ಬ್ರೆಜಿಲ್ ನ ಅಮೆಜೋನಾಸ್ ರಾಜ್ಯದಲ್ಲಿ ಕಳೆದ ಡಿಸೆಂಬರಿನಿಂದ ಕೋವಿಡ್-19 ಹರಡುವಿಕೆಯ ತೀವ್ರತೆಯಿಂದಾಗಿ, ಪ್ರಕರಣಗಳು ಹಠಾತ್ತಾಗಿ ಉಲ್ಬಣಗೊಂಡಿತ್ತು. ಅಲ್ಲಿನ ಆರೋಗ್ಯ ವ್ಯವಸ್ಥೆಯು ತೀವ್ರವಾಗಿ ಕುಸಿತ ಗೊಂಡಿತ್ತು. ಐಸಿಯು ಹಾಸಿಗೆಗಳು ಮತ್ತು ಆಮ್ಲಜನಕದ ಕೊರತೆ ಉಂಟಾಗಿತ್ತು. ಅಮೆಜೊನಾಸ್ ನ ಗವರ್ನರ್ ವಿಲ್ಸನ್ ಲಿಮಾ ರವರ ಕೋರಿಕೆಯ ಮೇರೆಗೆ, ತಕ್ಷಣವೇ ವೆನೆಜುವೆಲಾ ದ ಅಧ್ಕ್ಕಕ್ಷ ನಿಕೋಲಸ್ ಮಡುರೊ ರವರು, ಅಗತ್ಯ ವಿದ್ದ ಆಮ್ಲಜನಕದ ಟ್ಯಾಂಕ್‌ಗಳನ್ನು ಅಮೆಜೋನಾಸ್ ರಾಜ್ಯಕ್ಕೆ ಕಳುಹಿಸಿ ಕೊಟ್ಟಿದ್ದು, ವೆನೆಜುವೆಲಾ ಜನತೆಯ ಅಂತರಾಷ್ಟ್ರೀಯ ಮಾನವೀಯ ಸೌಹಾರ್ದತೆಯನ್ನು ಮೆರೆಸಿದ್ದಾರೆ. ಇದು ಜಗತ್ತಿನ ಇತರೆ ದೇಶಗಳ ಶ್ಲಾಘನೆಗೆ ಪಾತ್ರವಾಗಿದೆ. ಬ್ರೆಜಿಲ್ ನಲ್ಲಿ ಇತ್ತೀಚೆಗೆ ಬಂದ ಸರಕಾರದ ವೆನೆಜುವೇಲಾ ವನ್ನು ತನ್ನ ವೈರಿಯಂತೆ ನೋಡುತ್ತಿದೆ. ಇದನ್ನು ಲೆಕ್ಕಿಸದೆ ವೆನೆಜುವೆಲಾ ಈ ಸಹಾಯಹಸ್ತ ಚಾಚಿತ್ತು ಎಂಬುದು ಗಮನಾರ್ಹವಾಗಿದೆ.
ಈ ಮಾಹಿತಿಯನ್ನು ಅಮೆಜೋನಾಸ್‌ನ ಫೆಡರಲ್ ಡೆಪ್ಯೂಟಿ, ವರ್ಕರ್ಸ್ ಪಾರ್ಟಿಯ ಜೋಸ್ ರಿಕಾರ್ಡೊ ಸಾಮಾಜಿಕ ಮಾಧ್ಯಮದಲ್ಲಿ ದೃಡಪಡಿಸಿದ್ದಾರೆ. ಅಮೆಜೋನಾಸ್ ರಾಜ್ಯಪಾಲ ವಿಲ್ಸನ್ ಲಿಮಾ ಅವರು ವೆನಿಜುವೆಲಾದ ಸರ್ಕಾರಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಗವರ್ನರ್ ವಿಲ್ಸನ್ ಲಿಮಾ ಅವರ ಪ್ರಕಾರ, ಆಮ್ಲಜನಕದ ಬಳಕೆ ಹಿಂದಿನ ಅತ್ಯಂತ ಹೆಚ್ಚು ಬಳಕೆಯಾಗಿದ್ದ 2020 ರ ಏಪ್ರಿಲ್ ಗಿಂತ ಬಳಕೆ ಜನವರಿ 13ರ ಹೊತ್ತಿಗೆ ಸುಮಾರು 130% ಹೆಚ್ಚಾಗಿದ್ದು, ತೀವ್ರ ಕೊರತೆ ಉಂಟಾಗಿತ್ತು.
