ವಿಷ ತುಂಬಿದ ಕೋಮುವಾದದ ವಿರುದ್ಧ ನಾವೆಲ್ಲ ಹೋರಾಡಬೇಕಿದೆ – ಅರುಂಧತಿ ರಾಯ್‌

ಬೆಂಗಳೂರು : ʻಇಂದು ನಮ್ಮ ದೇಶದಲ್ಲಿ ಸಮಾಜದ ಪರಿಸ್ಥಿತಿ ತುಂಬ ಹದಗೆಟ್ಟಿದೆ. ಬಡತನ, ನಿರುದ್ಯೋಗ, ಕೋಮುಗಲಭೆಗಳಿಂದಾಗಿ ಜನರು  ನರಾಳಾಡುವಂತಾಗಿದೆ. ಆದರೆ ಇದನ್ನು ಸರಿಗೊಳಿಸಬೇಕಾದ ಸರ್ಕಾರ ಏನು ತಿಳಿಯದಂತೆ ಕಣ್ಮುಚ್ಚಿ ಕುಳಿತಿದೆ ಎಂದು ಲೇಖಕಿ ಅರುಂಧತಿ ರಾಯ್ ಹೇಳಿದರು.

ಪತ್ರಕರ್ತೆ ಗೌರಿ ಲಂಕೇಶ್‌ ಸ್ಮರಣಾರ್ಥ ಗೌರಿ ಸ್ಮಾರಕ ಟ್ರಸ್ಟ್‌ ವತಿಯಿಂದ ಸೋಮವಾರ ಆಯೋಜಿಸಿದ್ದ ‘ಗೌರಿ ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ತುಂಬ ಗೌರವಿಸುವ ಎಲ್ಲರೂ ಇಲ್ಲಿದ್ದೀರಿ. ಮೂರು ದಿನಗಳ ಹಿಂದೆ ನಾನು ನನ್ನ ತಾಯಿಯನ್ನು ಕಳೆದುಕೊಂಡೆ. ಇಂಥ ಹೊತ್ತಲ್ಲಿ ಆಕೆಯ ಸಮಾಧಿ ಸ್ಥಳ ಬಿಟ್ಟು ಬರಲು ಮನಸ್ಸು ಒಪ್ಪುತ್ತದೊ ಇಲ್ಲವೊ ಗೊತ್ತಿರಲಿಲ್ಲ. ಆದರೆ ನಾನಿಲ್ಲಿಗೆ ಗೌರಿಗಾಗಿ ಬರದೇ ಹೋದರೆ ನನ್ನ ತಾಯಿಯೇ ನನ್ನ ಬಗ್ಗೆ ನಾಚಿಕೆಪಟ್ಟುಕೊಂಡಾಳೆಂದು ಭಾವಿಸಿ ನಾನಿಲ್ಲಿದ್ದೇನೆ. ಗೌರಿ ಎಂಥವರಾಗಿದ್ದರೆಂದರೆ, ಪ್ರತಿಸಲ ನಾನೇನಾದರೂ ಬರೆದಾಗಲೂ ತುಂಬ ಉತ್ಸಾಹದಿಂದ ಕರೆ ಮಾಡುತ್ತಿದ್ದರು. ಅರುಂಧತಿ, ನಾನಿದನ್ನು ಅನುವಾದಿಸಲೇ ಎಂದು ಕೇಳುತ್ತಿದ್ದರು. ಐ ಲವ್ ಯೂ ಎನ್ನುತ್ತಿದ್ದರು. ಇಂಥ ಬಾಂಧವ್ಯ ನಮ್ಮಿಬ್ಬರ ಮಧ್ಯೆ ಇತ್ತು. ಗೌರಿ ಇಂದು ಇಲ್ಲ ಎಂದು ಕಣ್ಣೀರಾದರು

ತೀಸ್ತಾ ಈಗಷ್ಟೆ ಜೈಲಿನಿಂದ ಹೊರಬಂದಿದ್ದಾರೆ.. ಬಿಲ್ಕಿಸ್ ಬಾನು ವಿಚಾರದಲ್ಲಿ ಏನಾಯಿತೆಂಬುದು ನಮಗೆಲ್ಲಾ ಗೊತ್ತಿದೆ. ಸರ್ಕಾರ ಯಾವ ಬಗೆಯ ಸಂದೇಶವನ್ನು ನಮಗೆ ಕೊಡಲು ಯತ್ನಿಸುತ್ತಿದೆ ಎಂಬುದನ್ನು ಯೋಚಿಸುತ್ತಿದ್ದೇನೆ. ಇತ್ತೀಚಿನ ವಾರಗಳಲ್ಲಿ ತೀಸ್ತಾ ಜೈಲಿನಲ್ಲಿದ್ದಾಗ ನಾನು, ನ್ಯಾಯ ಮತ್ತು ಶಾಂತಿಗಾಗಿ ನಿಂತಿರುವವರು ಗುಜರಾತ್ ಹತ್ಯಾಕಾಂಡದ ಅಧ್ಯಯನದಲ್ಲಿ ಸಂಗ್ರಹಿಸಿದ ಕಾನೂನು ದಾಖಲೆಗಳನ್ನು ಬಹಳ ಗಮನವಿಟ್ಟು ಓದುತ್ತಿದ್ದೆ. ಇದೊಂದು ನಿಜಕ್ಕೂ ಅಸಾಧಾರಣ ಕೆಲಸ. ಫ್ಯಾಸಿಸ್ಟ್ ವ್ಯವಸ್ಥೆಯೊಳಗೂ ಎಲ್ಲೋ ನ್ಯಾಯ ಸಿಕ್ಕೀತು ಎಂಬ ಸಣ್ಣ ಆಶಾವಾದ ಹೊಂದಿದ್ದವರಲ್ಲಿ ನಾನೂ ಒಬ್ಬಳು. ತೀಸ್ತಾ ಮತ್ತು ಸಂಘಟನೆಗಳು ಮಾಡಿರುವ ಕೆಲಸ ಅದ್ಭುತವಾದುದು ಎಂದರು.

ದೇಶದಲ್ಲೆಲ್ಲೊ ರೈಲ್ವೆ ದುರಂತ ಘಟಿಸಿದರೆ ರೈಲ್ವೆ ಮಂತ್ರಿಯೇ ರಾಜೀನಾಮೆ ಕೊಡುತ್ತಿದ್ದ ದೇಶವಾಗಿತ್ತು ನಮ್ಮದು. ಆದರೆ ಇಂದು ಹತ್ಯಾಕಾಂಡದ ಚುನಾವಣಾ ಲಾಭವನ್ನು ಮಾಡಿಕೊಳ್ಳುವ, ಹೊಸ ಹತ್ಯಾಕಾಂಡಗಳ ಮತ್ತು ಹಳೆಯ ಹತ್ಯಾಕಾಂಡಗಳ ಲಾಭ ಗಿಟ್ಟಿಸುವ ಜನರನ್ನು ನೋಡುತ್ತಿದ್ದೇವೆ. ಗುಜರಾತ್ ಹತ್ಯಾಕಾಂಡ ಸಂಭವಿಸಿದಾಗ ಬಿಜೆಪಿ ಮತ್ತು ನರೇಂದ್ರ ಮೋದಿ ಚುನಾವಣೆಗೆ ಕರೆ ಕೊಡುವ ತರಾತುರಿ ತೋರಿಸಿದ್ದನ್ನು ಕಂಡೆವು. ಯಾಕೆ ಅಂಥ ತುರ್ತು ಇತ್ತು? ಏನಿತ್ತು ಅಂಥ ತುರ್ತು? ತನ್ನ ಕಣ್ಣೆದುರೇ ಇಡೀ ಕುಟುಂಬದವರ ಹತ್ಯೆಯಾದುದನ್ನು ಬಿಲ್ಕಿಸ್ ಕಣ್ಣಾರೆ ಕಂಡಾಗ, ಸಾಮೂಹಿಕ ಅತ್ಯಾಚಾರಕ್ಕೊಳಗಾದಾಗ ಅಲ್ಲಿ ಯಾವುದು ಪ್ರಜಾಪ್ರಭುತ್ವವನ್ನು ಕಾಯಬೇಕಿತ್ತೊ ಆ ಇಡೀ ವ್ಯವಸ್ಥೆಯೇ ಶಾಮೀಲಾಗಿದ್ದ ಒಳಸಂಚು ಇತ್ತು. ಅಂಥ ಅತ್ಯಾಚಾರಿಗಳು, ಹಂತಕರು ಬಿಡುಗಡೆಯಾದರು. ಯಾವ ಸಂದೇಶವನ್ನು ಕೊಡುತ್ತಿದೆ ಇದು? ಅವರು ಮತ್ತೆ ಜೈಲುಪಾಲಾಗಲೂಬಹುದು. ಆದರೆ ಅವರ ಬಿಡುಗಡೆಗೆ ಕಾರಣರಾದ ಮಂದಿ, ಅವರನ್ನು ಕಾನೂನಾತ್ಮಕ ಪ್ರಕ್ರಿಯೆಯ ಮೇಲೆ ಬಿಡುಗಡೆ ಮಾಡಿದವರು – ಇಲ್ಲಿ ಎಲ್ಲದರ ದುರ್ಬಳಕೆಯಾಗಿದ್ದಿರಬಹುದು, ಆದರೆ ಯಾರೂ ಅದನ್ನು ಹೇಳುತ್ತಿಲ್ಲ – ಸಮಿತಿಯಲ್ಲಿದ್ದ ಹೆಚ್ಚಿನವರು ಬಿಜೆಪಿಯವರೇ. ಅವರ ಪ್ರಕಾರ, ಈಗ ಶಿಕ್ಷೆಗೊಳಗಾದವರಾರೂ ಅಂಥ ಅಪರಾಧ ಎಸಗುವುದಕ್ಕೆ ಸಾಧ್ಯವೇ ಇಲ್ಲ, ಯಾಕೆಂದರೆ ಅವರು ಬ್ರಾಹ್ಮಣರು. ಗುಜರಾತ್ ಗೆ ಸೀಮಿತವಾದ ಉದ್ದೇಶ ಸಾಧಿಸಿಕೊಳ್ಳಲು ಪಕ್ಷವೊಂದು ತನ್ನ ರಾಜಕೀಯ ಪರಂಪರೆಯ ಹಕ್ಕುದಾರಿಕೆಯ ಆಂತರಿಕ ಕಾರಣಗಳನ್ನೇ ಅಂತರರಾಷ್ಟ್ರೀಯ ಕಾರಣಗಳಂತೆ ಬಿಂಬಿಸುವ ಯತ್ನವೊಂದರಲ್ಲಿರುವುದನ್ನು ನಾವಿಂದು ನೋಡುತ್ತಿದ್ದೇವೆ. ಇದು ಅತ್ಯಂತ ಅಪಾಯಕಾರಿ ಎಂದರು.

