ಹೊಸದಿಲ್ಲಿ: ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ, ಪತ್ರಕರ್ತ ಮುಹಮ್ಮದ್ ಝುಬೈರ್ ರನ್ನು ʼಧಾರ್ಮಿಕ ಭಾವನೆಗಳಿಗೆ ಧಕ್ಕೆʼ ಆರೋಪದ ಮೇಲೆ ವಿಶೇಷ ತನಿಖಾ ದಳವು ಬಂಧಿಸಿದೆ.
“ಮುಹಮ್ಮದ್ ಝುಬೈರ್ ರನ್ನು ಬೇರೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಕರೆಸಲಾಗಿತ್ತು. ಆದರೆ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಬಂಧಿಸಲಾಗಿದೆ. ಈ ಕುರಿತು ಯಾವುದೇ ಸೂಚನೆ ನೀಡಿಲ್ಲ. ನಾವು ಪದೇ ಪದೇ ಮನವಿ ಮಾಡಿದರೂ ಎಫ್‌ಐಆರ್ ದಾಖಲಾದ ಪ್ರತಿಯನ್ನು ದಿಲ್ಲಿ ಪೊಲೀಸರು ನೀಡುತ್ತಿಲ್ಲ” ಎಂದು ಅವರು ಆರೋಪಿಸಿದ್ದಾರೆ.
“ದಾಖಲೆಯಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳನ್ನು ದೊರಕಿದ ನಂತರ” ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು. ಅವರನ್ನು ಇನ್ನೂ ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ಕಸ್ಟಡಿಗೆ ಪಡೆಯಲು ಪೊಲೀಸರು ನಾಳೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ, ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಮಾಜಿ ಐಪಿಎಸ್ ಅಧಿಕಾರಿ ಆರ್‌ಬಿ ಶ್ರೀ ಕುಮಾರ್ ಮೊದಲಾದವರ ಬಂಧನವು ಸಾಕಷ್ಟು ಆಕ್ರೋಶಕ್ಕೆ ಗುರಿಯಾಗಿತ್ತು. ಇದು ಬಿಜೆಪಿಯ ʼಸೇಡಿನ ರಾಜಕಾರಣʼ ಎಂದು ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ಪ್ರತಿಪಕ್ಷಗಳು ಆರೋಪಿಸಿದ್ದವು. ಅದರ ಬೆನ್ನಲ್ಲೇ, ಧ್ವೇಷ ಭಾಷಣಗಳು ಹಾಗೂ ಸುಳ್ಳು ಸುದ್ದಿಗಳ ಸತ್ಯ ಪರಿಶೋಧನೆ ಮಾಡುತ್ತಿದ್ದ ಖ್ಯಾತ ಪತ್ರಕರ್ತ ಝುಬೈರ್ ನನ್ನು ಬಂಧಿಸಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ತಪ್ಪು ಸಂದೇಶಗಳನ್ನು ಸಾಕ್ಷಿ ಸಮೇತ ಬಯಲುಗೊಳಿಸಿ ಸುಳ್ಳು ಸುದ್ದಿಗಳನ್ನು ಬೆತ್ತಲುಗೊಳಿಸುತ್ತಿದ್ದ ಖ್ಯಾತ ಪತ್ರಕರ್ತನ ಬಂಧನ ಖಂಡನೀಯ..! ಎಂದು ಬಹಳಷ್ಟು ನೆಟ್ಟಿಗರು ಟ್ವೀಟ್ ಮಾಡುತ್ತಿದ್ದಾರೆ.
ಯಾರು ಈ ಝುಬೈರ್ : ಮೊಹಮ್ಮದ್ ಝಬೈರ್. ಸುಳ್ಳು ಸುದ್ದಿಗಳನ್ನು ಬೆತ್ತಲು ಮಾಡುತ್ತಿರುವ ‘Altnews’ ವೆಬ್ ಸೈಟ್ನ ಸಹಸಂಪಾದಕ.
ಮುಚ್ಚು ಹೋಗುತ್ತಿದ್ದ ಬಿಜೆಪಿ ನಾಯಕರ ದ್ವೇಷ ಭಾಷಣಗಳನ್ನು ಹೊರಗೆ ತಂದಿದ್ದು ಇದೇ ಝುಬೈರ್. ಟ್ವಿಟರ್ ನಲ್ಲಿ ಲಕ್ಷಾಂತರ ಫಾಲೋಯರ್ಸ್ ಹೊಂದಿದ್ದಾರೆ. ಝುಬೈರ್ ಟ್ವೀಟ್ ಮಾಡಿದ ತಕ್ಷಣ ಬಿಜೆಪಿ ನಾಯಕರ ವಿಕೃತಿ ಜಗಜ್ಜಾಹೀರಾಯಿತು. ಬಿಜೆಪಿ, ಸಂಘ ಪರಿವಾರದ ಮುಸ್ಲಿಂ ದ್ವೇಷಕ್ಕೆ ತಣ್ಣೀರು ಬಿದ್ದಿದ್ದು ಇದೇ ಝುಬೈರ್ ಅವರಿಂದ. ಪ್ರವಾದಿ ಮಹಮ್ಮದ್ ಪೈಗಂಬರ್ ರವರನ್ನು ಅವಮಾನಿಸಿದ ನೂಪುರ್ ಶರ್ಮಾ ಪ್ರಕರಣವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುವಂತೆ ಮಾಡಿದ್ದು ಇದೇ ಝುಬೈರ್. ಬಿಜೆಪಿ ನೂಪರ್ ಶರ್ಮಾರನ್ನು ಉಚ್ಚಾಟನೆ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಅಂದಹಾಗೆ ಝುಬೈರ್ ಮೂಲತಃ ಕರ್ನಾಟಕದವರು.
ಝುಬೈರ್ ಬಂಧನವನ್ನು ಖಂಡಿಸಿ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿದೆ.