ಸಹಾಯ ಮಾಡಲೂ ಇಲ್ಲ. 1948 ಅಗಸ್ಟ್ ಹೊತ್ತಿಗೆ ನಿಜಾಮನ ಸೈನ್ಯ ಮತ್ತು ರಜಾಕಾರರನ್ನು ಹಿಮ್ಮೆಟ್ಟಿಸಿ 3 ಜಿಲ್ಲೆಗಳಲ್ಲಿ 3 ಸಾವಿರ ಹಳ್ಳಿಗಳನ್ನು ವಿಮೋಚನೆಗೊಳಿಸಲಾಯಿತು. ಬಿಟ್ಟಿ ಚಾಕರಿ ನಿಷೇಧ, ಭೂಸುಧಾರಣೆ ಮುಂತಾದ ಪಾಳೆಯಗಾರಿ ಪದ್ಧತಿ ನಿರ್ಮೂಲನಾ ಕ್ರಮಗಳನ್ನು ಜಾರಿ ಗೊಳಿಸಿತು. ಗ್ರಾಮೀಣ ಜನತೆಯ ಭಾರಿ ಬೆಂಬಲದಿಂದ ವಿಮೋಚನಾ ಸೈನ್ಯ ಇತರ ಜಿಲ್ಲೆಗಳಲ್ಲಿ ಪ್ರವೇಶಿಸಲು ಆರಂಭೀಸಿತ್ತು.

ನಿಜಾಮನ ಸರಕಾರ ಬಿದ್ದು ಹೋಗುವುದು ಹೆಚ್ಚು ಕಡಿಮೆ ಖಚಿತವಾದಾಗ ಕಾಂಗ್ರೆಸ್ ಸರಕಾರ ಮತ್ತು ಸರದಾರ ಪಟೇಲರು ಎಚ್ಚೆತ್ತುಕೊಂಡರು. ‘ಪೋಲಿಸ್ ಆಕ್ಷನ್’ ಹೆಸರಲ್ಲಿ ಮಿಲಿಟರಿ ಮಧ್ಯಪ್ರವೇಶಕ್ಕೆ ಆದೇಶ ನೀಡಲಾಯಿತು. ಪೋಲಿಸ್ ಆಕ್ಷನ್’ ಸೆಪ್ಟೆಂಬರ್ 13ರಂದು ಆರಂಭವಾಗಿ 5 ದಿನಗಳಲ್ಲಿ ನಿಜಾಮ ಶರಣಾಗತನಾದ. ಆದರೆ ಮುಂದಿನ ದಿನಗಳಲ್ಲಿ ಅದರ ನಿಜವಾದ ಹೂರಣ ಬಯಲಾಯಿತು. ಬೀಕರ ಅಪರಾಧಗಳನ್ನು ಎಸಗಿದ್ದ ನಿಜಾಮನ ಅಧಿಕಾರಿಗಳಿಗಾಗಲಿ, ರಜಾಕಾರರಿಗಾಗಲಿ ಯಾವುದೇ ಶಿಕ್ಷೆಯಾಗಲಿಲ್ಲ. ಸಾವಿರಾರು ನೂರಾರು ಎಕರೆಗಳ ಒಡೆಯರಾಗಿದ್ದು ನಿಜಾಮನ ಬೆಂಬಲಿಗರಾಗಿದ್ದು ವಿಮೋಚನಾ ಸೈನ್ಯದ ದಾಳಿಗೆ ಹೆದರಿ ಓಡಿ ಹೋಗಿದ್ದ ದೇಶಮುಖರು, ಜಮೀನುದಾರರುಗಳು ಸೈನ್ಯದ ಸಹಾಯದಿಂದ ವಾಪಸು ಬಂದು ರೈತರಿಗೆ ಕೃಷಿ ಕೂಲಿಕಾರರಿಗೆ ಹಂಚಲಾಗಿದ್ದ ಜಮೀನುಗಳನ್ನು ವಶಪಡಿಸಿಕೊಂಡರು. ಮಿಲಿಟರಿಯು, ಕಮ್ಯುನಿಸ್ಟರನ್ನು ಮತ್ತು ರೈತ-ಕೃಷಿಕೂಲಿ ನಾಯಕಕರು, ಕಾರ್ಯಕರ್ತರುಗಳನ್ನು ಬೇಟೆಯಾಡಿ ಕೊಲ್ಲಲಾರಂಭಿಸಿತು. ಗೃಹಮಂತ್ರಿ ಪಟೇಲರು “ಜನರಿಗೆ ಉಪಟಳ ಕೊಡುತ್ತಿರುವ’ ಕಮ್ಯುನಿಸ್ಟರನ್ನು ಹತ್ತಿಕ್ಕುವುದು ಪೋಲಿಸ್ ಆಕ್ಷನ್’ ನ ಉದ್ದೇಶ ಎಂದು ಬಹಿರಂಗವಾಗಿಯೇ ಹೇಳಿದರು. ‘ಜನ’ ಎಂದರೆ ಪಟೇಲರ ಪ್ರಕಾರ ‘ಸಾವಿರಾರು ನೂರಾರು ಎಕರೆಗಳ ಒಡೆಯರು’ ಎಂದಾದರೆ ಅವರು ಹೇಳಿದ್ದು ನಿಜವಾಗಿತ್ತು!

