ಜಿಂದಾಲ್ ಕಂಪನಿಗೆ ಡಿವೈಎಫ್ಐ ಬಿಸಿ ಮುಟ್ಟಿಸಿದ ಹೋರಾಟ! ಮೃತ ಕಾರ್ಮಿಕನ ಕುಟುಂಬಕ್ಕೆ 27 ಲಕ್ಷ ರೂ. ಪರಿಹಾರ | DYFI Protest Ballari

Please follow and like us:

DYFI Protest Ballari: ಜಿಂದಾಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವಘಡದಲ್ಲಿ ಮೃತಪಟ್ಟ ಕಾರ್ಮಿಕ ದೇವರಾಜ್ ಕುಟುಂಬಕ್ಕೆ ನ್ಯಾಯಯುತ ಪರಿಹಾರ ಕೊಡಿಸುವಲ್ಲಿ ಡಿವೈಎಫ್ಐ ನಡೆಸಿದ ಹೋರಾಟ ಯಶಸ್ವಿಯಾಗಿದೆ. ಕುಟುಂಬಕ್ಕೆ 27 ಲಕ್ಷ ರೂ. ಪರಿಹಾರ ಹಾಗೂ ಮೃತ ಕಾರ್ಮಿಕನ ಪತ್ನಿಗೆ ಆಕೆಯ ಜೀವಿತಾವಧಿವರೆಗೆ ಪ್ರತಿ ತಿಂಗಳು 20 ಸಾವಿರ ರೂ. ನೀಡಲು ಕಂಪನಿ ಭರವಸೆ ನೀಡಿದೆ.

ಕಾರ್ಮಿಕ ದೇವರಾಜ್ ಸಾವಿನ ಬಳಿಕ ಜಿಂದಾಲ್ ಕಂಪನಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಪ್ರಕರಣದಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಡಿವೈಎಫ್ಐ ಕಾರ್ಯಕರ್ತರು ಮಧ್ಯಪ್ರವೇಶಿಸಿದ್ದರು. ಅಲ್ಲದೆ, ಸಂತ್ರಸ್ತ ಕುಟುಂಬಕ್ಕೆ ನ್ಯಾಯಯುತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.

ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶ ನೀಡದೆ ಪ್ರತಿಭಟಿಸಿದ ಕಾರ್ಯಕರ್ತರು, ಬಳಿಕ ನೇರವಾಗಿ ಜಿಂದಾಲ್ ಕಂಪನಿಯ ಆಡಳಿತ ವಿಭಾಗದ ಕಚೇರಿ ಮುಂದೆ ತೆರಳಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಚರ್ಚೆಗೆ ಆಗಮಿಸಿದ ಜಿಂದಾಲ್ ಕಂಪನಿ ಅಧಿಕಾರಿಗಳು ಆರಂಭದಲ್ಲಿ 20 ಲಕ್ಷ ರೂ. ಪರಿಹಾರ ನೀಡಲು ಒಪ್ಪಿಗೆ ಸೂಚಿಸಿದ್ದರು. ಆದರೆ, ಇದಕ್ಕೆ ಒಪ್ಪದ ಡಿವೈಎಫ್ಐ ಕಾರ್ಯಕರ್ತರು ತಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸಿದ್ದರು.

ಮೃತರ ಕುಟುಂಬಕ್ಕೆ 27 ಲಕ್ಷ ರೂ. ಪರಿಹಾರ

ರಾತ್ರಿ ಸುಮಾರು 2 ಗಂಟೆಯವರೆಗೂ ಆಡಳಿತ ವಿಭಾಗದ ಕಚೇರಿ ಮುಂದೆ ಧರಣಿ ಮುಂದುವರಿದಿತ್ತು. ಕೊನೆಗೆ ದೇವರಾಜ್ ಕುಟುಂಬಕ್ಕೆ 27 ಲಕ್ಷ ರೂ. ಪರಿಹಾರ ನೀಡುವುದು ಹಾಗೂ ಅವರ ಪತ್ನಿಗೆ ಜೀವಿತಾವಧಿವರೆಗೆ ಪ್ರತಿ ತಿಂಗಳು 20 ಸಾವಿರ ರೂ. ನೀಡುವುದಾಗಿ ಕಂಪನಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆ ಅಂತ್ಯಗೊಂಡಿತು.