ಆಮ್ಲಜನಕ ಮತ್ತು ಐಸಿಯು ಹಾಸಿಗೆಗಳ ಕೊರತೆಯಿಂದಾಗಿ ಜನವರಿ 13ರ ಹೊತ್ತಿಗೆ ಕೊವಿದ್-19 ಪರಿಸ್ಥಿತಿಯು ತುಂಬಾ ಹದಗೆಟ್ಟಿತ್ತು ಎಂದು ಅಮೆಜೋನಾಸ್‌ನ ರಾಜಧಾನಿಯಾದ ಮನೌಸ್‌ನಲ್ಲಿ ಆರೋಗ್ಯ ಸೇವಾ ಸಿಬ್ಬಂದಿ ಮತ್ತು ಆಸ್ಪತ್ರೆಗೆ ದಾಖಲಾದ ರೋಗಿಗಳ ಕುಟುಂಬದವರು ಕೂಡಾ ತಿಳಿಸಿದ್ದಾರೆ. ಅಮೆಜೋನಾಸ್‌ನ ವೈದ್ಯರ ಯೂನಿಯನ್ ಅಧ್ಯಕ್ಷ ಮಾರಿಯೋ ವಿಯನ್ನಾ ಪ್ರಕಾರ, “ಇದು ಒಂದು ಭಯಾನಕ ಸನ್ನಿವೇಶವನ್ನು ಸೃಷ್ಟಿ ಸಿದೆ. ನಾವು ತುಂಬಾ ಭಯಪಟ್ಟಿದ್ದೇವೆ. ಈ ಕ್ಷಣದಲ್ಲಿ, ನಾವು ತುರ್ತಾಗಿ ಪರಿಹಾರವನ್ನು ಕಂಡು ಕೊಳ್ಳಬೇಕು. ಎಲ್ಲಿ ಲಭ್ಯವಿದೆಯೋ ಅಲ್ಲಿಂದ ಆಮ್ಲಜನಕವನ್ನು ಯುದ್ಧದಂತೆ ಸಾಗಿಸುವುದು ಜೀವ ಉಳಿಸುವ ಅವಶ್ಯಕತೆಯಾಗಿದೆ ”ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ದೃಢಪಡಿಸಿದರು. ಇಂತಹ ಕಷ್ಟ ಸನ್ನಿವೇಶದಲ್ಲಿ ವೆನೆಜುವೆಲಾ ದ ಬೆಂಬಲವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಗವರ್ನರ್ ಹೇಳಿದ್ದಾರೆ.
ಜನವರಿ 14 ರ ರಾತ್ರಿ ಹಂಚಿಕೊಂಡ ರಾಷ್ಟ್ರೀಯ ಆರೋಗ್ಯ ಕಾರ್ಯದರ್ಶಿಗಳ ಮಂಡಳಿಯ (ಕೊನಾಸ್) ಬುಲೆಟಿನ್ ಪ್ರಕಾರ, ಅಮೆಜೊನಾಸ್ ರಾಜ್ಯದಲ್ಲಿ 5,920 ಸಾವುಗಳು ದಾಖಲಾಗಿವೆ ಮತ್ತು 2.23 ಲಕ್ಷ ಕೊವಿಡ್ -19 ಪ್ರಕರಣಗಳು ದೃಢಪಟ್ಟಿದೆ. ಜನವರಿ 3 ರಿಂದ 9 ರ ವಾರದಲ್ಲಿ 344 ಸಾವುಗಳು ದೃಡ ಪಟ್ಟಿದೆ. ಡಿಸೆಂಬರ್ 27 ರಿಂದ ಜನವರಿ 2 ರ ಹಿಂದಿನ ವಾರದಲ್ಲಿ 152 ಸಾವುಗಳು ದೃಡ ಪಟ್ಟಿದ್ದವು. ರೋಗದ ಹೊಸ ಪ್ರಕರಣಗಳ ಸಂಖ್ಯೆಯಲ್ಲಿಯೂ ಹೆಚ್ಚಳವನ್ನು ಗಮನಿಸಬಹುದು. ಜನವರಿ 3 ರಿಂದ 9 ರವರೆಗೆ, 11,129 ಹೊಸ ಸೋಂಕುಗಳು ದೃಡಪಟ್ಟರೆ, ಹಿಂದಿನ ವಾರದಲ್ಲಿ, ಡಿಸೆಂಬರ್ 27 ರಿಂದ ಜನವರಿ 2 ರವರೆಗೆ, 5,930 ಹೊಸ ಸೋಂಕುಗಳು ದೃಡಪಟ್ಟಿವೆ.