ಇದನ್ನೂ ಓದಿಏಮ್ಸ್ ಮಂಜೂರಿಗೆ ಆಗ್ರಹಿಸಿ SFI ಪ್ರತಿಭಟನೆ

ಬಿಟ್ಟಿ ನಿಷೇಧ, ಭೂಸುಧಾರಣೆ ಮುಂತಾದ ಪಾಳೆಯಗಾರಿ ಪದ್ಧತಿ ನಾಶದ ಸಾಧನೆಗಳನ್ನು ಉಳಿಸಿಕೊಳ್ಳಲು, ಭಾರೀ ಜಮೀನುದಾರರ ರಕ್ಷಣೆಗೆ ನಿಂತ ಭಾರತದ ಮಿಲಿಟರಿ ವಿರುದ್ಧ ಸಶಸ್ತ್ರ ಗೆರಿಲ್ಲಾ ಪ್ರತಿರೋಧ ಮುಂದುವರೆಸಬೇಕಾಯಿತು. ಈ ಪ್ರತಿರೋಧ ಹತ್ತಿಕ್ಕಲು ಮಿಲಿಟರಿ ಮುಂದಿನ 3 ವರ್ಷಗಳಲ್ಲಿ ಭೀಕರ ದಮನಚಕ್ರ ನಡೆಸಿತು. ಹೈದರಾಬಾದು ವಿಮೋಚನೆ ಮತ್ತು ಪಾಳೆಯಗಾರಿ ಪದ್ಧತಿಯ ನಾಶಕ್ಕೆ ನಡೆದ 5 ವರ್ಷಗಳ ಹೋರಾಟದಲ್ಲಿ 4 ಸಾವಿರ ಕಮ್ಯುನಿಸ್ಟರು ರೈತ-ಕೃಷಿಕೂಲಿಕಾರ ನಾಯಕರು ಕಾರ್ಯಕರ್ತರ ಕೊಲೆಯಾಯಿತು. 10 ಸಾವಿರಕ್ಕೂ ಹೆಚ್ಚು ಜನ 3-4 ವರ್ಷಗಳ ಕಾಲ ಚಿತ್ರಹಿಂಸೆ ಮತ್ತು ಕಠಿಣ ಜೈಲುವಾಸ ಅನುಭವಿಸಬೇಕಾಯಿತು. 50 ಸಾವಿರಕ್ಕೂ ಹೆಚ್ಚು ಜನ ಪೋಲಿಸ್ ಮಿಲಿಟರಿ ಕ್ಯಾಂಪುಗಳಲ್ಲಿ ಯಮಯಾತನೆ ಅನುಭವಿಸಬೇಕಾಯಿತು.

