14 ವರ್ಷಗಳ ನಂತರ ನಂದಿಗ್ರಾಮ ‘ಗೋಲೀಬಾರ್’ನ ಪಿತೂರಿ ಬಯಲು?

ನಂದಿ ಗ್ರಾಮ ಮತ್ತು ಸಿಂಗುರ್ ನಲ್ಲಿ ಸ್ಮಶಾನ ಮೌನ ಆವರಿಸಿದೆ. ಅಂದಿನ ಕುಟಿಲ ಪಿತೂರಿಗಾರರು ಪರಸ್ಪರ ಕೆಸರು ಎರಚಿಕೊಳ್ಳುತ್ತಿದ್ದಾರೆ. ಬಂಗಾಲದ ಯುವಜನರು ಉದ್ಯೋಗಾವಕಾಶಗಳನ್ನು ಕಳಕೊಂಡಿದ್ದಾರೆ    

                      -ಬುದ್ದದೇಬ್‍ ಭಟ್ಟಾಚಾರ್ಯ

“ ನಿಮಗೆ ನೆನಪಿರಬಹುದು, ಹಲವು ವ್ಯಕ್ತಿಗಳು (ಹುಸಿ) ಪೋಲಿಸ್‍ ಸಮವಸ್ತ್ರದಲ್ಲಿದ್ದವರು ಗುಂಡು ಹಾರಿಸಿದರು. ಅವರು ಹವಾಯಿ ಚಪ್ಪಲ್‍ ಧರಿಸಿದ್ದರು. ಈ ಬಾರಿ ಕೂಡ ಇಂತಹ ಹಗರಣಗಳು ತಯಾರಾಗುತ್ತಿವೆ. ತಂದೆ-ಮಗ ಜೋಡಿ ನಂದಿಗ್ರಾಮವನ್ನು ಪ್ರವೇಶಿಸಲು ಪೋಲೀಸರಿಗೆ ಪರವಾನಿಗೆ ಕೊಟ್ಟಿದ್ದಾರೆ. ನಾನು ಈ ವಿಷಯದಲ್ಲಿ ಅವರಿಗೆ ಸವಾಲು ಹಾಕುತ್ತೇನೆ, ನಾನೇನೂ ಹೇಳಿಲ್ಲ, ಇಷ್ಟು ಸಾಕು” – ಇದು ಪಶ್ಚಿಮ ಬಂಗಾಲದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ಅಧ್ಯಕ್ಷೆ  ಮತ್ತು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮಾರ್ಚ್‍ 28ರಂದು ಮಾಡಿದ ಭಾಷಣದ  ಒಂದು ತುಣುಕು.

ಅವರ ಈ ಆರು ವಾಕ್ಯಗಳು ಪಶ್ಚಿಮ ಬಂಗಾಲದಲ್ಲಿ ಎಡರಂಗದ ಆಳ್ವಿಕೆಯನ್ನು ಕೊನೆಗೊಳಿಸಲು ಟಿಎಂಸಿಗೆ ನೆರವಾದ ಎರಡು ಪ್ರಮುಖ ಘಟನೆಗಳಲ್ಲಿ ಒಂದಾದ ನಂದಿಗ್ರಾಮ್ ‘ಗೋಲೀಬಾರ್‍’ ಘಟನೆಯ ಹಿಂದೆ ಇದ್ದ ಭಯಾನಕ ಪಿತೂರಿಯ ಬಹಳಷ್ಟು ನಿಜಗಳನ್ನು 14 ವರ್ಷಗಳ ನಂತರ ಬಯಲಿಗೆ ತಂದಿದೆ, ಉಳಿದದ್ದು ಇನ್ನೂ ಕೆಲವು ದಿನಗಳಲ್ಲಿ ಸ್ಪಷ್ಟವಾಗಬಹುದು ಎಂದು ಹಲವು ರಾಜಕೀಯ ವೀಕ್ಷಕರು ಟಿಪ್ಪಣಿ ಮಾಡಿದ್ದಾರೆ.

ಇದನ್ನು ಓದಿ : ಸಿಪಿಐ(ಎಂ) ಪಕ್ಷ ಮಸುಕಾಗದೆ ಉಳಿದಿದೆ – ಜನರಲ್ಲಿ ಭರವಸೆ ಮೂಡಿದೆ : ಮೀನಾಕ್ಷಿ ಮುಖರ್ಜಿ

ಸರಿಯಾಗಿ 14 ವರ್ಷಗಳ ಹಿಂದೆ, ಮಾರ್ಚ್‍ 14, 2007ರಂದು 14 ತೃಣಮೂಲ ಕಾಂಗ್ರೆಸ್‍(ಟಿಎಂಸಿ)ನವರು ಎನ್ನಲಾದ 14 ಮಂದಿಯನ್ನು ಪೋಲಿಸರು ಹೊಡೆದು ಕೊಂದರು ಎಂದು ಆಗ ಪ್ರಚಾರ ಮಾಡಲಾಗಿತ್ತು.  ಇಲ್ಲಿ ಮಮತಾ ಬ್ಯಾನರ್ಜಿಯವರು ಉಲ್ಲೇಖಿಸಿರುವ ತಂದೆ-ಮಗ ಜೋಡಿ ಎಂದರೆ ಶಿಶಿರ್‍ ಅಧಿಕಾರಿ ಮತ್ತು ಈ ಬಾರಿ ಈ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ಎದುರು  ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುವೇಂದು ಅಧಿಕಾರಿ. ಇವರು ಆಗ ಟಿಎಂಸಿ ಯ ಒಬ್ಬ ಪ್ರಮುಖ ಮುಖಂಡರು ಹಾಗೂ ಮಮತಾ ಬ್ಯಾನರ್ಜಿಯವರ ಪ್ರಮುಖ ಸಹಾಯಕರಲ್ಲಿ ಒಬ್ಬರಾಗಿದ್ದರು. ಈ ಮೂಲಕ ಈಗ ಅವರನ್ನು ಟೀಕಿಸುವ ಭರದಲ್ಲಿ ಮಮತಾ ಬ್ಯಾನರ್ಜಿಯವರು ಅವರೊಂದಿಗೆ, ತಮ್ಮ ಪಾತ್ರವನ್ನೂ ಬಯಲು ಮಾಡಿಕೊಂಡಿದ್ದಾರೆ  ಎಂದು ಹಲವು ರಾಜಕೀಯ ವೀಕ್ಷಕರು ಹೇಳುತ್ತಿದ್ದಾರೆ.

 

ನಂದಿಗ್ರಾಮ ಮಾರ್ಚ್ 2007ರಲ್ಲಿ :

ಆಗ ಪಶ್ಚಿಮ ಬಂಗಾಲದಲ್ಲಿ ಎಡರಂಗದ ಆಳ್ವಿಕೆಯಿತ್ತು. ದೇಶದಲ್ಲಿ ಎರಡು  ಪೆಟ್ರೋ ರಾಸಾಯನಿಕ ಕೇಂದ್ರಗಳನ್ನು  ರಚಿಸುವ ಪ್ರಸ್ತಾವವಿದ್ದು, ಅವುಗಳಲ್ಲಿ ಒಂದನ್ನು ನಂದಿಗ್ರಾಮದಲ್ಲಿ ಸಾರ್ವಜನಿಕ ವಲಯದ ಕಂಪನಿಯ ಸಹಕಾರದಿಂದ ನಿರ್ಮಿಸುವ ಯೋಜನೆಯಿತ್ತು. ಆದರೆ ಇದಕ್ಕೆ ಜಮೀನು ಸ್ವಾಧೀನ ಪಡಿಸಿಕೊಳ್ಳುವಲ್ಲಿ ವಿರೋಧ ಬಂದುದರಿಂದ ಎಡರಂಗ ಸರಕಾರ ಈ ವಿಷಯದಲ್ಲಿ ಮುಂದುವರೆಯುವುದಿಲ್ಲ ಎಂದು ನಿರ್ಧರಿಸಿತು. “ನಂದಿಗ್ರಾಮದ ಜನತೆಗೆ ಬೇಡವಾದರೆ ಒಂದಿಂಚೂ ಜಮೀನನ್ನೂ ಸ್ವಾಧೀನ ಪಡಿಸಿಕೊಳ್ಳುವುದಿಲ್ಲ” ಎಂದು ಆಗ ಮುಖ್ಯಮಂತ್ರಿಯಾಗಿದ್ದ ಬುದ್ಧದೇಬ್‍ ಭಟ್ಟಾಚಾರ್ಯ ಘೋಷಿಸಿದ್ದರು. ಆದರೂ ಮಾವೋವಾದಿಗಳು ಇದನ್ನು ‘ಮುಕ್ತಾಂಚಲ’ (ವಿಮೋಚಿತ ಪ್ರದೇಶ) ಎಂದು ಘೋಷಿಸಿ ಯುವಕರಿಗೆ ಶಸ್ತ್ರ ತರಬೇತಿ ನೀಡುತ್ತಿದ್ದರು. ಸರಕಾರದ ಯಾವ ಕೆಲಸವೂ ಅಲ್ಲಿ ನಡೆಯದಂತೆ ಮಾಡಿದ್ದರು. ಪಂಚಾಯತು ಕಚೇರಿಗಳನ್ನು ಮುಚ್ಚಿದರು, ಇಲ್ಲವೇ ಲೂಟಿ ಮಾಡಿದರು. ಎಲ್ಲ ಅಭಿವೃದ್ಧಿ ಕಾಮಗಾರಿಗಳು ನಿಂತು ಹೋಗಿದ್ದವು. ಇವೆಲ್ಲದರಲ್ಲಿ ಟಿಎಂಸಿ ಮಾವೋವಾದಿಗಳ ಜತೆಗೆ ಕೈಜೋಡಿಸಿತ್ತು.

