ಕೃಷಿಕಾಯ್ದೆ ವಿರುದ್ಧ ಪ್ರತಿಭಟನೆ ಮುಂದುವರಿಸಲು ರೈತರ ನಿರ್ಧಾರ

ಮುಜಫ್ಫರ್​ನಗರ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಹಸ್ರಾರು ರೈತರು ಇಂದು ಉತ್ತರಪ್ರದೇಶದ ಮುಜಫ್ಫರ್​ನಗರದಲ್ಲಿ ಕಿಸಾನ್​ ಮಹಾಪಂಚಾಯತ್​ ನಡೆಸಿದರು. ತಮ್ಮ ಹೋರಾಟವನ್ನು ಮುಂದುವರಿಸುವ ಸಂಕಲ್ಪವನ್ನು ಪುನರುಚ್ಚರಿಸಿದ ರೈತನಾಯಕರು, ಬರುವ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಬಿಜಿಪಿಯ ವಿರುದ್ಧ ಪ್ರಚಾರ ನಡೆಸುವುದಾಗಿ ಘೋಷಿಸಿದ್ದಾರೆ.

ಸರ್ಕಾರಿ ಇಂಟರ್ ಕಾಲೇಜು ಆವರಣದಲ್ಲಿ ಸೇರಿದ್ದ ರೈತ ಸಮುದಾಯ ರಾಜ್ಯ ಮತ್ತು ಒಕ್ಕೂಟ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದೆ.

ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಕಿಸಾನ್ ಮಹಾಪಂಚಾಯತ್ ಮೂಲಕ ಆಡಳಿತಾರೂಢ ಪಕ್ಷಗಳಿಗೆ ಮಹಾಪಂಚಾಯತ್ ಮೂಲಕ ಸ್ಪಷ್ಟ ಸಂದೇಶ ನೀಡಲಾಗಿದೆ.

”ಮಹಾಪಂಚಾಯತ್’ ಆಂದೋಲನವು ‘ಎಲ್ಲಾ ಜಾತಿಗಳು, ಧರ್ಮಗಳು, ರಾಜ್ಯಗಳು, ವರ್ಗಗಳು, ಸಣ್ಣ ವ್ಯಾಪಾರಿಗಳು ಹಾಗೂ ಸಮಾಜದ ಎಲ್ಲಾ ವರ್ಗಗಳ ಬೆಂಬಲವನ್ನು ಹೊಂದಿದೆ ಎಂದು ಸಾಬೀತುಪಡಿಸುತ್ತದೆ” ಎಂದು ರೈತರ ಆಂದೋಲನವನ್ನು ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.

ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಇತರೆ ಭಾಗಗಳಿಂದಲೂ ರೈತರು ಮಹಾಪಂಚಾಯತ್ ನಲ್ಲಿ ಭಾಗಿಯಾಗಿದ್ದ ಬಗ್ಗೆ ವರದಿಯಾಗಿದೆ.

ವಿವಿಧ ಸಂಘಟನೆಗಳ ಸಾವಿರಾರು ಮಂದಿ ರೈತರು ಬಾವುಟಗಳನ್ನು ಹಿಡಿದು, ಬಗೆಬಗೆಯ ಟೋಪಿಗಳನ್ನು ಧರಿಸಿಕೊಂಡು ಬಸ್ಸು, ಟ್ರ್ಯಾಕ್ಟರ್ ಗಳ ಮೂಲಕ ಸಮಾರಂಭದ ಸ್ಥಳಕ್ಕೆ ಆಗಮಿಸುತ್ತಿದ್ದ ದೃಶ್ಯ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳ ಸೇರಿದಂತೆ ಕಂಡುಬಂತು.

Donate Janashakthi Media

Leave a Reply

Your email address will not be published. Required fields are marked *