ಹೈದರಾಬಾದು ವಿಮೋಚನೆಯಲ್ಲಿ ರೈತರ ಸಶಸ್ತ್ರ ಹೋರಾಟದ ಮತ್ತು ಕಮ್ಯುನಿಸ್ಟ್ ನಾಯಕತ್ವದ ಪಾತ್ರ, ನಿಜಾಮನ ಮತ್ತು ‘ಸ್ವತಂತ್ರ’ ಹೈದರಾಬಾದು ಬಗ್ಗೆ ಪಟೇಲ್ ಸೇರಿದಂತೆ ಕಾಂಗ್ರೆಸ್ ಸರಕಾರದ ಮೃದು ದೋರಣೆ, ಕಮ್ಯುನಿಸ್ಟರ ಮೇಲುಗೈ ಆಗುತ್ತಿದ್ದಂತೆ ನಡೆದ ‘ಪೋಲಿಸ್ ಆಕ್ಷನ್’ ಹಾಗೂ ಪಾಳೆಯಗಾರಿ ವ್ಯವಸ್ಥೆ ಉಳಿಸಿಕೊಳ್ಳಲು ಕಮ್ಯುನಿಸ್ಟರ ರೈತ ಹೋರಾಟಗಾರರ ದಮನ, ನಿಜಾಮ ಮಾತ್ರವಲ್ಲ ಎಲ್ಲಾ ರಾಜರುಗಳ ವಿರುದ್ಧ ಜನತಾ ಹೋರಾಟಗಳಿಂದ ಕಾಂಗ್ರೆಸ್ ದೂರವಿದ್ದದ್ದು – ಇವೆಲ್ಲವನ್ನೂ ಮರೆ ಮಾಚಲಾಗುತ್ತಿದೆ. ಇವನ್ನು ಈ ಹೈದರಾಬಾದು ವಿಮೋಚನಾ ದಿನದಂದು ನೆನಪು ಮಾಡಿಕೊಳ್ಳುವುದು ಅಗತ್ಯ.

ನೌಕಾಸೈನಿಕರ (ರಿನ್ ಬಂಡಾಯ), ತೇಭಾಗ ರೈತರ ಹೋರಾಟ, ಕೇರಳದ ಪುನ್ನಪ್ರ-ವಾಯಲಾರ್ ಮುಂತಾದ ಸಮರಶೀಲ ಹೋರಾಟಗಳ ಜತೆ ತೆಲಂಗಾಣ ರೈತರ ಸಶಸ್ತ್ರ ಹೋರಾಟ, ಭಾರತದ ಸ್ವಾತಂತ್ರ್ಯಕ್ಕೆ ಹಾದಿ ಮಾಡಿಕೊಟ್ಟಿತ್ತು. ಸ್ವಾತಂತ್ರ್ಯ ಹೋರಾಟವನ್ನು ಸಾಮ್ರಾಜ್ಯಶಾಹಿ ವಿರುದ್ಧ ಮಾತ್ರವಲ್ಲದೆ ಬಂಡವಾಳಶಾಹಿ-ಪಾಳೆಯಗಾರಿ ವ್ಯವಸ್ಥೆಗಳ ವಿರುದ್ಧ ಮತ್ತು ಜನತೆಯ ಆರ್ಥಿಕ-ಸಾಮಾಜಿಕ ಸ್ವಾತಂತ್ರ್ಯ ಕ್ಕಾಗಿ ಸಹ ಹೋರಾಟವಾಗಿ ಮುಂದುವರೆಸುವಲ್ಲೂ ತೆಲಂಗಾಣ ರೈತರ ಸಶಸ್ತ್ರ ಹೋರಾಟ ಪ್ರಮುಖ ಪಾತ್ರ ವಹಿಸಿತ್ತು ಎಂದು ವಸಂತ್‌ರಾಜ್‌ ಹೇಳುತ್ತಾರೆ.

ಹೆಚ್ಚಿನ ವಿವರಗಳಿಗೆ, ಈ ಹೋರಾಟದ ಅಪ್ರತಿಮ ನಾಯಕ ಪಿ.ಸುಂದರಯ್ಯ ಅವರ ಬರೆದಿರುವ ಈ ಎರಡು ಪುಸ್ತಕಗಳನ್ನು ಓದಬಹುದು 1)ವೀರ ತೆಲಂಗಾಣ: ತೆಲಂಗಾಣ ರೈತರ ಸಶಸ್ತ್ರ ಹೋರಾಟ 1946-51 (ಕ್ರಿಯಾ ಪ್ರಕಾಶನ ಪ್ರಕಟಣೆ) 2) ತೆಲಂಗಾಣ ಹೋರಾಟ – ಪಿ ಸುಂದರಯ್ಯ ಅನು: ಬಿ ಸುಜ್ಞಾನಮೂರ್ತಿ (ಪಲ್ಲವ ಪ್ರಕಾಶನ)

