ಕರ್ನಾಟಕಕ್ಕೆ ಇಂತಹ ವಿದ್ಯಮಾನಗಳು ಘಾತಕವಾದವು ಎಂದು ಸಾಹಿತಿಗಳು ಮತ್ತು ಪ್ರಗತಿಪರ ಚಂತಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಬೆಂಗಳೂರು ಜ 22 : ಜನವರಿ 17,ರಂದು ನಡೆದ ಮಂಡ್ಯ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಹೋರಾಟ ನಿರತ ರೈತರ ಜೊತೆ ಮಾತನಾಡದ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸಿದ ಸಾಹಿತಿ ಹಂಪ ನಾಗರಾಜಯ್ಯರವರ ವಿರುದ್ಧ ಮಂಡ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅವರನ್ನು ಪೊಲೀಸರು ಠಾಣೆಗೆ ಕರೆಸಿ ಹೇಳಿಕೆ ಪಡೆಯಲಾಗಿದೆ.
ರೈತರ ಹೋರಾಟದ ವಿಷಯದಲ್ಲಿ ನಿಷ್ಕರುಣಿಯಾಗಿ ವರ್ತಿಸುತ್ತಿರುವ, ಸೇಡಿನ ಮನೋಭಾವದಂತೆ ಮೇಲ್ನೋಟಕ್ಕೆ ಕಾಣುತ್ತಿರುವ ಮೋದಿ ಸರ್ಕಾರದ ನಡೆಯನ್ನು ಹಿರಿಯ ಸಾಹಿತಿ ಹಂ.ಪ.ನಾ ಟೀಕಿಸಿದ್ದರು. ಸರಕಾರ ದುರ್ಯೋಧನ, ಗೋಮುಖವ್ಯಾಘ್ರ ಎಂದು ವರ್ಣಿಸಿದರೆಂಬ ಕಾರಣಕ್ಕೆ ಏಳು ಜನ ಬಿ.ಜೆ.ಪಿ.ಕಾರ್ಯಕರ್ತರು
ಮಂಡ್ಯ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದಾಖಲೆಗಳೆ ಇಲ್ಲದೇ ದಾಖಲಿಸಿದ ದೂರಿನನ್ವಯ ಹಿರಿಯ ಸಾಹಿತಿ ನಾಡೋಜ ಹಂ.ಪ.ನಾ ರವರನ್ನು ಬೆಂಗಳೂರಿನಿಂದ ಮಂಡ್ಯಕ್ಕೆ ಕರೆಯಿಸಿ ಹೇಳಿಕೆ ಪಡೆದುಕೊಂಡ ಪೋಲೀಸ್ ಮತ್ತು ರಾಜ್ಯ ಸರಕಾರದ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ನಾಡಿನ ಹಲವಾರು ಜನ ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಎಪ್ಪತ್ತನೇ ಗಣರಾಜ್ಯೋತ್ಸವ ದ ಮುನ್ನಾದಿನ ನಾಡಿನ ಹಿರಿಯ ಸಾಹಿತಿಗೆ ಮಾಡಿದ ಅವಮಾನವನ್ನು ಉಗ್ರವಾಗಿ ಖಂಡಿಸುತ್ತಿದ್ದಾರೆ. ನಾಡೋಜ ಹಂ.ಪ.ನಾ.ರವರಿಗೆ ಬೆದರಿಕೆಯ ಕರೆಗಳೂ ಬಂದಿರುವ ಹಿನ್ನೆಲೆಯಲ್ಲಿ ಸಾಹಿತಿಗಳು ನಿರ್ಭಯವಾಗಿ ಮಾತನಾಡಲಾರದಂತಹ, ತುರ್ತುಪರಿಸ್ಥಿತಿ ಯನ್ನೂ ಮೀರಿಸುವ ರೀತಿಯ ಭಯದ ವಾತಾವರಣ ನಿರ್ಮಾಣವಾಗಿದೆ. ಇದು ಖಂಡನೀಯ ಎಂದು ಚಿಂತಕಿ ಕೆ.ಎಸ್. ವಿಮಲಾ ತಿಳಿಸಿದ್ದಾರೆ.
