ನವದೆಹಲಿ: ದೇಶದಲ್ಲಿ ‘ವಿಕಸಿತ ಭಾರತ’ ಗುರಿ ಸಾಧಿಸುವವರೆಗೂ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈಗಿರುವ ಲೋಕಸಭಾ ಸ್ಥಾನಗಳ ಸಂಖ್ಯೆ ಮತ್ತು ರಾಜ್ಯವಾರು ಪ್ರಾತಿನಿಧ್ಯವನ್ನು ಬದಲಿಸದೆ ಮುಂದುವರಿಸಬೇಕು. ಇದೇ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ಅವರು ಹೇಳಿದ್ದಾರೆ. ಜೈರಾಮ್ ರಮೇಶ್
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕರಿಸಲು ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತ ಪಡೆಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
2026ರ ಮುಂಗಾರು ಅಧಿವೇಶನ ಮುಕ್ತಾಯಗೊಂಡು 100 ದಿನ ಕಳೆದಿದ್ದರೂ ಅದನ್ನು ಅಧಿಕೃತವಾಗಿ ಮುಂದೂಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಹೊಸ ಮಸೂದೆಯಲ್ಲಿ ಏನಿರಲಿದೆ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 17, 2026ರಂದು ಹಿಂದಿನ ಮಸೂದೆ ಸೋಲು ಕಂಡ ಬಳಿಕ ಹೊಸ ಪ್ರಸ್ತಾವನೆ ಕುರಿತು ರಾಜಕೀಯ ಪಕ್ಷಗಳೊಂದಿಗೆ ಯಾವುದೇ ಗಂಭೀರ ಚರ್ಚೆ ನಡೆದಿಲ್ಲ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಗೆ ನಾಲ್ಕು ಪತ್ರ ಬರೆದಿದ್ದರೂ ಸರ್ವಪಕ್ಷ ಸಭೆ ಕರೆದಿಲ್ಲ ಎಂದು ಆರೋಪಿಸಿದ್ದಾರೆ.
ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಹಿಂದಿನ ಪ್ರಧಾನಿಗಳ ನಿರ್ಧಾರಗಳನ್ನು ಉಲ್ಲೇಖಿಸಿರುವ ಜೈರಾಮ್ ರಮೇಶ್, 1976ರಲ್ಲಿ ಇಂದಿರಾ ಗಾಂಧಿ ಕ್ಷೇತ್ರ ಮರುವಿಂಗಡಣೆಯನ್ನು 25 ವರ್ಷಗಳ ಕಾಲ ಮುಂದೂಡಿದ್ದರು. 2001ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತಷ್ಟು 25 ವರ್ಷಗಳ ಕಾಲ ಈ ಪ್ರಕ್ರಿಯೆಯನ್ನು ಮುಂದೂಡಿದ್ದರು ಎಂದು ನೆನಪಿಸಿದ್ದಾರೆ. 2026ರ ನಂತರ ನಡೆಯುವ ಮೊದಲ ಜನಗಣತಿಯ ಫಲಿತಾಂಶ ಪ್ರಕಟವಾಗುವವರೆಗೆ ಕ್ಷೇತ್ರಗಳ ಮರುವಿಂಗಡಣೆಗೆ ತಡೆ ನೀಡಲಾಗಿತ್ತು ಎಂದು ಹೇಳಿದ್ದಾರೆ.
ದೇಶದ ಆರ್ಥಿಕ, ರಾಜಕೀಯ, ಸಾಮಾಜಿಕ, ರಕ್ಷಣಾ ಮತ್ತು ವಿದೇಶಾಂಗ ನೀತಿಗೆ ಸಂಬಂಧಿಸಿದ ಹಲವು ಗಂಭೀರ ಸವಾಲುಗಳಿದ್ದು, ಅವುಗಳತ್ತ ಸರ್ಕಾರ ಗಮನಹರಿಸಬೇಕು. ಕ್ಷೇತ್ರ ಮರುವಿಂಗಡಣೆ ತುರ್ತಾಗಿ ಕೈಗೊಳ್ಳಬೇಕಾದ ಕೆಲಸವಲ್ಲ. ಈ ಕುರಿತು ನಿರ್ಧಾರ ತೆಗೆದುಕೊಳ್ಳುವ ಮೊದಲು ರಾಜಕೀಯ ಪಕ್ಷಗಳು ಮತ್ತು ಸಂಬಂಧಪಟ್ಟ ಎಲ್ಲರೊಂದಿಗೆ ವ್ಯಾಪಕ ಸಮಾಲೋಚನೆ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನವೆಂಬರ್ 19ರಂದು ನಡೆದ ಎಫ್ಐಸಿಸಿಐ ಸಮಾವೇಶದಲ್ಲಿ ಪ್ರಧಾನಿ ಮೋದಿ ಆರ್ಥಿಕ ಪರಿಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಎಂದು ಉಲ್ಲೇಖಿಸಿರುವ ಜೈರಾಮ್ ರಮೇಶ್, ಇಂತಹ ಸಂದರ್ಭದಲ್ಲಿ ಕ್ಷೇತ್ರ ಮರುವಿಂಗಡಣೆಯಂತಹ ಮಹತ್ವದ ವಿಚಾರದಲ್ಲಿ ಶಾಂತ ಮನಸ್ಸಿನಿಂದ ಚರ್ಚೆ ನಡೆಯಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ವಿರುದ್ಧದ ತನಿಖೆ ನಿಲ್ಲಿಸಿದ್ದು ನಮ್ಮವರೇ! ಈಗ ಕಾಂಗ್ರೆಸ್ ಬೆಲೆ ತೆರುತ್ತಿದೆ: ವೀರಪ್ಪ ಮೊಯ್ಲಿ ಸ್ಫೋಟಕ ಹೇಳಿ
ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ಮಸೂದೆಯ ಮೂಲಕ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವ ಉದ್ದೇಶವಿದೆ. ಜನಗಣತಿಯ ಹೊಸ ಅಂಕಿಅಂಶಗಳಿಗೆ ಅನುಗುಣವಾಗಿ ಕ್ಷೇತ್ರಗಳ ಮರುವಿಂಗಡಣೆ ಅಗತ್ಯ ಎಂದು ಬಿಜೆಪಿ ನೇತೃತ್ವದ ಎನ್ಡಿಎ ಪ್ರತಿಪಾದಿಸುತ್ತಿದೆ. ಆದರೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು ಈಗಿರುವ 543 ಲೋಕಸಭಾ ಸ್ಥಾನಗಳಲ್ಲೇ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಮತ್ತು ಅದನ್ನು ಕ್ಷೇತ್ರ ಮರುವಿಂಗಡಣೆಯೊಂದಿಗೆ ಜೋಡಿಸಬಾರದು ಎಂದು ಆಗ್ರಹಿಸುತ್ತಿದೆ.
ಇದನ್ನೂ ನೋಡಿ: ಎಸ್ಐಆರ್ ಹೆಸರಿನಲ್ಲಿ ಜೀವಂತ ಮತದಾರರ ಹೆಸರು ಡಿಲೀಟ್: ಮೋದಿ, ಜ್ಞಾನೇಶ್ ಕುಮಾರ್ ವಿರುದ್ಧ ಪ್ರಕಾಶ್ ರಾಜ್ ಆರೋಪ