ಯಾವುದು ಹೈದ್ರಾಬಾದ್‌ ಕರ್ನಾಟಕ : ಹೈದ್ರಾಬಾದ್‌ ಕರ್ನಾಟಕ ಪ್ರಾಂತ್ಯವು ಬೀದರ್‌, ಕಲಬುರ್ಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ, ವಿಜಯನಗರ, ಜಿಲ್ಲೆಗಳನ್ನು ಒಳಗೊಂಡಿದೆ. ಈ ಭಾಗದಲ್ಲಿ 50 ತಾಲ್ಲೂಕುಗಳಿದ್ದು 40 ವಿಧಾನಸಭಾ ಕ್ಷೇತ್ರಗಳಿವೆ. ಪ್ರತಿಭಾರಿಯೂ ಗೆದ್ದವರೇ ಚುನಾವಣೆಯಲ್ಲಿ ಮರು ಆಯ್ಕೆ ಯಾಗುತ್ತಿದ್ದಾರೆ. ಹೊಸಬರ ಆಯ್ಕೆಯೂ ನಡೆಯುತ್ತಿದೆ. ಆದರೆ ಇವರುಗಳು ಈ ಪ್ರದೇಶದ ಅಭಿವೃದ್ಧಿಗೆ ಮನಸ್ಸು ಮಾಡಿ ಕೆಲಸ ಮಾಡುತ್ತಿಲ್ಲ. ಕೈಗೊಂಡ ಕಾಮಗಾರಿಗಳು ಅರ್ಧಕ್ಕೆ ನಿಂತದ್ದೆ ಹೆಚ್ಚು. ತಾಲ್ಲೂಕಗಳ ಅಭಿವೃದ್ಧಿಯಲ್ಲಿಯೂ ಅಸಮಾನತೆಯ ಪ್ರಮಾಣ ಹೆಚ್ಚಿದೆ. ಮಲ್ಲಿಕಾರ್ಜುನ ಖರ್ಗೆ ಕೇಂದ್ರದಲ್ಲಿ ಮಂತ್ರಿಯಾಗಿದ್ದರು, ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದರು ಎಂಬ ಕಾರಣಕ್ಕೆ ಕಲಬುರ್ಗಿ ಮೇಲ್ನೋಟಕ್ಕೆ ಅಭಿವೃದ್ಧಿಯಾದಂತೆ ಕಾಣುತ್ತಿದೆ. ದೇವದುರ್ಗ, ಶಹಪುರ, ಸುರಪುರ, ಬೀದರ್, ಬಸವಕಲ್ಯಾಣ, ಔರಧ್, ಕುಷ್ಟಗಿ, ಯಲಬುರ್ಗಾ, ಕುಕನೂರು, ಆಳಂದ, ಜೇವರ್ಗಿ, ತಾಲ್ಲೂಕಗಳ ಪರಿಸ್ಥಿತಿ ನೋಡಿದರೆ ಈ ಭಾಗದ ಚಿತ್ರಣ ಹೇಗಿದೆ ಎಂಬುದಕ್ಕೆ ಸಾಕ್ಷಿಯಾಗಿವೆ.

ಮಂಡಳಿ ಏನು ಮಾಡುತ್ತಿದೆ : ಕರ್ನಾಟಕ ಸರ್ಕಾರವು 2013 ರಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಜಾರಿಗೆ ತಂದಿತು. ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲು ಮತ್ತು ಅದರ ಉನ್ನತಿಗೆ ವಿಶೇಷ ನಿಬಂಧನೆಗಳನ್ನು ಒದಗಿಸಲು ಈ ಮಂಡಳಿಯನ್ನು ಸ್ಥಾಪಿಸಲಾಯಿತು. ಸೆಪ್ಟೆಂಬರ್ 17,2019ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಪ್ರಾಂತ್ಯದ ಹೆಸರನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಮರು ನಾಮಕರಣ ಮಾಡಿದರು.

