ಕನ್ನಡ ಚಿತ್ರರಂಗದ ಮೇರುನಟ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ಜನವರಿ 29ರಂದು ಉದ್ಘಾಟನೆಗೊಳ್ಳಲಿದೆ. ಸುಮಾರು 13 ವರ್ಷದ ಬಳಿಕ ಮೈಸೂರಿನ ಎಚ್.ಡಿ. ಕೋಟೆ ರಸ್ತೆಯ ಉದ್ದೂರು ಗೇಟ್ ಬಳಿಯ ಹಾಲಾಳು ಗ್ರಾಮದಲ್ಲಿ 5 ಎಕರೆ ಜಾಗದಲ್ಲಿ 11 ಕೋಟಿ ರೂ. ವೆಚ್ಚದಲ್ಲಿ ಡಾ. ವಿಷ್ಣು ಸ್ಮಾರಕ ನಿರ್ಮಾಣವಾಗಿದೆ.
ಜನವರಿ 29ರಂದು ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸುವರು.
ಇದನ್ನು ಓದಿ: ಡಿಸೆಂಬರ್ ಒಳಗೆ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
2020 ಸೆಪ್ಟಂಬರ್ 15ರಂದು ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಮಾರಕ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಕರ್ನಾಟಕ ಪೊಲೀಸ್ ವಸತಿ ನಿಗಮವು ಸ್ಮಾರಕ ನಿರ್ಮಿಸಿದೆ. ಇದೀಗ ಕಾಮಗಾರಿ ಮುಗಿದಿದ್ದು, ಉದ್ಘಾಟನೆಗೆ ಸಜ್ಜಾಗಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಸ್ಮಾರಕ ಉದ್ಘಾಟನಾ ಕಾರ್ಯಕ್ರಮವನ್ನು ಸರ್ಕಾರ ಕೇವಲ ಸರ್ಕಾರಿ ಕಾರ್ಯಕ್ರಮದಂತೆ ಹಮ್ಮಿಕೊಂಡಿದ್ದರೆ, ಡಾ. ವಿಷ್ಣುವರ್ಧನ್ ಅಭಿಮಾನಿಗಳು ಅದೊಂದು ಜಾತ್ರೆಯ ರೀತಿಯಲ್ಲಿ ಆಚರಿಸಲು ಮುಂದಾಗಿದ್ದಾರೆ. ಬೆಂಗಳೂರು ಮೈಸೂರು ರಸ್ತೆಯಲ್ಲಿ ವಿಷ್ಣುವರ್ಧನ್ ಅವರ ಬೃಹತ್ ಗಾತ್ರದ ಕಟೌಟ್ಗಳು ರಾರಾಜಿಸುತ್ತಿವೆ. ರಾಜ್ಯಾದ್ಯಂತ ಗೋಡೆಗಳ ಮೇಲೆ ವಿಷ್ಣುವರ್ಧನ್ ಸ್ಮಾರಕದ ಭಿತ್ತಿಚಿತ್ರಗಳನ್ನು ಅಂಟಿಸಲಾಗಿದೆ. ಇಷ್ಟೇ ಅಲ್ಲದೇ ವಿವಿದೆಡೆ ಹತ್ತು ಹಲವು ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ.
ಇದನ್ನು ಓದಿ: ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೀರಕಪುತ್ರ ಶ್ರೀನಿವಾಸ್, ಜನವರಿ 29ರ ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಬಳಿ ಅಭಿಮಾನಿಗಳು ಒಟ್ಟಾಗಿ ಸೇರಲಿದ್ದು, ಅಲ್ಲಿಂದ 6.30ಕ್ಕೆ ವಾಹನ ಜಾಥಾ ನಡೆಯಲಿದೆ. ಬೆಂಗಳೂರು ಮೈಸೂರು ಮಧ್ಯೆ ಇರುವಂತಹ ಅಭಿಮಾನಿಗಳು ತಮ್ಮ ಊರಿನ ಹತ್ತಿರದ ಹೈವೆಗಳಲ್ಲಿ ಬಂದು ಜೊತೆಯಾಗಲಿದ್ದಾರೆ ಎಂದಿದ್ದಾರೆ. ವಾಹನ ಇಲ್ಲದವರಿಗಾಗಿಯೇ ಒಟ್ಟು ಹತ್ತು ಬಸ್ ಗಳನ್ನು ಆಯೋಜನೆ ಮಾಡಲಾಗಿದೆ. ಐದು ಬಸ್ ಗಳಲ್ಲಿ ಕುಂಭ ಹೊರುವ ಮತ್ತು ದೀಪೋತ್ಸವದಲ್ಲಿ ಭಾಗಿ ಆಗುವ ಹೆಣ್ಣುಮಕ್ಕಳಿಗೆ ಮೀಸಲಿಡಲಾಗಿದೆ. ಇನ್ನೂ ಐದು ಬಸ್ ಗಳು ವಾಹನ ಇಲ್ಲದವರಿಗಾಗಿ ಕಾದಿರುತ್ತವೆ. ಎಲ್ಲರೂ ಮೈಸೂರಿನಲ್ಲಿ ಒಟ್ಟಾಗಿ ಅಲ್ಲಿಂದ ಮೂರು ಕೀಲೋ ಮೀಟರ್ ಜಾಥಾ ಹಮ್ಮಿಕೊಂಡು ಸ್ಮಾರಕ ತಲುಪಲಾಗುತ್ತದೆ ಎಂದರು.