ಇದನ್ನು ಓದಿ : ಬಿಜೆಪಿ, ಟಿಎಂಸಿಯನ್ನು ಸಂಯುಕ್ತ ರಂಗ ಸೋಲಿಸುತ್ತದೆ – ಸೀತಾರಾಮ್‌ ಯೆಚುರಿ

ಈ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದ್ದ ನಾಲ್ವರು ಹಿರಿಯ ಆಡಳಿತ ಮತ್ತು ಪೋಲಿಸ್‍ ಅಧಿಕಾರಿಗಳು ಮಾರ್ಚ್ 14ರಂದು ಗೋಲೀಬಾರಿನ ಮ್ಯಾಜಿಸ್ಟ್ರೇಟ್‍ ಅನುಮತಿಯೊಂದಿಗೆ ನಂದಿಗ್ರಾಮ ಪ್ರವೇಶಿಸಿದರು. ಪ್ರತಿರೋಧ ಬಂದಾಗ ಮೊದಲು ಆಶ್ರುವಾಯು ಪ್ರಯೋಗಿಸಿದರು, ರಬ್ಬರ್‍ ಬುಲೆಟ್‍ ಹಾರಿಸಿದರು, ನಂತರ ಗೋಲೀಬಾರ್ ನಡೆಸಿದರು. ಅವರ ಪ್ರಕಾರ ಮೂವರು ಜನ ಇದರಿಂದ ಸತ್ತರು. ಆದರೆ ಸತ್ತವರ ಸಂಖ್ಯೆ 14 ಆಗಿತ್ತು. ಈ 14 ಹೆಣಗಳಲ್ಲಿ ಕನಿಷ್ಟ ಆರು ಹೆಣಗಳಲ್ಲಿ ಹರಿತ ಆಯುಧಗಳಿಂದ ಮಾಡಿದ ಗಾಯಗಳ ಗುರುತುಗಳಿದ್ದವು. ಅಂದರೆ ಅವರು ಪೋಲೀಸರ ಗೋಲೀಬಾರಿನಿಂದ ಸತ್ತಿರಲಿಲ್ಲ.

ಆದರೂ ಅಂದು ಅಲ್ಲಿ ಇರದ ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ ಎಡರಂಗ ಸರಕಾರ ಜನಗಳ ಹೆಣಗಳ ಮೇಲೆ ರಾಜ್ಯಭಾರ ನಡೆಸುತ್ತಿದೆ ಎಂದು ಆರ್ಭಟಿಸಿದರು. ಹವಾಯಿ ಚಪ್ಪಲಿ ಧರಿಸಿದ್ದ ಪೋಲೀಸರು ಜನಗಳ ಮಾರಣ ಹೋಮ ಮಾಡಿದರು ಎಂದು ಪ್ರಚಾರ ಮಾಡಿದರು.

ಕಲ್ಕತ್ತಾ ಹೈಕೋರ್ಟ್‍ ತಾನಾಗಿಯೇ  ಈ ಘಟನೆಯನ್ನು ಗಮನಕ್ಕೆ ತಗೊಂಡಿತು. ಆದರೆ ಆ ವೇಳೆಗೆ ಅಧಿಕಾರಕ್ಕೆ ಬಂದ ಮಮತಾ ಬ್ಯಾನರ್ಜಿ ಸರಕಾರ ನಿಜವಾದ ಹಲ್ಲೆಕೋರರ ತನಿಖೆ ನಡೆಯದಂತೆ ನೊಡಿಕೊಂಡಿತು ಎನ್ನಲಾಗಿದೆ. ಮೇಲೆ ಹೇಳಿದ ಪೋಲಿಸ್‍ ಮತ್ತಿತರ ಅಧಿಕಾರಿಗಳು ಟಿಎಂಸಿ ಆಳ್ವಿಕೆಯಲ್ಲಿ ಬಡ್ತಿ ಪಡೆದರು, ಒಬ್ಬರಂತೂ ನಿವೃತ್ತಿಯ ನಂತರ ಟಿಎಂಸಿ ಸೇರಿದರು!