ಈ ಹಿಂದೆ 1000 ಕೋಟಿ ರೂಪಾಯಿಗಳನ್ನು ಹೈದ್ರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ನೀಡಲಾಗುತ್ತಿತ್ತು.ಕಲ್ಯಾಣ ಕರ್ನಾಟಕವಾದ ನಂತರ 3000 ಕೋಟಿ ರೂಗಳ ಅನುದಾನ ನೀಡಲಾಗುತ್ತಿದೆ. ಆ ಹಣವನ್ನು ಏಳು ಜಿಲ್ಲೆಗಳಿಗೆ ಸಮನಾಗಿ ಹಂಚಿಕೆ ಮಾಡಿದರೆ 428 ಕೋಟಿ ರೂ ಹಣ ಸಿಗುತ್ತದೆ. ಜಿಲ್ಲಾಧಿಕಾರಿಗಳು ಯೋಜನೆ ರೂಪಿಸದ ಕಾರಣ ಬಂದ ಹಣ ಬಳಕೆಯಾಗದೆ ಹಾಗೆ ಉಳದಿದೆ. ಕೆಲವೊಂದಿಷ್ಟು ಕಡೆ ರಸ್ತೆ ಕಾಮಗಾರಿ, ಕೆಕೆಆರ್‌ಡಿಬಿ ಹೆಸರಲ್ಲಿ ಹೊಸ ಬಸ್‌ಗಳನ್ನು ಬಿಟ್ಟಿದ್ದೆ ದೊಡ್ಡ ಸಾಧನೆ ಎಂಬಂತಿದೆ.

ಖಾಲಿ ಖಾಲಿ ಹುದ್ದೆಗಳು : ಆಡಳಿತ ಇಲಾಖೆಯ ವ್ಯಾಪ್ತಿಗೊಳಪಡುವ 12 ಸರ್ಕಾರಿ ಇಲಾಖೆಗಳು ಮತ್ತು ಇವುಗಳ ಅಧೀನದಲ್ಲಿರುವ ನಿಗಮ, ಮಂಡಳಿ, ಪ್ರಾಧಿಕಾರಗಳಲ್ಲಿ ಈವರೆಗೂ ಹುದ್ದೆಗಳನ್ನು ಗುರುತಿಸಿ, ಸ್ಥಳೀಯ ವೃಂದ ರಚಿಸಿ ಅಧಿಸೂಚನೆ ಹೊರಡಿಸಿಲ್ಲ. ನೇರ ನೇಮಕಾತಿ ಹುದ್ದೆಗಳ ಪೈಕಿ, 12 ಇಲಾಖೆಗಳಲ್ಲಿ40 ಸಾವಿರಕ್ಕೂ ಹುದ್ದೆಗಳನ್ನು ಖಾಲಿ ಇವೆ. ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಇನ್ನೂ ಚಾಲನೆ ಸಿಕ್ಕಿಲ್ಲ. ಅದೇ ರೀತಿ, ಬಡ್ತಿ ಮೂಲಕ 20 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ತುಂಬಬೇಕಿದೆ.

ಕಳೆದ ಹತ್ತು ವರ್ಷಗಳಿಂದಲೂ ಸ್ಥಳೀಯ ವೃಂದ ರಚನೆ ಮಾಡದ ಇಲಾಖೆಗಳ ಪಟ್ಟಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಕೃಷಿ, ಹಿಂದುಳಿದ ವರ್ಗಗಳ ಕಲ್ಯಾಣ, ಉನ್ನತ ಶಿಕ್ಷಣ, ಒಳಾಡಳಿತ ಸಾರಿಗೆ, ಆರೋಗ್ಯ, ಕುಟುಂಬ ಕಲ್ಯಾಣ, ಆರ್‌ಡಿಪಿಆರ್, ಕೃಷಿ, ಪ್ರಾಥಮಿಕ, ಪ್ರೌಢಶಿಕ್ಷಣ, ಪಶುಸಂಗೋಪನೆ,, ಮೀನುಗಾರಿಕೆ, ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿನ ವಿವಿಧ ನಿಗಮ, ಮಂಡಳಿ, ಪ್ರಾಧಿಕಾರ, ಆಯೋಗಗಳು ಇವೆ. ನೇರ ನೇಮಕಾತಿ ನಡೆಸಬೇಕಿರುವ ಇಲಾಖೆಗಳ ಪೈಕಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲೇ 13,078 ಹುದ್ದೆಗಳು ಭರ್ತಿಯಾಗಬೇಕಿದೆ. ಅದೇ ರೀತಿ, ಅರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯಲ್ಲಿ 2780 ಹುದ್ದೆ ಭರ್ತಿಯಾಗಬೇಕಿದೆ. ನಗರಾಭಿವೃದ್ಧಿ ಇಲಾಖೆಯಲ್ಲಿ 1870, ಸಮಾಜ ಕಲ್ಯಾಣ ಇಲಾಖೆಯಲ್ಲಿ 2600 ಹುದ್ದೆಗಳು ಖಾಲಿ ಇವೆ. ಹಾಗೆಯೇ, ಬಡ್ತಿ ಮೂಲಕ ತುಂಬಬೇಕಿರುವ ಇಲಾಖೆಗಳ ಪೈಕಿ ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಯೊಂದರಲ್ಲೇ 15 ಸಾವಿರಕ್ಕೂ ಹೆಚ್ಚು ಹುದ್ದೆಗಳಿವೆ.