ಇಂದು ದೇಶದಲ್ಲಿ ಸರ್ಕಾರ, ರಾಜ್ಯ, ಅದರ ಅಂಗಸಂಸ್ಥೆಗಳು ಮತ್ತು ಒಂದು ರಾಜಕೀಯ ಪಕ್ಷ ಇವೆಲ್ಲದರ ಸಮ್ಮಿಳನವನ್ನು ಕಾಣುತ್ತಿದ್ದೇವೆ. ಅವೆಲ್ಲವೂ ಒಂದಾಗುತ್ತಿವೆ. ಒಂದರಿಂದೊಂದು ಬಿಡಿಸಿಕೊಳ್ಳಲಾರದಂತೆ ಆಗುತ್ತಿವೆ. ಕಾಂಗ್ರೆಸ್ ಮುಕ್ತ ಭಾರತ ಅಭಿಯಾನದಲ್ಲಿ ಪಕ್ಷವೊಂದು ತೊಡಗಿದೆ ಎಂದರೆ ಏನರ್ಥ? ನಿಜವಾಗಿಯೂ ಅವರು ಏನನ್ನು ಹೇಳುತ್ತಿದ್ದಾರೆ? ಪ್ರತಿಪಕ್ಷವೇ ಇರಕೂಡದೆಂಬ ಸ್ಥಿತಿ. ಪ್ರತಿಪಕ್ಷವಿರದ ಪ್ರಜಾಪ್ರಭುತ್ವ. ಅಂಥ ಸನ್ನಿವೇಶವೊಂದು ಇರದು. ವಿರೋಧಪಕ್ಷವಿಲ್ಲದ ಪ್ರಜಾಪ್ರಭುತ್ವವು ಸಾಧ್ಯವೇ ಇಲ್ಲ. ಎತ್ತ ಸಾಗಿದ್ದೇವೆ ಎಂಬುದನ್ನು ಅವರು ಸ್ಪಷ್ಟವಾಗಿ ಸೂಚಿಸುತ್ತಿದ್ದಾರೆ. ಎಡಪಂಥೀಯರೆಂದು ಹೇಳಿಕೊಳ್ಳುವವರು, ಉದಾರವಾದಿಗಳೆಂದು ಹೇಳಿಕೊಳ್ಳುವವರು ನಾವು ಬಹಳಷ್ಟು ಮಂದಿ ಅವರು ಫ್ಯಾಸಿಸ್ಟ್ ಹೌದೆ ಅಲ್ಲವೆ ಎಂದು ಚರ್ಚಿಸುತ್ತಿದ್ದರೆ, ಅವರು ಮಾತ್ರ ತಮಗೇನು ಬೇಕೆಂಬುದರ ಬಗ್ಗೆ ಸ್ಪಷ್ಟತೆ ಹೊಂದಿದ್ದಾರೆ. ಕಳೆದೆರಡು ಚುನಾವಣೆಗಳಲ್ಲಿ ಬಿಜೆಪಿ ಮುಸ್ಲಿಂ ಮತಗಳಿಲ್ಲದೆ ಗೆಲ್ಲಬಲ್ಲೆ ಎಂದು ತೋರಿಸಿದೆ. ಬಿಲ್ಕಿಸ್ ಬಾನು ಪ್ರಕರಣದಲ್ಲಿ ಮಾತ್ರವಲ್ಲ, ಪ್ರತಿದಿನ ನಾವು ನೋಡುತ್ತಿದ್ದೇವೆ ಎಂದರು.