ಹಂಪನಾ ಅವರನ್ನು ಠಾಣೆಗೆ ಕರೆಸಿಕೊಂಡು ವಿಚಾರಿಸಿದ ಪ್ರಕರಣವನ್ನು ಒಂಟಿಯಾಗಿ ನೋಡಲಾಗದು ಎಂದು ವಿಮರ್ಶಕ ರಹಮತ್ ತರೀಕೆರೆ ಫೆಸ್ಬುಕ್ ನಲ್ಲಿ ಬರೆದು ಕೊಂಡಿದ್ದಾರೆ. ಅನಂತಮೂರ್ತಿಯವರಿಗೆ ಪಾಕಿಸ್ತಾನಕ್ಕೆ ಟಿಕೆಟ್ ಬುಕ್ ಮಾಡಿದ್ದು, ಕಲಬುರ್ಗಿ- ಗೌರಿಹತ್ಯೆಗಳು, ನಾಟಕದ ಸಂಭಾಷಣೆಯೊಂದಕ್ಕಾಗಿ ಶಾಲೆಯ ಮೇಲೆ ದೇಶದ್ರೋಹದ ಪ್ರಕರಣಗಳಿಂದ ಹಿಡಿದು ಹಂಪನಾ ಪ್ರಕರಣದ ತನಕ ಸರಣಿ ವಿದ್ಯಮಾನಗಳಿವೆ. ತಿನ್ನುವ ಉಡುವ ಪ್ರೇಮಿಸುವ ಬರೆವ ಪಶುಸಾಕುವ ಮಾರುವ ಮಾತಾಡುವ- ಅನೇಕ ಬಗೆಯ ಸ್ವಾತಂತ್ರ್ಯಗಳನ್ನು ಹತ್ತಿಕ್ಕುತ್ತಿರುವ ಚಿಂತನೆ ಮತ್ತು ರಾಜಕೀಯ ವ್ಯವಸ್ಥೆಯ ಭಾಗವಾಗಿ ಇವನ್ನು ಗಮನಿಸಬೇಕು. ಕರ್ನಾಟಕವು ನಾಗರಿಕ ಸ್ವಾತಂತ್ರ್ಯ ಕಸಿಯುವ ರಾಜ್ಯವಾಗುತ್ತಿರುವುದು ದಿಟ. ಕೌಶಲ್ಯ ನಾವೀನ್ಯತೆ ವಿಷಯದಲ್ಲಿ ದೇಶಕ್ಕೆ ಪ್ರಥಮಸ್ಥಾನ ಪಡೆಯಬಲ್ಲ ಕರ್ನಾಟಕಕ್ಕೆ ಇಂತಹ ವಿದ್ಯಮಾನಗಳು ಘಾತಕವಾದವು ಎಂದು ರಹಮತ್ ತರೀಕೆರೆಯವರು ಹೇಳಿದ್ದರು.