ಶೇ.80 ಮೀಸಲು ಎಂಬ ಹಗಲುಗನಸು : ಹೈಕ ವ್ಯಾಪ್ತಿಗೆ ಒಳಪಡುವ ಏಳು  ಜಿಲ್ಲೆಗಳಲ್ಲಿ ಉದ್ಯೋಗ, ಶಿಕ್ಷಣ ಕ್ಷೇತ್ರಗಳಲ್ಲಿ ಶೇ.80ರಷ್ಟು,  ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಶೇ.8 ರಷ್ಟು ಮೀಸಲು ಇದೆ. ಆದರೆ ಇದರ ಅನ್ವಯ ಉದ್ಯೋಗ ಸಿಕ್ಕಿದೆ ಅಥವಾ ಶಿಕ್ಷಣ ಪಡೆದಿದ್ದೇನೆ ಎಂದೂ ಏಳು ಜಿಲ್ಲೆಯಲ್ಲಿ ಹುಡುಕಿದರೂ ಸಿಕ್ಕುವುದಿಲ್ಲ. ಈ ಭಾಗಕ್ಕೆ 371(ಜೆ) ವಿಶೇಷ ಸ್ಥಾನಮಾನದ ಮೂಲಕ ಈ ಬಾಗ ಶೈಕ್ಷಣಿಕವಾಗಿ ಸುಧಾರಣೆಕಂಡು ಯುವಕರು ಉದ್ಯೋಗದತ್ತ ಮುಖ ಮಾಡುತ್ತಾರೆ ಎಂದೆಲ್ಲ ಆರಂಭದಲ್ಲಿ ಎದೆ ತಟ್ಟಿಕೊಳ್ಳಲಾಗಿತ್ತು. 10 ವರ್ಷ ಕಳೆದರೂ ಅದು ಇಲ್ಲಿಯವರೆಗೆ ಅದು ಸಮರ್ಪಕವಾಗಿ ಜಾರಿಯಾಗಿಲ್ಲ. 371(J) ಕಲಂ ಸಮರ್ಪಕ ಜಾರಿಯ ಜೊತೆಯಲ್ಲಿ ಈ ಭಾಗದ ರೈತರಿಗೆ, ವಿದ್ಯಾರ್ಥಿಗಳಿಗೆ, ಕೂಲಿಕಾರರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ವಿಶೇಷ ಪ್ಯಾಕೇಜ್ ಜಾರಿ ಮಾಡಬೇಕಿದೆ. ಮುಖ್ಯವಾಗಿ ಶಾಲೆ, ಕಾಲೇಜ್, ಹಾಸ್ಟೇಲ್ ಗಳ ಬಲವರ್ಧನೆ, ಆರೋಗ್ಯ ಕೇಂದ್ರಗಳ ಸ್ಥಾಪನೆ, ರಸ್ತೆ, ಸಾರಿಗೆ, ಕುಡಿಯುವ ನೀರು, ರೈತರಿಗೆ ನೀರಾವರಿ ಸೌಲಭ್ಯ, ರೈತರು ಬೆಳೆದ ಬೆಲೆಗಳಿಗೆ ಬೆಂಬಲ ಬೆಲೆ, ಸುಸಜ್ಜಿತ ಮನೆ, ನಿವೇಶನ ಇತ್ಯಾದಿಗಳ ಅಗತ್ಯಕ್ಕೆ ಆಳುವ ಸರಕಾರ, ಈ ಭಾಗದ ರಾಜಕಾರಣಿಗಳು, ಅಧಿಕಾರಿಗಳು ಮುಂದಾಗಬೇಕಿದೆ.