ಬಹುಭಾಷಾ ನಟ ಪ್ರಕಾಶ್ ರೈ ಮಾತನಾಡಿ, “ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ. ನಾವು ಇಲ್ಲಿದ್ದೇವೆ. ಆದರೆ ಗೌರಿಯನ್ನು ಕೊಲ್ಲಿಸಿದವರು ರಾಜ್ಯ ಹಾಗೂ ದೇಶವನ್ನು ಆಳುತ್ತಿದ್ದಾರೆ. ಬಿಲ್ಕಿಸ್‌ ಬಾನೋ ಅತ್ಯಾಚಾರಿಗಳ ಬಿಡುಗಡೆಯ ಹಿಂದಿನ ಭಾವವನ್ನು ಅರ್ಥಮಾಡಿಕೊಳ್ಳಬೇಕು. ಅಲ್ಪಸಂಖ್ಯಾತರನ್ನು ಅತ್ಯಾಚಾರ ಮಾಡಿದರೂ ಬಿಡುಗಡೆ ಮಾಡಲಾಗುತ್ತದೆ ಎಂಬ ಸಂದೇಶವನ್ನು ಇಲ್ಲಿ ನೀಡಲಾಗಿದೆ” ಎಂದು ಎಚ್ಚರಿಸಿದರು.  ಗೌರಿ, ತೀಸ್ತಾ, ಅರುಂಧತಿ ರಾಯ್‌ ಥರದ ಹೆಣ್ಣುಮಕ್ಕಳು ನಮಗೆ ಭರವಸೆಯಾಗಿದ್ದಾರೆ. ತೀಸ್ತಾ ಜೈಲಿನಿಂದ ಹೊರಬಂದ ಬಳಿಕ ಆಶಾವಾದ ವ್ಯಕ್ತಪಡಿಸಿದ್ದಾರೆ. ಈ ಐದು ವರ್ಷಗಳಲ್ಲಿ ಆಕ್ಟಿವಿಸ್ಟ್‌ಗಳಿಗಿಂತ ರೈತರು, ಹೆಣ್ಣುಮಕ್ಕಳು ಬೀದಿಗಿಳಿದು ಹೋರಾಡಿದ್ದಾರೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಬಲವಾಗಲು ನಮ್ಮ ನಡುವಿರುವ ಅಹಂ ಕಾರಣ. ನಮ್ಮ ಎಲ್ಲ ಅಹಂಗಳನ್ನು ಮರೆತು ಗೌರಿಯ ಆಶಯಗಳನ್ನು ಮುಂದುವರಿಸಬೇಕಿದೆ. ಗೌರಿಯನ್ನು ನಾವು ಹೂತಿಲ್ಲ, ಅವಳನ್ನು ಬಿತ್ತಿದ್ದೇವೆ ಎಂದು ನುಡಿದರು.

ಟ್ರಸ್ಟ್‌ನ ಸದಸ್ಯರಾದ ಪ್ರೊ.ವಿ.ಎಸ್.ಶ್ರೀಧರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜನಪರ ಹಾಡುಗಾರರಾದ ಜನ್ನಿ, ಎಂ.ಡಿ.ಪಲ್ಲವಿಯವರು ಗಾಯನ ಮಾಡಿದರು. ಪತ್ರಕರ್ತ ಡಿ.ಎನ್.ಗುರುಪ್ರಸಾದ್‌ ಸ್ವಾಗತ ಮಾಡಿದರು. ಚಂದ್ರು ತಾರಹುಣಸೆ ನಿರೂಪಣೆ ಮಾಡಿದರು.

Donate Janashakthi Media

Leave a Reply

Your email address will not be published. Required fields are marked *