ಅಭಿವೃದ್ಧಿ ಹೆಸರಲ್ಲಿ ಅರಣ್ಯಕ್ಕೆ ಕೊಡಲಿ ಏಟು; ಜಾರ್ಖಂಡ್‌ನಲ್ಲಿ 5.67 ಲಕ್ಷ ಮರಗಳ ನಾಶದ ಭೀತಿ! | Jharkhand Coal Mining

Please follow and like us:

Jharkhand Coal Mining: ಕಲ್ಲಿದ್ದಲು ಗಣಿಗಾರಿಕೆ ವಿಸ್ತರಣೆಗೆ ಜಾರ್ಖಂಡ್‌ನಲ್ಲಿ ಬರೋಬ್ಬರಿ 5.67 ಲಕ್ಷ ಮರಗಳನ್ನು ಕಡಿಯುವ ಸಾಧ್ಯತೆ ಎದುರಾಗಿದೆ. ಚತ್ರಾ ಜಿಲ್ಲೆಯಲ್ಲಿರುವ ಓಪನ್‌ಕಾಸ್ಟ್ ಕಲ್ಲಿದ್ದಲು ಗಣಿಗಾರಿಕೆ ಯೋಜನೆ ವಿಸ್ತರಣೆಗೆ 928.03 ಹೆಕ್ಟೇರ್ ಅರಣ್ಯ ಭೂಮಿ ಬಳಕೆಗೆ ಕೇಂದ್ರ ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ (FAC) ತಾತ್ವಿಕ ಒಪ್ಪಿಗೆ ನೀಡಿದೆ. ಇದರಿಂದ ಪರಿಸರದ ಮೇಲೆ ಮಾತ್ರವಲ್ಲ, ಆನೆಗಳ ಆವಾಸಸ್ಥಾನದ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.

ಚತ್ರಾ ಜಿಲ್ಲೆಯ ನಾರ್ತ್ ಕರಣಪುರ ಕಲ್ಲಿದ್ದಲು ಪ್ರದೇಶದಲ್ಲಿರುವ ಅಶೋಕ್ ಎಕ್ಸ್‌ಪಾನ್ಷನ್ ಓಪನ್‌ಕಾಸ್ಟ್ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯನ್ನು ವಿಸ್ತರಿಸಲು ಈ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಯೋಜನೆ ಜಾರಿಯಾದರೆ ಒಟ್ಟು 5.67 ಲಕ್ಷ ಮರಗಳನ್ನು ತೆರವುಗೊಳಿಸಬೇಕಾಗುತ್ತದೆ. ಇದರಲ್ಲಿ 2.43 ಲಕ್ಷ ಸಾಲ್ ಮರಗಳು ಸೇರಿವೆ. ಗಣಿಗಾರಿಕೆ ಯೋಜನೆಯ ಗರಿಷ್ಠ ಉತ್ಪಾದನಾ ಸಾಮರ್ಥ್ಯ ವರ್ಷಕ್ಕೆ 2 ಕೋಟಿ ಟನ್ ಎಂದು ನಿಗದಿಪಡಿಸಲಾಗಿದೆ.

ಈ ಪ್ರದೇಶ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರದಿದ್ದರೂ ಇಲ್ಲಿ ಆನೆಗಳು, ಕತ್ತೆಕಿರುಬಗಳು, ನರಿಗಳು, ಬೆಂಗಾಲ್ ಫಾಕ್ಸ್ ಹಾಗೂ ರಾಕ್ ಪೈಥಾನ್‌ಗಳಂತಹ ವನ್ಯಜೀವಿಗಳು ನೆಲೆಸಿವೆ ಎಂದು ವರದಿಯಾಗಿದೆ. ಅರಣ್ಯ ನಾಶ ಮತ್ತು ಆವಾಸಸ್ಥಾನಗಳ ವಿಭಜನೆಯಿಂದ ಈಗಾಗಲೇ ಜಾರ್ಖಂಡ್‌ನಲ್ಲಿ ಮಾನವ-ಆನೆ ಸಂಘರ್ಷ ಹೆಚ್ಚಾಗುತ್ತಿದೆ. ಗಣಿಗಾರಿಕೆ ವಿಸ್ತರಣೆಯಿಂದ ಈ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಆತಂಕವಿದೆ.

ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (WII) 2000ರಿಂದ 2023ರವರೆಗೆ ನಡೆಸಿದ ಅಧ್ಯಯನದ ಪ್ರಕಾರ, ಜಾರ್ಖಂಡ್‌ನ 22 ಅರಣ್ಯ ವಿಭಾಗಗಳಲ್ಲಿ ನಡೆದ 1,740 ಮಾನವ-ಆನೆ ಸಂಘರ್ಷದ ಘಟನೆಗಳಲ್ಲಿ 1,340 ಮಂದಿ ಮೃತಪಟ್ಟಿದ್ದು, 400 ಮಂದಿ ಗಾಯಗೊಂಡಿದ್ದಾರೆ. 2026ರ ಆರಂಭದಲ್ಲೇ ಇಂತಹ ಸಂಘರ್ಷದಲ್ಲಿ 20 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ನೋಡಿ: ಹವಾಮಾನ ಬಿಕ್ಕಟ್ಟು ಎಂದರೆ ಮನಸ್ಸಿನ ಬಿಕ್ಕಟ್ಟೂ ಹೌದು! Janashakthi Media

ಈ ಹಿನ್ನೆಲೆಯಲ್ಲಿ ಗಣಿಗಾರಿಕೆ ಆರಂಭಿಸುವ ಮೊದಲು ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಸ್ಥಳೀಯ ಮಟ್ಟದ ಶಿಫಾರಸುಗಳನ್ನು ಒಳಗೊಂಡ ವಿಶೇಷ ವನ್ಯಜೀವಿ ನಿರ್ವಹಣಾ ಯೋಜನೆ ರೂಪಿಸುವಂತೆ ಅರಣ್ಯ ಸಲಹಾ ಸಮಿತಿ ಸೂಚಿಸಿದೆ. ಈ ಯೋಜನೆಗೆ ಜಾರ್ಖಂಡ್‌ನ ಮುಖ್ಯ ವನ್ಯಜೀವಿ ವಾರ್ಡನ್ ಅನುಮೋದನೆ ನೀಡಬೇಕು. ದೀರ್ಘಕಾಲದ ಸಂಶೋಧನೆ ಮತ್ತು ಮೇಲ್ವಿಚಾರಣೆಯನ್ನು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ನಡೆಸಲಿದ್ದು, ಯೋಜನೆಯ ಸಂಪೂರ್ಣ ವೆಚ್ಚವನ್ನು ಗಣಿಗಾರಿಕೆ ಕಂಪನಿಯೇ ಭರಿಸಬೇಕು ಎಂದು ಸಮಿತಿ ತಿಳಿಸಿದೆ.

ಇದನ್ನೂ ಓದಿ: ಚೆಗೆವಾರ ಜೊತೆಯಲ್ಲಿ ಅಲೈಡಾ ಬದುಕಿನ ನೆನಪು

ಇದೇ ವೇಳೆ ಮಧ್ಯಪ್ರದೇಶದ ನರಸಿಂಗ್‌ಪುರದಲ್ಲಿರುವ ಮಚ್ರೇವಾ ನೀರಾವರಿ ಯೋಜನೆಗೂ 492.579 ಹೆಕ್ಟೇರ್ ಅರಣ್ಯ ಭೂಮಿ ಬಳಕೆಗೆ ಮೊದಲ ಹಂತದ ಅನುಮೋದನೆ ನೀಡಲು ಸಮಿತಿ ಶಿಫಾರಸು ಮಾಡಿದೆ. ಈ ಅರಣ್ಯ ಪ್ರದೇಶದಲ್ಲಿ ಹುಲಿ, ಚಿರತೆ, ಕರಡಿ ಹಾಗೂ ನರಿಗಳ ವಾಸವಿದೆ ಎಂದು ವರದಿಯಾಗಿದೆ. ಅಕ್ಟೋಬರ್ 23ರಂದು ಅರಣ್ಯ ಮಹಾನಿರ್ದೇಶಕ ಹಾಗೂ ಪರಿಸರ ಸಚಿವಾಲಯದ ವಿಶೇಷ ಕಾರ್ಯದರ್ಶಿ ಸಂತೋಷ್ ತಿವಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Please follow and like us:
Donate Janashakthi Media

Leave a Reply

Your email address will not be published. Required fields are marked *