ಮಳೆ ಆರ್ಭಟಕ್ಕೆ ವಾರದಲ್ಲಿ 34 ಮಂದಿ ಸಾವು

ಬೆಂಗಳೂರು : ರಾಜ್ಯದ ಹಲವೆಡೆ ಮಳೆರಾಯನ ಆರ್ಭಟ ಮುಂದುವರಿದಿದ್ದು ಇದುವರೆಗೂ ಒಂದು ವಾರದ ಅವಧಿಯಲ್ಲಿ ಸುರಿದ ಮಳೆಯಿಂದಾಗಿ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 34ಕ್ಕೆ ಏರಿದೆ. ಅಪಾರ ಆಸ್ತಿಪಾಸ್ತಿ ಹಾನಿಗೀಡಾಗಿ ಅನ್ನದಾತರ ಬದುಕು ದುಸ್ಥರವಾಗಿದೆ. ಎಡೆಬಿಡದೆ ಸುರಿದ ಮಳೆಯಿಂದಾಗಿ ಬೆಳೆದಿದ್ದ ಬೆಳೆಗಳು ನೀರು ಪಾಲಾಗಿವೆ. ಇನ್ನು ಮೂರು ದಿನಗಳ ಕಾಲ ರಾಜ್ಯದ 11 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಎಚ್ಚರಿಕೆ ಸಂದೇಶ ರವಾನಿಸಿದೆ.

ರಾಜ್ಯದಲ್ಲಿ ಮಳೆ ಪ್ರಮಾಣ ತಗ್ಗಿದ್ದರೂ ಪ್ರವಾಹ ಮಾತ್ರ ಕಡಿಮೆಯಾಗಿಲ್ಲ. ಇದರಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಡ್ಯ, ಕೊಡಗು ಜಿಲ್ಲೆಗಳಲ್ಲಿ ಮಳೆಯ ಅಬ್ಬರಕ್ಕೆ ಜನ ತತ್ತರಿಸಿದ್ದಾರೆ. ಕೆಆರ್‌ಎಸ್ ಜಲಾಶಯ ತುಂಬಿ ಹರಿಯುತ್ತಿದ್ದು, 1 ಲಕ್ಷ ಕ್ಯೂಸೆಕ್ಸ್ ಗೂ ಹೆಚ್ಚು ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದಾಗಿ ನದಿ ಪಾತ್ರದ ಆಸುಪಾಸಿನ ಗ್ರಾಮಗಳು ಜಲಾವೃತಗೊಂಡಿದ್ದು, ಜನರು ಆತಂಕಗೊಂಡಿದ್ದಾರೆ. ಕಾವೇರಿ ನದಿ ಪ್ರವಾಹದಿಂದಾಗಿ ಶವಸಂಸ್ಕಾರಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರದಲ್ಲಿ ಕ್ಯಾನ್ಸರ್ ನಿಂದ ಮೃತಪಟ್ಟಿದ್ದ ಸುಲೋಚನರವರ ಶವವನ್ನು ನೀರಿನಲ್ಲೇ ಗ್ರಾಮಸ್ಥರು ಶವಹೊತ್ತು ಮಸಣಕ್ಕೆ ತೆರಳಿ ಅಂತ್ಯಕ್ರಿಯೆ ನಡೆಸಿದ್ದಾರೆ. ಕಾವೇರಿ ನದಿಗೆ ಒಂದು ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದ ಜಮೀನಿಗಳಿಗೆ ನೀರು ನುಗ್ಗಿದೆ.

ಹಾಸನ, ಬೆಳಗಾವಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಗೆ ಮನೆ ಕುಸಿದು ಬಿದ್ದಿರುವ ಘಟನೆ ಸಂಭವಿಸಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಹಾಸನ, ಬೆಳಗಾವಿ ಜಿಲ್ಲೆಗಳಲ್ಲಿ ಶಾಲೆಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಕಲೇಶಪುರ ತಾಲ್ಲೂಕಿನ ಅಂಗನವಾಡಿ ಹಾಗೂ ಪ್ರೌಢಶಾಲೆಗೆ ರಜೆ ಘೋಷಿಸಲಾಗಿದೆ. ಮತ್ತೊಂದೆಡೆ ಬೆಳಗಾವಿ ಜಿಲ್ಲೆಯಲ್ಲಿ ವರುಣ ಅರ್ಭಟ ಮುಂದುವರಿದಿದ್ದು, ಮನೆಯ ಗೋಡೆ ಕುಸಿದು ಬಿದ್ದಿದೆ. ಗೋಡೆ ಕುಸಿಯುವಾಗಲೇ ಹೊರಗೆ ಓಡಿ ಬಂದು ನಾಲ್ವರು ಪ್ರಾಣ ಉಳಿಸಿಕೊಂಡಿದ್ದಾರೆ. ವಡಗಾವಿಯಲ್ಲಿರುವ ರಂಜಿತ್ ಚವ್ಹಾಣ್ ಎಂಬುವರಿಗೆ ಈ ಮನೆ ಸೇರಿದೆ. ಗೋಡೆ ಕುಸಿತದಿಂದಾಗಿ ಮನೆಯಲ್ಲಿ ಸಾಮಾಗ್ರಿಗಳು ಮಣ್ಣು ಪಾಲಾಗಿದ್ದು ಕುಟುಂಬ ಬೀದಿಗೆ ಬಿದ್ದಿದೆ.

ಬಾಗಲಕೋಟೆ ಜಿಲ್ಲೆಯಲ್ಲೂ ನಿರತರ ಮಳೆಯಿಂದಾಗಿ ಸಾರ್ವಜನಿಕರು ಮನೆಯಿಂದ ಹೊರಬರುತ್ತಿಲ್ಲ. ಜಿಟಿ ಜಿಟಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಿರಂತರ ಮಳೆಯಿಂದಾಗಿ ಭೂ ಕುಸಿತದ ಆತಂಕ ಎದುರಾಗಿದೆ. ಸ್ಥಳಕ್ಕೆ ಗಣಿ, ಕಂದಾಯ ಇಲಾಖೆಯ ನೋಡಲ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭೂಕುಸಿತದ ಪ್ರದೇಶದಲ್ಲಿದ್ದ ಕುಟುಂಬಸ್ಥರನ್ನ ಕಾಳಜಿ ಕೇಂದ್ರಕ್ಕೆ ವರ್ಗಾಯಿಸಲಾಗಿದೆ.

ವಿಜಯನಗರ ಜಿಲ್ಲೆಯಲ್ಲಿ ತುಂಗಭದ್ರಾ ಜಲಾಶಯದಿಂದ 1 ಲಕ್ಷ 1೦ ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗಿದೆ. ಇದರಿಂದಾಗಿ ಹಂಪಿಯ ಹಲವು ಸ್ಮಾರಕಗಳು ಜಲಾವೃತವಾಗಿವೆ. ಪುರಂದರದಾಸರ ಮಂಟಪ, ಸಾಲು ಮಂಟಪ, ಜಲಾವೃತವಾಗಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ 2 ದಿನ ವ್ಯಾಪಕ ಮಳೆಯಾಗಿದ್ದು, ಉಳಿದೆಡೆ ಸಾಧಾರಣ ಮಳೆ ಬೀಳಲಿದೆ. ನಂತರದ ದಿನಗಳಲ್ಲಿ ಮಳೆಯು ಉತ್ತರ ಭಾರತದತ್ತ ಹೊರಳಲಿದ್ದು, ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ.

ಈಗಾಗಲೇ ಮುಂಗಾರು ಆರ್ಭಟ ತುಸು ಕಡಿಮೆಯಾಗುತ್ತಿದೆ. ಮುಂದಿನ 2 ರಿಂದ 3 ದಿನ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗಲಿದ್ದು, ನಂತರದ ದಿನದಲ್ಲಿ ಉತ್ತರ ಭಾರತದತ್ತ ಮುಂಗಾರು ಚಲಿಸಲಿದ್ದು ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ.ಮಳೆಗಾಲ ಆಗಿರುವುದರಿಂದ ಕೆಲ ದಿನಗಳ ಬಳಿಕ ಮತ್ತೆ ಅಬ್ಬರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾನುವಾರ ರೆಡ್‌ಅಲರ್ಟ್‌ಘೋಷಿಸಲಾಗಿತ್ತು. ಹಾಸನ, ಯಾದಗಿರಿ, ಕಲಬುರಗಿ, ಬೀದರ್‌ಜಿಲ್ಲೆಗಳಿಗೆ ಆರೆಂಜ್‌ಹಾಗೂ ಬೆಳಗಾವಿ, ರಾಯಚೂರು, ವಿಜಯಪುರ, ಚಾಮರಾಜನಗರ, ದಾವಣಗೆರೆ ಮತ್ತು ಮೈಸೂರು ಜಿಲ್ಲೆಗಳಿಗೆ ಯಲ್ಲೊ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ.

ರಾಜ್ಯದಲ್ಲಿ ಇಂದಿನಿಂದ ಮಳೆಯ ಅಬ್ಬರ ತುಸು ತಗ್ಗುವ ಲಕ್ಷಣಗಳಿವೆ. ಆದರೆ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಿಗೆ ಬುಧವಾರದವರೆಗೆ ಆರೆಂಜ್ ಅಲರ್ಟ್ ಇರಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂದಿನಿಂದ ಬುಧವಾರದವರೆಗೆ ಭಾರೀ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

 

 

Donate Janashakthi Media

Leave a Reply

Your email address will not be published. Required fields are marked *