ರಾಂಚಿ: 16 ಬಿಜೆಪಿ ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ ಹೇಳಿಕೊಂಡಿದೆ. 16 ಬಿಜೆಪಿ ಶಾಸಕರು ಜಾರ್ಖಂಡ್ ನಲ್ಲಿ ಆಡಳಿತ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾದ ಸುಪ್ರಿಯೋ ಭಟ್ಟಾಚಾರ್ಯ ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಭಟ್ಟಾಚಾರ್ಯ ಹೇಳಿಕೆ ಜಾರ್ಖಂಡ್‌ನಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ಸರ್ಕಾರವನ್ನು ಬೆಂಬಲಿಸಲು 15 ಬಿಜೆಪಿ ಶಾಸಕರು ಸಿದ್ಧರಾಗಿದ್ದಾರೆ. ಬಿಜೆಪಿಯಲ್ಲಿ ಉಸಿರುಗಟ್ಟಿದ ಸ್ಥಿತಿಯಲ್ಲಿರುವ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಗುಂಪು ರಚಿಸುವ ಮೂಲಕ ಜೆಎಂಎಂ ನೇತೃತ್ವದ ಸರ್ಕಾರವನ್ನು ಬೆಂಬಲಿಸಲು ಬಯಸಿದ್ದಾರೆ ಎಂದು ಭಟ್ಟಾಚಾರ್ಯ ಹೇಳಿದರು.
ಬಿಜೆಪಿಯಿಂದ ಕಾಂಗ್ರೆಸ್ ಶಾಸಕರು ಆಮಿಷಕ್ಕೆ ಒಳಗಾಗುತ್ತಿದ್ದಾರೆ ಎಂಬ ಊಹಾಪೋಹಗಳು ದಟ್ಟವಾಗಿರುವ ಸಮಯದಲ್ಲಿ ರಾಜ್ಯ ಸರ್ಕಾರದ ಸ್ಥಿರತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ಔಪಚಾರಿಕ ಪ್ರಸ್ತಾವನೆ ಬಂದಾಗ ಮಾತ್ರ ಪಕ್ಷವು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಭಟ್ಟಾಚಾರ್ಯರವರ ಹೇಳಿಕೆಯನ್ನು ಬಿಜೆಪಿ ತಳ್ಳಿಹಾಕಿದೆ. ಬಿಜೆಪಿ ವಕ್ತಾರ ಪ್ರತುಲ್ ಶಾಹದೇವ್ ಪ್ರತಿಕ್ರಿಯೆ ನೀಡಿದ್ದು, ಜೆಎಂಎಂ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ರೀತಿಯ ಸುಳ್ಳುಗಳನ್ನು ಹೇಳುತ್ತಿದೆ. ನಮ್ಮ ಶಾಸಕರು ಯಾರ ಸಂಪರ್ಕದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.