ಜಿಂದಾಲ್ ವಿರುದ್ಧದ ಹೋರಾಟಕ್ಕೆ ಸಿಕ್ಕ ಜಯ

ಈ ಹಿಂದೆ ಕಂಪನಿಯಲ್ಲಿ ಕಾರ್ಮಿಕರು ಮೃತಪಟ್ಟಾಗ ಕೇವಲ 5 ಲಕ್ಷ ರೂ.  ಪರಿಹಾರ ನೀಡಲಾಗುತ್ತಿತ್ತು. ಇದೀಗ ಡಿವೈಎಫ್ಐ ಹೋರಾಟದ ಪರಿಣಾಮವಾಗಿ 27 ರೂ.  ಲಕ್ಷ ಪರಿಹಾರ ಮತ್ತು ಮೃತ ಕಾರ್ಮಿಕನ ಪತ್ನಿಗೆ ಮಾಸಿಕ 20 ಸಾವಿರ ರೂ. ನೀಡುವ ಭರವಸೆ ದೊರೆತಿದೆ ಎಂದು ಡಿವೈಎಫ್ಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸಂತೋಷ್ ಬಜಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಪಟಾಕಿ ಹೊಗೆ ಅವಾಂತರ: ದೀಪಾವಳಿ ಮರುದಿನ PM2.5ನಲ್ಲಿ ಶೇ.71ರಷ್ಟು ಪಾಲು!

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಬಳ್ಳಾರಿಯ ಡಿವೈಎಫ್ಐ ಕಾರ್ಯಕರ್ತರು ಪ್ರಭಾವಿ ಜಿಂದಾಲ್ ಕಂಪನಿಯ ವಿರುದ್ಧ ಧೈರ್ಯವಾಗಿ ಹೋರಾಟ ನಡೆಸಿ ದೇವರಾಜ್ ಕುಟುಂಬಕ್ಕೆ ನ್ಯಾಯಯುತ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ಅಪ್ರಾಪ್ತರ ಬೈಕ್ ಚಾಲನೆ: ಅಪಾಯಕ್ಕೆ ಆಹ್ವಾನ, ಕಾನೂನಿನ ಉಲ್ಲಂಘನೆ! Janashakthi Media

ಕಾರ್ಮಿಕರ ಸಾವಿನ ಸಂದರ್ಭದಲ್ಲೂ ಸೂಕ್ತ ಪರಿಹಾರ ನೀಡದೆ ವಂಚಿಸಲಾಗುತ್ತಿದೆ ಎಂಬ ಆರೋಪದ ನಡುವೆ, ಈ ಹೋರಾಟ ಮಹತ್ವದ ಗೆಲುವಾಗಿದೆ. ದೇವರಾಜ್ ಕುಟುಂಬದ ಪರವಾಗಿ ನಿಂತು ನ್ಯಾಯ ದೊರಕಿಸಿಕೊಟ್ಟ ಬಳ್ಳಾರಿಯ ಡಿವೈಎಫ್ಐ ಕಾರ್ಯಕರ್ತರು ಹಾಗೂ ಹೋರಾಟಕ್ಕೆ ಕೈಜೋಡಿಸಿದ ಕಾರ್ಮಿಕ ಸಂಘಟನೆಗಳಿಗೆ ಸಂತೋಷ್ ಬಜಾಲ್ ಕ್ರಾಂತಿಕಾರಿ ಅಭಿನಂದನೆ ಸಲ್ಲಿಸಿದ್ದಾರೆ.

Please follow and like us:
Donate Janashakthi Media

Leave a Reply

Your email address will not be published. Required fields are marked *