ಹಾರ್ಮುಜ್ ಜಲಸಂಧಿಯಲ್ಲಿ ಮತ್ತೆ ಸ್ಫೋಟ! ನೌಕಾ ಮೈನ್‌ಗೆ ಡಿಕ್ಕಿಯಾಗಿ ಹೊತ್ತಿ ಉರಿದ ತೈಲ ಟ್ಯಾಂಕರ್ | Hormuz Strait

Please follow and like us:

Hormuz Strait: ಆಯಕಟ್ಟಿನ ಹಾರ್ಮುಜ್ ಜಲಸಂಧಿಯಲ್ಲಿ ಮತ್ತೊಂದು ತೈಲ ಟ್ಯಾಂಕರ್ ನೌಕಾ ಮೈನ್‌ಗೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿದೆ ಎಂದು ಇರಾನ್ ನೌಕಾಪಡೆ ತಿಳಿಸಿದೆ. ಜಲಸಂಧಿಯ ಪೂರ್ವ ಭಾಗದಲ್ಲಿ ಈ ಘಟನೆ ನಡೆದಿದ್ದು, ಟ್ಯಾಂಕರ್ ನಿರ್ಬಂಧಿತ ಸಮುದ್ರ ಪ್ರದೇಶದಲ್ಲಿ ಸಂಚರಿಸುತ್ತಿತ್ತು. ಅಲ್ಲದೆ, ಹಡಗಿನ ನ್ಯಾವಿಗೇಷನ್ ವ್ಯವಸ್ಥೆಯನ್ನೂ ಸ್ಥಗಿತಗೊಳಿಸಲಾಗಿತ್ತು ಎಂದು ಇರಾನ್ ಆರೋಪಿಸಿದೆ.

ಇರಾನ್‌ನ ಸರ್ಕಾರಿ ಪ್ರಸಾರ ಸಂಸ್ಥೆ ವರದಿ ಪ್ರಕಾರ, ಇರಾನ್ ನೌಕಾಪಡೆಯ ಸಾರ್ವಜನಿಕ ಸಂಪರ್ಕ ವಿಭಾಗ ಈ ಮಾಹಿತಿ ನೀಡಿದೆ. ನಿರ್ಬಂಧಿತ ಪ್ರದೇಶದಲ್ಲಿ ಸಶಸ್ತ್ರ ಪಡೆಗಳೊಂದಿಗೆ ಯಾವುದೇ ಸಮನ್ವಯವಿಲ್ಲದೆ ಸಂಚರಿಸುವ ಹಡಗುಗಳು ಇಂತಹ ಅಪಾಯಗಳನ್ನು ಎದುರಿಸಬೇಕಾಗಬಹುದು ಎಂದು ನೌಕಾಪಡೆ ಎಚ್ಚರಿಸಿದೆ.

ಇದಕ್ಕೂ ಮೊದಲು ಶನಿವಾರ ಹಾರ್ಮುಜ್ ಜಲಸಂಧಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೂರು ತೈಲ ಟ್ಯಾಂಕರ್‌ಗಳು ನೌಕಾ ಮೈನ್‌ಗೆ ಸಿಲುಕಿ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿವೆ ಎಂದು ಇರಾನ್ ಪಡೆಗಳು ಹೇಳಿದ್ದವು. ಈ ಪೈಕಿ ಎರಡು ಟ್ಯಾಂಕರ್‌ಗಳು ಅನುಮತಿಯಿಲ್ಲದೆ ಜಲಸಂಧಿಯನ್ನು ದಾಟಲು ಯತ್ನಿಸುತ್ತಿದ್ದವು ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆ ಆರೋಪಿಸಿತ್ತು.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲೇ ರಾತ್ರಿ ಕಳೆದ ಪ್ರಯಾಣಿಕರು! ಅಮೆರಿಕದಲ್ಲಿ FAA ಸಂವಹನ ವ್ಯವಸ್ಥೆ ಫೇಲ್ | USA Flight Ground Stop

ಹಡಗುಗಳ ನ್ಯಾವಿಗೇಷನ್ ಮತ್ತು ಸ್ವಯಂಚಾಲಿತ ಗುರುತಿನ ವ್ಯವಸ್ಥೆ (AIS) ಸ್ಥಗಿತಗೊಳಿಸಿ ರಹಸ್ಯವಾಗಿ ಸಂಚರಿಸಲು ಯತ್ನಿಸಿದ್ದರಿಂದ ಅವು ನೌಕಾ ಮೈನ್‌ಗೆ ಡಿಕ್ಕಿ ಹೊಡೆದು ಸ್ಫೋಟಗೊಂಡಿವೆ ಎಂದು ವರದಿಯಾಗಿತ್ತು . ಮತ್ತೆರಡು ಟ್ಯಾಂಕರ್‌ಗಳು ನೌಕಾ ಸಂಚಾರ ನಿಯಂತ್ರಣ ಕೇಂದ್ರದ ಎಚ್ಚರಿಕೆ ಪಡೆದ ಬಳಿಕ ಪರ್ಷಿಯನ್ ಕೊಲ್ಲಿಯತ್ತ ಹಿಂದಿರುಗಿವೆ ಎಂದು ತಿಳಿಸಿತ್ತು.

ಇದನ್ನೂ ನೋಡಿ: ಲಿಂಗ, ಜಾತಿ, ಧರ್ಮಾಧಾರಿತ ದೌರ್ಜನ್ಯಗಳಿಗೆ ಹೊಣೆ ಯಾರು? ಕೊನೆ ಯಾವಾಗ? Janashakthi Media

ಹಾರ್ಮುಜ್ ಜಲಸಂಧಿಯ ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸುವ ಮೊದಲು ಇರಾನ್ ಸಶಸ್ತ್ರ ಪಡೆಗಳೊಂದಿಗೆ ಸಮನ್ವಯ ಸಾಧಿಸಬೇಕು. ನಿಯಮ ಉಲ್ಲಂಘಿಸಿ ಸಂಚರಿಸುವ ಹಡಗುಗಳಿಗೆ ಅಪಾಯ ಎದುರಾಗಬಹುದು ಎಂದು ಇರಾನ್ ನೌಕಾಪಡೆ ಮತ್ತೆ ಎಚ್ಚರಿಕೆ ನೀಡಿದೆ.

Please follow and like us:
Donate Janashakthi Media

Leave a Reply

Your email address will not be published. Required fields are marked *