“ಲ್ಯಾಟಿನ್ ಅಮೆರಿಕನ್ ರ ಸೌಹಾರ್ದತೆ ಎಲ್ಲಕ್ಕಿಂತ ಮಿಗಿಲಾಗಿದ್ದು”
ಹೆಣಗಾಡುತ್ತಿರುವ ಬ್ರೆಜಿಲ್ ನ ರಾಜ್ಯವೊಂದಕ್ಕೆ ವೆನಿಜುವೆಲಾದ ತುರ್ತು ಸಹಾಯವು ಅಂತರಾಷ್ಟ್ರೀಯ ಸೌಹಾರ್ದತೆಯ ಸೂಚನೆಯನ್ನು ಬ್ರೆಜಿಲ್ ಒಳಗೆ ಮತ್ತು ಲ್ಯಾಟಿನ್ ಅಮೆರಿಕದಾದ್ಯಂತ ನೀಡಿದೆ. ಮಡುರೊ ರವರ ಈ ಸಕ್ರಿಯ ಸೌಹಾರ್ದತೆಯನ್ನು ಅನೇಕ ದೇಶಗಳು ಶ್ಲಾಘಿಸಿವೆ. ಜೈರ್ ಬೋಲ್ಸೊನಾರೊ ಅವರು 2019 ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ವೆನಿಜುವೆಲಾದ ಮೇಲೆ ಆಕ್ರಮಣಕಾರಿ ನೀತಿಯನ್ನು ಅನುಸರಿಸಿಕೊಂಡು ಬಂದಿದ್ದಾರೆ. ಹಾಗೆಯೇ, ಉಭಯ ದೇಶಗಳ ನಡುವೆ ಅಸ್ತಿತ್ವದಲ್ಲಿದ್ದ ಆರ್ಥಿಕ ಮತ್ತು ರಾಜಕೀಯ ಸಹಕಾರದ ಅನೇಕ ಐತಿಹಾಸಿಕ ಸಂಪರ್ಕಗಳನ್ನು ಹಾಳು ಮಾಡಿದ್ದಾರೆ.
ಅದಾಗ್ಯೂ, ವೆನೆಜುವೆಲಾದ ಜನರು ಮತ್ತು ಸರ್ಕಾರವು ಬ್ರೆಜಿಲ್ ಜನರನ್ನು ಬೆಂಬಲಿಸುವ ಸಲುವಾಗಿ ಅದನ್ನು ಹೆಚ್ಚಿಕೊಂಡಿಲ್ಲ. ವೆನಿಜುವೆಲಾದ ಜೊತೆ ಗಡಿಯನ್ನು ಹಂಚಿಕೊಳ್ಳುವ ಬ್ರೆಜಿಲ್ COVID-19 ನಿಂದ ಹೆಚ್ಚು ಹಾನಿಗೊಳಗಾಗಿದೆ. ಅಲ್ಲಿ ದೃಡಪಡಿಸಿದ ಸೋಂಕುಗಳು ಮತ್ತು ಸಾವುಗಳ ಸಂಖ್ಯೆಯನ್ನು ಯು.ಎಸ್ ಮಾತ್ರ ಮೀರಿಸಿದೆ. ಜನವರಿ 15 ರ ವೇಳೆಗೆ 83.2 ಲಕ್ಷ ಕ್ಕೂ ಹೆಚ್ಚು ಪ್ರಕರಣಗಳು ಮತ್ತು ಅದರಲ್ಲಿ 2.07 ಲಕ್ಷ ಸಾವುಗಳು ಸಂಭವಿಸಿವೆ. ಹೀಗಾಗಿ, ಚಾವೆಜ್ ಕಟ್ಟಿಕೊಟ್ಟ ಅಂತರಾಷ್ಟ್ರೀಯ ಸೌಹಾರ್ದತೆಯನ್ನು ಮೆರೆಸಬೇಕೆಂಬ ಬೋಲೆವಿರಿಯನ್ ಕ್ರಾಂತಿಯ ಬಲವಾದ ಸಂದೇಶವನ್ನು ಜಗತ್ತಿಗೆ ಮಡುರೊ ಸಾರಿದ್ದಾರೆ.
ಅಮೆಜಾನಾಸ್‌ಗೆ ಆಮ್ಲಜನಕ ಟ್ಯಾಂಕ್‌ಗಳನ್ನು ಕಳುಹಿಸುವ ನಿರ್ಧಾರವನ್ನು ಪ್ರಕಟಿಸುವಾಗ, ವೆನಿಜುವೆಲಾದ ವಿದೇಶಾಂಗ ಸಚಿವ ಜಾರ್ಜ್ ಅರೆಜಾ ಟ್ವಿಟರ್‌ನಲ್ಲಿ ಹೀಗೆ ಬರೆದಿದ್ದಾರೆ, “ಅಧ್ಯಕ್ಷ ನಿಕೋಲಸ್ ಮಡುರೊ ಅವರ ಸೂಚನೆಯಂತೆ, ನಾವು ಅಮೆಜೋನಾಸ್ ರಾಜ್ಯದ ಬ್ರೆಜಿಲ್‌ನ ಗವರ್ನರ್ ವಿಲ್ಸನ್ ಲಿಮಾ ಅವರೊಂದಿಗೆ ಮಾತನಾಡಿದ್ದೇವೆ. “ಮನೌಸ್” ನಲ್ಲಿನ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನಲ್ಲಿ ಪಾಲ್ಗೊಳ್ಳಿ, ಎಲ್ಲಕ್ಕಿಂತ ಹೆಚ್ಚಾಗಿ ಲ್ಯಾಟಿನ್ ಅಮೆರಿಕನ್ ಐಕಮತ್ಯ ವನ್ನು ಎತ್ತಿಹಿಡಿಯಿರಿ” ಎಂಬ ಮಡುರೊ ರವರ ಟ್ವೀಟ್ ಅನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏತನ್ಮಧ್ಯೆ, ವೆನಿಜುವೆಲಾ COVID-19 ಮಹಾಸೋಂಕಿಗೆ ಅತ್ಯಂತ ಸಮಗ್ರವಾದ ಸ್ಪಂದನೆಯನ್ನು ಹೊಂದಿದೆ. ಇದು ಕೊವಿದ್-19 ಸೋಂಕಿತರನ್ನು ಕ್ವಾರಂಟೈನ್ ಮಾಡಲು ನಿರ್ಧರಿಸಿದ ಮೊದಲ ದೇಶಗಳಲ್ಲಿ ಒಂದಾಗಿದೆ ಮತ್ತು ಚಿಕಿತ್ಸೆ ಮತ್ತು ತಡೆಗಟ್ಟುವ ಸಾಮರ್ಥ್ಯವನ್ನು ಹೆಚ್ಚಿಸಲು ಅಸ್ತಿತ್ವದಲ್ಲಿರುವ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯವನ್ನು ವಿಸ್ತರಿಸಿದೆ. ಇದರ ಪರಿಣಾಮವಾಗಿ, ವೆನೆಜುವೆಲಾವು ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಮತ್ತು ಸೋಂಕಿಗೆ ಒಳಗಾದವರಿಗೆ ಆರೋಗ್ಯ ಸಂರಕ್ಷಣೆ ನೀಡಲು ಸಾಧ್ಯವಾಯಿತು. ಜನವರಿ 14 ರ ವೇಳೆಗೆ 1.18 ಲಕ್ಷ ಪ್ರಕರಣಗಳು ದೃಡಪಟ್ಟಿದ್ದು, 1,090 ಸಾವುಗಳು ಮಾತ್ರ ಸಂಭವಿಸಿವೆ ಎಂಬುದು ಗಮನಾರ್ಹ.
ಈ ಹಿಂದೆ, ಇದೇ ರೀತಿಯ ಸೌಹಾರ್ದ ತೆಯನ್ನು ಸಮಾಜವಾದಿ ಕ್ಯೂಬಾ ದೇಶವು ಇಟಲಿ ಮತ್ತು ಇನ್ನಿತರೆ ದೇಶಗಳಿಗೆ ವ್ಯಕ್ತ ಪಡಿಸಿದ್ದು, ತಮ್ಮ ಡಾಕ್ಟರ್ ಮತ್ತು ನರ್ಸ್ ಗಳನ್ನು ಕಳುಹಿಸಿ ಕೊಟ್ಟಿದ್ದನ್ನು ನೆನಪು ಮಾಡಿ ಕೊಳ್ಬಬಹುದು. ಬಂಡವಾಳಶಾಹಿ ದೇಶಗಳಲ್ಲಿ ಅದರಲ್ಲೂ ಬಲಪಂಥೀಯ ಸರಕಾರಗಳು ಇದ್ದ ಯು.ಎಸ್, ಬ್ರೆಜಿಲ್ ಗಳು ತೀವ್ರ ಆರೋಗ್ಯ ಬಿಕ್ಕಟ್ಟಿಗೆ ಒಳಗಾಗಿದ್ದು, ಸಮಾಜವಾದಿ ಧೋರಣೆಯ ಸರಕಾರಗಳು ಇರುವ ಕ್ಯೂಬಾ, ವಿಯೇಟ್ನಾಂ, ವೆನೆಜುವೇಲಾ ಗಳಲ್ಲಿ ಹೋಲಿಕೆಯಲ್ಲಿ ಗಮನಾರ್ಹ ಉತ್ತಮ ಪರಿಸ್ಥಿತಿಯಲ್ಲಿ ಇವೆ. ಮಾತ್ರವಲ್ಲ, ಇಂತಹ ದೇಶಗಳಿಗೆ ಸೌಹಾರ್ದ ಬೆಂಬಲ ಕೊಡುತ್ತಿವೆ ಎಂಬುದು ಗಮನಾರ್ಹವಾಗಿದೆ.