ಈ ಬಾಗದ ಅಭಿವೃದ್ಧಿಪಥದತ್ತ ಕೊಂಡೊಯ್ಯಲು ವಿಶೇಷ ಸ್ಥಾನಮಾನ ನೀಡಲಾಯಿತು. ಒಂದಿಷ್ಟು ಬದಲಾವಣೆ ಕಂಡಿದ್ದು ಬಿಟ್ಟರೆ, ಈಗಲೂ ಇಲ್ಲಿ ಸುಧಾರಣೆ ಕಂಡಿಲ್ಲ. ಶಿಕ್ಷಣ,ಆರ್ಥಿಕ, ರಾಜಕೀಯ ಅಸಮಾನತೆಯಿಂದಾಗಿ ಈ ಭಾಗ ಇನ್ನಷ್ಟು ನರಳುತ್ತಿದೆ. ಅಪೌಷ್ಠಿಕತೆ,  ಹೆಣ್ಣು ಬ್ರೂಣ ಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯಲಾಗಿಲ್ಲ. 7 ಜಿಲ್ಲೆಗಳಲ್ಲಿ ಕಲುಷಿತ ನೀರಿನ ಪರಿಣಾಮ ತಿಂಗಳಲ್ಲಿ 6 ರಿಂದ 8 ಜನ ಸಾವನ್ನಪ್ಪುತ್ತಿದ್ದಾರೆ. ನೂರಾರು ಜನರ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿದೆ. ಫ್ಲೋರೈಡ್‌ ಅಂಶದಿಂದ ಕೂಡಿದ ನೀರಿನ ಸೇವನೆ ಕಾರಣ ಯುವಕರು ಮುದುಕರಂತೆ ಕಾಣುತ್ತಿದ್ದಾರೆ.  ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಬಿಡುಗಡೆಯಾದ ಹಣವನ್ನು ಸಮರ್ಪಕವಾಗಿ ಬಳಸಬೇಕಿದೆ. ರಾಜಕೀಯ ಲಾಭವನ್ನು ಕೈಬಿಟ್ಟು ಜನರ ಕಲ್ಯಾಣದತ್ತ ಗಮನ ಹರಿಸಿದರೆ ಈ ಬಾಗವೂ ದಕ್ಷಿಣ ಕರ್ನಾಟಕದಂತೆ ಅಭಿವೃದ್ಧಿಯಾಗಲು ಸಾಧ್ಯ ಎಂದು ಹಿರಿಯ ಪ್ರಾಧ್ಯಾಪಕಿ ಸಂಗೀತ ಎಂ. ಕಟ್ಟಿಮನಿ ಪ್ರತಿಕ್ರಿಯಿಸಿದ್ದಾರೆ.

ಅಸಮತೋಲನದ ನಿವಾರಣೆಗಾಗಿ ಜನರ ನಡುವೆ ಜಾಗೃತೆ ಮೂಡಿಸಲು ಪ್ರಭಲ ಚಳುವಳಿಯೂ ಹೊರ ಹೊಮ್ಮಬೇಕಿದೆ. 371(J) ಜನರ ಹಕ್ಕಾಗಬೇಕೆ ಹೊರತು ರಾಜಕಾರಣಿಗಳ ರಾಜಕೀಯ ಲಾಭದ ಸಂಖ್ಯೆಯಾಗದಿರಲಿ. ಕೇವಲ ಉತ್ಸವ ಮಾಡದೆ ಕಲ್ಯಾಣ ಮಾಡುವತ್ತ ಸರಕಾರ ಮನಸ್ಸು ಮಾಡಬೇಕಿದೆ.

ಈ ವಿಡಿಯೋ ನೋಡಿ : ವಿಶೇಷ ಸ್ಥಾನಮಾನ ಇದ್ದರೂ , ಸಿಗದ ಉದ್ಯೋಗ – ಕನ್ನಡಿಯೊಳಗಿನ ಗಂಟಾಯ್ತೆ 371 ಜೆ ಕಲಂ?

 

 

Donate Janashakthi Media

Leave a Reply

Your email address will not be published. Required fields are marked *