ವಿಷ್ಣು ಸೇನಾ ಜಿಲ್ಲಾ ಮತ್ತು ಗ್ರಾಮಾಂತರ ಘಟಕದ ಅಧ್ಯಕ್ಷ, ನಿರ್ಮಾಪಕ ಎಂ.ಡಿ.ಪಾರ್ಥಸಾರಥಿ ಅವರು, ಒಳ್ಳೆಯವರಿಗೆ ತಡವಾಗಿಯೇ ಪ್ರತಿಫಲ ದೊರೆಯಲಿದೆ, ಅದು ಎಂದೆಂದಿಗೂ ಶಾಶ್ವತವೆಂದು ವಿಷ್ಣುವರ್ಧನ್ ಹೇಳುತ್ತಿದ್ದರು. ಅದರಂತೆ ಅಂತರರಾಷ್ಟ್ರೀಯ ಮಟ್ಟದ ಸ್ಮಾರಕವಾಗಿ ಚೆನ್ನಾಗಿ ಮೂಡಿಬಂದಿದೆ. ಅವರ ಕೋಟ್ಯಂತರ ಅಭಿಮಾನಿಗಳಿಗೆ ಖುಷಿ ನೀಡಿದೆ. ಕಾರ್ಯಕ್ರಮದ ದಿನ ಮೈಸೂರು ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಬೆಳ್ಳಿರಥದಲ್ಲಿ ಡಾ. ವಿಷ್ಣುವರ್ಧನ್ ಭಾವಚಿತ್ರವನ್ನು ಹೂವಿನ ಪಲ್ಲಕ್ಕಿ ಮೆರವಣಿಗೆ ಹೊರಡಲಿದ್ದು, ಒಂದು ಲಕ್ಷ ಜನ ಸೇರುವ ಸಾಧ್ಯತೆ ಇದೆ ಎಂದಿದ್ದಾರೆ.
2009ರ ಡಿಸೆಂಬರ್ 30ರಂದು ಡಾ ವಿಷ್ಣುವರ್ಧನ್ ನಿಧನರಾದರು. ಬಳಿಕ ಪ್ರಾರಂಭದಲ್ಲಿ ಬೆಂಗಳೂರಿನಲ್ಲಿ ಅವರಿಗೊಂದು ಸ್ಮಾರಕ ನಿರ್ಮಾಣವಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಅದು ಕೈಗೂಡಲಿಲ್ಲ. ಡಾ. ವಿಷ್ಣುವರ್ಧನ್ ಸಮಾಧಿ ಸ್ಥಳ ಅಭಿಮಾನ್ ಸ್ಟೂಡಿಯೋದಲ್ಲಿ ಸ್ಥಳ ಮೀಸಲಾಗದೆ ಹಿನ್ನೆಲೆಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಮತ್ತೆ ಚರ್ಚೆಗೆ ಮುನ್ನಲೆಗೆ ಬಂದಿತು.
ನಂತರದ ದಿನಗಳಲ್ಲಿ ನಾನಾ ಕಾರಣಗಳಿಂದ ಅದು ಕೈಗೂಡಲೇ ಇಲ್ಲ. 2016ರಲ್ಲಿ ಡಾ. ವಿಷ್ಣುವರ್ಧನ್ ಪತ್ನಿ ಭಾರತಿ ಅವರು ಮೈಸೂರಿನಲ್ಲಿ ಸ್ಮಾರಕ ನಿರ್ಮಾಣವಾಗಬೇಕೆಂದು ಸರಕಾರಕ್ಕೆ ಮನವಿ ಸಲ್ಲಿಸಿದರು. 2017ರಲ್ಲಿ ಮೈಸೂರಿನಲ್ಲಿ ಭೂಮಿ ಮಂಜೂರಾಯಿತು. ಆದರೆ, ಜಾಗಕ್ಕೆ ಕೆಲ ರೈತರು ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್ ಮೊರೆ ಹೋಗಿದ್ದರು. ನಂತರ ಅರ್ಜಿ ವಜಾ ಆಗಿ ಸ್ಮಾರಕ ಕೆಲಸ ಸುಗಮವಾಯಿತು.