ಈಗ, ಆ 14ರಲ್ಲಿ ಹೆಚ್ಚಿನವರನ್ನು ಕೊಂದ ‘ಚಪ್ಪಲಿಧಾರಿ ‘ಪೋಲೀಸರು’ ನಿಜವಾಗಿಯೂ ಯಾರು ಎಂದು ಸ್ವತಃ ಮುಖ್ಯಮಂತ್ರಿಗಳೇ ಸಂಕೇತ ನೀಡಿದ್ದಾರೆ. ಇದು ಟಿಎಂಸಿ-ಮಾವೋವಾದಿ ಪಿತೂರಿ, ವಾಸ್ತವವಾಗಿ ಹೆಣಗಳ ಮೇಲೆ ಅಧಿಕಾರ ಪಡೆದವರು ಟಿಎಂಸಿ ಯವರು  ಎಂದು ಎಡಪಕ್ಷಗಳು ಆಗ ಹೇಳಿದ್ದರಲ್ಲಿ ಸತ್ಯಾಂಶ ಇದೆ ಎಂದುದನ್ನು ಟಿಎಂಸಿಯ ಹಾಲೀ ಮತ್ತು ಮಾಜೀ ಮುಖಂಡರುಗಳೇ ಸಾಬೀತು ಮಾಡುತ್ತಿರುವಂತೆ ಕಾಣ ಬರುತ್ತಿದೆ.

ನಂದಿಗ್ರಾಮದಲ್ಲಿ ಸಾರ್ವಜನಿಕ ವಲಯದ ಕಂಪನಿಯ ಸಹಕಾರದಲ್ಲಿನ ಪೆಟ್ರೋ ರಾಸಾಯನಿಕ ಕೇಂದ್ರ ಬರಲಿಲ್ಲ, ಆದರೆ ಅದರ ಜೊತೆಗೆ ಯೋಜಿಸಿದ್ದ ಇನ್ನೊಂದು ಪೆಟ್ರೋ ರಾಸಾಯನಿಕ ಕೇಂದ್ರ ಗುಜರಾತಿನಲ್ಲಿ ಅಂಬಾನಿಗಳ ಸಹಯೋಗದಿಂದ ನಿರ್ಮಾಣಗೊಂಡಿತು ಎಂಬುದು ಗಮನಾರ್ಹ. “ನಂದಿ ಗ್ರಾಮ ಮತ್ತು ಸಿಂಗುರ್‍ ನಲ್ಲಿ ಸ್ಮಶಾನ ಮೌನ ಆವರಿಸಿದೆ. ಅಂದಿನ ಕುಟಿಲ ಪಿತೂರಿಗಾರರು ಪರಸ್ಪರ ಕೆಸರು ಎರಚಿಕೊಳ್ಳುತ್ತಿದ್ದಾರೆ. ಬಂಗಾಲದ ಯುವಜನರು ಉದ್ಯೋಗಾವಕಾಶಗಳನ್ನು ಕಳಕೊಂಡಿದ್ದಾರೆ” ಎಂದು  ಮಾಜಿ ಮುಖ್ಯಮಂತ್ರಿ ಬುದ್ಧದೇಬ್‍ ಭಟ್ಟಾಚಾರ್ಯ ಟಿಪ್ಪಣಿ ಮಾಡಿದ್ದಾರೆ.

Donate Janashakthi Media

One thought on “14 ವರ್ಷಗಳ ನಂತರ ನಂದಿಗ್ರಾಮ ‘ಗೋಲೀಬಾರ್’ನ ಪಿತೂರಿ ಬಯಲು?

  1. @ ಜನಶಕ್ತಿ ಮೀಡಿಯ
    ತಲೆಬರಹದಲ್ಲಿ, ಬಯಲು ಅಂತ ಬರೆದ ನಂತರ ಪ್ರಶ್ನಾರ್ಥಕ ಚಿಹ್ನೆ ಹಾಕಿರೋದು ಯಾಕೇ ? ನಿಮಗೇ ಅನುಮಾನ ಇದೆಯಾ ಹೇಗೇ ? ಅಗತ್ಯ ಇಲ್ಲದಲ್ಲಿ ಹಾಗೆ ಹಾಕಿದಾಗ ಇಡೀ ವರದಿಯ ವಿಶ್ವಾಸಾರ್ಹತೆ ನಶಿಸುತ್ತದೆ ಎಂಬುದು ಅರಿಯದೇ ?
    — ಶ್ಯಾಮರಾಜ್ ಪಟ್ರಮೆ.

Leave a Reply

Your email address will not be published. Required fields are marked *