ಇದನ್ನೂ ಓದಿ : ‘ರಾಜದ್ರೋಹ’ದ ಐಪಿಸಿ ಕಲಮು 124(ಎ) ಕೊನೆಗಾಣಿಸಬೇಕು
ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ನುಡಿಗಳಲ್ಲಿ ಹಂಪನಾ ಸರ್ಕಾರವನ್ನು ಟೀಕಿಸಿದ್ದು ಕ್ರಿಮಿನಲ್ ಅಪರಾಧ ಹೇಗಾಗುತ್ತದೆ. ನಮ್ಮ ದೇಶದಲ್ಲಿ ತುರ್ತುಪರಿಸ್ಥಿತಿ ಅಥವಾ ಸರ್ವಾಧಿಕಾರಿ ಆಡಳಿತ ಜಾರಿಯಲ್ಲಿದೆಯೇ? ಕೇಂದ್ರ ಸರ್ಕಾರ ದುರ್ಯೋಧನನಂತೆ ವರ್ತಿಸುತ್ತಿದೆ ಎಂದರೆ ಆಕಾಶ ತಲೆ ಮೇಲೆ ಬಿದ್ದು ಹೋಯಿತೇ? ದುರ್ಯೋಧನ ಅನ್ನುವುದು ‘ಗೋಲಿ ಮಾರೋ ಸಾಂಲೋಕೋ’ ಎಂಬ ಘೋಷಣೆಗಿಂತ ಅಪಾಯಕಾರಿಯೇ? ಎಂದು ಯುವ ಬರಹಗಾರ ದಿನೇಶ್ ಕುಮಾರ್ ಎಸ್.ಸಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಮಾಧ್ಯಮಗಳೆಂಬ ಮುಸುಕಿನ ಅಸ್ತ್ರಗಳು
ಜನಪರ ಧ್ವನಿಯೆತ್ತಿದ ಖ್ಯಾತ ಸಾಹಿತಿ, ಸಂಶೋಧಕ ಹಂ.ಪ. ನಾಗರಾಜಯ್ಯ ವಿರುದ್ಧ ಪೊಲೀಸ್ ಕ್ರಮ ಕೈಗೊಂಡ ರಾಜ್ಯ ಬಿಜೆಪಿ ಸರಕಾರದ ನಡೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೀವ್ರವಾಗಿ ಖಂಡಿಸಿದ್ದಾರೆ. ಕೇಂದ್ರ ಸರಕಾರವನ್ನು ಟೀಕಿಸಿದರು ಎಂಬ ಏಕೈಕ ಕಾರಣಕ್ಕಾಗಿ ಹಂಪನಾ ಅವರನ್ನು ಮಂಡ್ಯ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಹಾಗೂ ಕೀಚಕ ನಡೆಯ ಪ್ರತೀಕ ಎಂದು ಶಿವಕುಮಾರ್ ಅವರು ಟೀಕಿಸಿದ್ದಾರೆ.
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ), ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿಗಳು ಈ ಘಟನೆಯನ್ನು ಖಂಡಿಸಿದ್ದು, ಪೋಲಿಸರು ರಾಜಕೀಯ ಪ್ರೇರಿತ ದೂರನ್ನು ಆಧರಿಸಿ ಏಕಾಏಕಿ ಖ್ಯಾತ ಸಾಹಿತಿಗಳನ್ನು ಪೋಲಿಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸುವ ಮೂಲಕ ಕಾನೂನು ರೀತಿ ಕರ್ತವ್ಯ ನಿರ್ವಹಿಸುವ ಬದಲು ಬಿಜೆಪಿ ಹಾಗೂ ಆರ್.ಎಸ್.ಎಸ್ ಅಣತಿಯಂತೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂಬುದನ್ನು ಜಗಜ್ಜಾಹಿರಗೊಳಿಸಿಕೊಂಡಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರವು ತನ್ನ ಬಿಜೆಪಿ ಸರ್ಕಾರಗಳ ನೀತಿಗಳನ್ನು ವಿಮರ್ಶಿಸುವುದನ್ನು ಹಾಗೂ ಜನಪರವಾಗಿ ಧ್ವನಿ ಎತ್ತುವುದನ್ನು ಅಡಗಿಸುವ ಪ್ರಜಾಪ್ರಭುತ್ವ ವಿರೋಧಿ ಕ್ರಮವನ್ನು ಅನುಸರಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ. ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರು ಕೂಡಲೇ ಕ್ಷಮೆಯಾಚಿಸಬೇಕು ಹಾಗೂ ವಿಚಾರಣೆ ನಡೆಸಿದ ಪೋಲಿಸ್ ಅಧಿಕಾರಿಗಳ ಮೇಲೆ ಕ್ರಮವಹಿಸಬೇಕೆಂದು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ. ಎನ್. ಉಮೇಶ್ ಆಗ್ರಹಿಸಿದ್ದಾರೆ.
ಈ ವಿಡಿಯೋ ನೋಡಿ : ಮೇ 16 ನ್ಯಾಯದ ದಿನ , ಡಾ. ಆನಂದ ತೇಲ್ತುಂಬಡೆ ಬಿಡುಗಡೆಗೆ ಆಗ್ರಹ