ಒಟ್ಟು ಐದು ಎಕರೆ ಜಾಗದಲ್ಲಿ ಮೂರು ಎಕರೆಯಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಉಳಿದ 2 ಎಕರೆಯಲ್ಲಿ ಪುಣೆಯಲ್ಲಿರುವ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಶಾಖೆಯನ್ನು ಅಪ್ಪಾಜಿ ಹೆಸರಿನಲ್ಲಿ ತೆರೆಯುವ ಆಲೋಚನೆ ಇದೆ. ಇದನ್ನು ಸರ್ಕಾರದ ಗಮನಕ್ಕೂ ತರಲಾಗಿದೆ ಎಂದು ಡಾ ವಿಷ್ಣುವರ್ಧನ್ ಅಳಿಯ ಅನಿರುದ್ಧ ತಿಳಿಸಿದ್ದಾರೆ.
ಸ್ಮಾರಕದಲ್ಲಿ ಇವುಗಳು ಇರಲಿವೆ…
ಡಾ. ವಿಷ್ಣು ಸ್ಮಾರಕ್ಕೆ ಮೀಸಲಾದ 5 ಎರಕೆ ಜಾಗದಲ್ಲಿ ಎರಡು ಎಕರೆಯಲ್ಲಿ ತಳಮಹಡಿ, ನೆಲಮಹಡಿ ಸೇರಿ ಒಟ್ಟು 27ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಸ್ಮಾರಕ ಕಟ್ಟಡ ತಲೆ ಎತ್ತಿದೆ. ಸ್ಮಾರಕದಲ್ಲಿ ಕಲೆ ಹಾಗೂ ಕನ್ನಡಿಗರ ಅಸ್ಮಿತೆಯಾಗಬೇಕೆಂಬ ಉದ್ದೇಶದಿಂದ ವಸ್ತು ಸಂಗ್ರಹಾಲಯ, ಅಭಿನಯ ತರಬೇತಿ ಶಾಲೆ, ನಾಟಕೋತ್ಸವ, ಚಿತ್ರೋತ್ಸವ ಕಾರ್ಯಕ್ರಮಗಳ ಆಯೋಜನೆಗಾಗಿ ವೇದಿಕೆಗಳು ನಿರ್ಮಿಸಲಾಗಿದೆ. ವಿಷ್ಣುವರ್ಧನ್ ಅವರ 600ಕ್ಕೂ ಹೆಚ್ಚು ಅಪರೂಪದ ಛಾಯಾಚಿತ್ರಗಳನ್ನು ಅಳವಡಿಸಲಾಗಿದೆ. ಅವರು ಬಳಸುತ್ತಿದ್ದ ವಸ್ತುಗಳು, ವಿಭೂತಿ, ಬಟ್ಟೆ, ಅವರಿಗೆ ಬಂದಂಥ ಪ್ರಶಸ್ತಿ ಎಲ್ಲವನ್ನೂ ವೀಕ್ಷಣೆಗೆ ಅವಕಾಶ ಸಿಗಲಿದೆ. 200 ಮಂದಿ ಕೂರಬಹುದಾಗ ಸಭಾಂಗಣವೊಂದನ್ನು ನಿರ್ಮಿಸಲಾಗಿದೆ. ಕೊಠಡಿಗಳು ಇದ್ದು, ನಾಟಕ, ಸಿನಿಮಾ ಶಿಬಿರಗಳನ್ನು ನಡೆಸಬಹುದು.
ಮೈಸೂರಿನ ಹೆಸರಾಂತ ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ಅವರ ಶ್ರಮತೆಯಿಂದ ಡಾ ವಿಷ್ಣುವರ್ಧನ್ ಅವರ 7 ಅಡಿ ಎತ್ತರದ ಪ್ರತಿಮೆ ನಿರ್ಮಾಣವಾಗಿದೆ. ‘ವಿಷ್ಣುವರ್ಧನ್ ಅವರು ಆಪ್ತರಕ್ಷಕ ಸಿನಿಮಾದಲ್ಲಿ ಪೇಟ ಧರಿಸಿ ನಿಂತ ಭಂಗಿ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಅದೇ ಮಾದರಿಯಲ್ಲಿ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ ಎಂದಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